For the best experience, open
https://m.samyuktakarnataka.in
on your mobile browser.

ಆಸ್ತಮಾ-ಹೆದರದಿರಿ, ವೈದ್ಯರ ಸಲಹೆ ಪಾಲಿಸಿ

01:44 PM May 07, 2024 IST | Samyukta Karnataka
ಆಸ್ತಮಾ ಹೆದರದಿರಿ  ವೈದ್ಯರ ಸಲಹೆ ಪಾಲಿಸಿ

ಮೇ ೭ನೇ ತಾರೀಕನ್ನು `ವಿಶ್ವ ಆಸ್ತಮಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚಿನ ಆಧುನಿಕ ಬದುಕಿನಲ್ಲಿ ಆಸ್ತಮಾ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚುತ್ತಿದ್ದು, ಇವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಲೋಕ ಅರಿವು ಮೂಡಿಸುತ್ತಿದೆ. ವಿಶ್ವ ಆಸ್ತಮಾ ದಿನದ ಅಂಗವಾಗಿ ಈ ಲೇಖನ.

ಆಧುನಿಕ ಸಂದರ್ಭದಲ್ಲಿ ಆಸ್ತಮಾ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲೆಡೆ ಕಂಡು ಬರುತ್ತಿರುವ ವಾಯು ಮಾಲಿನ್ಯ, ಇದಕ್ಕೆ ಪ್ರತಿರೋಧಕ ಕ್ರಮವಾಗಿ ಬದುಕಿನ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳದೇ ಇರುವುದು ಇವೇ ಮೊದಲಾದವುಗಳಿಂದಾಗಿ ಆಸ್ತಮಾ ಪೀಡಿತರು ಹೆಚ್ಚುತ್ತಿದ್ದಾರೆ. ಸಣ್ಣ ಮಕ್ಕಳಲ್ಲಂತೂ ಆಸ್ತಮಾ ತೊಂದರೆ ತುಂಬ ಹಿಂಸೆ ಮಾಡುತ್ತಿದ್ದು, ಉಸಿರಾಟಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಚಿಕ್ಕ ಮಕ್ಕಳು ಎದುರಿಸುವಂತಾಗಿದೆ.
ಇಂದು ಭಾರತದಲ್ಲಿ ಶೇಕಡಾ ೨ರಿಂದ ೮ರಷ್ಟು ಮಕ್ಕಳು ಆಸ್ತಮಾದಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳ ಆಸ್ತಮಾ ಪ್ರಕರಣಗಳಲ್ಲಿ ಶೇಕಡಾ ೮೦ರಷ್ಟು ಪತ್ತೆ ಹಚ್ಚಲಾಗದೇ ಹೋಗುತ್ತಿದೆ. ಇದು ಗಮನಾರ್ಹ ಅಂಶ.
ಅಂದರೆ, ಪಾಲಕರ ನಿರ್ಲಕ್ಷ್ಯ ಅಥವಾ ಒತ್ತಡದ ಜೀವನ ನಿರ್ವಹಣೆ ಹಾಗೂ ಇದನ್ನೊಂದು ಸಾಮಾನ್ಯ ವಿಷಯ ಎಂಬಂತೆ ಪರಿಗಣಿಸುವ ಅನ್ಞಾನದಿಂದಾಗಿ ಮಕ್ಕಳಲ್ಲಿನ ಆಸ್ತಮಾ ಗುರುತಿಸದೇ ಉಳಿದು ಹೋಗುತ್ತಿದೆ ಎನ್ನಬಹುದು.
ಈಗ ಲಭ್ಯ ಇರುವ ವೈದ್ಯಕೀಯ ತಂತ್ರಜ್ಞಾನದಲ್ಲಿ ಅತೀ ಸಣ್ಣ ಮಕ್ಕಳಲ್ಲಿ ಉಂಟಾಗುವ ಆಸ್ತಮಾ ರೋಗವನ್ನೂ ಕೂಡ ಪತ್ತೆ ಹಚ್ಚಿ (ರೋಗ ನಿದಾನ) ಚಿಕಿತ್ಸೆಗೆ ಒಳಪಡಿಸಲು ಸಾಧ್ಯವಿದೆ. ಹಾಗೆಯೇ ಪ್ರಾರಂಭಿಕ ಹಂತದಲ್ಲೇ ಇದನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಖಂಡಿತ ಆಸ್ತಮಾದಿಂದ ಮಕ್ಕಳು ಹೊರಬಂದು ಸಹಜ ಬದುಕನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ದೊಡ್ಡವರಲ್ಲಿ ಕಂಡು ಬರುವ ಆಸ್ತಮಾಕ್ಕೆ ಕೂಡ ಈಗ ಉತ್ತಮ ಚಿಕಿತ್ಸೆ ಲಭ್ಯವಿದೆ. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡು ವೈದ್ಯರು ಸೂಚಿಸದಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ವೈದ್ಯರ ಸಲಹೆಯ ಪ್ರಕಾರ ಜೀವನ ಕ್ರಮವನ್ನು ಪರಿಷ್ಕರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇದರಿಂದ ರೋಗ ನಿಯಂತ್ರಣಕ್ಕೆ ಬಂದು ಉಳಿದೆಲ್ಲರಂತೇ ಸಹಜವಾಗಿ ಮತ್ತು ಚಟುವಟಿಕೆಯಿಂದ ಕೂಡಿದವರಾಗಿ ಜೀವನ ನಿರ್ವಹಣೆ ಖಂಡಿತ ಸಾಧ್ಯವಿದೆ.
ಇದರೊಂದಿಗೆ ಆಸ್ತಮಾ ಹೆಚ್ಚಳಕ್ಕೆ ಕಾರಣವಾಗುವ ದೂಳು, ಹೊಗೆ, ಧೂಮ್ರಪಾನ, ಮಾಲಿನ್ಯ, ಕೆಲ ಋತುಗಳಲ್ಲಿ ಕೆಲವು ಬಗೆಯ ಹೂ-ಗಿಡಗಳಿಗೆ ಬರುವ ಮೊಗ್ಗು- ಹೂವುಗಳ (ಪೋಲನ್) ಮೇಲ್ಮೆ ಗಾಳಿ ಸೇವನೆಯಿಂದ ದೂರ ಇರುವುದು ಅಥವಾ ಪೋಲನ್ ಅಂಶಯುಕ್ತ ಗಾಳಿ ಕಿಟಕಿ-ಬಾಗಿಲುಗಳಿಂದ ಮಲಗುವ ಕೋಣೆಯೊಳಗೆ ಬಾರದಂತೆ ಎಚ್ಚರ ವಹಿಸುವುದು ಇವೇ ಮೊದಲಾದವುಗಳಿಂದ ರಕ್ಷಿಸಿಕೊಳ್ಳುವುದೂ ಕೂಡ ಆಸ್ತಮಾದಿಂದ ಬಚಾವಾಗಲು ಮುಖ್ಯವಾಗುತ್ತದೆ. ಆಸ್ತಮಾ ಹೆಚ್ಚಿಸುವ ಇಂತಹ ಹಲವಾರು ಅಂಶಗಳಿಂದ ದೂರವಿದ್ದುದೇ ಆದರೆ ಸಾಕಷ್ಟು ಮಟ್ಟಿಗೆ ರೋಗ ನಿಯಂತ್ರಣವಂತೂ ಖಂಡಿತ ಸಾಧ್ಯ.
ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಧಾವಿಸುವುದರ ಜೊತೆಗೆ ನಿತ್ಯದ ವ್ಯಾಯಾಮವನ್ನು ನಿಲ್ಲಿಸದೇ ಮುಂದುವರಿಸಬೇಕು. ಇದರಿಂದ ಗುಣಮುಖವಾಗುವುದಕ್ಕೆ ಅನುಕೂಲವಾಗುತ್ತದೆ. ಬೇಸಿಗೆ ಮತ್ತು ಚಳಿಯ ದಿನಗಳಲ್ಲಿ ಕಿಟಕಿಗಳನ್ನು ಮುಚ್ಚಿಡಿ. ಅಲರ್ಜಿಯ ದಿನಗಳಲ್ಲಿ ಪೋಲನ್ ಮನೆ ಅಥವಾ ಕಾರುಗಳ ಒಳಗೆ ಬಾರದಂತೆ ನೋಡಿಕೊಳ್ಳಿ. ಮಲಗುವ ಕೋಣೆಯಲ್ಲಿ ಸಾಕು ಪ್ರಾಣಿಗಳನ್ನು ತರಬೇಡಿ.
ಆಸ್ತಮಾ ಯಾವುದೇ ವಯಸ್ಸಿನವರಿಗೂ ಬರಬಹುದು. ಆದರೆ ಇಂದಿನ ನಗರಕೇಂದ್ರಿತ ಜೀವನ ಶೈಲಿಯಲ್ಲಿ ಚಿಕ್ಕಮಕ್ಕಳಿಗೆ ಬೇಗ ಬಾಧಿಸುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಮಾಲಿನ್ಯ, ದೂಳು ಮತ್ತು ಅಲರ್ಜಿಕಾರಕ ಅಂಶಗಳಿಂದ ಮಕ್ಕಳೂ ಸೇರಿ ಎಲ್ಲರೂ ರಕ್ಷಿಸಿಕೊಳ್ಳಬೇಕು.
ಉಸಿರಾಟದ ಕೇಂದ್ರ ಭಾಗವಾಗಿರುವ ಶ್ವಾಸನಾಳದಲ್ಲಿ ಸಂಕುಚಿತತೆ ಉಂಟಾಗಿ, ನೆಗಡಿ, ಕೆಮ್ಮು ಹಾಗೂ ಉಸಿಡಾಡುವ ಸಮಸ್ಯೆಗೆ ದಾರಿ ಮಾಡಿಕೊಡುವುದು ಇದರ ಸಾಮಾನ್ಯ ಲಕ್ಷಣಗಳು. ಇನ್ನೂ ಕೆಲ ಸಂಕೀರ್ಣ ಲಕ್ಷಣಗಳನ್ನು ಈ ರೋಗ ಹೊಂದಿರುತ್ತದೆ. ಆದ್ದರಿಂದ ಲಕ್ಷಣಗಳು ಗೋಚರಿಸಿದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಆರಂಭಿಸಿದರೆ ಇದು ದೀರ್ಘಕ್ಕೆ ಹೋಗುವುದನ್ನು ತಡೆಯಬಹುದಾಗಿದೆ.
ಆಸ್ತಮಾ ಆಧುನಿಕ ಕಾಲಘಟ್ಟದ ಸಾಮಾನ್ಯ ರೋಗವಾಗಿದೆ. ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡಿ ನಂತರ ಸಾಮಾನ್ಯ ಜೀವನ ಕ್ರಮಕ್ಕೆ ಅಡ್ಡಿ ಉಂಟು ಮಾಡುವ ಈ ರೋಗದ ಬಗ್ಗೆ ಕೆಲವರಲ್ಲಿ ತಪ್ಪು ತಿಳಿವಳಿಕೆಗಳೂ ಇವೆ.
ಜನತೆ ಜಾಗರೂಕರಾಗಿದ್ದು, ತಜ್ಞರಿಂದ ಚಿಕಿತ್ಸೆಗೆ ಒಳಗಾಗಬೇಕೇ ವಿನಾ, ಸ್ವಯಂ ಚಿಕಿತ್ಸೆ ಹಾಗೂ ವೈಜ್ಞಾನಿಕವಾಗಿ ದೃಢಪಡದ ಚಿಕಿತ್ಸೆಗಳ ಮೊರೆ ಹೋಗಬಾರದು.
ಇದರಿಂದ ಸಮಸ್ಯೆ ಬಿಗಡಾಯಿಸುವ ಸಂಭವ ಇರುತ್ತದೆ. ಹೆದರದೇ, ಸಕಾಲಕ್ಕೆ-ಸರಿಯಾದ ವೈಜ್ಞಾನಿಕ ಚಿಕಿತ್ಸೆಗೆ ಒಳಗಾದರೆ ಆಸ್ತಮಾ ರೋಗಿಗಳ ಬದುಕೂ ಉಳಿದೆಲ್ಲರಂತೇ ಸಹಜವಾಗಿ ಸಾಗುತ್ತದೆ. ಹಾಗೆಯೇ ಕೆಲ ಬಗೆಯ ಹವಾಮಾನಗಳು ಮಕ್ಕಳಿಗೆ ಒಗ್ಗಿ ಬಾರದೇ ಆಸ್ತಮಾಕ್ಕೆ ತುತ್ತಾಗುವ ಸಂಭವಗಳೂ ಇರುತ್ತವೆ. ಆದ್ದರಿಂದ ಈ ವಿಷಯವಾಗಿ ನುರಿತ ವೈದ್ಯರ ಸಲಹೆ ಪಾಲಿಸಬೇಕೇ ವಿನಾ ಹೆದರಿ ಸ್ವಯಂ ನಿರ್ಧಾರ- ಚಿಕಿತ್ಸೆಗಳನ್ನು ಮಾಡಿಕೊಳ್ಳಬಾರದು.

ಡಾ. ಗೋವಿಂದ ದೇಸಾಯಿ, ಶ್ವಾಸಕೋಶ ತಜ್ಞ
ಮೊ: ೮೧೨೩೬೬೨೭೩೯