ಆ ಪಕ್ಷ ಅಲ್ಲ… ಪಿತೃಪಕ್ಷ
ತಿಗಡೇಸಿ ಬಲೇ ವಿಚಿತ್ರ ಮನಿಷಾ… ಹುಟ್ಟಿದಾರಭ್ಯದಿಂದ ತಿರಸಸ್ಟು. ಏತಿ ಅಂದರೆ ಪೇತಿ ಅನ್ನುತ್ತಿದ್ದ. ಕ್ಯಾರೇ ಅಂದರೆ ಮಾರೇ ಎಂದು ಎದುರಾಡುತ್ತಿದ್ದ. ಆತನಿಗೆ ನಮಸ್ಕಾರ ಅಂದರೂ ಯಾಕೆ ನಮಸ್ಕಾರ ಅಂದಿ ಎಂದು ಜಗಳವಾಡುತ್ತಿದ್ದ. ಇವನ ಸುದ್ದಿನೇಬೇಡ ಎಂದು ಆತನನ್ನು ನೋಡದೇ ಹೋದರಂತೂ ಯಾಕಪಾ ಸೊಕ್ಕು ಬಂದಿದೆಯಾ? ಎಂದು ಕಾಳಗಕ್ಕೆ ನಿಲ್ಲುತ್ತಿದ್ದ. ಇಂತಹ ತಿಗಡೇಸಿಗೆ ಭಯಂಕರ ರಾಜಕೀಯದ ಹುಚ್ಚು. ಏನೇ ಆಗಲಿ ರಾಜಕೀಯದಲ್ಲಿರಬೇಕು ಎಂದು ಮೊದಲಿನಿಂದಲೂ ದೊಡ್ಡ ಅಭಿಲಾಷೆ. ಆತನ ತಂದೆ ತಿರುಕೇಸಿಯಂತೂ ತಿಗಡೇಸಿಯನ್ನು ಸುಧಾರಿಸಿದವರಿಗೆ ಇಂತಿಷ್ಟು ಬಹುಮಾನ ಎಂದು ಘೋಷಿಸಿದ್ದ. ಕೆಲವರು ಆತನನ್ನು ನಾನು ಸುಧಾರಿಸುತ್ತೇನೆ ಎಂದು ಬಂದವರು ಎಂಟೇ ದಿನಗಳಲ್ಲಿ ದವಾಖಾನೆ ಸೇರಿಕೊಂಡಿದ್ದರು. ಇನ್ನು ಹಲವರು ಆಗ ಊರುಬಿಟ್ಟವರು ಇನ್ನೂ ಊರು ಸೇರಿಲ್ಲ. ಸಿಕ್ಕ-ಸಿಕ್ಕವರ ಮುಂದೆ ಅವರ ಅಪ್ಪ ತಿರುಕೇಸಿಯು, ನಾನು ಸತ್ತರೆ ನನ್ನ ಪಕ್ಷವನ್ನೂ ಇವನು ಮಾಡುವುದಿಲ್ಲ ಎಂದು ಮಗನ ಬಗ್ಗೆ ಆಡಿಕೊಳ್ಳುತ್ತಿದ್ದ. ಇದು ತಿಗಡೇಸಿಗೆ ಗೊತ್ತಾಗಿ… ಕಣ್ಣಲ್ಲಿ ನೀರು ತೆಗೆದು… ಅಪ್ಪಾ ನಾನು ಹಾಗೆ ಮಾಡುವುದಿಲ್ಲ. ಬೇಕಾದರೆ ಇವತ್ತೇ ಶಿವನಪಾದ ಸೇರು… ನಿನ್ನ ಪಕ್ಷವನ್ನು ನಾನು ಮಾಡದಿದ್ದರೆ ನಿನ್ನ ಮಗನೇ ಅಲ್ಲ ಎಂದು ನಾಟಕದ ಡೈಲಾಗ್‌ನಂತೆ ಹೇಳಿದಾಗ ಆತ ಮುಖ ಕಿವುಚುತ್ತಿದ್ದ. ಕಾಲ ಮುಂದುವರೆಯಿತು. ಅವರಪ್ಪನಿಗೆ ತೀರ ವಯಸ್ಸಾಗಿ ಒಂದು ದಿನ ಬಾರದ ಜಾಗಕ್ಕೆ ಹೋದ. ಕೆಲವರು ರಾಜಕೀಯ ಪುಢಾರಿಗಳು ತಿಗಡೇಸಿ ಅಪ್ಪ ಮಾಡಿಟ್ಟ ಆಸ್ತಿಯನ್ನು ಮಾರಿಸಲು ಇದು ಒಳ್ಳೆಯ ಅವಕಾಶ ಎಂದು ತಿಗಡೇಸಿಯನ್ನು ಸಂಪರ್ಕಿಸಿ ನೀನು ನಾಳೆಯಿಂದ ನಮ್ಮ ಪಕ್ಷ ಸೇರಿಬಿಡು ಎಂದು ಹುರಿದುಂಬಿಸಿದರು. ಮರುದಿನ ಸ್ಥಳೀಯ ಶಾಸಕರನ್ನು ಕರೆಯಿಸಿ ಪಕ್ಷಕ್ಕೆ ಬರಮಾಡಿಕೊಂಡರು. ತೀರ ಖುಷಿಯಾದ ತಿಗಡೇಸಿ ಪಕ್ಷದ ಕೆಲಸ, ಸಾರ್ವಜನಿಕರ ಕೆಲಸ ಎಂದು ಗಿರ್ಧಭಾಗ ಆಸ್ತಿ ಮಾರಿದ. ಈ ಪಕ್ಷದಲ್ಲಿ ಏನೂ ಆಗಲ್ಲ ಎಂದು ಇನ್ನೊಂದು ಗಿರ್ಧಆಸ್ತಿ ಮಾರಿ ಇನ್ನೊಂದು ಪಕ್ಷದಿಂದ ಟಿಕೆಟ್ ಪ್ರಯತ್ನ ಮಾಡಿದ ಅವರು ಕೊಡಲಿಲ್ಲ. ಇನ್ನುಳಿದ ಅರ್ಧ ಆಸ್ತಿ ಮಾರಿ ತನ್ನದೇ ಆದ ಪಕ್ಷಕಟ್ಟಬೇಕು ಎಂದು ನಿರ್ಧರಿಸಿ, ರಾಜಕೀಯ ಚಿಂತಕಿ ಕಂಟ್ರಂಗಮ್ಮತ್ತಿ ಹತ್ತಿರ ಸಲಹೆ ಕೇಳಿದ. ಆಕೆ ಸ್ವಲ್ಪ ಹೊತ್ತು ಕಣ್ಣುಮುಚ್ಚಿ… ತಿಗಡೇಸಿ… ರಾಜಕೀಯ ಪಕ್ಷ ಬೇಡ… ಇನ್ನೇನು ಪಿತೃಪಕ್ಷ ಬರುತ್ತದೆ…ನಿಮ್ಮ ತಂದೆಯ ಪಕ್ಷ ಮಾಡು ಎಂದು ಹೇಳಿ ಆಶೀರ್ವಾದ ಮಾಡುವ ಹಾಗೆ ಕೈ ಎತ್ತಿದಳು.