For the best experience, open
https://m.samyuktakarnataka.in
on your mobile browser.

ಇಂದಿನದು ಇಂದಿಗೆ-ಈಗಲೇ…

04:00 AM Oct 25, 2024 IST | Samyukta Karnataka
ಇಂದಿನದು ಇಂದಿಗೆ ಈಗಲೇ…

ಬಹಳಷ್ಟು ಜನರು ಗತವೈಭವದ ಕಳೆದ ದಿನಗಳನ್ನು ನೆನಪಿಸಿಕೊಂಡು ಸಂತೋಷಪಡುತ್ತಾರೆ. ನಾಳಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗುತ್ತಾರೆ. ನಾಳೆ ಹೇಗಪ್ಪಾ ಎಂಬ ಭಯ ಕಾಡುತ್ತಿರುತ್ತದೆ. ಇವೆರಡರ ನಡುವಿನ ಇಂದಿನ ದಿನವನ್ನು ಮರೆತು ಬಿಡುತ್ತಾರೆ. ಇಂದಿನ ದಿನವನ್ನು ಇಂದಿಗೆ ಈಗಲೇ ಅನುಭವಿಸುವುದನ್ನು ದಾರ್ಶನಿಕರು ಹೇಳುತ್ತ, ಸಂತೋಷದ ಶಬ್ದಕೋಶದಲ್ಲಿ ಮೊದಲನೆಯ ಶಬ್ದ ಇಂದು ಇಂದಿನ ದಿನವನ್ನು' ಹುಡುಕಿರಿ ಎಂಬ ಉಪದೇಶವನ್ನು ಮಾಡಿದ್ದಾರೆ. ಕಳೆದು ಹೋದ ದಿನಗಳನ್ನು ನೆನಪಿಸುತ್ತ ಕಾಲ ಕಳೆದರೆ ಅದು ಬುದ್ಧಿವಂತಿಕೆ ಅಲ್ಲ. ಅದು ನಮ್ಮ ಇಂದಿನ ಈಗಿನ ಸಂತೋಷಕ್ಕೆ ಕಡಿವಾಣ ಹಾಕುತ್ತದೆ. ಖ್ಯಾತ ಇಸ್ಲಾಮಿಯ ದಾರ್ಶನಿಕ ಐದ ಇಬ್ನ ಅಬ್ಬದುಲ್ಲಾ ತಮ್ಮ ಪ್ರಸಿದ್ಧ ಗ್ರಂಥದುಃಖಿಸಬೇಡ' (ಪುಟ್ಟ ೩೦ )ದಲ್ಲಿ ಮರಳಿಬಾರದವುಗಳನ್ನು ಉಲ್ಲೇಖಿಸಿದ್ದಾರೆ. ನೀವು ಉದಯಿಸಿದ ಸೂರ್ಯನನ್ನು ಮರಳಿ ಅದೇ ಸ್ಥಾನಕ್ಕೆ ತರಬಲ್ಲಿರಾ, ಮಗುವನ್ನು ತಾಯಿಯ ಗರ್ಭದಲ್ಲಿ ಮತ್ತೆ ಇರಿಸಲು ಸಾಧ್ಯವೇ, ಅಷ್ಟೇ ಅಲ್ಲ ಹರಿದು ಹೋದ ಕಂಬನಿಗಳನ್ನು ಮತ್ತೆ ಕಣ್ಣುಗಳಲ್ಲಿ ತುಂಬಲು ಸಾಧ್ಯವೇ.? ಎಂದು ಪ್ರಶ್ನಿಸಿ ಗತಿಸಿದುದನ್ನು ಮತ್ತೆ ಮರಳಿ ತರಲು ಸಾಧ್ಯವಿಲ್ಲ ಎಂದಿದ್ದಾರೆ.
ಕುರಾನಿನ ಅಧ್ಯಾಯ ಅಲ್ ಬಕರ್ (೨.೧೩೪) ವಚನದಲ್ಲಿ ಅದು ಗತಿಸಿ ಹೋದ ಸಮುದಾಯ ಅವರು ಸಂಪಾದಿಸಿದ್ದು ಅವರಿಗೆ ನೀವು ಸಂಪಾದಿಸಿದ್ದು ನಿಮಗೆ ಅವರು ಮಾಡಿದ ಕರ್ಮಗಳಿಗಾಗಿ ನಿಮ್ಮನ್ನು ಪ್ರಶ್ನಿಸುವುದಿಲ್ಲ' ಎಂದು ಹೇಳಲಾಗಿದೆ. ನಾಳೆ ಇರುವುದೇ ಇಲ್ಲ. ಅದರ ಹುಟ್ಟು ನೈಜತೆ ಇಲ್ಲ. ಜನರು ನಾಳಿನ ಬಡತನ ಹಸಿವು, ರೋಗ ರುಜಿನ ಹಾಗೂ ದುರಂತಗಳಿಂದ ಭಯಭೀತರಾಗಿರುತ್ತಾರೆ. ಈಗಲೇ ಪಡೆದುದರ ಕಡೆಗೂ ಗಮನಹರಿಸಿರಿ. ಕುರಾನಿನ ಇನ್ನೊಂದು ಅಧ್ಯಾಯ ಅತ್ ರಾಫ (೭.೧೪೪) ವಚನದಲ್ಲಿ ದೇವರುನೀವು ಈಗ ನಾನು ನೀಡುವುದನ್ನು ಸ್ವೀಕರಿಸಿ ಕೃತಜ್ಞರಾಗಿರಿ.' ಎಂದು ಆದೇಶ ನೀಡಿದ್ದಾನೆ.
ಐದ ಇಬ್ನ ಅವರ ದುಃಖಿಸಬೇಡ ಎಂಬ ಗ್ರಂಥದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಕುರಾನಿನ ಬೆಳಕಿನಲ್ಲಿ ನೀಡಿದ್ದನ್ನು ಗಮನಿಸಬಹುದು. ಇಂದು ದೇವರು ನೀಡಿದ ದಿನವನ್ನು ಹೇಗೆ ನಮ್ಮದನ್ನಾಗಿ ಮಾಡಿಕೊಳ್ಳಬೇಕೆಂದು ಹೇಳುತ್ತಾನೆ..

  • * ಇಂದು ದುಃಖ, ಕೋಪ, ಮಾತ್ಸರ್ಯ, ದ್ವೇಷಾಸೂಯೆಗಳಿಂದ ದೂರವಿರಿ.
  • * ನಿಮ್ಮ ವಾಸ್ತವ ಜೀವನದಲ್ಲಿ ಇಂದು ನೀವು ನಿಮ್ಮ ಪತ್ನಿ, ಮಕ್ಕಳು, ಕೆಲಸ, ಮನೆ ಹಾಗೂ ಇರುವಿಕೆಯಲ್ಲಿ ತೃಪ್ತರಾಗಿರಿ.
  • * ಇಂದು ವೈಯಕ್ತಿಕ ಆರೋಗ್ಯದ ಕಡೆಗೆ ಗಮನಹರಿಸಿ ಮನೆಯ ಶುಚಿತ್ವವನ್ನು ಕಾಯ್ದುಕೊಳ್ಳಿರಿ.
  • * ಇಂದು ಅಸಹಾಯಕ, ನಿರ್ಗತಿಕರಿಗೆ ಸಹಾಯ ಮಾಡಿರಿ.
  • * ಇಂದಿನ ದಿನ ಜೀವನದ ಕೊನೆಯ ದಿನವೆಂದೆ ಭಾವಿಸಿ, ಅದರ ಎಚ್ಚರಿಕೆ ಇದ್ದರೆ ಇಂದಿನ ದಿನದ ಸಂಪೂರ್ಣ ಲಾಭ ಪಡೆಯುವಿರಿ.
  • * ಇಂದು ನುಡಿಯಲ್ಲಿ ವಿಶ್ವಾಸ, ಪ್ರಾಮಾಣಿಕತೆ, ಪ್ರೀತಿಗಳನ್ನು ತುಂಬಿರಿ.
  • * ಇಂದು ಮನೆ ಕಚೇರಿ ಕೆಲಸದ ಸ್ಥಳಗಳನ್ನು ಓರಣವಾಗಿಡಿರಿ.
  • * ಇಂದು ದೇವರಲ್ಲಿ ಪ್ರಾರ್ಥಿಸುತ್ತ `ದೇವರೇ ನನ್ನನ್ನು ದ್ವೇಷ, ಮಾತ್ಸರ್ಯ, ಅಧಿಕಾರ ದಾಹದಿಂದ ದೂರವಿಡು' ಎಂದು ಬೇಡಿಕೊಳ್ಳಿರಿ.
  • * ಜಾರಿ ಹೋದ ಕಾಲವೇ ಹೋಗಿರುವಿ. ಮತ್ತೆ ಮರಳಿ ಬರಬೇಡ. ನಾನೇನೂ ದುಃಖಿಸುವುದಿಲ್ಲ. ನಿನ್ನನ್ನು ಕಾಲ ಹೊರ ದಬ್ಬಿದೆ.
  • * ನಾಳೆಯ ನಿನ್ನ ಕಲ್ಪನೆಗಳಲ್ಲಿ ಚಿಂತಾಕ್ರಾಂತನಾಗಿಯೋ ಮಾರುಹೋಗುವವನಲ್ಲ. ಏಕೆಂದರೆ ನೀ ಇನ್ನೂ ಹುಟ್ಟಿಲ್ಲ.
  • * ಇಂದು ಈ ದಿನ ನನ್ನದು. ಸಂತೋಷದ ನಿಘಂಟಿನಲ್ಲಿಯ ಮೊದಲ ಶಬ್ಧ. ಎಂದು ಆಗಾಗ ಹೇಳುತ್ತಲೆ ಇರಿ.