ಇಟಲಿ ಜಿ-೭ ಶೃಂಗಸಭೆ; ಜಾಗತಿಕ ಬಿಕ್ಕಟ್ಟಿಗೆ ಪರಿಹಾರ?
ಈವರ್ಷ ಜಾಗತಿಕ ರಾಜಕೀಯ ಕ್ಷೇತ್ರವು ಹಲವು ಮಹತ್ವದ ಸಂಗತಿಗಳಿಗೆ ಸಾಕ್ಷಿಯಾಗಲಿದೆ. ಭಾರತದಲ್ಲಿ ಲೋಕಸಭೆ ಚುನಾವಣೆ ಮುಗಿದು ಮೂರನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಏರಿದೆ. ಅಮೇರಿಕಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಲ್ಲೂ ಈ ವರ್ಷ ಪ್ರಮುಖ ಚುನಾವಣೆಗಳು ನಡೆಯಲಿವೆ. ಈ ಮಧ್ಯೆ ಇಟಲಿ ಗ್ರೂಪ್ ಆಫ್ ಸೆವೆನ್ (ಜಿ-೭) ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಯುರೋಪಿನ ಈ ಪುಟ್ಟ ದೇಶ ಜಾಗತಿಕ ರಾಜಕೀಯದಲ್ಲಿ ತನ್ನ ಇರುವಿಕೆಯನ್ನು ಘೋಷಿಸಿದೆ.
೨೦೨೪ರ ಜಿ-೭ ಶೃಂಗಸಭೆಯು ಇಟಲಿಯ ಅಪುಲಿಯಾದಲ್ಲಿ ಜೂನ್ ೧೩ರಿಂದ ಜೂನ್ ೧೫ ರವರೆಗೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ, ಗಾಜಾ ಸಂಘರ್ಷದಂತಹ ಸೂಕ್ಷ್ಮ ಜಾಗತಿಕ ವಿದ್ಯಮಾನಗಳ ಕುರಿತು ಈ ಶೃಂಗಸಭೆಯಲ್ಲಿ ಚರ್ಚೆ ಆಗಲಿದೆ.
ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರು ಅಕ್ಟೋಬರ್ ೨೦೨೨ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಶೃಂಗಸಭೆಯ ಯಶಸ್ಸಿಗಾಗಿ ಇಟಲಿ ಭರ್ಜರಿ ತಯಾರಿ ನಡೆಸಿದೆ. ಒಟ್ಟು ಆರು ಪ್ರಮುಖ ಅಂಶಗಳ ಕುರಿತು ಈ ಶೃಂಗಸಭೆಯಲ್ಲಿ ಭಾಗವಹಿಸುವ ಜಾಗತಿಕ ನಾಯಕರು ಸುಧೀರ್ಘವಾಗಿ ಚರ್ಚೆ ನಡೆಸಲಿದ್ದಾರೆ.
ಆಫ್ರಿಕಾ; ಇಟಲಿಯು ಮ್ಯಾಟ್ಟೆಯಿ ಯೋಜನೆ' ಎಂಬ ಕಾರ್ಯಕ್ರಮವನ್ನು ರಚಿಸಿದ್ದು, ಇದು ಹಲವು ಆಫ್ರಿಕನ್ ದೇಶಗಳಿಗೆ ಸುಮಾರು ೫.೫ ಶತಕೋಟಿ ಯುರೋ ಮೊತ್ತದ ಅನುದಾನ ಮತ್ತು ಸಾಲಗಳನ್ನು ಒದಗಿಸುತ್ತದೆ. ಜಿ-೭ ಶೃಂಗಸಭೆಯ ಕಾರ್ಯಸೂಚಿಯ ಭಾಗವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಕಾರ ಮತ್ತು ಬೆಂಬಲ ನೀಡುವ ಇಟಲಿಯ ವಾಗ್ದಾನಕ್ಕೆ ಇದು ಪೂರಕವಾಗಿದೆ. ಆಫ್ರಿಕಾ ಮತ್ತು ಯುರೋಪ್ ನಡುವೆ ಅನಿಲ ಮತ್ತು ಹೈಡ್ರೋಜನ್ ಪೈಪ್‌ಲೈನ್‌ಗಳನ್ನು ನಿರ್ಮಿಸುವ ಮೂಲಕ, ಇಟಲಿಯನ್ನು ಶಕ್ತಿಯ ಕೇಂದ್ರವನ್ನಾಗಿ ಮಾಡುವ ಗುರಿಯನ್ನು
ಮ್ಯಾಟ್ಟೆಯಿ ಯೋಜನೆ' ಹೊಂದಿದೆ. ಆಫ್ರಿಕಾದಿಂದ ಹೆಚ್ಚಿನ ವಲಸೆಯನ್ನು ತಡೆಗಟ್ಟಲು ತಾನು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮೂಡಿರುವ ಅಸಮಾಧಾನವನ್ನು ದೂರ ಮಾಡಲು ಇಟಲಿ ಈ ಯೋಜನೆ ಜಾರಿಗೊಳಿಸಿದೆ ಎಂದೂ ಹೇಳಲಾಗುತ್ತಿದೆ.
ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ
ಜಾಗತಿಕ ಹವಾಮಾನ ಬದಲಾವಣೆ ಕುರಿತು ಈ ಬಾರಿಯ ಜಿ-೭ ಶೃಂಗಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಚೀನಾದ ಅತಿಯಾದ ಕೈಗಾರಿಕಾ ಉತ್ಪಾದನೆಯ ಬಗ್ಗೆ ಕಾಳಜಿಯನ್ನು ತೋರುವ ಒಮ್ಮತದ ಹೇಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅದೇ ರೀತಿ ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಆರ್ಥಿಕತೆ ಹೊಂದಿರುವ ದೇಶಗಳೊಂದಿಗೆ, ಜಿ-೭ ಸದಸ್ಯ ರಾಷ್ಟ್ರಗಳ ಸಂಬಂಧ ಗಟ್ಟಿಗೊಳಿಸುವುದು ಕೂಡ ಚರ್ಚೆಯ ವಿಷಯವಾಗಲಿದೆ. ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಈ ಬಾರಿಯ ಶೃಂಗಸಭೆಗೆ ಚೀನಾ, ಜಪಾನ್, ಬ್ರೆಜಿಲ್, ದಕ್ಷಿಣ ಅಮೇರಿಕಾ, ಆಫ್ರಿಕನ್ ದೇಶಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ೧೨ ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ.
ರಷ್ಯಾ-ಉಕ್ರೇನ್ ಸಂಘರ್ಷ
ರಷ್ಯಾ-ಉಕ್ರೇನ್ ನಡುವಿನ ಧೀರ್ಘ ಸಂಘರ್ಷದ ಕುರಿತು ಈ ಬಾರಿಯ ಜಿ-೭ ಶೃಂಗಸಭೆಯಲ್ಲಿ ಚರ್ಚೆಯಾಗಲಿದೆ. ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿರುದ್ಧ ಜೂನ್ ೧೨ರಂದು ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ. ಮೂರು ವರ್ಷಗಳಿಂದ ನಡೆಯುತ್ತಿರುವ ಈ ಸಂಘರ್ಷವನ್ನು ಕೊನೆಗಾಣಿಸಲು, ಝೆಲೆನ್ಸಿ÷್ಕ ಅವರು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಹೆಚ್ಚಿನ ಬೆಂಬಲದ ನಿರೀಕ್ಷೆ ಮಾಡಲಿದ್ದಾರೆ. ಜಿ-೭ ಸದಸ್ಯ ರಾಷ್ಟ್ರಗಳು ಈಗಾಗಲೇ ರಷ್ಯಾದ ಮೇಲೆ ಗಂಭೀರ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನು ದೂರ ಇಡಲಾಗಿದೆ. ತಮ್ಮ ದೇಶಗಳಲ್ಲಿ ಇರಿಸಲಾಗಿದ್ದ ರಷ್ಯಾದ ಕೇಂದ್ರ ಬ್ಯಾಂಕ್‌ಗಳ ವಿದೇಶಿ ಕರೆನ್ಸಿ ಮೀಸಲು ಸೇರಿದಂತೆ ಸುಮಾರು ೩೦೦ ಬಿಲಿಯನ್ ಅಮೆರಿಕನ್ ಡಾಲರ್ (೨೫ ಲಕ್ಷ ಕೋಟಿ ರೂ.) ಮೊತ್ತದ ರಷ್ಯಾದ ಆಸ್ತಿಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾದ ರಷ್ಯಾದ ಆಸ್ತಿಯಿಂದ ಬರುವ ಬಡ್ಡಿಯನ್ನು, ಉಕ್ರೇನ್‌ಗೆ ಸಾಲವಾಗಿ ವರ್ಗಾಯಿಸಲು ಜಿ-೭ ರಾಷ್ಟçಗಳು ಯೋಜಿಸುತ್ತಿವೆ ಎನ್ನಲಾಗಿದೆ. ಇದು ಒಟ್ಟು ೫೦ ಬಿಲಿಯನ್ ಅಮೆರಿಕನ್ ಡಾಲರ್ (೪.೧೫ ಲಕ್ಷ ಕೋಟಿ ರೂ.) ಮೊತ್ತ ಆಗಲಿದ್ದು, ಯುದ್ಧದಿಂದ ನಲುಗಿರುವ ಉಕ್ರೇನ್ ರಾಷ್ಟ್ರಕ್ಕೆ ನೆಮ್ಮದಿ ತರಲಿದೆ.
ಇದೇ ವೇಳೆ ಪಾಶ್ಚಿಮಾತ್ಯ ನಿರ್ಬಂಧಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ರಷ್ಯಾಗೆ ಸಹಾಯ ಮಾಡುತ್ತಿರುವ ಸಣ್ಣ ಚೀನಿ ಬ್ಯಾಂಕುಗಳಿಗೆ, ಈ ಬಾರಿಯ ಜಿ-೭ ಶೃಂಗಸಭೆ ಕಠಿಣ ಎಚ್ಚರಿಕೆಯನ್ನು ನೀಡಲಿದೆ. ರಷ್ಯಾದ ಮಿಲಿಟರಿಗೆ ತಂತ್ರಜ್ಞಾನ ಮತ್ತು ಸರಕುಗಳನ್ನು ಪೂರೈಸುವಲ್ಲಿ ತೊಡಗಿರುವ ಹಣಕಾಸು ಸಂಸ್ಥೆಗಳ ವಿರುದ್ಧ, ಹೊಸ ನಿರ್ಬಂಧಗಳನ್ನು ಘೋಷಿಸಲು ಅಮೆರಿಕಾ ಸಿದ್ಧವಾಗಿದೆ. ಆದರೆ ಜಿ-೭ನ ಉಳಿದ ಸದಸ್ಯ ರಾಷ್ಟ್ರಗಳು ಈ ನಿಲುವನ್ನು ಬೆಂಬಲಿಸುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.
ಗಾಜಾ ಸಂಘರ್ಷ
ಇಸ್ರೇಲ್ ಮತ್ತು ಪ್ಯಾಲೆಸ್ಟೆನ್ ನಡುವಿನ ಸಂಘರ್ಷ ಮತ್ತು ಗಾಜಾ ಪಟ್ಟಿಯ ಪ್ರಸ್ತುತ ಪರಿಸ್ಥಿತಿಯ ಕುರಿತು, ಈ ಬಾರಿಯ ಜಿ-೭ ಶೃಂಗಸಭೆ ಚರ್ಚೆ ಮಾಡಲಿದೆ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಳೆದ ಜೂನ್ ೩ರಂದು ಮುಂದಿಟ್ಟಿರುವ ಪರಿಹಾರ ಕ್ರಮಗಳಿಗೆ, ಜಿ-೭ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿವೆ. ತಕ್ಷಣದ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ, ಗಾಜಾಕ್ಕೆ ಹೆಚ್ಚಿನ ನೆರವು ಮತ್ತು ಗಾಜಾದ ನಿವಾಸಿಗಳ ಸುರಕ್ಷತೆ ಖಾತರಿಪಡಿಸುವ ಶಾಂತಿ ಒಪ್ಪಂದಕ್ಕೆ ಸಹಮತಿ ದೊರೆತಿದೆ.
ಅಪಾಯಕ್ಕೆ ಪರಿಹಾರ
ಜಪಾನ್‌ನಲ್ಲಿ ನಡೆದ ೨೦೨೩ರ ಜಿ-೭ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ತಂದೊಡ್ಡಿರುವ ಜಾಗತಿಕ ಅಪಾಯದ ಕುರಿತು ಚರ್ಚೆ ಮಾಡಲಾಗಿತ್ತು. ಇದೀಗ ೨೦೨೪ರ ಶೃಂಗಸಭೆಯಲ್ಲೂ ಈ ಕುರಿತು ಚರ್ಚೆ ಮಾಡಲಾಗುತ್ತದೆ. ವಿಶ್ವಾದ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಶೃಂಗಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಶೃಂಗಸಭೆಯು ಸುರಕ್ಷತೆಗಾಗಿ ಹೆಚ್ಚಿನ ಅಂತಾರಾಷ್ಟ್ರೀಯ ನಿಯಮಗಳ ರಚನೆಗೆ ಒತ್ತು ನೀಡಲಿದೆ.
ಚೀನಾ ಮೇಲೆ ನಿಗಾ
ಜಪಾನ್‌ನಲ್ಲಿ ನಡೆದ ೨೦೨೩ರ ಜಿ-೭ ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಭದ್ರತೆಗಾಗಿ ಹೊಸ ಯೋಜನೆಯ ಅಗತ್ಯತೆಯನ್ನು ಒತ್ತಿ ಹೇಳಲಾಗಿತ್ತು. ಚೀನಾ ಮತ್ತು ರಷ್ಯಾದಂತಹ ದೇಶಗಳು ತಮ್ಮ ಆರ್ಥಿಕ ಪ್ರಭಾವ ಬಳಸಿ ದುರ್ಬಲ ರಾಷ್ಟ್ರಗಳ ಮೇಲೆ ಸವಾರಿ ಮಾಡುವುದನ್ನು ತಪ್ಪಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಪರಿಣಾಮವಾಗಿ ಡಿಸೆಂಬರ್ ೨೦೨೩ರಲ್ಲಿ ಇಟಲಿಯು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್'ನಿಂದ ಹೊರಬರಲು ನಿರ್ಧರಿಸಿತು. ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ವಿಶ್ವ ನಾಯಕರು ಜಿ-೭ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಮೋದಿ ಅವರು ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸ ಇದಾಗಿದೆ. ಮೋದಿ ಜೂನ್ ೧೪ ರಂದು ಸಭೆಯಲ್ಲಿ ಭಾಗವಹಿಸಿ ಅಲ್ಲಿಂದ ನೇರವಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಎನ್‌ಎಸ್‌ಎ ಅಜಿತ್ ದೋವಲ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಪ್ರಧಾನಿ ಮೋದಿ ಅವರೊಂದಿಗೆ ಪ್ರಯಾಣ ಬೆಳೆಸಲಿದೆ. ಈ ಕುರಿತು ಮಾತನಾಡಿರುವ ವಿನಯ್ ಕ್ವಾತ್ರಾ, ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಭಾರತದ ಪ್ರಮುಖ ಆದ್ಯತೆ ಎಂದು ಹೇಳಿದ್ದಾರೆ. ೨೦೨೨ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ನೀಡಿದ್ದ
ಇದು ಯುದ್ಧದ ಯುಗವಲ್ಲ..' ಎಂಬ ಹೇಳಿಕೆಯನ್ನು ಕ್ವಾತ್ರಾ ಪುನರುಚ್ಚಿಸಿದರು. ೨೦೦೩ರಿಂದ ಭಾರತವು ಜಿ-೭ ಶೃಂಗಸಭೆಯ ಹತ್ತು ಔಟ್‌ರೀಚ್ ಸೆಷನ್‌ಗಳಲ್ಲಿ ಭಾಗವಹಿಸುತ್ತಾ ಬಂದಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ಫ್ರಾನ್ಸ್, ಇಟಲಿ ಮತ್ತು ಕೆನಡಾಕ್ಕಿಂತ ಹೆಚ್ಚಿನ ಜಿಡಿಪಿ ಹೊಂದಿದೆ. ಭಾರತ ಕಳೆದ ವರ್ಷವಷ್ಟೇ ಜಿ-೨೦ ಶೃಂಗಸಭೆಯನ್ನು ಆಯೋಜಿಸಿ ಗಮನ ಸೆಳೆದಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಇತರ ಪ್ರಮುಖ ವಿಶ್ವ ನಾಯಕರು.
ವಿಶೇಷ ಅತಿಥಿಗಳು
ಈ ಬಾರಿಯ ಜಿ-೭ ಶೃಂಗಸಭೆಯಲ್ಲಿ ಜೋರ್ಡಾನ್ ದೊರೆ, ಪೋಪ್ ಫ್ರಾನ್ಸಿಸ್ ಮತ್ತು ಭಾರತ, ಉಕ್ರೇನ್, ಬ್ರೆಜಿಲ್, ಅರ್ಜೆಂಟೀನಾ, ಟರ್ಕಿ, ಕೀನ್ಯಾ, ಅಲ್ಜೀರಿಯಾ, ಟುನೀಶಿಯಾ, ಯುಎಇ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಮಾರಿಟಾನಿಯಾದ ನಾಯಕರು ಭಾಗವಹಿಸುವ ಸಾಧ್ಯತೆಯಿದೆ. ಜೊತೆಗೆ ವಿಶ್ವ ಬ್ಯಾಂಕ್, ಐಎಂಎಫ್, ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ ಸದಸ್ಯರು ಮತ್ತು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಕೂಡ ಭಾಗವಹಿಸಲಿದ್ದಾರೆ.
ಜಿ-೭ ಇತಿಹಾಸ
ಸುಧಾರಿತ ಆರ್ಥಿಕತೆಯನ್ನು ಹೊಂದಿರುವ ವಿಶ್ವದ ಏಳು ದೊಡ್ಡ ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೇರಿಕಾ ಜಿ-೭ ಗುಂಪಿನ ಸದಸ್ಯ ರಾಷ್ಟ್ರಗಳಾಗಿವೆ. ೧೯೯೮ರಲ್ಲಿ ರಷ್ಯಾ ಕೂಡ ಈ ಗುಂಪಿಗೆ ಸೇರಿಕೊಂಡಿದ್ದರಿಂದ, ಈ ಗುಂಪನ್ನು ಜಿ-೮ ಎಂದು ಕರೆಯಲಾಯಿತು. ಆದರೆ ಕ್ರೈಮಿಯಾ ಮೇಲಿನ ಆಕ್ರಮಣದ ಕಾರಣಕ್ಕೆ ೨೦೧೪ರಲ್ಲಿ ರಷ್ಯಾವನ್ನು ಈ ಗುಂಪಿನಿಂದ ಹೊರಗಿಡಲಾಯಿತು.
ಚೀನಾ ಮತ್ತು ರಷ್ಯಾ ಎರಡೂ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡಿರುವ ಜಿ-೨೦ ಗುಂಪಿನ ಭಾಗವಾಗಿವೆ. ಯುರೋಪಿಯನ್ ಯೂನಿಯನ್ ಜಿ-೭ ಸದಸ್ಯತ್ವ ಹೊಂದಿಲ್ಲದಿದ್ದರೂ, ಅದು ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುತ್ತದೆ.
ಜಿ-೭ ಅಧಿಕಾರ ವ್ಯಾಪ್ತಿ
ಜಿ-೭ ಗುಂಪು ಯಾವುದೇ ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಹೊಂದಿಲ್ಲ. ಆದರೆ ಅದರ ನಿರ್ಧಾರಗಳು ವಿಶ್ವಾದ್ಯಂತ ಪರಿಣಾಮಗಳನ್ನು ಬೀರಬಹುದು.