For the best experience, open
https://m.samyuktakarnataka.in
on your mobile browser.

ಇವತ್ತು ಕತಲ್ ರಾತ್…

02:30 AM Apr 25, 2024 IST | Samyukta Karnataka
ಇವತ್ತು ಕತಲ್ ರಾತ್…

ಕೇಳ್ರಪೋ ಕೇಳ್ರಿ…. ಕೇಳ್ರಪೋ ಕೇಳ್ರಿ…. ಹೇಳ್ಲಿಲ್ಲ ಅಂದೀರಿ ಕೇಳಿಲ್ಲ ಅಂದೀರಿ… ನಮ್ಮ ಹದಿನಾಲ್ಕು ಕ್ಷೇತ್ರಗಳಲ್ಲಿ ಇಂದೇ ಕತ್ತಲ ರಾತ್ರಿ ಅಂತ ಸರಪಂಚರು ಅನ್ನಿಸಿಕೊಂಡ ದೊಡ್ಡೋರೆಲ್ಲ ಘೋಷಣೆ ಮಾಡ್ಯಾರ. ಆದ್ದರಿಂದ ನೀವೆಲ್ಲ ನಿದ್ದಿ ಮಾಡದನ ಎಚ್ಚರವಾಗಿದ್ದು ಲಾಭ ಮಾಡಿಕೊಳ್ರಿ… ಮತ್ತೆ ಎಲ್ಲಿ ನಾಯಿಗಳನ್ನು ಕಂಡರೆ ಕಟ್ಟಿಹಾಕಿ ಕೇಳ್ರಪೋ ಕೇಳ್ರಿ ಎಂದು ಜೀರ್ ಹುಡುಗ ಡಂಗುರ ಹೊಡೆದಾಗ… ಅಲೈ ಕನಕ ಕಕ್ಕಾಬಿಕ್ಕಿಯಾಗಿ… ಏನಿದು ಕಾಲ ಭಾಳ ಕೆಟ್ಟೋತು. ಅಲೈ ಹಬ್ಬದಲ್ಲಿ ದೇವರು ಹೊಳಿಗೆ ಹೋಗುವ ಹಿಂದಿನ ರಾತ್ರಿಗೆ ಕತಲ್ ರಾತ್ ಅಂತಾರೆ… ಇವರು ಅಡ್ಡನಾಡಿ ಟೈಮಲ್ಲಿ ಕತಲ್ ರಾತ್ ಅಂತ ಡಂಗ್ರ ಹೊಡೆಯೋದಾ? ಹೇಳೋರಿಲ್ಲ… ಕೇಳೋರಿಲ್ಲ ಅಂತನಿಟ್ಟುಸಿರು ಬಿಟ್ಟ. ಕೆಲವರಿಗೆ ಇದು ಹೌದು ಅನಿಸಿತು. ರಾಜಕೀಯದಲ್ಲಿ ಅಲ್ಪ ಸ್ವಲ್ಪ ನಾಲೇಜು ಇದ್ದವರು… ಅಯ್ಯೋ ಮಬ್ ಗಳಾ…. ಇದು ರಾಜಕೀಯ ಕತಲ್ ರಾತ್ ಎಂದು ವ್ಯಾಖ್ಯಾನಿಸಿದರು. ಆದರೆ ಇದ್ಯಾವುದನ್ನೂ ಅಲೈ ಕನಕ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕತಲ್ ರಾತ್ ಅಂದರೆ ಅವೇ ಎಂದುಹಠ ಹಿಡಿದಿದ್ದ. ಕೊನೆಗೆ ದೇಸಾಯಂಕಣ್ಣ ಬಂದು ಅದು ಹಂಗಲ್ಲಲೇ ಎಂದು… ಈ ರಾತ್‌ನಲ್ಲಿ ಕೈಗೆ ಬಂದಷ್ಟು ರೊಕ್ಕ ಕೊಡ್ತಾರ. ಓಟಿಗಿಷ್ಟು ಅಂತ ಲೆಕ್ಕಮಾಡಿ ಮನೀಗೆ ತಲುಪಿಸುತ್ತಾರೆ. ನಾವು ಇರೋರು ಮೂರು ಮಂದಿ. ನಾನು ಹದಿಮೂರು ಎಂದು ಬರೆಸಿದ್ದೇನೆ. ಉಳಿದ ಹತ್ತರದ್ದನ್ನು ಬಡಿದು ಬಾಯಿಗೆ ಹಾಕ್ಕೋಳ್ತೀನಿ ಅಂತಲೂ ಹೇಳಿದ. ಕೂಡಲೇ ಅಲ್ಲಿಂದ ಎದ್ದು ಹೋದ ಅಲೈಕನಕ ಸೀದಾ ಕ್ವಾಂಟ್ರಿಟ್ಟಪ್ಪನ ತಮ್ಮ ಡಾ. ಕೃಣ್ಣಮೂರ್ತಿಯನ್ನು ಭೇಟಿಯಾಗಿ…. ಏನಿಟ್ಟಪ್ಪ ಇದೆಲ್ಲ ಅವರು ಹಂಗೆ ಅಂತಿದಾರೆ ಎಂದು ಗಾಬರಿ ಮಾರಿ ಮಾಡಿ ಹೇಳಿದ. ಅದೇನೇ ಇರಲಿ ಇಟ್ಟಪ್ಪ ನನ್ ಹೆಸರು ಬರಕಾ…. ನಮ್ಮದು ಬರೋಬ್ಬರಿ ೧೦೨ ಜನರ ಮನೆ. ನೀವು ದೊಡ್ಡ ಮನಸು ಮಾಡಬೇಕು ಎಂದು ಹೇಳಿದ. ಅದಕ್ಕೆ ಊರಿನ ಸರಪಂಚರೂ ಸಹಿತ ಎಲ್ಲರೂ ಸೇರಿದರು. ನಮಗೆ ಹಣದ ಜರೂರತ್ ಇದೆ ಜಾಸ್ತಿ ಮಾಡ್ಸು ಅಂತ ಗಂಟು ಬಿದ್ದರು. ನೀವು ಒಂದ್ಕೆಲ್ಸ ಮಾಡಿ.. ನಮ್ಮ ಇವರಿಗೆ ಓಟು ಹಾಕಿ ರೊಕ್ಕ ತೊಗೊಂಡು ಹೋಗಿ ಅಂದ. ಹಾಂ ಹಾಕ್ತೀವಿ ಅಡ್ವಾನ್ಸ್ ಕೊಡಿ ಎಂದು ಅಂದ. ನಿಮಗೆ ಆಪರೇಶನ್ ಮಾಡುವ ಸಂದರ್ಭದಲ್ಲಿ ಅವರೇ ಹೇಳ್ತಾರೆ ಅಂದರು. ಆಕಡೆ ಹೋದರೆ ಇವರಿಗೆ ತ್ರಾಸ್ ಆಗ್ತದೆ.. ಯಾರು ಓಟುಕೇಳಲು ಬಂದರೂ ಸಾರ್ ನೀವು ಹೇಳಿದಂಗೆ ಆಗ್ಲಿ ಅಂದ. ಈಗ ತಳವಾರ್ಕಂಟಿ…. ದೊಡ್ಡಮಲ್ಲು… ಮೊಟಗೇರ್ ಪಂಪಣ್ಣ ಅವರೆಲ್ಲ ಪ್ರತಿ ಮನೆಯಲ್ಲಿ ನೂರುಕ್ಕಿಂತ ಹೆಚ್ಷು ಓಟುಗಳಿವೆ ಎಂದು ರೊಕ್ಕ ಮತ್ತೊಂದನ್ನು ಇಸಿದುಕೊಳ್ಳುತ್ತಿದ್ದಾರಂತೆ.