ಇಷ್ಟರ ಮೇಲೆ ನಿಮ್ಮಿಷ್ಟ…
ಡಿಯರ್ ಸೋದಿಮಾ ಮೋರೆ… ಪಕ್ಷಮಾಸ ಮುಗಿದು ಬರೋಬ್ಬರಿ ಇಪ್ಪತೊಂಬತ್ತು ದಿನಕ್ಕೆ ಬರುವ ಅಮಾವಾಸ್ಯೆ ಮರುದಿನ ನಮ್ಮ ಮನೆಯಲ್ಲಿ ಸಜ್ಜಿಹೊಲದ ದುರ್ಗಮ್ಮನ ಪೂಜೆ ಇಟ್ಟುಕೊಂಡಿದ್ದೇವೆ. ತಾವುಗಳು ಬಂದು ಆರತಿಬೆಳಗಿ ಪ್ರಸಾದ ಸ್ವೀಕರಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ಕಳಕಳಿಯ ಮನವಿ ಮಾಡುತ್ತಿದ್ದೇವೆ ದಯವಿಟ್ಟು ತಾವು ಇಲ್ಲ ಎಂದು ಹೇಳಬೇಡಿ. ನನಗೆ ಗೊತ್ತು ನೀವು ಭಯಂಕರ ಬ್ಯುಸಿ ಇರುತ್ತೀರಿ. ಅದರಲ್ಲೂ ಟೈಮ್ ಮಾಡಿಕೊಂಡು ಬರಬೇಕು. ಸಜ್ಜಿ ಹೊಲದ ದುರ್ಗಮ್ಮ ಬಲು ಜಾಗೃತ ದೇವತೆ. ಹಿಂದೆ ಲೊಂಡೆನುಮ ಪಂಚಾಯ್ತಿ ಎಲೆಕ್ಷನ್ನಿಗೆ ನಿಂತಾಗ ಬಾವಿಯಲ್ಲಿ ತಣ್ಣೀರು ಸ್ನಾನ ಮಾಡಿ ಒದ್ದೆಬಟ್ಟೆಯ ಮೇಲೆ ಸಜ್ಜಿಹೊಲದ ದುರ್ಗಮ್ಮನ ಗುಡಿಯವರೆಗೆ ದಿಂಡ್ರುಳುಕಿ ಉರುಳಿಕೊಂಡು ಹೋಗಿ ಬೇಡಿಕೊಂಡಿದ್ದ ಹಾಗಾಗಿ ಅವನು ಆರಿಸಿಬಂದು ಜನತಾಮನಿಯ ಅಧ್ಯಕ್ಷನೂ ಆಗಿದ್ದ. ಸರ್ಕಲ್ ಹನ್ಮಂತನ ಕಾಲಲ್ಲಿ ಆನೆ ಆಗಿ ನಡೆಯಲು ಕಷ್ಟವಾಗಿತ್ತು. ನಮ್ಮ ಮನೆಯಲ್ಲಿ ಪೂಜೆ ಇಟ್ಟುಕೊಂಡಾಗ ಆತ ಬಂದು ಆರತಿಬೆಳಗಿ ಬೇಡಿಕೊಂಡ ಮರುದಿನದಿಂದಲೇ ಆತ ಸರಿಯಾಗಿ ನಡೆಯತೊಡಗಿದ… ಕರಿಭಾಗೀರತಿ ಬಂದು ಬೇಡಿಕೊಂಡಿದ್ದಳು ಆಕೆಯ ಬಣ್ಣ ಎರಡು ವಾರಗಳಲ್ಲಿ ತಿಳಿಯಾಗಿ ಜನರೆಲ್ಲ ಮುಖಕ್ಕೆ ಏನು ಹಚ್ಚುತ್ತಿ ಎಂದು ಕೇಳುತ್ತಿದ್ದರು. ಮಾತನಾಡುವಾಗ ತೊದಲುತ್ತಿದ್ದ ಕನ್ನಾಳ್ಮಲ್ಲ ಭಕ್ತಿಯಿಂದ ಬೇಡಿಕೊಂಡ ಆತ ಈಗ ಒಂದು ತಾಸಿನವರೆಗೆ ನಿಂತು ಭಾಷಣ ಮಾಡುತ್ತಾನೆ. ಇನ್ನೂ ಹೇಳಬೇಕು ಅಂದರೆ ಸಿಕ್ಕಾಪಟ್ಟೆ ಇವೆ. ನೀವು ಮೊನ್ನೆ ಅಲ್ಲಿಗೆ ಹೋಗಿ ಗಣಪತಿಗೆ ಆರತಿ ಮಾಡಿ ಬಂದಿರಿ. ಮನಸ್ಸಿಗೆ ಭಯಂಕರ ಸಮಾಧಾನವೆನಿಸಿರಬೇಕು ನಿಮಗೆ. ಈಗ ನಾನೂ ಹೇಳುತ್ತೇನೆ. ದಯವಿಟ್ಟು ನಮ್ಮ ಮನೆಯಲ್ಲಿ ನಡೆಯುವ ದುರ್ಗಮ್ಮನ ಪೂಜೆಗೆ ಅಟೆಂಡ್ ಆಗಿ ಆರತಿ ಬೆಳಗಿದರೆ ನೀವು ಫುಲ್ ಅರಾಮಾಗಿ ಇರುತ್ತೀರಿ ಇಲ್ಲವಾದರೆ… ನೋಡಿ ನಾನಂತೂ ಹೇಳುವಷ್ಟು ಹೇಳಿದ್ದೇನೆ. ಇಷ್ಟರ ಮೇಲೆ ನಿಮ್ಮಿಷ್ಟ.