ಇಷ್ಟರ ಮೇಲೆ ನಿಮ್ಮ ಇಷ್ಟ…
ಕಳೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಟಿಕೆಟ್ ಕೇಳಿದೆ..ಅವರಿವರಿಂದ ಹೇಳಿಸಿದೆ. ಆದರೆ ನನಗೆ ಟಿಕೆಟ್ ಕೊಡಲಿಲ್ಲ. ವಿಧಾನಸಭೆಯ ಚುನಾವಣೆಯಲ್ಲಿಯೂ ನನಗೆ ಹಾಗೆಯೇ ಮಾಡಿದಿರಿ. ಈಗ ಲೋಕಸಭೆ ಚುನಾವಣೆ ಬಂದಿದೆ. ನನಗೂ ಗೊತ್ತು. ನಿಮಗೆ ಲಕ್ಷಾಂತರ ಜನರು ಟಿಕೆಟ್‌ಗಾಗಿ ಗಂಟುಬಿದ್ದಿರುತ್ತಾರೆ. ಆದರೆ ನಾನು…ನನ್ನ ಕ್ವಾಲಿಫಿಕೇಶನ್ ಆದರೂ ನೋಡಿ ನನಗೆ ಟಿಕೆಟ್ ಕೊಡಿ. ನನಗೆ ಸಂಪೂರ್ಣ ಭರವಸೆ ಇದೆ. ನನಗೆ ಟಿಕೆಟ್ ಕೊಡುತ್ತೀರಿ ಎಂದು ಸಂಪೂರ್ಣ ನಂಬಿರುವೆ…ನನ್ನ ಅರ್ಜಿಯನ್ನು ನಮೂದಿಸಿರುವೆ ಗಮನಿಸಿ.
ಹೆಸರು; ಭಲೇ ಹುಚ್ಚುಲುಗ…
ತಂದೆ; ದೊಡ್ಡ ಹುಚ್ಚುಲುಗ
ವಿದ್ಯಾರ್ಹತೆ; ಎಂಟನೇ ತರಗತಿ ಎರಡು ಬಾರಿ ಫೇಲು
ರಾಜಕೀಯ ಅನುಭವ; ಒಂದು ಸಲ ಗ್ರಾಪಂ ಚುನಾವಣೆಯಲ್ಲಿ ಇಂಡಿಪೆಂಡೆಂಟ್ ನಿಂತು ಸೋಲು
ಇತರೆ ಅನುಭವ; ಎಂಟನೇ ತರಗತಿ ಶಾಲೆ ಬಿಟ್ಟ ಮೇಲೆ ಮರುವರ್ಷವೇ ಬಸ್ಸಿಗೆ ಕಲ್ಲು ಒಗೆದು ಗಾಜು ಪುಡಿಪುಡಿ ಮಾಡಿದ್ದೆ. ಅದನ್ನು ತಳವಾರ್ಕಂಟಿ ಮೇಲೆ ಬರುವ ಹಾಗೆ ನೋಡಿಕೊಂಡೆ. ಮರುವರ್ಷ ದೆಹಲಿಗೆ ರೈಲಿನಲ್ಲಿ ಹೋಗುತ್ತಿದ್ದಾಗ ನಾನು ಚೈನ್ ಎಳೆದು ಎದುರಾಳಿ ಪಾರ್ಟಿ ಮೇಲೆ ಹಾಕಿ ಪೇಪರ್ ಸ್ಟೇಟ್‌ಮೆಂಟ್ ಕೊಟ್ಟಿದ್ದೆ. ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದವರನ್ನು ರಮಿಸಿ, ಏನೇನೋ ಹೇಳಿ ನಮ್ಮ ಕಡೆಗೆ ಬರುವ ಹಾಗೆ ಮಾಡಿಕೊಂಡು ನಮ್ಮವರೇ ಕೂಡುವ ಹಾಗೆ ಮಾಡಿದ್ದೆ. ಎದುರಾಳಿ ಏನೂ ಅನ್ನದಿದ್ದರೂ ನನಗೆ ಹಾಗೆ ಅಂದಿದ್ದಾನೆ…ಹೀಗೆ ಅಂದಿದ್ದಾನೆ ಎಂದು ಸ್ಟೇಟ್‌ಮೆಂಟ್ ಮಾಡಿ ನಮ್ಮವರೆಲ್ಲ ಬಯ್ಯುವ ಹಾಗೆ ಮಾಡಿದ್ದೇನೆ. ಅವರು ಮಾಡಿದ ಕೆಲವೊಂದು ಕೆಲಸಗಳನ್ನು ನಮ್ಮವರೇ ಮಾಡಿದ್ದಾರೆ ಎಂದು ಹೋಗುವವರನ್ನು ನಿಲ್ಲಿಸಿ ಹೇಳುತ್ತೇನೆ. ಆ ಮಂದಿಯ ಸ್ಟೇಟ್‌ಮೆಂಟ್‌ಗಳನ್ನು ಅಸಯ್ಯ ಮಾಡಿ ಇನಸ್ಟಾಗ್ರಾಮ್‌ನಲ್ಲಿ ಹಾಕಿ ವೈರಲ್ ಮಾಡಿದ್ದೇನೆ. ಅವರು ಬೇರೆ ಊರಿಗೆ ಹೋಗಲು ಬಸ್ಸು ಹತ್ತಿದರೆ ಸಾಕು…ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಎಲ್ಲಿ ಹೊಂಟಾನೆ ಗೊತ್ತಾ? ಎಂದಷ್ಟೇ ಬರೆದು ಫೇಸ್‌ಬುಕ್‌ಗೆ ಹಾಕುತ್ತೇನೆ. ಜನರು ಅದನ್ನು ಬೇರೆಯದ್ದೇ ತಿಳಿದುಕೊಳ್ಳುತ್ತಾರೆ. ನಮ್ಮಲ್ಲೇ ಕೆಲವರು ಗುದ್ದಾಡಿದಾಗ…ಯಾರೇ ಗುದ್ದಾಡಲಿ…ಯಾರೇ ಗುದ್ದಾಡಲಿ ಎಂದು ಮೀಮ್ಸ್ ಮಾಡಿದ್ದೇನೆ. ಅಲ್ಲದೇ ನಾನು ಎಲ್ಲೇ ಭಾಷಣಕ್ಕೆ ಹೋಗಲಿ ಮೊದಲು ನಿಮಗೆ ಜೈ ಅಂದು ಮುಂದಿನ ಮಾತು. ಇಷ್ಟೆಲ್ಲ ಅನುಭವ ಇರುವ ನನಗೆ ಈ ಬಾರಿ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ಕೊಡಿ…ಯಾರು ಏನೇ ಹೇಳಿದರೂ ಕೇಳಬೇಡಿ. ಇಷ್ಟರ ಮೇಲೆ ನಿಮ್ಮ ಇಷ್ಟ….