For the best experience, open
https://m.samyuktakarnataka.in
on your mobile browser.

ಈಗಾ ಯಾರಿಗೆ ಬಂತು ಸಿಟ್ಟು..?

02:30 AM Feb 26, 2024 IST | Samyukta Karnataka
ಈಗಾ ಯಾರಿಗೆ ಬಂತು ಸಿಟ್ಟು

ನಿಜಕ್ಕೂ ಇದು ಆಪಾದನೆ ಮಾಡುವ ಕಾಲ. ಈಗಿನ ಕಾಲದಲ್ಲಿ ಏನು ಬೇಕಾದರೂ ಆಪಾದನೆ ಮಾಡುತ್ತಾರೆ. ಅದಕ್ಕೂ ಒಂದು ಮಿತಿ ಬೇಡವೇ? ನನಗಂತೂ ಸಾಕಾಗಿ ಹೋಗಿದೆ ಕಣ್ರೀ.. ಆಪಾದನೆ ಮಾಡುವುದನ್ನು ಕೇಳಿ.. ಕೇಳಿ ನನ್ನ ಕಿವಿ ಅನ್ನುವುದು ಏನೋ ಆಗಿ ಹೋಗಿದೆ. ನಾನು ಹೇಗೆ ಎಂದು ಎಲ್ಲರಿಗೂ ಗೊತ್ತು. ಈಗ ನೋಡಿದರೆ ಅವರು ಭಯಂಕರ ಸಿಟ್ಟಿನವರು.. ಸಿಟ್ಟಿನವರು ಎಂದು ನನ್ನ ಹೆಸರಿನ ಮುಂದೆ ನೀಲಿ ಮಸಿ ಬಳಿಯಲು ಮುಂದಾಗಿದ್ದಾರೆ… ಆದರೆ ನಾನು ಒಂದು ಮಾತು ಹೇಳುತ್ತೇನೆ… ನನಗೆ ಯಾರಾದರೂ ಸಿಟ್ಟು ತರಿಸಿದರೆ ಅಂಥವರಿಗೆ ಏನು ಬೇಕೋ ಆ ಬಹುಮಾನ ಕೊಟ್ಟು ಅವರನ್ನು ಎಲ್ಲರೆದುರಿಗೆ ಸನ್ಮಾನ ಮಾಡಿ ಗೌರವಿಸುತ್ತೇನೆ ಎಂದು ಮದ್ರಾಮಣ್ಣನವರು ಹೇಳಿದ್ದೇ ತಡ… ಅನೇಕರು ಗಾಬರಿಯಾದರು. ಇನ್ನೂ ಅನೇಕರು ನಾನು ಅವರಿಗೆ ಸಿಟ್ಟು ತರಿಸಿ ಬಹುಮಾನ ಪಡೆಯಬೇಕು ಎಂದು ನಿರ್ಧರಿಸಿದರು. ಮದ್ರಾಮಣ್ಣನವರ ಸಹಪಾಠಿಗಳು..ಅಪೋಜೇಶನ್‌ನವರು ಮದ್ರಾಮಣ್ಣ ಏನಿದು ಸ್ಟೇಟ್‌ಮೆಂಟಣ್ಣಾ? ಎಂದು ವಾಟ್ಸಾಪ್ ಮಾಡಿದರೂ ಅದಕ್ಕೆ ಉತ್ತರಿಸುವ ಗೊಡವೆಗೆ ಅವರು ಹೋಗಲೇ ಇಲ್ಲ. ಸಿಕ್ಕಿದ್ದೇ ಚಾನ್ಸು ಅಂದುಕೊಂಡು ಟಿವಿಯವರು-ಪೇಪರ್‌ನವರು ಮದ್ರಾಮಣ್ಣೋರಿಗೆ ಸಿಟ್ಟು ತರಿಸಿದರೆ ನೀವು ನಿರೀಕ್ಷೆ ಮಾಡದ್ದು ಬಹುಮಾನ ಸಿಗುತ್ತದೆ.. ನೀವು ಒಂದು ಸಲ ಟ್ರೈ ಮಾಡಿ ಎಂದು ಹೇಳಿದರು. ಸಿಟ್ಟು ಬರಿಸಿದವರಿಗೆ ಮದ್ರಾಮಣ್ಣನವರು ಬಹುಮಾನ ಕೊಡುತ್ತಾರೆ ಎಂಬ ಸುದ್ದಿಕೇಳಿ ಪಂ. ಲೇವೇಗೌಡರು ಕಿಸಕ್ ಎಂದು ನಕ್ಕು ಸುಮ್ಮನಾದರು. ಸುಮಾರಣ್ಣೋರು ಅಯ್ಯೋ ಎಲ್ಲರಿಗೂ ಬಹುಮಾನ ಕೊಡಬೇಕಾಗುತ್ತದ ಮದ್ರಾಮಣ್ಣೋರೆ ಎಂದು ಎಸ್‌ಎಂಎಸ್ ಕಳುಹಿಸಿದರು… ಹೀಗೆ ಎಲ್ಲರೂ ಅವರ ಸಿಟ್ಟಿನ ಬಗ್ಗೆ ಮಾತನಾಡಬೇಕಾದರೆ ಪಂ. ಲೇವಣ್ಣ ಮಾತ್ರ… ಅದು ನಿಜ… ನನಗೆ ಗೊತ್ತು… ಮದ್ರಾಮಣ್ಣಂಗೆ ಸಿಟ್ಟು ಅನ್ನುವುದೇ ಗೊತ್ತಿಲ್ಲ. ನನಗೆ ಗೊತ್ತಲ್ಲ ಅವರಿಗೆ ಸಿಟ್ಟು ಬಂದಿದ್ದು ನೋಡೇ ಇಲ್ಲ. ಯಾರೋ ಏನೋ ಏಳ್ತಾರೆ ಎಂದು ನಂಬೋಕಾಗಲ್ಲ… ಮದ್ರಾಮಣ್ಣ ಎಳಾದ್ರಲ್ಲಿ ಏನೂ ತೆಪ್ಪಿಲ್ಲ ಎಂದು ಯು-ಟ್ಯೂಬ್‌ಗೆ ಸಂದರ್ಶನ ನೀಡಿ ಹೇಳಿದ್ದರು. ಕೆಲವರು ಮದ್ರಾಮಣ್ಣನ ಸಿಟ್ಟು ಅಂದರೆ ಸಿಟ್ಟು ಎಂದು ಮಾತನಾಡಿಕೊಂಡರು. ಕೆಲವರು ಏನಿಲ್ಲ… ಏನಿಲ್ಲಾ… ಅವರಿಗೆ ಸಿಟ್ಟು ಗಿಟ್ಟು ಏನಿಲ್ಲ ಎಂದು ಹಾಡು ಕಟ್ಟಿದ್ದರು. ಅವರಿಗೆ ನಾನು ಸಿಟ್ಟು ತರಿಸಬಲ್ಲೆ ಎಂದು ತಿಗಡೇಸಿ ಮದ್ರಾಮಣ್ಣನವರಿಗೆ ನಾನು ಸಿಟ್ಟು ತರಿಸುತ್ತೇನೆ ಎಂದು ಚಾಲೇಂಜ್ ಮಾಡಿದ. ಇಬ್ಬರನ್ನೂ ಎದುರಾಬದುರಾ ಕೂಡಿಸಿ ಕ್ಯಾಮರಾಗಳನ್ನು ಆನ್ ಮಾಡಲಾಯಿತು… ತಿಗಡೇಸಿ ಮೊದಲು ಏನೋ ಕೇಳಿದ… ಅದಕ್ಕೆ ನಗುತ್ತ ಉತ್ತರಿಸಿದರು ಮದ್ರಾಮಣ್ಣ… ಎರಡು… ಮೂರು… ನಾಲು ಹೀಗೆ ಏನು ಕೇಳಿದರೂ ಮದ್ರಾಮಣ್ಣೋರಿಗೆ ಸಿಟ್ಟೇ ಬರಲಿಲ್ಲ. ತಿಗಡೇಸಿಗೆ ಯಾಕೆ ಬೇಕಿತ್ತು? ಎಂದು ಎಲ್ಲರೂ ಅನ್ನತೊಡಗಿದರು. ಸಾಹೇಬ್ರೆ ಇದು ಲಾಸ್ಟ್ ಪ್ರಶ್ನೆ ಎಂದು ನೀರು ಕುಡಿದ ತಿಗಡೇಸಿ… ಸಾಹೇಬ್ರೆ ಮೊನ್ನೆ ನೀವು ಮಂಡಿಸಿದ ಬಜೆಟ್ ಸರಿಯಾಗಿಲ್ಲ ಎಂದು ಸೋದಿ ಮಾಮಾ ಅನ್ನುತ್ತಿದ್ದರು ಅಂದ ಕೂಡಲೇ ಕೆಂಡಾಮಂಡಲವಾದ ಮದ್ರಾಮಣ್ಣೋರು… ನೋ…ವೇ… ಅವರಿಗೆ ನಮಗೆ ಅನ್ನುವುದಷ್ಟೆ ಕೆಲಸ… ಅವರಾದರೆ ನಮಗೆ ಏನು ಬೇಕಾದ್ದು ಅನ್ನುತ್ತಾರೆ… ನಾವು ಅನ್ನಬಾರದೇ? ಅವರು ಏನೇನು ಅಂದಿದ್ದಾರೆ ಎಂದು ಹೇಳಲೇ… ಇದನ್ನು ಬಿಟ್ಟು ಅವರು ದೇಶವನ್ನು ಉದ್ಧಾರ ಮಾಡಲಿ ಎಂದು ಜೋರು ಜೋರು ಧ್ವನಿಯಲ್ಲಿ ಹೇಳಿದಾಗ… ಸಾಹೇಬ್ರೆ ಈಗ ಯಾರಿಗೆ ಬಂತು ಸಿಟ್ಟು? ಎಂದು ತಿಗಡೇಸಿ ಪ್ರಶ್ನಿಸಿದ.