For the best experience, open
https://m.samyuktakarnataka.in
on your mobile browser.

ಈಗಿಂದೀಗಲೇ ಗೋ ಬ್ಯಾಕ್…

02:30 AM Mar 28, 2024 IST | Samyukta Karnataka
ಈಗಿಂದೀಗಲೇ ಗೋ ಬ್ಯಾಕ್…

ಈ ಚುನಾವಣೆಯಲ್ಲಿ ಅಲ್ಲಲ್ಲಿ ಬರೀ ಗೋ ಬ್ಯಾಕ್…. ಆತ ಬಂದರೆ ಗೋ ಬ್ಯಾಕ್… ಈತ ಬಂದರೆ ಗೋ ಬ್ಯಾಕ್. ಇದನ್ನು ತೀರ ಮನಸ್ಸಿನ ಮೇಲೆ ತೆಗೆದುಕೊಂಡಿದ್ದ ತಿಗಡೇಸಿ, ಗೋಬ್ಯಾಕ್‌ನ ಅರ್ಥವನ್ನು ಬಲ್ಲವರಿಂದ ತಿಳಿದುಕೊಂಡ. ಗೋ ಬ್ಯಾಕ್ ಅಂತ ಬರೆದರೆ ಅವರು ಹೆದರಿ ಬರುವುದೇ ಇಲ್ಲ ಹಾಗಾಗಿ ಈಗ ಬೇರೆ, ಬೇರೆ ಕ್ಷೇತ್ರಗಳಲ್ಲಿ ಗೋ ಬ್ಯಾಕ್ ಎಂದು ಅಂತಿದ್ದಾರೆ ಎಂದು ಕನ್ನಾಳ್ಮಲ್ಲ ಕಥೆ ಮಾಡಿ ಹೇಳಿದ. ಅಂದಿನಿಂದ ಯಾರಾದರೂ ಕರೆ ಮಾಡಿ ನಾ ಆ ಕಡೆ ಬರುತ್ತೇನೆ ಎಂದು ಹೇಳಿದರೆ ಗೋಬ್ಯಾಕ್ ಅನ್ನುತ್ತಿದ್ದ. ಯಾರದ್ದೋ ಹಸು, ಯಾರದ್ದೋ ನಾಯಿ ಮನೆಮುಂದೆ ನಿಂತರೂ ಅದಕ್ಕೆ ಗೋ ಬ್ಯಾಕ್ ಎಂದು ಕೈ ಎತ್ತುತ್ತಿದ್ದ. ಅವತ್ತೊಂದಿನ ಆತನ ಹೆಂಡತಿ ತಿರುಕವೇಣಿ… ಏನ್ರೀ ನಮ್ಮ ಅಪ್ಪ ಶುಕ್ರವಾರ ಬರ್ತಿದಾರೆ ಎಂದು ನಗುತ್ತ ಹೇಳಿದಳು. ಇದಕ್ಕೆ ತೀರ ಬೇಸರಗೊಂಡಿದ್ದ ತಿಗಡೇಸಿ ಆಕೆಯ ಮುಂದೆ ಒಂದೂ ಮಾತನಾಡದೇ… ಊರ ಹೊರಗೆ ಜಾಲಿಗಿಡಗಳ ಮಧ್ಯೆ ಇದ್ದ ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಗೋ ಬ್ಯಾಕ್ ಮಾವಾ… ಎಂದು ಬರೆದು ಬಂದಿದ್ದ. ಬರೆದಿದ್ದು ಆತನ ಮಾವನಿಗೆ ಹೇಗೆ ಗೊತ್ತಾಗಬೇಕು? ಹಾಗಾಗಿ ಆತನ ಮಾವ ಬಂದು ಗಡದ್ದಾಗಿ ಎಂಟು ದಿನ ಇದ್ದು ಹೋದ. ನಾ ಬರೆದಿದ್ದು ಏನೂ ಉಪಯೋಗವಾಗಲಿಲ್ಲ ಎಂದು ಅಂದುಕೊಂಡ ತಿಗಡೇಸಿ ಮರುದಿನವೇ ಬರೆದಿದ್ದನ್ನು ಅಳಿಸಿ ಬಂದ. ಸ್ವಲ್ಪ ದಿನ ಕಳೆದ ಮೇಲೆ ಊರಿನ ಜಾತ್ರೆ ಬಂತು. ತಿಗಡೇಸಿ ಸೋದರತ್ತೆ ಕರೆ ಮಾಡಿ… ತಿಗಡೇಸಿ ನಾವು ಜಾತ್ರೆಗೆ ಬರುತ್ತೇವಪ್ಪ ಎಂದು ಹೇಳಿದಳು. ಅದಕ್ಕೂ ಸಹ ತಿಗಡೇಸಿ ಏನೂ ಮಾತನಾಡದೇ ಸೀದಾ ಅಂಗನವಾಡಿ ಕಟ್ಟಡದ ಹಿಂಭಾಗದಲ್ಲಿ ಸೋದರತ್ತೆ ಈಗಿಂದೀಗಲೇ ಗೋ ಬ್ಯಾಕ್ ಎಂದು ಬರೆದು ಬಂದ. ಈ ಬಾರಿ ಅತ್ತೆ ಬರಲಿಕ್ಕಿಲ್ಲ ಎಂದು ಅಂದುಕೊಂಡಿದ್ದ. ಜಾತ್ರೆ ಇನ್ನು ಮೂರುದಿನವಿರುವಾಗಲೇ ಆತನ ಸೋದರತ್ತೆ ಮಕ್ಕಳು, ತನ್ನ ಮೊಮ್ಮಕ್ಕಳು ಅಲ್ಲದೇ ಪಕ್ಕದ ಮಕ್ಕಳನ್ನೂ ಕರೆದುಕೊಂಡು ಬಂದಳು. ಆಕೆಯೂ ಸಹ ಜಾತ್ರೆ ಮುಗಿದು ಎಂಟು ದಿನಕ್ಕೆ ಊರಿಗೆ ಹೋದಳು. ಹೀಗೆ ಯಾರು ಬರುತ್ತೇನೆ ಎಂದು ಹೇಳುತ್ತಾರೋ ಅವರೆಲ್ಲ ಬಂದು ಹೋಗುತ್ತಿದ್ದರು. ಅವತ್ತು ರಷಿಯಾದ ಪುಟ್ಯಾ ಇಂಡಿಯಾಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಮೊದಲಿನಿಂದಲೂ ಪುಟ್ಯಾನ್ನ ಕಂಡರೆ ಆಗದೇ ಇದ್ದವರು ಆತ ಬರುವುದನ್ನು ವಿರೋಧಿಸಿ ಚಳವಳಿ ನಡೆಸಿದರು. ಖಾಸಗಿ ಚಾನಲ್ ನಿರೂಪಕಿ ಕಿವುಡನುಮಿ ಪುಟ್ಯಾ ನಿಮ್ಮನೆಗೇ ಬರುತ್ತಾನೆ ಹುಷಾರ್ ಎಂದು ರಾತ್ರಿ ೧೦.೩೦ರ ವಾರ್ತೆಯಲ್ಲಿ ಹೇಳಿದಳು. ವಾರ್ತೆ ನೋಡುತ್ತ ಕುಳಿತಿದ್ದ ತಿಗಡೇಸಿ ಎದೆ ಧಸಕ್ ಎಂದಿತು. ಮೊದಲೇ ಸಿಕ್ಕಾಪಟ್ಟೆ ಜನರು ಬಂದು ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಖಾಲಿ ಮಾಡುತ್ತಿದ್ದಾರೆ. ಈಗ ಅವನು ಬಂದರಂತೂ ನಮ್ಮ ಕಥೆ ಮುಗಿಯಿತು. ಹೇಗಾದರೂ ಮಾಡಿ ಆತ ಬರುವುದನ್ನು ತಡೆಯಬೇಕು ಎಂದು ಸೀದಾ ಅಂಗನವಾಡಿ ಕಟ್ಟಡದ ಹಿಂಬಾಗ ಗೋ ಬ್ಯಾಕ್ ಪುಟ್ಯಾ ಎಂದು ಬರೆದ. ಆ ಕಡೆ ಪುಟ್ಯಾ ನನಗೆ ಅರಾಮ್ ಇಲ್ಲ ಎಂದು ಇಂಡಿಯಾಗೆ ಬರುವುದನ್ನು ಕ್ಯಾನ್ಸಲ್ ಮಾಡಿದ. ತಿಗಡೇಸಿ ಮಾತ್ರ ನಾ ಗೋ ಬ್ಯಾಕ್ ಅಂತ ಬರೆದೆ ಆತ ಬರಲೇ ಇಲ್ಲ ಎಂದು ಗೆಳೆಯರ ಮುಂದೆ ಹೇಳುತ್ತಿದ್ದಾನೆ.