ಈಗ ಎಂಎಲ್‌ಎ ಆಗಿದಾನೆ…
ಮೇಕಪ್ ಮರೆಮ್ಮ-ಕ್ವಾಟಿಗ್ವಾಡಿ ಸುಂದ್ರವ್ವ ಒಂದೇ ವಠಾರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಬ್ಬರೂ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಮರೆಮ್ಮನ ಮನೆಯಲ್ಲಿ ಸಕ್ಕರೆ ಖಾಲಿ ಆದರೆ ಸುಂದ್ರವ್ವನ ಮನೆಯಿಂದ ಒಂದು ಬಟ್ಲು ಸಕ್ಕರೆ ತರುತ್ತಿದ್ದಳು. ಈಕೆ ಮನೆಯಲ್ಲಿ ಟೀ ಪುಡಿ ಖಾಲಿ ಆದರೆ ಆಕೆ ಕೊಡುತ್ತಿದ್ದಳು. ಸಾಯಂಕಾಲದ ಹೊತ್ತು ತರಕಾರಿ ಬಿಡಿಸುತ್ತ ಇಬ್ಬರೂ ಹರಟೆ ಹೊಡೆಯುತ್ತಿದ್ದರು. ಗಂಡ ಮಕ್ಕಳು ಬರುವ ಸಮಯವಾದರೆ ಇಬ್ಬರೂ ತಮ್ಮ ತಮ್ಮ ಮನೆ ಸೇರಿಕೊಳ್ಳುತ್ತಿದ್ದರು. ಹಬ್ಬ ಹುಣ್ಣಿಮೆ ಬಂದರೆ ಇವರು ಮನೆಗೆ ಅವರು ಅವರ ಮನೆಗೆ ಇವರು ಊಟಕ್ಕೆ ಹೋಗುತ್ತಿದ್ದರು. ಹೀಗಿರುವಾಗ ಮೇಕಪ್ ಮರೆಮ್ಮಳ ಗಂಡ ಹೊಸ ಬಡಾವಣೆಯಲ್ಲಿ ಸೈಟ್ ತೆಗೆದುಕೊಂಡ… ಮನೆಯನ್ನೂ ಕಟ್ಟಿದ. ಮನೆ ಗೃಹಪ್ರವೇಶಕ್ಕೆ ಸುಂದ್ರಮ್ಮಳೂ ಹೋಗಿದ್ದಳು. ಮೊದ ಮೊದಲು ಇಬ್ಬರೂ ವಾರಕ್ಕೊಮ್ಮೆಯಾದರೂ ಭೇಟಿ ಆಗುತ್ತಿದ್ದರು. ಬರಬರುತ್ತ ಹದಿನೈದು ದಿನಗಳಿಗೊಮ್ಮೆ… ನಂತರದಲ್ಲಿ ತಿಂಗಳಿಗೊಮ್ಮೆ.. ಅದಾದ ನಂತರ ಆರು ತಿಂಗಳಿಗೊಮ್ಮೆ ಭೇಟಿಯಾಗುತ್ತಿದ್ದರೂ. ನಂತರದ ದಿನಗಳಲ್ಲಿ ಸಂಸಾರ ಅದು ಇದು ಅಂತ ಇಬ್ಬರೂ ಭೇಟಿಯಾಗುವುದು ನಿಂತು ಹೋಯಿತು. ಹಾಗೆ ಕಾಲ ಕಳೆಯಿತು. ಇಬ್ಬರಿಗೂ ವಯಸ್ಸಾಯಿತು. ಒಂದು ದಿನ ಸುಂದ್ರವ್ವ ತರಕಾರಿ ತರಲೆಂದು ಮಾರುಕಟ್ಟೆಗೆ ಹೋದಳು. ಅಚಾನಕಾಗಿ ಅಲ್ಲಿ ಮೇಕಪ್ ಮರೆಮ್ಮ ಸಿಕ್ಕಳು. ಇಬ್ಬರ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಕೈ ಕೈ ಹಿಡಿದುಕೊಂಡು ಬಹಳ ಹೊತ್ತಿನವರೆಗೆ ನಿಂತಿದ್ದರು. ನಡೀರಿ ನಮ್ಮ ಮನೆ ಇಲ್ಲೇ ಹತ್ತಿರವಿದೆ ಎಂದು ಮೇಕಪ್ ಮರೆಮ್ಮ ಫೋರ್ಸ್ ಮಾಡಿ ಸುಂದ್ರವ್ವಳನ್ನು ಮನೆಗೆ ಕರೆದುಕೊಂಡು ಹೋದಳು. ಇಬ್ಬರೂ ತಿಂಡಿ ತಿಂದು ಚಹ ಕುಡಿದು ಮಾತಿಗೆ ಕುಳಿತರು. ಅದು ಇದು ಮಾತಾಡಿ ಕೊನೆಗೆ ಸುಂದ್ರವ್ವಳು ಮರೆಮ್ಮೋರೆ ನಿಮ್ ದೊಡ್ ಮಗ ಈಗೇನು ಮಾಡುತ್ತಾನೆ ಎಂದು ಕೇಳಿದಳು. ಅದಕ್ಕೆ ಮರೆಮ್ಮ ಅವನು ಈಗ ಇಂಜಿನಿಯರ್ ಅಗಿದ್ದಾನೆ ಅಂದಳು. ಎರಡನೇ ಮಗ ಅಂದಾಗ ಅವನು ಡಾಕ್ಟರಾಗಿದ್ದಾನೆ ಎಂದು ಮೇಕಪ್ ಮರೆಮ್ಮ ಹೇಳಿದಳು. ಓಹೋ ಅಂದ ಸುಂದ್ರಮ್ಮ… ನಿಮ್ಮ ಮೂರನೇ ಮಗ.. ಸ್ವಲ್ಪ ಉಡಾಳ ಇತ್ತಲ್ಲ… ಅವತ್ತು ಬಸ್ಸಿಗೆ ಕಲ್ಲು ಹೊಡೆದು ಓಡಿ ಬಂದಿತ್ತು… ಗಲ್ಲಿಯಲ್ಲಿ ಗದ್ದಲ ಮಾಡುತ್ತಿತ್ತು… ಗ್ಯಾಂಗ್ ಕಟ್ಟಿಕೊಂಡು ಸ್ಟ್ರೇಕ್ ಮಾಡುತ್ತಿತ್ತು… ಪಕ್ಕದಮನೆ ಪದ್ಮಾಳ ಗಂಡನಿಗೆ ಸೈಟ್ ಕೊಡಸ್ತೀನಿ ಅಂತ ಏನೋ ಗದ್ಲ ಮಾಡಿತ್ತಲ್ಲ ಅದೇನು ಮಾಡ್ತಿದೆ ಈಗ ಅಂದಳು. ನಿಟ್ಟುಸಿರು ಬಿಟ್ಟ ಮೇಕಪ್ ಮರೆಮ್ಮ ಈಗ ಅದು ಎಂಎಲ್‌ಎ ಆಗಿದೆ… ಇಷ್ಟರಲ್ಲಿಯೇ ಮಂತ್ರಿ ಆಗಿವ ಚಾನ್ಸಿದೆ… ಏನರ ಕೆಲಸ ಬೇಕಿದ್ದರೆ ಹೇಳಿ ಎಂದು ಅಂದಳು.