ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈಗ ಜಾತಿಬೀಜದ ಬಿತ್ತನೆ

11:35 AM Oct 05, 2023 IST | Samyukta Karnataka

ಇನ್ನು ಕಾರ್ಯಾಂಗದಲ್ಲಿ ಜಾತಿ ಆಧಾರಿತ ಕಾರ್ಯತಂತ್ರʼ ಆರಂಭವಾಗಬೇಕೇ? ಅಧಿಕಾರಿಯ ಜಾತಿ ನೋಡಿ ಸ್ಥಾನಮಾನ ನಿರ್ಧರಿಸಬೇಕೇ? ಆಡಳಿತದ ನೀತಿ ನಿಯಮ, ದಕ್ಷತೆ, ಇತಿಹಾಸ ಪರಿಗಣಿಸಬೇಕೇ? ಕರ್ನಾಟಕದ ನೆಲದಲ್ಲಿ ಈ ಚರ್ಚೆಗೆ ಬೀಜ ಬಿತ್ತನೆಯಾಗಿದೆ. ಮುಂಗಾರು ವಿಫಲವಾದರೂ, ಬೀಜಕ್ಕೆ ಗೊಬ್ಬರ, ಮಣ್ಣು ದೊರೆಯದಿದ್ದರೂ ಶಾಮನೂರು ಶಿವಶಂಕರಪ್ಪ ಅವರು ಬಿತ್ತಿರುವ ಬೀಜ ಕ್ಷಣಾರ್ಧದಲ್ಲಿ ಮೊಳಕೆ ಒಡೆದು ಹುಲುಸಾಗಿ ಟಿಸಿಲೊಡೆಯುತ್ತಿದೆ!. ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿ ಪಾಡು. ಅವರಿಗೆ ಎಷ್ಟೇ ದಕ್ಷತೆ, ಸಾಮರ್ಥ್ಯವಿದ್ದರೂ ಅಮುಖ್ಯವಾದ ಹುದ್ದೆ, ಸ್ಥಾನಮಾನ ನೀಡಲಾಗುತ್ತಿದೆ…' ಎಂದು ತೊಂಬತ್ತೆರಡರ ಹಿರಿಯಜ್ಜ, ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ಮಹಾಸಭೆಯ ವೇದಿಕೆಯಲ್ಲಿಯೇ ತಮ್ಮ ಎಂದಿನ ಧಾಟಿಯಲ್ಲಿ ಯಾವ ಬಿನ್ನಾಣವಿಲ್ಲದೇ ಅಸಮಾಧಾನ ಹೊರ ಹಾಕಿದರೋ, ರಾಜ್ಯ ಸರ್ಕಾರದಲ್ಲಿ ಮತ್ತೊಂದು ಧ್ವನಿಗೆ ಇಂಬು ಬಂತು.
ಜಾತಿ, ಧರ್ಮದ ಆಧಾರದ ಮೇಲೆ ರಾಜ್ಯದ ಅಧಿಕಾರಿಗಳ ನೇಮಕ, ವರ್ಗಾವಣೆ ಮಾಡಬೇಕಿತ್ತು ಎನ್ನುವ ಶಾಮನೂರು ಒತ್ತಾಸೆಗೆ ಅವರದ್ದೇ ಸಮಾಜದ ಪ್ರಮುಖರು ಧ್ವನಿಗೂಡಿಸಿದ್ದರೆ ಇತರೇ ಸಮುದಾಯ, ಶಾಸಕರು, ಸಚಿವರು ಪ್ರತಿತಂತ್ರ ರೂಪಿಸಲು ಆರಂಭಿಸಿದರು.
ಹೌದು. ಶಾಮನೂರು ಶಿವಶಂಕರಪ್ಪ ಅವರು ಈಗಲೇ ಈ ವರಸೆ ಆರಂಭಿಸಿದ್ದೇಕೆ? ಸರ್ಕಾರ ಬಂದು ನಾಲ್ಕು ತಿಂಗಳು ಈಗಷ್ಟೇ ಪೂರ್ಣಗೊಂಡಿದೆ. ಈಗಾಗಲೇ ಅಧಿಕಾರಿಗಳ ವರ್ಗಾವರ್ಗಿಯ ಅವಾಂತರ, ವ್ಯವಹಾರ ಮುಗಿದಿವೆ. ದಲಿತ ಮುಖ್ಯಮಂತ್ರಿ, ಮೂರು ಡಿಸಿಎಂಗಳ ನೇಮಕ ಇತ್ಯಾದಿಗಳ ಒಳ ತಂತ್ರಗಾರಿಕೆಯಿಂದ ಪಕ್ಷದಲ್ಲಿ ಉಂಟಾಗಿರುವ ಲಂಗು ಲಗಾಮಿಲ್ಲದ ಮಾತು ವರಸೆಗಳಿಂದ ಸರ್ಕಾರ ಹಿಡಿತ ತಪ್ಪುತ್ತಿರುವ ಈ ಸಂದರ್ಭದಲ್ಲಿ ಶಾಮನೂರು ಅವರ ಅಸಮಾಧಾನ ಹೊರಬಿದ್ದಿದೆ.
ಬಿಜೆಪಿ ಮತ್ತು ಜನತಾದಳ (ಎಸ್) ವಿಲೀನದ ಪ್ರಕ್ರಿಯೆ ಹೊರಬಿದ್ದ ವಾರದಲ್ಲೇ ಎರಡೂ ಪಕ್ಷಗಳಲ್ಲಿ ಉಂಟಾಗಿರುವ ಆಂತರಿಕ ಲಾಭ- ನಷ್ಟದ ಲೆಕ್ಕಾಚಾರ ನಡೆದಿರುವ ಈ ಸಂದರ್ಭದಲ್ಲಿ ಲಿಂಗಾಯತ ಶಾಸಕರು ಮತ್ತು ಅಧಿಕಾರಿಗಳ ನಾಯಿಪಾಡು ಸ್ಥಿತಿ' ಎಂದು ಶಾಮನೂರು ಅವರ ಅಭಿಪ್ರಾಯ ಮತ್ತೊಂದು ರಾಜಕೀಯ ಮಗ್ಗಲನ್ನು ಪಡೆದುಕೊಂಡಂತಿದೆ. ಬಿಜೆಪಿ, ದಳಕ್ಕೆ ಅನಗತ್ಯ ಅಸ್ತ್ರ ದೊರಕಿದಂತಾಗಿದೆ. ಶಾಮನೂರು ಅವರ ಮಗ ಎಸ್.ಎಸ್.ಮಲ್ಲಿಕಾರ್ಜುನ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದರೂ ಈ ಹಿರಿಯಜ್ಜ ಮುಖ್ಯಮಂತ್ರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರ ಹಿಂದೆ ಅಧಿಕಾರ ವರ್ಗವಿದ್ದದ್ದನ್ನು ಸಹಜವಾಗಿ ಊಹಿಸಬಹುದಾದರೂ, ಸದ್ಯದಲ್ಲೇ ನಡೆಯಲಿರುವ ನಿಗಮ ಮಂಡಳಿಗಳ ಪಾಲುಗಾರಿಕೆ, ಸ್ಥಾನಮಾನದ ಹಿನ್ನೆಲೆ ಇದ್ದೀತು ಎನ್ನುವುದು ರಾಜಕೀಯ ವಿಶ್ಲೇಷಕರ ಊಹೆ. ಆದರೆ ತಮ್ಮ ಸಮುದಾಯದ ಅಧಿಕಾರಿಗಳಿಗೇ ಪ್ರಾತಿನಿಧ್ಯ ದೊರಕಿಲ್ಲ ಎನ್ನುವ ಶಾಮನೂರು ಅವರ ಆರೋಪದ ಹಿಂದೆ ದಕ್ಷತೆ ಹಾಗೂ ಸಾಮರ್ಥ್ಯದ ಮಾನದಂಡ ಎತ್ತಲಾಗಿದೆ. ಈ ವರ್ಗದ ಬ್ರಾಹ್ಮಣ, ಒಕ್ಕಲಿಗ ಸಮುದಾಯ ಕೂಡ ತನ್ನ ಅಸಮಾಧಾನವನ್ನು ಶಾಮನೂರು ಮೂಲಕಟೆಸ್ಟ್' ಮಾಡಿದೆಯೇ ಎನ್ನುವುದು ಅವಲೋಕಿಸಬೇಕಾದ ವಿಷಯ.
ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಂದಿದ್ದ ಆರೋಪ, ಜಿಲೇಬಿ' ಕಡತ ಓಡಾಡಲ್ಲ ಎಂಬುದು. ಯಾವ ನೇಮಕ, ವರ್ಗಾವಣೆ, ಸ್ಥಾನಮಾನಗಳು, ಪ್ರಶಸ್ತಿ ಪುರಸ್ಕಾರಗಳೂ ಕೂಡ,ಜಿಲೆಬಿ' ಕಣ್ಣಿನಿಂದಲೇ ನೋಡಲ್ಪಡುತ್ತವೆ ಎಂಬುದು ಅಂದಿನ ಅಸಮಾಧಾನ. ಈ ನಡವಳಿಕೆಯೇ ಆಗ ಸಾಕಷ್ಟ ಟೀಕೆ, ಸಂಘರ್ಷಗಳು ನಡೆದಿದ್ದರೂ ಅದನ್ನು ಕ್ಯಾರೇ ಮಾಡದ ವಾತಾವರಣವಿತ್ತು. ದಕ್ಕಿಸಿಕೊಳ್ಳುವ ಸಾಮರ್ಥ್ಯವೂ ಅಂದಿನ ರಾಜಕೀಯ'ಕ್ಕೆ ಇತ್ತು. ಬದಲಾದ ಸ್ಥಿತಿಯಲ್ಲಿ ಈಗ ಶಾಮನೂರು ಮತ್ತು ಇತರರು ಬಾಯಿ ಬಿಡುವ, ವಾದಿಸುವ ಸಾಮರ್ಥ್ಯ ಪಡೆದಿದ್ದಾರೆ. ಏಕೆಂದರೆ ಈ ಸಾರೆ ಕಾಂಗ್ರೆಸ್ ಸಿದ್ದರಾಮಯ್ಯ ಒಬ್ಬರಿಂದಲೇ ಬಂದಿದ್ದಲ್ಲ. ಇದಕ್ಕೆ ಲಿಂಗಾಯತರು, ಒಕ್ಕಲಿಗರ ಬೆಂಬಲ ಹೆಚ್ಚಾಗಿತ್ತು. ಮತ್ತು ಈಗ ರಾಹುಲ್, ಸೋನಿಯಾ ಕಾಂಗ್ರೆಸ್ ಪ್ರಶ್ನಾತೀತ ನಾಯಕರಾಗಿದ್ದರೂ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕಣ್ಗಾವಲಿನಲ್ಲಿ ರಾಜ್ಯ ಕಾಂಗ್ರೆಸ್ ಇದೆ. ಶಾಮನೂರು- ಖರ್ಗೆ ಸಂಬಂಧ ಅದೇ ನಲವತ್ತು ವರ್ಷಗಳ ಬೆಸುಗೆ. ಒಡನಾಟ. ಆಯಕಟ್ಟಿನ ಹುದ್ದೆಗಳಲ್ಲಿರುವ ಅಧಿಕಾರಿಗಳ ಜಾತಿ ಮತ್ತು ಸ್ಥಾನಮಾನದ ಪಟ್ಟಿಯನ್ನು ಈಗ ಸರ್ಕಾರ ಪರೋಕ್ಷವಾಗಿ ಬಿಡುಗಡೆ ಮಾಡಿರಬಹುದು. ಆದರೆ ವಿಧಾನಸೌಧ, ಅದೂ ವಿಶೇಷವಾಗಿ ಮುಖ್ಯಮಂತ್ರಿಗಳ ಮತ್ತು ಅವರ ಆಪ್ತ ಸಚಿವರ ಕಾರ್ಯಾಲಯ ಸಿಬ್ಬಂದಿ ನೇಮಕ, ಅಲ್ಲಿ ಕುಳಿತಿರುವ ಅವರ ಹಿನ್ನೆಲೆ, ಜಾತಿ ಬಹುಶಃ ಇತರ ಜಾತಿಗಳವರ ಕೆಂಗಣ್ಣಿಗೆ ಗುರಿಯಾಗಿರಲು ಸಾಧ್ಯ. ಮತ್ತೆಜಿಲೆಬಿ' ಆಡಳಿತ ಶುರುವಾಯಿತಾ? ಅದಕ್ಕೆ ಈಗಲೇ ಕಡಿವಾಣ ಹಾಕೋಣ ಎನ್ನುವ ಚಿಂತನೆ ಉಳಿದವರಲ್ಲಿ ಮೊಳಕೆ ಒಡೆದಂತಿದೆ. ಏನೇ ಆದರೂ ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ, ಜಾತಿ ಧರ್ಮ ಪರಿಗಣಿಸಿಲ್ಲ ಎನ್ನುವ ಮುಖ್ಯಮಂತ್ರಿ ಹೇಳಿಕೆ ಮತ್ತು ಅವರದ್ದೇ ಸಮುದಾಯದ ಶಾಸಕರು- ಸಚಿವರಿಂದ ಆಡಿಸುತ್ತಿರುವ ಮಾತು ಸದ್ಯಕ್ಕೆ ಸಮಾಧಾನವನ್ನಂತೂ ತಂದಿಲ್ಲ. ಅದೂ ನಿಪ್ಪಾಣಿಯ ಕುರುಬ ಸಮಾಜದ ಸಮಾವೇಶದಲ್ಲಿ ಕೆಲ ಪ್ರತಿನಿಧಿಗಳ ಮಾತು, ವರಸೆ ಬೆಂಕಿಗೆ ತುಪ್ಪ ಸುರಿದಂತಾಯಿತೇನೋ…
ಕಳೆದ ಎರಡೂವರೆ ದಶಕದ ನಂತರ ಮೂವತ್ನಾಲ್ಕು ಲಿಂಗಾಯತ ಶಾಸಕರ ಬೆಂಬಲ ಹೊಂದಿರುವ ಕಾಂಗ್ರೆಸ್‌ನಲ್ಲಿ ಪ್ರಬಲ ಜಾತಿಯ ಧ್ವನಿ ಎಚ್ಚರಿಸಿರುವ ಸಾಧ್ಯತೆ ಇದೆ. ಪೊಲೀಸ್, ಕಂದಾಯ, ಲೋಕೋಪಯೋಗಿ ಮತ್ತು ವಿಧಾನಸೌಧದ ಉನ್ನತಾಧಿಕಾರಿಗಳನ್ನು ಗುರುತಿಸುವಲ್ಲಿ ಮುಖ್ಯಮಂತ್ರಿಗಳ ನಿರ್ಧಾರ ಅಂತಿಮ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ, ತಮ್ಮವರದು ನಾಯಿಪಾಡು, ಅವರಿಗೆ ರಕ್ಷಣೆ ಇಲ್ಲ.. ಎಂಬ ಆರೋಪ ಮಾಡಿರುವುದನ್ನು ಲಘುವಾಗಿ ಪರಿಗಣಿಸುವಂತೆಯೂ ಇಲ್ಲ. ಹಣ ಮತ್ತು ಜಾತಿ ಎರಡೇ ಪರಿಗಣಿಸಲ್ಪಡುತ್ತವೆ ಎನ್ನುವುದು ಒಪ್ಪಿತ ಬಹಿರಂಗವಾಗಿ ಢಾಣಾಢಂಗುರವಾಗಿರುವ ವಾಸ್ತವ.
೧೯೮೩ರಲ್ಲಿ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಮುಖ್ಯಮಂತ್ರಿ ಆದಿಯಾಗಿ ಯಾವುದೇ ಮಂತ್ರಿಗಳು ತಮ್ಮ ಕಾರು ಚಾಲಕ, ಪಿ.ಎ ಆದಿಯಾಗಿ ಆಪ್ತ ಕಾರ್ಯದರ್ಶಿಯವರೆಗೆ ಸ್ವಜಾತಿಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತಿಲ್ಲ ಎಂದು!.
ಈ ಸುತ್ತೋಲೆಯನ್ನು ಅಂದಿನ ಸಂಪುಟದಲ್ಲಿ ಸಚಿವರಾಗಿದ್ದ ಜೆ.ಎಚ್.ಪಟೇಲ, ಬಿ.ರಾಚಯ್ಯ, ದೇವೇಗೌಡ, ನಜೀರ್‌ಸಾಬ, ಜಾಲಪ್ಪ ಆದಿಯಾಗಿ ಎಲ್ಲರೂ ಪಾಲಿಸಿದವರೇ. ಅಂದು ದೇವೇಗೌಡರು ಆಂತರಿಕ ಅಸಮಾಧಾನ ವ್ಯಕ್ತಪಡಿಸಿದವರೇ. ಆದರೆ ೧೯೮೬ರವರೆಗೆ ಈ ಸುತ್ತೋಲೆ ಪ್ರಕಾರವೇ ಸಚಿವರು ಕಾರ್ಯನಿರ್ವಹಿಸಿದ್ದರು. ಅಂದಿನ ಪ್ರತಿಪಕ್ಷದ ನಾಯಕರಿಗೆ ಕೂಡ ತಮ್ಮ ಸ್ವಜಾತಿಯ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳಲಾಗದ ಸಂಕಷ್ಟ ಎದುರಾಗಿತ್ತು.
ವೀರೇಂದ್ರ ಪಾಟೀಲ ಹಾಗೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಜಾತಿ ಅಧಿಕಾರಿಗಳ ನಡುವ ಅಂತರ ಕಾದುಕೊಂಡಿದ್ದರು. ಅದೇ ಬಂಗಾರಪ್ಪ ಹಾಗೂ ಕುಮಾರಸ್ವಾಮಿ ಆಳ್ವಿಕೆಯಲ್ಲಿ ನಡೆಯಲಿಲ್ಲ. ಬಿಜೆಪಿ ಆಡಳಿತದಲ್ಲಂತೂ ರಾಜಾರೋಷವಾಗಿಯೇ ಸ್ವಜಾತಿ, ಸಮಾಜ, ಬಾಂಧವರು, ಬಳಗ ಮತ್ತು ಆಡಳಿತ ಸಮೀಕರಣಗೊಂಡಿದ್ದವು.
ಕೆ.ಪಿ.ಎಸ್‌ಸಿ ಅಧ್ಯಕ್ಷರು, ಕಾರ್ಯದರ್ಶಿ, ಆಯುಕ್ತರು, ಸದಸ್ಯರ ನೇಮಕಕ್ಕೆ ಹರಾಜುಗಳು, ಜಾತಿ ಲಾಬಿ ಎಂದು ಆರಂಭವಾದವೋ, ನೇಮಕಾತಿಗಳೆಲ್ಲ ಅಪಾರದರ್ಶಕವಾಗಿ ನಡೆಯಲಾರಂಭವಾದವೋ ಸರ್ಕಾರಿ ಸೇವೆ ಎಂದರೆ ತುಂಬ ಚಾಣಾಕ್ಷರು, ಪ್ರಬುದ್ಧರು ಮತ್ತು ಪರಿಣಿತರು ದೂರ ಸರಿಯಲಾರಂಭಿಸಿದರು. ರಾಜಕೀಯ, ಜಾತಿ, ಭ್ರಷ್ಟತೆ, ಲಂಚ ರುಷುವತ್ತುಗಳು ಸೂರ್ಯನಷ್ಟೇ ದಟ್ಟವಾಗಿರುವಾಗ ಮೀಸಲಾತಿ ವರ್ಗದಲ್ಲಿಯೂ ಕೂಡ ಬಹುತೇಕ ಪರಿಣಿತರು ಖಾಸಗಿ ವಲಯವನ್ನೇ ನೆಚ್ಚಿಕೊಳ್ಳುವುದು ಇದೇ ಕಾರಣಕ್ಕಾಗಿ.
ದಕ್ಷತೆ ಮಾನದಂಡವಾಗಬೇಕು. ಅಧಿಕಾರಿಗಳ ಸಾಮರ್ಥ್ಯ, ಸಂಕಷ್ಟದ ಪರಿಸ್ಥಿತಿಯಲ್ಲಿ ಅದನ್ನು ನಿಭಾಯಿಸುವ ತಾಕತ್ತು, ಚಾಕಚಕ್ಯತೆ ಇರಬೇಕು. ಅವೆಲ್ಲವನ್ನೂ ಅಳೆದು ತೂಗುವ ಸಾಮರ್ಥ್ಯ ಸರ್ಕಾರ ನಡೆಸುವವರಲ್ಲಿ ಇರಬೇಕು. ಹಾಗಾದಾಗ ಅಧಿಕಾರಿಗಳ ನಾಯಿಪಾಡು ಹೇಳಿಕೆ ನೀಡುವ ಧೈರ್ಯ ಯಾರಿಗೂ ಬರುವುದಿಲ್ಲ.
ಜಾತಿ ಆಧಾರದ ಮೇಲೆ ನೇಮಕಾತಿ, ಉನ್ನತ, ಆಯಕಟ್ಟಿನ ಹುದ್ದೆಗಳ ನೇಮಕ ಪ್ರಶ್ನೆ ಬಂದಾಗಲೇ, ಭ್ರಷ್ಟರ, ಅದಕ್ಷರ, ಜಾತಿ ವರ್ಗೀಕರಣ ನಡೆದರೆ ಆಗಬಹುದೇ….? ಎನ್ನುವ ಪ್ರಶ್ನೆಯನ್ನು ಕೇಳುವವರಿದ್ದಾರೆ. ಲೋಕಾಯುಕ್ತ, ಸಿಸಿಬಿ, ನ್ಯಾಯಾಂಗ, ವಿಚಾರಣಾ ಆಯೋಗ, ನ್ಯಾಯಾಲಯಗಳಲ್ಲಿಯ ಮೊಕದ್ದಮೆ, ಅವ್ಯವಹಾರ ನಡೆಸಿದ ಅಧಿಕಾರಿಗಳ ಜಾತಿ ಪಟ್ಟಿಗಳನ್ನು ಯಾರಾದರೊಬ್ಬರು ವಿಶ್ಲೇಷಿಸಿ ಹೊರ ಹಾಕಿದರೆ ಮತ್ತೆ ಇನ್ಯಾವ ಜಾತಿಗಳು, ಇನ್ಯಾವ ಸಮುದಾಯ ಆಕ್ರೋಶಗೊಳ್ಳುತ್ತದೋ ಗೊತ್ತಿಲ್ಲ!
ಶ್ಯಾಮನೂರು ಶಿವಶಂಕರಪ್ಪ ಅವರ ಒಳಸುಳಿಯ ಹೊಡೆತದ ನಡುವೆ ಈಗ ಜಾತಿಗಣತಿ' ಅಂಗೀಕಾರಕ್ಕೆ ಬಲವಾದ ಒತ್ತಡ ಬಂದಿದೆ. ಬಿಹಾರದಲ್ಲಿ ನಿತೀಶಕುಮಾರ ಅಂಗೀಕರಿಸಿದಂತೆ ಕರ್ನಾಟಕದಲ್ಲಿ ನಡೆಸಿರುವ ಜಾತಿ ಮತ್ತು ಆರ್ಥಿಕ, ಸಾಮಾಜಿಕ ಗಣತಿ ವರದಿಯನ್ನು ಏಕೆ ಬಹಿರಂಗಗೊಳಿಸಿ, ಒಪ್ಪಿಕೊಳ್ಳಬಾರದು? ಈ ಒತ್ತಾಸೆ ಮೊಳಕೆ ಒಡೆದಿದೆ. ಕಾಂಗ್ರೆಸ್ ರಾಷ್ಟçಯ ನಾಯಕರು ಜಾತಿ ಗಣತಿ ಮತ್ತು ಒಬಿಸಿ ಮೀಸಲಾತಿ ಪರ ಇರುವುದರಿಂದ ಈ ಅಸ್ತç ಪ್ರಯೋಗಿಸುವ ಸಾಧ್ಯತೆಯೆ ಹೆಚ್ಚಿದೆ.. ಇದು ಮತ ಬ್ಯಾಂಕ್ ಅಷ್ಟೇ ಅಲ್ಲ, ಬಲಾಢ್ಯರ ಝಂಗಾಬಲ ಅಲುಗಾಡಿಸುವ ತಂತ್ರ ಅಲ್ಲಗಳೆಯುವಂತಿಲ್ಲ.. ಇದರ ಹಿನ್ನೆಲೆ ಮುನ್ನೆಲೆ ಅರಿತವರಿಗೆ ಜಾತಿ ಗಣತಿ ಬಹಿರಂಗವಾಗುವುದು ಬೇಕಾಗಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಮುಂಗಾರು ವಿಫಲವಾದರೂರಾಜಕೀಯ ಜಾತಿ ಬೀಜ' ಇನ್ನಷ್ಟು, ಬಗೆದಷ್ಟು ಹುಲುಸಾಗಿ ಬೆಳೆಯುವ ಸಾಧ್ಯತೆ ಸದ್ಯಕ್ಕಂತೂ ಇದೆ !

ಬಿಹಾರ ಜಾತಿ ಸಮೀಕ್ಷೆ ಉತ್ತರ ಕಾಣದ ಪ್ರಶ್ನೆಗಳು

Next Article