ಈಸ್ಯಪ್ಪ…. ಎಲ್ಲಿದ್ದೀಯಪ್ಪ…?
ಈಸ್ಯಪ್ಪ ಎಲ್ಲಿದ್ದಿ ಬಾರಪ್ಪ… ಈ ಸಲ ನಮ್ಮುಡುಗನಿಗೇ ಟಿಕೆಟ್ಟು ನೋಡುತಿರಿ ಎಂದು ಈಸ್ಯಪ್ಪ ಎಲ್ಲರ ಮುಂದೆ ಹೇಳಿದ್ದ. ಅದಾಗಲೇ ಬುಸ್ಯವ್ವ, ಮೇಕಪ್ಮರೆಮ್ಮರನ್ನು ಚುನಾವಣೆ ರಾಯಭಾರಿಗಳನ್ನಾಗಿ ನೇಮಿಸಿದ್ದ. ಅವರೂ ಸಹ ಮುಂಜಾನೆದ್ದ ಕೂಡಲೇ ಪಾಂಡ್ಸ್ ಹಚ್ಚಿಕೊಂಡು ಮನೆಮನೆಗೆ ಹೋಗಿ ನೋಡ್ರಪಾ-ನೋಡ್ರವಾ ಈ ಸಲ ಈಸ್ಯಪ್ಪನುಡಗನಿಗೆ ಹಾಕಬೇಕು ಮರ್ತ್ಗಿರ್ತೀರಿ… ಕೊನೆಗಳಿಗೆಯಲ್ಲಿ ಅದೇನಾಯಿತೋ ಏನೋ ಟಿಕೆಟ್ಟಿಲ್ಲ ಅಂದು ಬಿಟ್ಟರೆ ಕನಲಿ ಕೆಂಡವಾದ ಈಸ್ಯಪ್ಪ… ಇದೆಲ್ಲ ಮಾಡಿದ್ದೇ ಸಿಟ್ಯೂರಪ್ಪ…ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗಾಡಿದ. ಆದರೂ ಇವರೇನೋ ಮಾಡಿದಾರೆ..ನೋಡುತಿರಿ ನನಗೇ ಟಿಕೆಟ್ಟು-ಅವರೆಲ್ಲ ಬಕೆಟ್ಟು ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ. ಅವತ್ತು ಅಚಾನಕ್ಕಾಗಿ ಭೇಟಿಯಾದ ತಳವಾರ್ಕಂಟಿ ನೀನ್ಯಾಕೆ ಸೋದಿ ಮಾಮಾರನ್ನು ಕಂಡು ನಮಗೆ ಟಿಕೆಟ್ಟು ಕೊಡಿ ಎಂದು ಯಾಕೆ ಕೇಳಬಾರದು. ನೀನು ಅವರಿಗೆ ಡೈರೆಕ್ಟಾಗಿ ಹೇಳಿಲ್ಲ ಅವರು ಕೊಟ್ಟಿಲ್ಲ. ಕೇಳಿದರೆ ನಿನ್ನನ್ನಾದರೂ ಬಿಡುತ್ತಾರಲ್ಲವೇ? ಹೋಗು ಪ್ರಯತ್ನ ಮಾಡು ಎಂದು ಹುರಿದುಂಬಿಸಿ ಬೆನ್ನು ಚಪ್ಪರಿಸಿದಾಗ… ಅಯ್ಯೋ ಹೌದಲ್ಲ? ನನಗಿದು ಹೊಳಿದಿರಲಿಲ್ಲ ಎಂದು ಹೊಸ ಅಂಗಿ ಹೊಲಿಸಿ ಕೆಂಪುಬಣ್ಣದ ಆಫ್ ಜಾಕೇಟ್ ಧರಿಸಿ ಸೋದಿ ಮಾಮಾನ ಭೇಟಿಗೆ ಹೋದ. ಅವರ ಮನೆಗೆ ಹೋಗಿ ಗೇಟಿಗೆ ನಿಂತು ಅಲ್ಲಿದ್ದ ಮನಿಸ್ಯಾನಿಗೆ ಇಂಗಿಂಗೆ ಈಸ್ಯಪ್ಪ ಬಂದಾನ ಎಂದು ಸಾಹೇಬ್ರಿಗೆ ಹೇಳು ಅಂತ ಹೇಳಿ ತಾನು ಹೊರಗೆ ನಿಂತ. ಒಳಗಡೆ ಹೋಗಿ ಬಂದು ನಿಮ್ಮನ್ನ ಕರೀತಿದ್ದಾರೆ ಎಂದು ಹೇಳಿದ….ಅಂಜುತ್ತ..ಅಂಜುತ್ತ ಒಳಗೆ ಹೋದ ಈಸ್ಯಪ್ಪ.. ಸಾಹೇಬ್ರೇ ಎಂದು ಗಂಟಲು ಹರಿದುಹೋಗುವ ಹಾಗೆ ಕೂಗಿದ. ಸ್ವಲ್ಪ ಗಾಬರಿ ಮಾರಿ ಮಾಡಿದ ಸೋದಿಮಾಮಾ… ಅರೆರೆ…ಈಸೂ ಬಾ ಇಲ್ಲಿ ಕೂಡು ಎಂದು ಕೂಡಿಸಿ ಏ ಚಾ ರ್ರೀ ಅಂದ… ಸಾಹೇಬ್ರೇ… ನೋಡಿ ಸಿಟ್ಯೂರಪ್ಪಾರು ನನಗೆ ಹೇಗೆ ಮಾಡಿದ್ದಾರೆ… ಮೊದಲು ನಾನು ಅವರು ಇಬ್ಬರೂ ಒಂದೇ ಸೈಕಲ್ ಮೇಲೆ ತಿರುಗುತ್ತಿದ್ದೆವು. ಬೈ-ಟೂ ಚಹ ಕುಡಿಯುತ್ತಿದ್ದೆವು. ಈಗ ನೋಡಿ ಏನು ಮಾಡಿದ್ದಾನೆ ಎಂದು ಹೇಳಿದ ಕೂಡಲೇ… ನೋ.. ಡೋಂಟ್ ವರಿ.. ಡೋಂಟ್ ವರಿ… ಹೇಳು ನಿನಗೆ ಏನು ಬೇಕು ಅಂದಾಗ… ಸಾಹೇಬ್ರೆ ನನಗೆ ಟಿಕೆಟ್ ಬೇಕು ಅಂದ. ಅಷ್ಟೇ ತಾನೆ… ಟೇಬಲ್ ಮೇಲೆ ಇಟ್ಟಿರೋ ಪಾಕೇಟ್ ಕೊಡ್ರೋ ಎಂದು ಕೂಗಿದಾಗ ಒಬ್ಬ ಬಂದು ಅದನ್ನು ತಂದುಕೊಟ್ಟ. ತಗಂಡೋಗು.. ತಗಂಡೋಗು ಎಂದು ಎರಡು ಸಲ ಹೇಳಿ ಕಳುಹಿಸಿದ. ಖುಷಿಯಿಂದ ಮನೆಗೆ ಬಂದ ಈಸ್ಯಪ್ಪ ಪಾಕೇಟ್ ಒಡೆದು ನೋಡಿದರೆ ಅಲ್ಲಿ ಬಸ್ಸಿನ ಟಿಕೆಟ್ ಇತ್ತು. ಮತ್ತೆ ಭುಸುಗುಟ್ಟಿದ ಈಸ್ಯಪ್ಪ… ಸೀದಾ ಮೊಬೈಲ್ ಎತ್ತಿಕೊಂಡು.. ಏನ್ ಸಾಹೇಬ್ರೇ ಏನಿದೆಲ್ಲ… ನನಗೆ ಬಸ್ ಟಿಕೆಟ್ ಕೊಟ್ಟು ಕಳಹಿಸಿದಿರಲ್ಲ ಎಂದು ಕೇಳಿದಾಗ… ಈಸ್ಯಪ್ಪ ಎಲ್ಲಿದಿಯಪ್ಪ? ನೀನು ಚುನಾವಣೆ ಟಿಕೆಟ್ ಎಂದು ಕೇಳಲಿಲ್ಲ. ಟಿಕೆಟ್ ಕೊಡು ಅಂದಿ..ನಾ ಕೊಟ್ಟು ಕಳಿಸಿದೀನಿ ಇದರಲ್ಲಿ ನಂದೇನು ತಪ್ಪು ಹೇಳಿ ಎಂದು ಅನ್ನುತ್ತ… ಹಲೋ..ಹಲೋ… ಯಾಕೋ ಸರಿಯಾಗಿ ಕೇಳ್ತಾ ಇಲ್ಲ ನೆಟ್ವರ್ಕೋ ಏನೋಪ ಎಂದು ಫೋನ್ ಕಟ್ ಮಾಡಿದರು ಸೋದಿ ಮಾಮ.