ಈ ಸಮಯ ಒಂದಾಗುವ ಸಮಯಾ…
ನಾನಾ-ನೀನಾ ಎಂದು ಗುದ್ದಾಡುತ್ತಿರುವವರನ್ನೆಲ್ಲ ಒಂದುಗೂಡಿಸಿ ಹೊಸ ಪಕ್ಷ ಕಟ್ಟಲು ರಾಜಕೀಯ ರಾಗಪ್ಪ ಭರ್ಜರಿ ಪ್ಲಾನ್ ಮಾಡಿದ್ದಾನೆ. ಮುಂಜಾನೆ ಎದ್ದಾಗಿನಿಂದ ಮಲಗಿಕೊಳ್ಳುವವರೆಗೆ ನೀನು ಹಂಗೆ-ಅಂವ ಹಿಂಗೆ ಕೂಡಲೇ ಕುರ್ಚಿ ಬುಡು… ರಾಜೀನಾಮೆ ಕೊಡು ಎಂದು ಪುರುಸೊತ್ತು ಇಲ್ಲದೇ ಬಾಯಿ ಬಡಕೊಳ್ಳುವವರು ಮಾತಾಡಿ… ಮಾತಾಡಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ ಎಂಬ ಕಾಳಜಿ ರಾಗಪ್ಪನ ನರಗಳಲ್ಲಿ ಹರಿಯುತ್ತಿದೆ. ಈಗ ಈ ಸಮಯ ಒಂದಾಗುವ ಸಮಯಾ ಎಂದು ಗುನುಗಿದ ರಾಗಪ್ಪನಿಗೆ ಇವರೆಲ್ಲ ಮೊದಲು ಒಂದೇ ಪಕ್ಷದಲ್ಲಿರಲಿಲ್ಲವೇ ಎಂದು ಕೇಳಿದರೆ ಅಯ್ಯೋ ನೀವು ಸುಮ್ನಿರಿ… ಆವಾಗ ಅವರಪ್ಪಾರು ಸಣ್ಣವರಿದ್ದರು. ನಾವೂ ಸಣ್ಣವರಿದ್ದೇವು… ನೀವು ಸಣ್ಣವರಿದ್ದಿರಿ… ಆಗಿನ ಕಾಲಘಟ್ಟವೇ ಬೇರೆ… ಈಗಿನದೇ ಬೇರೆ ಎಂದು ಎಲ್ಲರನ್ನೂ ಸುಮ್ಮನಾಗಿಸುತ್ತಿದ್ದ. ಈಗ ನನಗೆ ಪುರುಸೊತ್ತಿಲ್ಲ ಎಂದು ಹೇಳಿ ಮೊದಲು ಮದ್ರಾಮಣ್ಣನ ಮನೆಗೆ ಹೋದ. ಅಲ್ಲಿ ಅದು ಇದೂ ಮಾತಾಡುತ್ತ… ಸಾಹೇಬ್ರೆ… ಇದೇನು ದಿನಾ ಈ ಸುದ್ದಿಗಳಿಂದ ನನಗೇ ಇಷ್ಟೊಂದು ತಲೆನೋವಾಗುತ್ತಿದೆ ನಿಮಗೆ ಹೇಗೆ ಆಗಿರಬೇಡ ಅಂದಾಗ… ಅಯ್ಯೋ ಅದನ್ಯಾಕಪ್ಪ ಕೇಳ್ತೀಯ… ನನ್ನ ತಲೆ ತಲೆಯಾಗಿ ಉಳಿದಿಲ್ಲ ಅಂದಾಗ… ಸಾರ್.. ಒಂದ್ಕೆಲ್ಸ ಮಾಡನ… ಹೇಗೂ ಈ ಬಂಬ್ಡಾ ಇನ್ನು ಸಾಕು… ನಾನು ಹೊಸ ಪಕ್ಷ ಕಟ್ಟುತ್ತೇನೆ. ನೀವು ಬಂದುಬುಡಿ ಅಂದ… ಅದಕ್ಕೆ ಮದ್ರಾಮಣ್ಣ ಜೋರಾಗಿ ನಕ್ಕು ನೋಡನ ಬುಡು ಅಂದು ಕಳಿಸಿದ. ಅಲ್ಲಿಂದ ಸೀದಾ ಸುಮಾರಣ್ಣನ ಮನೆಗೆ ಬಂದ… ಬಾಗಿಲಲ್ಲೇ ರಾಗಪ್ಪನನ್ನು ರಿಸೀವ್ ಮಾಡಿದ ಸುಮಾರಣ್ಣನವರು ಏನ್ ಬ್ರದರ್…. ಹೇಗಿದ್ದಿ ಅಂದಾಗ… ಅಯ್ಯೋ ಬುಡು ಅಣ್ಣಾ… ಏನಣ್ಣ ಇದು ಸುಮ್ ಸುಮ್ನೆ ಗಲಾಟೆ ಅಂದಾಗ… ಅಯ್ಯೋ ನೋಡು ನನ್ನ ಪಾಡಿಗೆ ನಾನಿರಲು ಬುಡುತ್ತಿಲ್ಲ.. ಅಂದಾಗ.. ಸುಮಾಣ್ಣ.. ಇದೇ ಗಜ್ಜಿನಲ್ಲಿ ನಾನು ಹೊಸ ಪಕ್ಷ ಕಟ್ಟುತ್ತೇನೆ ನೀನು ಬಂದುಬುಡು ಅಂದ… ಅದಕ್ಕೆ ನೋಡೋಣ ಬ್ರದರ್ ಇನ್ನೂ ಟೈಮ್ ಇದೆಯಲ್ಲ ಅಂದ. ಅಲ್ಲಿಂದ ಸಿಟ್ಯೂರಪ್ಪ… ಸಾಮ್ರಾಟು… ಗುತ್ನಾಳು… ಬಂಡಿಸಿವು… ಟಿಟಿಗೌಡಪ್ಪ ಅವರೆಲ್ಲರ ಮನೆಗೆ ಹೋಗಿ ಇಂಗಿಂಗಣ್ಣಾ… ಅಂತ ಹೇಳಿದಾಗ… ಕೆಲವರು ಪಾಸಿಟಿವ್ ಅಂದರೆ… ಇನ್ನರ್ಧ ಮಂದಿ ಪಾಸಿಟಿವ್ವೂ ಇಲ್ಲ ನೆಗೆಟಿವ್ವೂ ಇಲ್ಲ ಅಂದರಂತೆ. ಹಬ್ಬ ಮುಗಿದ ಮೇಲೆ ಮೊದಲ ಸಭೆ ಮಾಡುತ್ತೇನೆ. ಸುಮ್ಮನೇ ಬನ್ನಿ.. ನೀವು ಪಕ್ಷಕ್ಕೆ ಸೇರಿಕೊಂಡರೂ ಸಂತೋಷ… ಬಿಟ್ಟರೂ ಸಂತೋಷ… ಮೀಟಿಂಗ್ ಬನ್ನಿ ಅಂತ ಕರೆದಿದ್ದ. ಎಲ್ಲರೂ ಮೀಟಿಂಗ್ ಹೋಗಬೇಕು ಎಂದು ನಿರ್ಧರಿಸಿ… ಅಂದು ಮೀಟಿಂಗ್ ಹಾಲ್‌ನಲ್ಲಿ ಹೋಗುತ್ತಿದ್ದಂತೆ ಎಲ್ಲರೂ ಅವರೇ.. ಅವರು. ಒಬ್ಬೊಬ್ಬರಾಗಿ ಭಾಷಣ ಮಾಡುವಾಗಲೂ… ನಾನ್ಯಾಕೆ ಕೊಡಲಿ ಅವರು ಕೊಡಬೇಕು ಎಂದು ಇವರು… ಮೊದಲು ನೀವು ಕೊಡಿ ಆಮೇಲೆ ನಾನು… ಹೀಗೆ ಅಲ್ಲಿಯೂ ಒಬ್ಬರಿಗೊಬ್ಬರು ಗುದ್ದಾಡಿದರು. ಇದು ನನ್ನ ಮೇಲೆ ಬರುತ್ತದೆ ಎಂದು ರಾಜಕೀಯ ರಾಗಪ್ಪ… ಹಾಲ್ ಬಾಡಿಗೆ ಕೊಡದೇ ಅಲ್ಲಿಂದ ಪರಾರಿಯಾಗಿದ್ದ.