For the best experience, open
https://m.samyuktakarnataka.in
on your mobile browser.

ಈ ಸಲವೂ ಕಪ್ ನಮ್ದಲ್ಲ….

02:30 AM Apr 04, 2024 IST | Samyukta Karnataka
ಈ ಸಲವೂ ಕಪ್ ನಮ್ದಲ್ಲ…

ಭಯಂಕರ ಕ್ರಿಕೆಟ್ ಪ್ರೇಮಿಯಾಗಿದ್ದ ಕುಂಟ್ನಾಗಣ್ಣ ಆರ್‌ಸಿಬಿಯ ಭರ್ಜರಿ ಫ್ಯಾನು. ಈ ಹಿಂದೆ ಈ ಸಲ ಕಪ್ ನಮ್ದೇ ಎಂಬ ಸ್ಲೋಗನ್ ಕಂಡು ಹಿಡಿದವನೇ ಅವನಂತೆ. ಶೇಷಮ್ಮನ ಹೋಟೆಲ್‌ನಲ್ಲಿ ಕುಳಿತು ಈ ಬಾರಿ ಕಪ್ ನಮ್ದೇ ಎಂದು ಕೂಗಿದ್ದಕ್ಕೆ…. ಶೇಷಮ್ಮಳು… ಆಹಾ ಕಪ್ ನಿಮ್ದೇ ಅಂತೆ… ನಿಮ್ಮ ಫಾದರ್ ಹಣ ಕೊಟ್ಟಿದ್ರಾ ಕಪ್ ನಮ್ದೇ ಅನ್ನೋಕೆ ಎಂದು ಜಗಳವಾಡಿದ್ದಳು. ಪ್ರತಿವರ್ಷ ಐಪಿಎಲ್ ಬಂದರೆ ಸಾಕು ಎಲ್ಲಿ ಬೇಕಲ್ಲಿ ಈ ಸಲ ಕಪ್ ನಮ್ದೇ ಎಂದು ಫ್ಲೆಕ್ಸ್ ಹಾಕಿಸುತ್ತಿದ್ದ. ಪಂದ್ಯಗಳು ಮುಗಿದಮೇಲೆ ಯಾರಾದರೂ ಏನ್ ನಾಗಣ್ಣ ಕಪ್ ನಮ್ದೇ ಅಂತಿದ್ದಿ ಅಂದಾಗ… ಅಯ್ಯೋ ನೀವು ಸರಿಯಾಗಿ ತಿಳಿದುಕೊಳ್ಳಿ… ಮುಂದಿನ ಸಲವೂ ಈ ಸಲ ಕಪ್ ನಮ್ದೇ ಅಂತ… ಅದನ್ನು ನಾವು ಚೇಂಜ್ ಮಾಡುವುದಿಲ್ಲ ಎಂದು ವೇದಾಂತಿ ಹೇಳಿದ ಹಾಗೆ ಹೇಳುತ್ತಿದ್ದ… ಏನಯ್ಯ ಆ ವಿರಾಟು.. ಡುಪ್ಲಿಸಿಗೆ ಹೇಳಿ ಹೇಳಿ ಸಾಕಾತು. ಇವರು ನೋಡಿದರೆ ಹೀಗೆ ಆಡಿ ನಮ್ಮ ಮುಖಕ್ಕೆ ಮಸಿ ಹಚ್ಚಿಸಿಕೊಳ್ಳುವ ಹಾಗೆ ಮಾಡುತ್ತಾರೆ. ಇದಕ್ಕೆ ಏನಾದರೂ ಮಾಡಬೇಕಲ್ಲ… ಈಗಲೂ ಕಾಲ ಮಿಂಚಿಲ್ಲ ಅವರಂತೂ ಮಾತು ಕೇಳಲ್ಲ… ನಾನೇ ಇದಕ್ಕೇನಾದರೂ ಉಪಾಯ ಹುಡುಕುತ್ತೇನೆ ಎಂದು ಲೊಂಡೆನುಮನ ಮುಂದೆ ಹೇಳಿದ್ದ. ಅಲ್ಲಿಂದ ಕುಂಟ್ನಾಗ… ಸೀದಾ ಕರಿಲಕ್ಷಂಪತಿಯ ಹತ್ತಿರ ಹೋದ. ಕನ್ನಡಿ ಮುಂದೆ ನಿಂತು ಮುಖಕ್ಕೆ ಫೇರ್ ಆಂಡ್ ಲವ್ಲಿ ಸವರಿಕೊಳ್ಳುತ್ತಿದ್ದ ಕರಿಲಕ್ಷಂಪತಿ ಬಾ ಬಾ ಕುಂಟ್ನಾಗ ಎಂದು ಒಳಗೆ ಕರೆದು ಚಿಟ್‌ಚಾಪೆ ಮೇಲೆ ಕೂಡಿಸಿ ಏನು ಬಂದದ್ದು ಅಂದ ಕೂಡಲೇ ಕುಂಟ್ನಾಗ.. ಅಲ್ಲ ಸ್ವಾಮೀ ಆರ್‌ಸಿಬಿ ಪರವಾಗಿ ನಂದೇ ಸ್ಲೋಗನ್ನು ಈ ಬಾರಿ ಕಪ್ ನಮ್ದೇ ಅನ್ನುವುದು ಭಯಂಕರ ಫೇಲ್ ಆಗಿದೆ ಎಲ್ಲರೂ ನನಗೆ ಒಂಥರಾ ಅನ್ನುತ್ತಿದ್ದಾರೆ. ಇದಕ್ಕೇನಾದರೂ ಉಪಾಯ ಎಂದು ಕೇಳಿದ. ಅದಕ್ಕೆ ಕರಿಲಕ್ಷಂಪತಿ ಏಳು ನಿಮಿಷಗಳ ಕಾಲ ಕಣ್ಮುಚ್ಚಿ ಧ್ಯಾನದತ್ತ ಹೋಗಿ.. ಆಮೇಲೆ ಕಣ್ ತಗೆದು… ನೋಡು ಈ ಸ್ಲೋಗನ್ನಿನಿಂದಲೇ ಸಮಸ್ಯೆ ಆಗುತ್ತ ಇದೆ. ಆದ್ದರಿಂದ ಇನ್ನು ಮುಂದೆ ಈ ಸಲವೂ ಕಪ್ ನಮ್ದಲ್ಲ ಅಂತ ಇಟ್ಟುನೋಡು ಆಮೇಲೆ ನೋಡು ಅದರ ಮಜಾ ಎಂದು ಹೇಳಿದ… ಈ ಸಲವೂ ನಮ್ದಲ್ಲ ಎಂದು ಎಲ್ಲ ಕಡೆ ಪೋಸ್ಟರ್ ಹಾಕಿದರೆ ನನ್ನ ಗತಿ ಏನು ಎಂದು? ಗಾಬರಿಯಾಗಿ ಅಲ್ಲಿಂದ ಹೊರಟುಹೋದ.