ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ
ಇಂದ್ರಿಯ ಜನ್ಯ ಅನುಭವ ಬಾಹ್ಯ, ಆತ್ಮಾನುಭವ ಆಂತರಿಕ. ಆತ್ಮಾನುಭವ ಅಧಿಕವಾದಂತೆ ಬಾಹ್ಯ ಅನುಭವಗಳತ್ತ ಹರಿಯುವ ಮನಸ್ಸಿನ ಆಸಕ್ತಿ ಕಡಿಮೆಯಾಗಿ ನಿರ್ಲಿಪ್ತ ಮನೋಭಾವ ಅಳವಡುತ್ತದೆ. ಅದಕ್ಕಾಗಿಯೇ ಆಧ್ಯಾತ್ಮ ನಿರತನಾದ ಸಾಧಕನಲ್ಲಿ ಬಾಹ್ಯ ವಿಷಯಾಸಕ್ತಿ ಕರಗುತ್ತ ಆತ್ಮಾಸಕ್ತಿ ಘನವಾಗುತ್ತದೆ. ಶರಣರ ಈ ವಚನ ಅದನ್ನು ಸೂಚಿಸುತ್ತದೆ.
ಪ್ರಾಣಲಿಂಗವೆಂದೆಂಬರು, ಪ್ರಾಣದಲ್ಲಿ ಹರಿವ ಪ್ರಕೃತ್ಯಾದಿಗಳಿಗಿನ್ನೆಂತೋ
ಪ್ರಾಣನ, ಪರಮದಾರೂಢನ ನಿರ್ವಾಣದಲ್ಲಿದ್ದಾತನೆ ಬಲ್ಲ
ಪ್ರಾಣಲಿಂಗವಾದಾತನ ನಿಲುವು ಎಂತಿದ್ದಹುದೆಂದರೆ:
ನೆಯಿ ಹತ್ತದ ನಾಲಿಗೆಯಂತೆ, ಕಾಡಿಗೆ ಹತ್ತದಾಲಿಯಂತೆ,
ಧೂಳು ಆಗದ ಗಾಳಿಯಂತೆ, ಜಲ ಹತ್ತದ ಜಲಜದಂತೆ
ಉಷ್ಣ ತಾಗದಗ್ನಿಯಂತಿಪ್ಪ, ಕೂಡಲಚೆನ್ನಸಂಗಾ ನಿಮ್ಮ ಶರಣ
ಚನ್ನಬಸವಣ್ಣನವರು ಇಲ್ಲಿ ಸಾಧಕನ ನಿರ್ಲೇಪ ಬದುಕನ್ನು ಹಲವು ಉಪಮೆಗಳ ಮೂಲಕ ಅತ್ಯಂತ ಅರ್ಥವತ್ತಾಗಿ ಪ್ರತಿಪಾದಿಸಿರುವರು. ನಾಲಿಗೆಯು ಎಷ್ಟೆಲ್ಲ ಎಣ್ಣೆ-ಬೆಣ್ಣೆ-ತುಪ್ಪಗಳನ್ನು ಸೇವಿಸಿದರೂ, ಅದರ ಜಿಡ್ಡನ್ನು ತನಗೆ ಅಂಟಿಸಿಕೊಳ್ಳುವುದಿಲ್ಲ. ಕಮಲದ ಎಲೆಗಳು ನೀರಿನಲ್ಲೇ ಇರುತ್ತವೆ ಆದರೆ ಆ ನೀರನ್ನು ತನಗೆ ಅಂಟಿಸಿಕೊಳ್ಳದೇ ನಿರ್ಲೇಪವಾಗಿರುತ್ತದೆ. ಇದರಂತೆ ಯೋಗಿಗಳು ಪ್ರಪಂಚದಲ್ಲಿದ್ದು, ಶಬ್ದ ಸ್ಪರ್ಶ ರೂಪ ರಸ ಗಂಧ ಮೊದಲಾದ ವಿಷಯಗಳನ್ನು ಉಪಭೋಗಿಸುತ್ತಿದ್ದರೂ, ಅವುಗಳ ವಾಸನೆಗಳು ತನಗೆ ಅಂಟಿಕೊಳ್ಳದಂತೆ ಅವುಗಳಿಂದ ಮುಕ್ತರಾಗಿರುತ್ತಾರೆ.
ಗೃಹಸ್ಥನೋರ್ವ ಸತ್ಯ ಶುದ್ಧ ಕಾಯಕದಿಂದ ಸಾರ್ಥಕ ಬದುಕು ಸಾಗಿಸುತ್ತಿದ್ದನು. ದೇವರ ಅನುಗ್ರಹದಿಂದ ಎಲ್ಲವೂ ಅವನಿಗೆ ಅನುಕೂಲವಾಗಿತ್ತು. ಸಂತಸದಿಂದ ಜೀವನ ನಡೆಯುತ್ತಿತ್ತು. ಆದರೆ ಒಮ್ಮಿಂದೊಮ್ಮೆಲೆ ಅವನ ಮನೆಯಲ್ಲಿ ತೊಂದರೆಗಳು ಕಾಣ ತೊಡಗಿದವು. ಮನೆಯಲ್ಲಿರುವ ಹಲವರಿಗೆ ಆರೋಗ್ಯದ ಸಮಸ್ಯ ಕೂಡ ತಲೆದೋರಿತು. ಏನೆಲ್ಲ ಪ್ರಯತ್ನಿಸಿದರೂ ಪರಿಸ್ಥಿತಿ ಸರಿಯಾಗುವ ಲಕ್ಷಣಗಳು ಕಾಣಲಿಲ್ಲ. ಕೊನೆಗೆ ಗತಿಗಾಣದೇ ಒಬ್ಬ ಜ್ಯೋತಿಷಿಗಳ ಬಳಿಗೆ ಬಂದು ತನಗೆ ಉಂಟಾದ ಕಷ್ಟಗಳನ್ನು ಅವರ ಮುಂದಿಟ್ಟು ಇದಕ್ಕೆ ಏನಾದರೂ ಪರಿಹಾರ ಸೂಚಿಸಲು ವಿನಂತಿಸಿಕೊಂಡನು.
ಆಗ ಆ ದೈವಜ್ಞರು "ಈ ಗ್ರಾಮದ ಸಮೀಪ ನದಿಯ ಆ ಕಡೆ ಭಾಗದಲ್ಲಿ ಮಹಾತ್ಮರೊಬ್ಬರು ತಮ್ಮ ಶಿಷ್ಯರೊಂದಿಗೆ ಬಿಡಾರ ಹೂಡಿದ್ದಾರೆ. ಅವರಲ್ಲಿ ಆ ಮಹಾತ್ಮರ ಸಮೇತ ಇಪ್ಪತ್ತೊಂದು ಜನ ಸಾಧುಗಳಿಗೆ ಭಕ್ತಿಯಿಂದ ಊಟ ಭೋಜನ ಮಾಡಿಸು ನಿನಗೆ ಒಳ್ಳೆಯದಾಗುತ್ತದೆ. ಎಂದು ಹೇಳಿದ.
ಅದರಂತೆ ಒಂದು ದಿನ ನಿಗದಿ ಮಾಡಿ ಪ್ರಸಾದವನ್ನು ಸಿದ್ಧಪಡಿಸಿಕೊಂಡು ಅದನ್ನು ತೆಗೆದುಕೊಂಡು ನದಿಯ ದಡಕ್ಕೆ ಬಂದನು. ಅಷ್ಟರಲ್ಲಿ ಮಳೆ ಜೋರಾಗಿ ಬಂದು ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ನಾವಿಕನು ನೌಕೆಯನ್ನು ದಡಕ್ಕೆ ಕಟ್ಟಿ ಮನೆಗೆ ಹೋಗಿದ್ದನು. ಅಷ್ಟರಲ್ಲಿ ನದಿಯ ಆ ಕಡೆ ದಂಡೆಯಲ್ಲಿ ವಾಸವಾಗಿದ್ದ ಮಹಾತ್ಮರು ಇವನ ಕಣ್ಣಿಗೆ ಕಾಣುತ್ತಾರೆ. ಅವರಿಗೆ ಕೈಮುಗಿದು ತನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾನೆ. ಆಗ ಮಹಾತ್ಮರು "ಕೃಷ್ಣನು ಹದಿನಾರು ಸಾವಿರ ಪತ್ನಿಯರನ್ನು ಹೊಂದಿದ್ದರೂ ಬ್ರಹ್ಮಚಾರಿಯಾಗಿರುವುದು ನಿಜವಾಗಿದ್ದರೆ ಹೇ.. ನದಿಯೆ ನನಗೆ ದಾರಿ ಬಿಡು ಎಂದು ಕೇಳಿಕೋ ನದಿ ದಾರಿ ಬಿಡುತ್ತದೆ ಆ ದಾರಿಯ ಮೂಲಕ ಈ ಕಡೆಗೆ ನೀನು ಬರಬಹುದು" ಎಂದು ತಿಳಿಸುತ್ತಾರೆ. ಆಗ ಆ ಗೃಹಸ್ಥನು ಹಾಗೇ ಮಾಡುತ್ತಾನೆ. ನದಿ ದಾರಿ ಬಿಡುತ್ತದೆ. ಮಾಡಿದ ಪ್ರಸಾದವನ್ನೆಲ್ಲ ತೆಗೆದುಕೊಂಡು ಆ ಕಡೆ ದಡಕ್ಕೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ, ಆ ಮಹಾತ್ಮರು ತನ್ನ ಶಿಷ್ಯರನ್ನೆಲ್ಲ ಬೇರೆ ಕಾರ್ಯಕ್ರಮಕ್ಕೆ ಕಳಿಸಿ ತಾವು ಒಬ್ಬರೇ ಆಶ್ರಮದಲ್ಲಿರುತ್ತಾರೆ. ಆಗ ಗೃಹಸ್ಥನು ಮತ್ತೆ ಚಿಂತಿತನಾಗಿ ಅವರಿಗೆ " ನಾನು ತಮ್ಮನ್ನು ಒಡಗೂಡಿ ಇಪ್ಪತ್ತೊಂದು ಸತ್ಪುರುಷರಿಗೆ ಊಟ ಸಿದ್ಧಪಡಿಸಿಕೊಂಡು ಬಂದಿರುವೆ. ಈಗ ಏನು ಮಾಡುವುದು? ಎಂದು ಕೇಳುತ್ತಾನೆ. ಆಗ ಮಹಾತ್ಮರು " ಪರವಾಗಿಲ್ಲ! ಮೊದಲು ನನಗೆ ಭೋಜನ ಮಾಡಿಸು ನಂತರ ನೋಡೋಣ" ಎಂದು ಹೇಳಿದರು. "ತಮ್ಮಪ್ಪಣೆಯಂತೆ ಆಗಲಿ" ಎಂದು ಹೇಳಿ ಅವರಿಗೆ ಪ್ರಸಾದ ಬಡಿಸಲು ಪ್ರಾರಂಭ ಮಾಡಿದನು. ಆದರೆ ಅವನಿಗೆ ಒಂಸು ಮಹದಾಶ್ಚರ್ಯವೇ ಕಾದಿತ್ತು!. ನೋಡ ನೋಡುತ್ತಲೇ ಆ ಮಹಾತ್ಮರು ಇಪ್ಪತ್ತೊಂದು ಜನರಿಗೆ ಮಾಡಿದ ಪ್ರಸಾದವನ್ನೆಲ್ಲ ತಾವೊಬ್ಬರೇ ಊಟ ಮಾಡಿದರು. ಮಾಡಿದ ಪ್ರಸಾದವೆಲ್ಲ ಖಾಲಿ ಆದ ಮೇಲೆ ಅವರಿಗೆ ನಮಸ್ಕರಿಸಿ ನದಿ ದಾಟಿ ಬರುವ ಉಪಾಯವನ್ನೇನೋ ಹೇಳಿದಿರಿ ಆ ಪ್ರಕಾರ ಬಂದೆ. ಆದರೆ ಈಗ ಮರಳಿ ಹೋಗುವುದು ಹೇಗೆ? ಎಂದು ಕೇಳಿದನು. ಆಗ ಮಹಾತ್ಮರು " ನೀನು ನದಿಯ ದಂಡೆಗೆ ಹೋಗಿ ಮಹಾತ್ಮರು ಇಪ್ಪತ್ತೊಂದು ಜನರ ಪ್ರಸಾದವನ್ನು ಒಬ್ಬರೇ ಉಂಡಿದ್ದರೂ ಉಪವಾಸವಿದ್ದದ್ದು ನಿಜವಿದ್ದರೆ ದಾರಿ ಬಿಡು ಎಂದು ಕೇಳು, ನದಿಯು ದಾರಿ ಬಿಡುತ್ತದೆ. ನೀನು ಹೋಗಬಹುದು" ಎಂದು ಹೇಳುತ್ತಾರೆ. ಅವನು ಬಂದು ಹಾಗೇ ಹೇಳಲು ತಕ್ಷಣವೇ ನದಿ ದಾರಿ ಬಿಡುತ್ತದೆ. ಇದರಿಂದಾಗಿಯೇ "ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ" ಎಂಬ ನಾಣ್ಣುಡಿ ಪ್ರಚಲಿತವಾಯಿತು. ಮಹಾತ್ಮರು ಎಲ್ಲದರಲ್ಲಿದ್ದರೂ ಎಲ್ಲದರಿಂದ ನಿರ್ಲಿಪ್ತರಾಗಿರುತ್ತಾರೆ.