ಉತ್ತರಕನ್ನಡದಲ್ಲಿ ಭಾರಿ ಮಳೆ: ಗುಡ್ಡ ಕುಸಿತ
ಕಾರವಾರ: ಮನೆ ಪಕ್ಕದ ಗುಡ್ಡವೊಂದು ಕುಸಿದು ಬಂಡೆಗಲ್ಲು ಉರುಳಿದ ಪರಿಣಾಮ ಮನೆಗೆ ಹಾನಿಯಾದ ಘಟನೆ ಕಾರವಾರದ ನಗರದ ಹಬ್ಬುವಾಡ ಬಳಿ ಫಿಶರೀಸ್ ಕಾಲೋನಿ ಬಳಿ ಇಂದು ಮುಂಜಾನೆ ನಡೆದಿದೆ.
ಫಿಶರೀಸ್ ಕಾಲೋನಿ ಬಳಿ ಮನೆ ಖರೀದಿಸಿದ್ದ ಮಾಜಿ ಯೋಧ ವಿನೋದ್ ಉಳ್ವೇಕರ್ ಎಂಬುವವರ ಮನೆಗೆ ಬಂಡೆಗಲ್ಲು ಉರುಳಿದ್ದು ಗೋಡೆ ಹಾಗೂ ಮನೆಗೆ ವಸ್ತುಗಳಿಗೆ ಹಾನಿಯಾಗಿದೆ.
ಜಿಲ್ಲೆಯಾಧ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಕಾರವಾರದಲ್ಲಿಯೂ ಭಾನುವಾರ ಮುಂಜಾನೆಯಿಂದಲೇ ಮಳೆ ಜೋರಾಗಿ ಸುರಿಯುತ್ತಿರುವುದು ಮುಂದುವರಿದಿದೆ. ಪರಿಣಾಮ ಇಂದು ಮುಂಜಾನೆ ಸುಮಾರು 5 ಗಂಟೆ ವೇಳೆ ಮನೆಯವರಿಗೆ ಬೃಹತ್ ಶಬ್ದಕೇಳಿದೆ. ಅಕ್ಕಪಕ್ಕದ ಮನೆಯವರಿಗೂ ಶಬ್ದಕೇಳಿ ವಿನೋದ್ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊನೆಗೆ ಎದ್ದು ನೋಡಿದಾಗ ಗುಡ್ಡ ಸಹಿತ ಬೃಹತ್ ಬಂಡೆ ಉರುಳಿದ್ದು, ಮನೆ ಸ್ಟೋರೇಜ್ ಕೊಠಡಿಗೆ ಹಾನಿಯಾಗಿತ್ತು. ಅದೃಷ್ಟವಸಾತ್ ಆ ಕೊಠಡಿಯಲ್ಲಿ ಯಾರು ಇರಲ್ಲಿಲ್ಲ. ಅಲ್ಲದೆ ಮನೆಯ ಗೊಡೆಗೂ ಬಂಡೆ ಗಲ್ಲು ಉರುಳಿದ್ದು ಗೋಡೆಗೆ ಹಾನಿಯಾಗಿದೆ. ಜೊತೆಗೆ ಇನ್ನು ಕೂಡ ಬೃಹತ್ ಮರ ಕಲ್ಲು ಬಂಡೆಗಳು ಜಾರಿ ಬಂದು ಮನೆ ಬಳಿ ನಿಂತಿದ್ದು ಯಾವ ಕ್ಷಣದಲ್ಲಾದರೂ ಮರ ಊರುಳುವ ಹಾಗೂ ಗುಡ್ಡ ಕುಸಿಯುವ ಆತಂಕ ಇದೀಗ ಮನೆಯವರಿಗೆ ಎದುರಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರೀಯಿಸಿರುವ ಮನೆ ಮಾಲಿಕ ವಿನೋದ್, ಗುಡ್ಡ ಕುಸಿತವಾಗುವ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿ ಜಾಗದ ಮಾಲಿಕರಿಗೆ ತಿಳಿಸಲಾಗಿತ್ತು. ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಿಸುವಂತೆಯೂ ಮನವಿ ಮಾಡಿದ್ದೇವೆ. ಆದರೆ ಇದೀಗ ಗುಡ್ಡ ಕುಸಿದು ಮತ್ತಷ್ಟು ಕುಸಿಯುವ ಆತಂಕ ಇದ್ದು ಮನೆಯಲ್ಲಿ ವಾಸ ಮಾಡುವುದಕ್ಕೂ ಆತಂಕವಾಗುತ್ತಿದೆ. ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಮಾರು ಲಕ್ಷಾಂತರ ರೂ ಹಾನಿಯಾಗಿದೆ. ನಮಗೆ ಮತ್ತೆ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಜಾಗದ ಮಾಲಿಕರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.