ಉತ್ತರ ಕರ್ನಾಟಕಕ್ಕೆ ನಯಾ ಪೈಸೆ ಕೊಟ್ಟಿಲ್ಲ
ವಿಧಾನಸಭೆ: ಪ್ರಸಕ್ತ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ನಗರಾಭಿವೃದ್ಧಿ ಬಾಬ್ತುಗಳಿಗೆ ಒಂದೇ ಒಂದು ನಯಾಪೈಸೆ ಹಣವನ್ನೂ ಕೊಟ್ಟಿಲ್ಲ ಎಂದು ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಭಾಷಣದ ಮೇಲೆ ಭಾಷಣ ಮಾಡಿದ ಅವರು, ಸರ್ಕಾರದ ಉತ್ತರ ಕರ್ನಾಟಕ ವಿರೋಧಿ ಎಂದು ಇನ್ನಿಲ್ಲದಂತೆ ವಾಕ್ ಪ್ರಹಾರ ಮಾಡಿದರು.ಬಜೆಟ್‌ನಲ್ಲಿ ಹನ್ನೊಂದು ಪುಟಗಳಷ್ಟು ನಗರಾಭಿವೃದ್ಧಿಯ ಅಂಕಿಸಂಖ್ಯೆಗಳಿವೆ. ಇವುಗಳಲ್ಲಿ ಒಂದೇ ಒಂದು ಪೈಸೆಯನ್ನೂ ಕಿತ್ತೂರು ಕರ್ನಾಟಕದ ಭಾಗಕ್ಕೆ ಇಟ್ಟಿಲ್ಲ. ಇದು ಅನ್ಯಾಯವಲ್ಲದೇ ಇನ್ನೇನು?
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೇ ಒತ್ತು ಕೊಟ್ಟು ಚರ್ಚಿಸಲಾಗಿತ್ತು. ಸರ್ಕಾರ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವುದಾಗಿ ಭರವಸೆಯನ್ನು ನೀಡಿತ್ತು. ಇದು ಬಾಯಿ ಮಾತಿಗಷ್ಟೇ ಉಳಿಯುವಂತಾಗಿದ್ದು ದುರದೃಷ್ಟಕರ. ಈ ಬಜೆಟ್ ಉತ್ತರ ಕರ್ನಾಟಕ ಭಾಗಕ್ಕೆ ಭಾರೀ ಅನ್ಯಾಯ ಮಾಡಿದೆ' ಎಂದು ಬೆಲ್ಲದ ಕಿಡಿಕಾರಿದರು.
ರಾಜ್ಯದ ಪ್ರಮುಖ ನಗರವಾದ ಹುಬ್ಬಳ್ಳಿ-ಧಾರವಾಡಕ್ಕೂ ಕೂಡ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಧಾರವಾಡ ಪ್ರತ್ಯೇಕ ಪಾಲಿಕೆ ಮಾಡುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಭರವಸೆ ದೊರಕಿತ್ತು. ಆದರೆ ಇದುವರೆಗೆ ಅಧಿಸೂಚನೆ ಆಗಿಲ್ಲ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೂ ಇಲ್ಲ ಎಂದು ಬೆಲ್ಲದ ಬೇಸರ ವ್ಯಕ್ತಪಡಿಸಿದರು.