For the best experience, open
https://m.samyuktakarnataka.in
on your mobile browser.

ಉಪಲೋಕಾಯುಕ್ತರಿಂದ ವಿವಿಧೆಡೆ ಭೇಟಿ, ಪರಿಶೀಲನೆ

06:45 PM Dec 01, 2024 IST | Samyukta Karnataka
ಉಪಲೋಕಾಯುಕ್ತರಿಂದ ವಿವಿಧೆಡೆ ಭೇಟಿ  ಪರಿಶೀಲನೆ

ಮಂಗಳೂರು: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭಾನುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಮಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿ ಘಟಕ ಪಚ್ಚನಾಡಿಗೆ ಭೇಟಿ ನೀಡಿದ ಅವರು ಘಟಕದ ಒಳಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ತಪಾಸಣೆ ನಡೆಸಿದರು. ತ್ಯಾಜ್ಯ ನಿರ್ವಹಣೆ, ಪ್ರತ್ಯೇಕಿಸುವಿಕೆಯ ಘಟಕಗಳಿಗೂ ಖುದ್ದು ಹೋಗಿ ವೀಕ್ಷಿಸಿದರು. ತ್ಯಾಜ್ಯ ವಿಲೇವಾರಿಯ ಪ್ರತೀ ಹಂತದ ಮಾಹಿತಿ ಕೇಳಿದ ಅವರು ಘಟಕದ ಕಾರ್ಮಿಕ ರಲ್ಲಿಯೂ ಅಹವಾಲು ಆಲಿಸಿದರು. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕಕ್ಕೂ ಹೋಗಿ ವೀಕ್ಷಿಸಿದರು.
ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಪಚ್ಚನಾಡಿ ತ್ಯಾಜ್ಯ ಘಟಕದ ನಿರ್ವಹಣೆ ಕುರಿತು ಹಲವು ನಿರ್ದೇಶನಗಳನ್ನು ನೀಡಿದರು. ತ್ಯಾಜ್ಯ ಘಟಕ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಬಾವಿ ನೀರನ್ನು ಪರೀಕ್ಷಿಸಬೇಕು. ಇಲ್ಲಿನ ಆಸುಪಾಸಿನ ಪ್ರದೇಶದಲ್ಲಿ ಬೆಳೆಯುತ್ತಿರುವ ತರಕಾರಿ, ಹೈನುಗಾರಿಕಾ ಹಾಲನ್ನು ಪರೀಕ್ಷಿಸಬೇಕು. ಘಟಕದ ತ್ಯಾಜ್ಯ ನೀರು ಯಾವುದೇ ಕಾರಣಕ್ಕೂ ಅಕ್ಕಪಕ್ಕದ ಪ್ರದೇಶಗಳಿಗೆ ಹರಿಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶಿಸಿದರು.
ಸಂಪೂರ್ಣ ವೈಜ್ಞಾನಿಕವಾಗಿ ತ್ಯಾಜ್ಯ ಘಟಕವನ್ನು ನಿರ್ವಹಿಸಬೇಕು. ಪ್ರಾಣಿಗಳು ತ್ಯಾಜ್ಯವನ್ನು ತಿಂದರೆ ಹಿಂಸಾತ್ಮಕವಾಗಿ ವರ್ತಿಸುವ ಸಾಧ್ಯತೆ ಇದೆ. ಇದನ್ನು ತಡೆಯಬೇಕು ಎಂದು ಅವರು ಸೂಚಿಸಿದರು.
ಹಾಸ್ಟೆಲ್‌ಗಳಿಗೆ ಭೇಟಿ:
ಉಪಲೋಕಾಯುಕ್ತರು ಬಳಿಕ ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದರು. ಹಾಸ್ಟೆಲ್ ಅಡುಗೆ ಕೋಣೆ, ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿದ ಅವರು ಆಹಾರ ಸಾಮಾಗ್ರಿಗಳನ್ನು ತಪಾಸಣೆ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿ, ಸಂವಾದ ನಡೆಸಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಪ್ರತ್ಯೇಕ ಸ್ಟಡಿ ರೂಂ ಕಲ್ಪಿಸಲು ಅವರು ಸೂಚಿಸಿದರು. ಉಪಲೋಕಾಯುಕ್ತರ ಭೇಟಿಯ ಸಂದಭ೯ದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ, ಮಹಾನಗರಪಾಲಿಕೆ ಆಯುಕ್ತ ಆನಂದ್, ತಹಶೀಲ್ದಾರ್ ಪ್ರಶಾಂತ್ ಮತ್ತಿತರರು ಇದ್ದರು.