For the best experience, open
https://m.samyuktakarnataka.in
on your mobile browser.

ಎಂಟಿಎಸ್ ಕಾಲನಿ ಹರಾಜು ರದ್ದು

09:07 PM Jan 21, 2024 IST | Samyukta Karnataka
ಎಂಟಿಎಸ್ ಕಾಲನಿ ಹರಾಜು ರದ್ದು

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಹುಬ್ಬಳ್ಳಿಯ ಬಹುಕೋಟಿ ಮೌಲ್ಯದ ಎಂಟಿಎಸ್ ಕಾಲನಿ ಭೂಮಿಯನ್ನು ೯೯ ವರ್ಷ ಲೀಸ್ ನೀಡುವ ಪ್ರಸ್ತಾವವನ್ನು ರೈಲು ಭೂ ಅಭಿವೃದ್ಧಿ ಪ್ರಾಧಿಕಾರ ಕೊನೆಗೂ ರದ್ದುಪಡಿಸಿದ್ದು, ಪ್ರಾಧಿಕಾರದಿಂದಲೇ ಭೂಮಿಯನ್ನು ಅಭಿವೃದ್ಧಿಪಡಿಸುವ ಬಗೆಗೆ ಪರಿಶೀಲನೆ ನಡೆಸಲು ಮುಂದಾಗಿದೆ.
ಈ ಕುರಿತು ಜನವರಿ ೧೭ರಂದು ಸಂಯುಕ್ತ ಕರ್ನಾಟಕ ಪತ್ರಿಕೆ "ಹುಬ್ಬಳ್ಳಿಯ ನೂರಾರು ಕೋಟಿ ರೂ. ಮೌಲ್ಯದ ರೈಲ್ವೆ ಆಸ್ತಿ ಬಿಡಿಗಾಸಿಗೆ ಪರಭಾರೆ?" ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಜ.೧೮ರಂದು ನಡೆಯಬೇಕಿದ್ದ ಭೂಮಿಯ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಪ್ರಾಧಿಕಾರ ಯಾವುದೇ ಕಾರಣವಿಲ್ಲದೇ ಫೆಬ್ರವರಿ ೧ಕ್ಕೆ ಮುಂದೂಡಿತ್ತು.
ಇದೀಗ ಪ್ರಾಧಿಕಾರವು ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿ, "ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಎಂಟಿಎಸ್ ಕಾಲನಿಯ ೧೩ ಎಕರೆ ಜಮೀನು ೯೯ ವರ್ಷಕ್ಕೆ ಲೀಸ್ ನೀಡಲು ೨೦೨೩ರ ನವೆಂಬರ್ ೨೧ಕ್ಕೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಹಿಂದಿನ ೫ ಟೆಂಡರ್‌ಗಳಿಗೆ ಬಿಡ್ಡರ್‌ಗಳು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಮತ್ತೊಂದು ಬಾರಿಯೂ ಟೆಂಡರ್ ಕರೆಯಲಾಗಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದ ಟೆಂಡರ್ ರದ್ದುಪಡಿಸಲಾಗಿದೆ ಮತ್ತು ಪ್ರಾಧಿಕಾರದಿಂದಲೇ ಅಭಿವೃದ್ಧಿಪಡಿಸುವ ಕುರಿತು ಪ್ರಾಧಿಕಾರ ಪರಿಶೀಲನೆ ನಡೆಸಲಿದೆ," ಎಂದು ಹೇಳಿದೆ. ಈ ಕುರಿತು ಪ್ರಾಧಿಕಾರದ ಬೆಂಗಳೂರಿನ ಮುಖ್ಯ ಯೋಜನಾ ಪ್ರಬಂಧಕ ಬಿ.ಎಂ.ಆರ್.ರೆಡ್ಡಿ ಪ್ರಕಟಣೆ ನೀಡಿದ್ದಾರೆ.
ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ೧೩ ಎಕರೆ ಭೂಮಿಯನ್ನು ಕೇವಲ ೮೩ ಕೋಟಿ ರೂ. ಮೂಲದರ ಆಧರಿಸಿ ೯೯ ವರ್ಷ ಲೀಸ್ ನೀಡುವುದರಿಂದ ರೈಲ್ವೆ ಆಸ್ತಿ ನಷ್ಟವಾಗಲಿದೆ ಎಂದು ಸಂಯುಕ್ತ ಕರ್ನಾಟಕ ಕೇಂದ್ರ ಸರಕಾರ ಗಮನ ಸೆಳೆದಿತ್ತು. ಸಂಯುಕ್ತ ಕರ್ನಾಟಕ ವರದಿಯಿಂದ ಎಚ್ಚೆತ್ತ ಹುಬ್ಬಳ್ಳಿಯ ನಾಗರಿಕರು ರೈಲ್ವೆ ಇಲಾಖೆಯ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಜ. ೧೮ರಂದು ಕಾಂಗ್ರೆಸ್ ಪಕ್ಷ ವಿವಾದಿತ ಎಂಟಿಎಸ್ ಕಾಲನಿ ಜಮೀನಿನಲ್ಲಿ ಪ್ರತಿಭಟನೆ ನಡೆಸಿತ್ತು. ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಮುಂದಾಗಿದ್ದರು.
ಸಂಯುಕ್ತ ಕರ್ನಾಟಕ ಜ. ೧೯ರಂದು "ರೈಲ್ವೆ ಭೂಮಿ "ಕೃಷ್ಣಾರ್ಪಣ"ಕ್ಕೆ ಹೆಜ್ಜೆ ಎಂಬ ಶೀರ್ಷಿಕೆಯಡಿ ಸಂಪಾದಕೀಯ ಪ್ರಕಟಿಸಿತ್ತು. ಅಲ್ಲದೇ ಹುಬ್ಬಳ್ಳಿಯ ರೈಲ್ವೆ ಆಸ್ತಿಯನ್ನು ೯೯ ವರ್ಷಗಳ ಲೀಸ್ ನೀಡುತ್ತಿರುವ ಪ್ರಾಧಿಕಾರವು ಮುಂಬೈಯಲ್ಲಿ ೪೫ ವರ್ಷ ಲೀಸ್ ನೀಡಿದೆ. ಇದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿ ಫೆ. ೨೦ರಂದು ಪತ್ರಿಕೆ, "೯೯ ವರ್ಷ ಲೀಸ್ ಹಿಂದಿನ ರಹಸ್ಯವೇನು" ಎಂಬ ವರದಿ ಪ್ರಕಟಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಡೀ ವಿಷಯ ರಾಜಕೀಯಕ್ಕೆ ತಿರುಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಕೂಡ ರೈಲ್ವೆ ಇಲಾಖೆ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ಜಿ.ಕೆ.ಆದಪ್ಪಗೌಡರ್ ಹಾಗೂ ಮಹೇಂದ್ರ ಸಿಂಘಿ ಅವರು ರೈಲ್ವೆ ಜಮೀನು ರೈಲ್ವೆ ಇಲಾಖೆಯ ಯೋಜನೆಗಳಿಗೆ ಬಳಕೆ ಆಗಬೇಕೆಂದು ಸಲಹೆ ನೀಡಿದ್ದರು.
ಅಂತಿಮವಾಗಿ ರೈಲ್ವೆ ಇಲಾಖೆ ಹುಬ್ಬಳ್ಳಿಯ ೧೩ ಎಕರೆ ಪ್ರದೇಶದಲ್ಲಿ ರೈಲ್ವೆ ಯೋಜನೆಗಳಿಗಾಗಿಯೇ ಸ್ವಂತ ಯೋಜನೆ ರೂಪಿಸುವ ಕುರಿತಂತೆ ಪರಿಶೀಲನೆ ಮಾಡುವುದಾಗಿ ಪ್ರಕಟಿಸಿರುವುದು ಸಂಯುಕ್ತ ಕರ್ನಾಟಕದ ವರದಿ ಸಂದ ದೊಡ್ಡ ಜಯವಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಶ್ಲ್ಯಾಘನೆ ವ್ಯಕ್ತವಾಗಿದೆ.