For the best experience, open
https://m.samyuktakarnataka.in
on your mobile browser.

ಎಂಟಿಎಸ್ ಕಾಲೋನಿ ಬಚಾವೋ ಅಭಿಯಾನ

08:17 PM Jan 18, 2024 IST | Samyukta Karnataka
ಎಂಟಿಎಸ್ ಕಾಲೋನಿ ಬಚಾವೋ ಅಭಿಯಾನ

ಹುಬ್ಬಳ್ಳಿ: ಎಂಟಿಎಸ್ ಕಾಲೋನಿಯ ೧೩ ಎಕರೆ ಪ್ರದೇಶವನ್ನು ರೈಲ್ವೆ ಇಲಾಖೆ ಅತ್ಯಂತ ಕನಿಷ್ಠ ಬೆಲೆಗೆ ಲೀಸ್ ನೀಡುತ್ತಿರುವ ಸಂಬಂಧ ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಕಟಿಸಿದ ವಸ್ತುನಿಷ್ಠ ವರದಿಯಿಂದ ಜನ ಜಾಗೃತರಾಗಿದ್ದಾರೆ. ಅಲ್ಲದೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾಲೋನಿ ಉಳಿಸಲು ಅಭಿಯಾನ ಆರಂಭಿಸಿದ್ದಾರೆ.
ಅಭಿಯಾನದ ಮೊದಲ ಹಂತವಾಗಿ ಗುರುವಾರ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಎಂಟಿಎಸ್ ಕಾಲೋನಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ಎಂಟಿಎಸ್ ಕಾಲೋನಿಯ ಎದುರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಕೆಲ ಕಾಲ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಧಾರವಾಡ ಜಿಲ್ಲಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ರೈಲ್ವೆ ಇಲಾಖೆ ಲೀಸ್ ನೀಡುತ್ತಿದೆ. ತಮಗೆ ಬೇಕಾದವರಿಗೆ ಭೂಮಿಯನ್ನು ಕೊಡಿಸುವ ಉದ್ದೇಶದಿಂದ ಬಿಜೆಪಿಯ ಮಾಸ್ಟರ್ ಪ್ಲಾನ್‌ಗೆ ರೈಲ್ವೆ ಇಲಾಖೆ ಬಲಿಯಾಗುತ್ತಿದೆ. ಇದೇ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬಹುದಿತ್ತು ಎಂದು ಆಕ್ರೋಶ ಹೊರ ಹಾಕಿದರು.
ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ೩೦೦ ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆ ಬಾಳುವ ಬಂಗಾರದ ಭೂಮಿಯನ್ನು ಬಿಜೆಪಿ, ವೈಯಕ್ತಿಕ ಲಾಭಕ್ಕಾಗಿ ಕೇವಲ ೮೩ ಕೋಟಿ ರೂ.ಗಳಿಗೆ ಲೀಸ್ ನೀಡುತ್ತಿದೆ. ಲೋಕಸಭೆ ಚುನಾವಣೆಗೆ ಹಣ ಹೊಂದಿಸುವ ಉದ್ದೇಶದಿಂದ ತರಾತುರಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರ ಸಹಕಾರವಿಲ್ಲದೇ ಈ ಷಢ್ಯಂತ್ರ ನಡೆದಿಲ್ಲ. ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.