ಎಡವಟ್ಟು ಕನಕನ ಭಾಷಾಜಾಗೃತಿ
ಹಿಂದಿಯಲ್ಲಿ ಭರ್ಜರಿ ಭಾಷಣ ಮಾಡಬೇಕು. ನಾನು ಹೇಗಿದ್ದರೂ ಕೇಂದ್ರ ರಾಜಕಾರಣಕ್ಕೆ ಹೋಗುವವನು..ಅಲ್ಲಿ ಇಂಗ್ಲಿಷಿಗಿಂತ ಹಿಂದಿ ಭಾಷೆ ಬೇಕೆ ಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಅಲೈಕನಕ ಯೋಚಿಸಿದ. ಹಿಂದಿ ಕಲೆಯಬೇಕಾದರೆ ಪ್ರಾಕ್ಟೀಸ್ ಮೂಲಕವೇ ಕಲಿಯಬೇಕು. ದಿನಾಲೂ ಹಿಂದಿ ಮಾತನಾಡು ಎಂದು ಕನ್ನಾಳ್ಮಲ್ಲ ಹೇಳಿದ್ದ. ಮರುದಿನದಿಂದ ಅಲೈಕನಕ ಮಮದುಸೇನಿಗೆ ಶೇಷಮ್ಮನ ಹೊಟಲ್‌ನಲ್ಲಿ ಮಿರ್ಚಿ ಮಂಡಾಳೊಗ್ಗಣ್ಣಿ ತಿನಿಸಿ.. ಹೇಗಾದರೂ ಮಾಡಿ ನನಗೆ ಹಿಂದಿ ಕಲಿಸು ಎಂದು ಗಂಟುಬಿದ್ದ. ಕೊನೆಗೆ ಯಾರೂ ಇಲ್ಲದ ಕಡೆ ಹೋಗೋಣ ಅಲ್ಲಿ ನಿನಗೆ ಕಲಿಸುತ್ತೇನೆ ಎಂದು ಮಮದುಸೇನಿ ಅಲೈಕನಕನನ್ನು ಹಳ್ಳದ ಕಡೆಗೆ ಕರೆದುಕೊಂಡು ಹೋದ. ಇಬ್ಬರೂ ಅಲ್ಲಿ ಕುಳಿತರು. ನೋಡು ಹಿಂದಿ ಕಲಿಕೆ ಬಹಳ ಸುಲಭ. ನೀನು ಹೇಗಿದ್ದೀಯ ಎಂದು ಕೇಳುವುದಕ್ಕೆ ಆಪ್ ಕೈಸೆ ಹೈ ಅಂತ ಕೇಳಬೇಕು. ಊಟ ಆಯಿತಾ ಎಂದು ಕೇಳುವುದಕ್ಕೆ ಆಪ್ ಕಾ ಖಾನಾ ಹುವಾ ಎಂದು ಕೇಳಬೇಕು. ನೀನು ಸರಿಯಿಲ್ಲ ಅನ್ನುವುದಕ್ಕೆ ಆಪ್ ಅಚ್ಛೆ ನಹಿ ಹೈ ಅನ್ನಬೇಕು ಎಂದು ಮಮದುಸೇನಿ ಹೇಳಿಕೊಟ್ಟು ಇದನ್ನು ಪ್ರಾಕ್ಟೀಸ್ ಮಾಡು ಎಂದು ಹೇಳಿದ್ದ. ಅಲೈ ಕನಕ ಅದನ್ನೇ ತಲೆಯಲ್ಲಿಟ್ಟುಕೊಂಡಿದ್ದ. ಇವತ್ತಿನಿಂದ ಹಿಂದಿ ಮಾತು ಶುರುಮಾಡಬೇಕು ಎಂದು ಅಂದುಕೊಂಡ. ಅವತ್ತು ಅದೇನೋ ರಾಜಕೀಯ ಕಾರ್ಯಕ್ರಮ ಊರಲ್ಲಿ ಇತ್ತು. ಮಂತ್ರಿಗಳು ಬಂದಿದ್ದರು. ಕ್ಷೇತ್ರದ ಶಾಸಕರು ಆಗಮಿಸಿದ್ದರು. ಆ ಕ್ಷೇತ್ರದ ಹಿರಿಯ ಧುರೀಣ ದೂಲ್‌ಸಾಬಣ್ಣನೂ ಕಾರ್ಯಕ್ರಮದ ವೇದಿಕೆಯಲ್ಲಿದ್ದ. ಅಲೈಕನಕ ಮೆಂಬರ್ ಆಗಿರುವುದರಿಂದ ಆ ಕಾರ್ಯಕ್ರಮಕ್ಕೆ ಹೋಗಿದ್ದ. ಎಲ್ಲರೂ ಭಾಷಣ ಮಾಡಿದರು. ವೇದಿಕೆಯಲ್ಲಿದ್ದ ದೂಲ್‌ಸಾಬನನ್ನು ನೋಡಿದ ಕೂಡಲೇ ಅಲೈಕನಕನಲ್ಲಿ ಹಿಂದಿ ಕಲಿಕೆ ಜಾಗೃತಿ ಮೂಡಿತು. ವೇದಿಕೆಯ ಹತ್ತಿರ ಹೋದ. ಮಮದುಸೇನಿ ಏನು ಹೇಳಿದ್ದಾನೆ ಎನ್ನುವುದನ್ನು ಬಾಯಿಪಾಟ ಮಾಡಿದ್ದನಾದರೂ ಹಿಂದೆ ಮುಂದೆ ಅಂತ ಏನೋ ಎಡವಟ್ಟು ಮಾಡಿಕೊಂಡಿದ್ದ. ಆತ ಕೇಳಬೇಕಾಗಿದ್ದು ಆಪ್ ಕೈಸೆ ಹೈ ಅಂತ. ಅದನ್ನು ಮರೆತ ಅಲೈಕನಕ ಆಪ್ ಅಚ್ಛೆ ನಹೀ ಹೈ ದೂಲ್‌ಸಾಬ್ ಅಂದ. ಮಂತ್ರಿಗಳು ಆತನ ಮುಖ ನೋಡಿದರು. ಸ್ವಲ್ಪ ಗಾಬರಿಯಾದ ದೂಲ್‌ಸಾಬಣ್ಣ ಏನೂ ಎಂದು ಜೋರಾಗಿ ಕಿರುಚಿದ. ಅಷ್ಟರಲ್ಲಿ ಅಲೈಕನಕನ ಹಿಂದೆ ನಿಂತಿದ್ದ ಸಾಬಣ್ಣನ ಹುಡುಗರು ಕನಕನ ಅಂಗಿ ಹರಿದುಹೋಗುವಂತೆ ಬಡಿದರು. ಅಂದಿನಿಂದ ಹಿಂದಿ ಸಾವಾಸವೇ ಸಾಕು ಎಂದು ಕನಕ ಕನ್ನಡದಲ್ಲಿಯೇ ಮಾತಾಡುತ್ತಾನೆ.