ಎಡ್ಜಸ್ಟ್‌ಮೆಂಟು-ಅಟ್ಯಾಚ್‌ಮೆಂಟು…
ಈ ಚುನಾವಣೆಯಲ್ಲೂ ಎಡ್ಜಸ್ಮೆಂಟಿದೆ ಎಂದು ಗ್ರಾಮ ಪಂಚಾಯ್ತಿ ಮೆಂಬರ್ ಅಲೈಕನಕ ಹೇಳಿದ. ಅದಕ್ಕೆ ಅಟ್ಯಾಚ್‌ಮೆಂಟ್ ಇರುತ್ತೆ ಅದಕ್ಕೆ ಎಡ್ಜಸ್ಟ್ಮೆಂಟ್ ಆಗುತ್ತದೆ ಎಂದು ಪಂ. ಲೇವಣ್ಣ ಲಿಂಬೆಹಣ್ಣು ಹಿಡಿದುಕೊಂಡು ಸ್ಟೇಟ್‌ಮೆಂಟ್ ಮಾಡಿದ ಸುದ್ದಿಯನ್ನು ಕಿವುಡನುಮಿ ರಸವತ್ತಾಗಿ ವರ್ಣಿಸುತ್ತಿದ್ದಳು. ನೋಡಿದವರು ಬರೀ ಎಡ್ಜಸ್ಟ್ಮೆಂಟ್ ಅಂತಾರೆ ಆದರೆ ಅದರ ಹಿಂದೆ ದೊಡ್ಡ ಅಟ್ಯಾಚ್ಮೆಂಟ್ ಇದ್ದೇ ಇರುತ್ತದೆ ಎಂದು ದೊಡ್ಡ ತತ್ವಜ್ಞಾನಿಯಂತೆ ಮಾತನಾಡಿದ. ನನ್ನ ಪಕ್ಷದಲ್ಲಿ ನಾನು ಇದಕ್ಕೆ ಕಾವಲು ಸಮಿತಿ ಮಾಡೇ ಮಾಡ್ತೀನಿ… ಮಾಡೇ ಮಾಡ್ತೀನಿ… ಮಾಡೇ ಮಾಡ್ತೀನಿ ಎಂದು ಮೂರು ಸಲ ಮಾಟಾಳ್ ಪಾಗರಾಜ್ ಟೊಪ್ಪಗಿ ಸರಿಮಾಡಿಕೊಳ್ಳುತ್ತ ಹೇಳಿದರು. ನಾವು ಆಗಲೇ ಮಾಡಿದ್ದೇವೆ. ತಿಗಡೇಸಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇನ್ನುಳಿದಂತೆ ಅವರ ಶಿಷ್ಯಂದಿರೇ ಸದಸ್ಯರಾಗಿದ್ದಾರೆ. ಈಗಾಗಲೇ ತಿಗಡೇಸಿಗೆ ಎಲ್ಲೆಲ್ಲಿ ಏನೇನು ನಡಿಯುತ್ತಿದೆ ಎಂದು ನೋಡಿಕೊಂಡು ಬರಲು ತಿಳಿಸಿದ್ದೇವೆ… ತಡೀರಿ ಫೋನ್ ಮಾಡಿ ಸ್ಪೀಕರ್ ಆನ್ ಮಾಡುತ್ತೇನೆ ನೀವೂ ಕೇಳಿಸಿಕೊಳ್ಳಿ ಎಂದು ಕಾಲ್ ಮಾಡಿದರು. ಆ ಕಡೆಯಿಂದ ಹೇಳಿ ಅಂದಾಗ ಮದ್ರಾಮಣ್ಣೋರು ಏನ್ಮಾಡಿದೆ ನಾ ಹೇಳಿದ್ದು ಎಲ್ಲ ಸರ್ವೇ ಮಾಡಿದಿಯಾ ಅಂದಾಗ ಆ ಕಡೆಯಿಂದ ತಿಗಡೇಸಿ… ಅಯ್ಯೋ ಅದೇನು ಕೇಳುತ್ತೀರಿ… ಅವರು ನಿಂತಿದಾರಲ್ಲ ಅರ‍್ಯಾರೂ ಬೇರೆ ಬೇರೆನೂ ಅಲ್ಲ.. ನಮ್ಮ ಕಡೆನೂ ಹಾಗೆ ಅವರ ಕಡೆನೂ ಹಾಗೆ ದೂರ ದೂರ ಎನ್ನುವುದಿಲ್ಲ. ಅಪ್ಪಾಜಿ-ಪುತ್ರಾಜಿ… ಗಂಡಾಜಿ-ಹೇಣ್ತೀಜಿ… ಹಿಂಗೆ ನಡೆದಿದೆ. ಇನ್ನೂ ಕೆಲವೊಂದು ಕಡೆ ಅವರೇನು ನಮ್ ರಿಲೇಷನ್ ಅಲ್ಲ ಎಂದು ಹೇಳುತ್ತಿದ್ದರೂ ದೂರದಿಂದ ಅವರಿಗೆ ಬಳಗವೇ ಆಗಬೇಕು. ಅವರು ಗೆದ್ದು ಹೋದರಲ್ಲಿ ಅವರಿಗೆ ಹೆಣ್ಣುಕೊಟ್ಟ ಅತ್ತೆ ಇದಾರಲ್ಲ? ಅವರ ಸೋದರಮಾವನ ತಂಗಿಯ ಗಂಡನಿಗೆ ಮಲತಂಗಿ ಇದ್ದಳು. ಆ ತಂಗಿಯ ನಾದಿನಿಯ ಕಸಿನ್ನಿನ ಮಗನೇ ಈಗ ಎಲೆಕ್ಷನ್ನಿಗೆ ನಿಂತಿದ್ದಾನೆ. ಈಗ ನೀವೇ ಹೇಳಿ. ಅವರಿಗೇನೂ ನಿಲ್ಲಿಸಬೇಕು ಅಂತ ಇರಲಿಲ್ಲ. ಆದರೆ ಅಟ್ಯಾಚ್‌ಮೆಂಟ್ ಅಲ್ಲವೇ ಅದಕ್ಕೆ ಅಟ್ಯಾಚ್‌ಮೆಂಟ್ ಇದ್ದರೆ ಎಡ್ಜಸ್‌ಮೆಂಟು ಇಷ್ಟೇ ಸ್ವಾಮಿ ಅಂದು ಆ ಕಡೆಯಿಂದ ಫೊನ್ ಕಟ್‌ಮಾಡಿದ.