For the best experience, open
https://m.samyuktakarnataka.in
on your mobile browser.

ಎರಡೂ ಪಾಳಯಗಳಿಗೆ ಅಡ್ಡ ಮತದಾನದ ಬೇಗೆ

03:03 AM Feb 26, 2024 IST | Samyukta Karnataka
ಎರಡೂ ಪಾಳಯಗಳಿಗೆ ಅಡ್ಡ ಮತದಾನದ ಬೇಗೆ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ.೨೭ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನದ ವೇಳೆ ಜೆಡಿಎಸ್ ಮತ್ತು ಬಿಜೆಪಿನ ಇಬ್ಬರು ಶಾಸಕರು ಕಾಂಗ್ರೆಸ್‌ನ ಎರಡು ಮತ್ತು ಮೂರನೇ ಅಭ್ಯರ್ಥಿಗೆ ತಲಾ ಒಂದು ಮತವನ್ನು ಅಡ್ಡ ಮತದಾನ ಮಾಡಲಿದ್ದಾರೆ ಎಂಬ ಆತಂಕ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಕಾಡಲಾರಂಭಿಸಿದೆ.
ಈಗಾಗಲೇ ಬಿಜೆಪಿ ತೊರೆಯಲು ಸಿದ್ಧತೆ ಮಾಡಿಕೊಂಡಿರುವ ಇಬ್ಬರು ಶಾಸಕರು ಹಾಗೂ ಜೆಡಿಎಸ್‌ನಲ್ಲಿರುವ ಶಾಸಕರೊಬ್ಬರು ತಮ್ಮ ಸ್ಥಳೀಯ ರಾಜಕಾರಣದ ಪರಿಸ್ಥಿತಿ ಆಧರಿಸಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್‌ನ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ಹಠಾತ್ ನಿಧನ ಕಾಂಗ್ರೆಸ್‌ಗೆ ಸ್ವಲ್ಪ ತಲೆನೋವು ಉಂಟು ಮಾಡಿದೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಪ್ರವೇಶಿಸಲು ತಲಾ ಅಭ್ಯರ್ಥಿಯು ೪,೪೬೧ ಮತಮೌಲ್ಯ ಪಡೆಯಬೇಕಾಗುತ್ತದೆ. ಅಂದರೆ ಪ್ರತಿಯೊಬ್ಬ ಅಭ್ಯರ್ಥಿ ೪೪.೬೧ ಶಾಸಕರ (೪೫) ಮತಗಳನ್ನು ಪಡೆದರೆ ಗೆಲುವಿಗೆ ಅರ್ಹತೆ ಪಡೆಯುತ್ತಾರೆ. ಕಾಂಗ್ರೆಸ್ ಸದ್ಯ ೧೩೫ ಮತಗಳನ್ನು ಹೊಂದಿತ್ತು. ರಾಜಾ ವೆಂಕಟಪ್ಪ ನಾಯಕ್ ಅವರ ನಿಧನದಿಂದ ಕಾಂಗ್ರೆಸ್ ಬಳಿ ೧೩೪ ಮತಗಳಿವೆ. ಇವುಗಳ ಜೊತೆಗೆ ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಗೌರಿಬಿದನೂರು ಶಾಸಕ ಕೆ.ಪುಟ್ಟಸ್ವಾಮಿಗೌಡ, ಕೆಆರ್‌ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಸರ್ವೋಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವ ನಿರೀಕ್ಷೆ ಇದೆ. ಹೀಗಾಗಿ ಕಾಂಗ್ರೆಸ್‌ಗೆ ಒಟ್ಟು ೧೩೮ ಮತಗಳು ದಕ್ಕುವ ಸಾಧ್ಯತೆ ಇದೆ. ಮೂವರು ಅಭ್ಯರ್ಥಿಗಳಿಗೆ ತಲಾ ೪೬ ಮತಗಳನ್ನು ಹಾಕಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಹೈಕಮಾಂಡ್ ಅಭ್ಯರ್ಥಿ ಆಗಿರುವ ಅಜಯ್ ಮಾಕನ್‌ಗೆ ೪೭ ಮತಗಳನ್ನು ಹಾಕಿಸಿದರೆ ಎರಡನೇ ಅಭ್ಯರ್ಥಿ ನಾಸಿರ್ ಹುಸೇನ್ ೪೬ ಮತ್ತು ಚಂದ್ರಶೇಖರ್ ೪೫ ಮತಗಳನ್ನು ಪಡೆಯುವರು. ಆದಾಗ್ಯೂ ಕಾಂಗ್ರೆಸ್‌ನ ಮೂವರೂ ಅಭ್ಯರ್ಥಿಗಳ ಗೆಲುವು ಸುಲಭ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಭಾಂಡಗೆ ಅವರಿಗೆ ಬಿಜೆಪಿಯ ೬೬ ಮತಗಳ ಪೈಕಿ ೪೫ ಮತಗಳು ಬೀಳಲಿವೆ. ಆಗ ಬಿಜೆಪಿ ಬಳಿ ೨೧ ಮತಗಳು ಉಳಿಯಲಿವೆ. ಜೆಡಿಎಸ್‌ನ ೧೯ ಮತಗಳು ಸೇರಿದರೆ ೪೦ ಮತಗಳು ಮಾತ್ರ ಕುಪೇಂದ್ರ ರೆಡ್ಡಿ ಅವರಿಗೆ ದಕ್ಕಲಿವೆ.
ಇಬ್ಬರು ಪಕ್ಷೇತರರು ಮತ್ತು ಇಬ್ಬರು ಇತರ ಪಕ್ಷದ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕದೇ ನಾಲ್ಕೂ ಜನ ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕಿದರೆ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ತೊಂದರೆ ಆಗಲಿದೆ. ಆದರೆ ಈ ಸಾಧ್ಯತೆ ತೀರಾ ಕಡಿಮೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಒಂದು ವೇಳೆ ಗೈರು ಹಾಜರಾದರೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೂ ೪೫ ಮತಗಳೇ ಬರಲಿವೆ. ಆದರೂ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಲೆಕ್ಕಾಚಾರ ಕೇಳಿಬಂದಿದೆ.