For the best experience, open
https://m.samyuktakarnataka.in
on your mobile browser.

ಕೆಪಿಸಿಸಿಗೆ ಹೊಸ ಸಾರಥಿ ಸಾಧ್ಯತೆ

04:18 AM Nov 27, 2024 IST | Samyukta Karnataka
ಕೆಪಿಸಿಸಿಗೆ ಹೊಸ ಸಾರಥಿ ಸಾಧ್ಯತೆ

ಬೆಂಗಳೂರು: ಆಡಳಿತಪಕ್ಷ ಕಾಂಗ್ರೆಸ್‌ಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಸಾಧ್ಯತೆ ದಟ್ಟವಾಗಿದೆ. ಒಬ್ಬರಿಗೆ ಒಂದು ಹುದ್ದೆ ಎನ್ನುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ಸಾರಥ್ಯ ಸಿಗಲಿದೆ. ಹಾಲಿ ಅಧ್ಯಕ್ಷ ಹುದ್ದೆಯಿಂದ ಡಿ.ಕೆ. ಶಿವಕುಮಾರ್ ನಿರ್ಗಮಿಸಲಿದ್ದು ತೆರವಾಗುವ ಈ ಮಹತ್ವದ ಸ್ಥಾನಕ್ಕೆ ಉತ್ತರ ಕರ್ನಾಟಕಕ್ಕೆ ಸೇರಿದ ಇಬ್ಬರು ಸಚಿವರಿಂದ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಉನ್ನತ ಮೂಲಗಳ ಪ್ರಕಾರ ವಿವಿಧ ಕಾರಣಗಳಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುರ‍್ರಚನೆ ಸುದ್ದಿ ಮತ್ತೆ ಆಗಾಗ್ಗೆ ಮುನ್ನಲೆಗೆ ಬರುತ್ತಿದೆ. ಆದರೆ ಸದ್ಯದ ಮಾಹಿತಿಯಂತೆ ಪಕ್ಷ ಮತ್ತು ಸರ್ಕಾರದಲ್ಲಿನ ಕಾರ್ಯ ಒತ್ತಡದಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಗಂಭೀರ ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ. ಬಹುತೇಕ ಹೊಸ ವರ್ಷಾರಂಭದಲ್ಲೇ ಇದಕ್ಕೆ ಮುಹೂರ್ತ ನಿಗದಿಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಉತ್ತರಕ್ಕೆ ಎತ್ತರದ ಸ್ಥಾನ ನಿರೀಕ್ಷೆ
ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯ ವಿಚಾರ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ, ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷಗಾದಿಯ ಅಪೇಕ್ಷೆ ವ್ಯಕ್ತಪಡಿಸಿದ್ದರು. ನನಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೊಡುವುದಾದರೆ, ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುನರುಚ್ಚರಿಸಿದ್ದರು. ಮತ್ತೋರ್ವ ಹಿರಿಯ ಸಚಿವ ಎಂ.ಬಿ. ಪಾಟೀಲ್ ಅವರ ಹೆಸರೂ ಕೇಳಿ ಬಂದಿತ್ತು. ಆದರೆ ಇದೀಗ ಸಚಿವರಾದ ಈಶ್ವರ ಖಂಡ್ರೆ ಮತ್ತು ಸತೀಶ್ ಜಾರಕಿಹೊಳಿ ಹೆಸರು ಪೈಪೋಟಿಗೆ ಬಂದಿರುವುದು ವಿಶೇಷವಾಗಿದ್ದು ಇಬ್ಬರಲ್ಲಿ ಯಾರಿಗೇ ಒಲಿದರೂ ಉತ್ತರಕರ್ನಾಟಕಕ್ಕೆ ಪಕ್ಷಾಧ್ಯಕ್ಷ ಸ್ಥಾನ ಸಿಗಲಿದೆ.

ಜಾತಿ ಲೆಕ್ಕಾಚಾರಕ್ಕೆ ಆದ್ಯತೆ
ಕೆಪಿಸಿಸಿ ಸಾರಥ್ಯಕ್ಕೆ ಜಾತಿ ಲೆಕ್ಕಾಚಾರವೂ ತೀವ್ರವಾಗಿ ನಡೆದಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಸಂಬಂಧ ಈಗಾಗಲೇ ಒಂದೆರಡು ಬಾರಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರೂ ಸುಳಿವು ಬಿಟ್ಟುಕೊಟ್ಟಿಲ್ಲ. ಅತ್ತ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇರವಾಗಿ ಪಕ್ಷಾಧ್ಯಕ್ಷ ಸ್ಥಾನದ ಕುರಿತು ಹೇಳದಿದ್ದರೂ, ಅವಕಾಶ ಸಿಕ್ಕಿದರೆ ಯಾವುದೇ ಪ್ರಮುಖ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಮಾತನಾಡಿದ್ದಾರೆ. ಇದೀಗ ಇವರಿಬ್ಬರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಸೂಚನೆ ಅಂತಿಮ
ವಿಶೇಷವೆಂದರೆ ಇಬ್ಬರೂ ಮುಖಂಡರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಳೆದ ಒಂದೂವರೆ ವರ್ಷದಿಂದ ಎರಡೂ ಹುದ್ದೆಯನ್ನು ನಿಭಾಯಿಸುತ್ತಿಲ್ಲವೇ ಎನ್ನುವ ವಾದ ಮುಂದಿಟ್ಟು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆ ಜೊತೆಗೆ, ಸಚಿವ ಸ್ಥಾನದಲ್ಲೂ ಮುಂದುವರಿಯುವ ಇಂಗಿತ ವ್ಯಕ್ತಪಡಿಸುತ್ತಿರುವುದು ವರಿಷ್ಠರಿಗೂ ತಲೆಬಿಸಿ ತಂದಿದೆ. ಆದರೆ ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಎಐಸಿಸಿ ಅಧ್ಯಕ್ಷರಿಗೆ ಡಿಕೆಶಿ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ವರಿಷ್ಠರು ಪರ್ಯಾಯ ಆಯ್ಕೆ ಪ್ರಕ್ರಿಯೆಗೆ ನಿರ್ಧರಿಸಿದ್ದಾರೆಂದು ಉನ್ನತ ಮೂಲಗಳು ಖಾತರಿಪಡಿಸಿವೆ.

ದೆಹಲಿಯತ್ತ ಸತೀಶ್ ಚಿತ್ತ
ಉಪಚುನಾವಣೆಯಲ್ಲಿ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ಮತಗಳ ಕ್ರೋಢೀಕರಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿರುವುದು ಹಾಗೂ ಹಿಂದುಳಿದ ವಾಲ್ಮೀಕಿ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಹೈಕಮಾಂಡ್ ಮುಂದೆ ಸತೀಶ್ ಜಾರಕಿಹೊಳಿ ಬೇಡಿಕೆ ಇಡಲಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ೨೦೨೮ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹಲವು ಬಾರಿ ಹೇಳಿಕೊಂಡಿರುವ ಸತೀಶ್, ಪಕ್ಷಾಧ್ಯಕ್ಷ ಹುದ್ದೆಯ ಸಮರ್ಥ ನಿಭಾವಣೆ ಮೂಲಕವೇ ಸರ್ಕಾರದ ಸಾರಥ್ಯ ವಹಿಸುವ ದೂರದೃಷ್ಟಿ ಉದ್ದೇಶ ಹೊಂದಿದ್ದಾರೆಂಬ ವಿಶ್ಲೇಷಣೆಯೂ ನಡೆದಿದೆ.