For the best experience, open
https://m.samyuktakarnataka.in
on your mobile browser.

ಎರಡೆಂಬುದಿಲ್ಲ..

04:00 AM May 04, 2024 IST | Samyukta Karnataka
ಎರಡೆಂಬುದಿಲ್ಲ

ಹೃದಯದ ಆಳದಿಂದ ಧನ್ಯವಾದಗಳನ್ನು ಅರ್ಪಿಸುವುದಕ್ಕಿಂತಲೂ ಮೇಲು ಮೇಲಿನಿಂದ ಧನ್ಯವಾದಗಳನ್ನು ಅರ್ಪಿಸುವುದೇ ಒಳಿತು. ಧನ್ಯವಾದಗಳನ್ನು ಅರ್ಪಿಸಲು ಬರ‍್ಪಡಿಕೆ ಅವಶ್ಯಕ. ಧನ್ಯವಾದಗಳೆಂದರೆ ಎರಡಿದೆ ಎಂದರ್ಥ. ಆಳವಾಗಿ ಧನ್ಯವಾದಗಳನ್ನು ಅರ್ಪಿಸಿದರೆ, ನೀವು ಆಳವಾಗಿ ಬರ‍್ಪಡಿಕೆಯನ್ನು ಅನುಭವಿಸುತ್ತಿರುವಿರಿ ಎಂದರ್ಥ. ಆಳದಲ್ಲಿ ಧನ್ಯವಾದಗಳನ್ನು ಅರ್ಪಿಸುವ ಅವಶ್ಯಕತೆಯಿಲ್ಲ, ಏಕೆಂದರೆ ಅಲ್ಲಿರುವುದು ಕೇವಲ ಏಕತೆ. ಆದರೆ ಮೇಲು ಮೇಲಿನಿಂದ ಧನ್ಯವಾದಗಳನ್ನು ಅರ್ಪಿಸಬಹುದು. ಧನ್ಯವಾದಗಳು ಎಂದಾಗ ಏನನ್ನೋ ಪೂರ್ತಿಗೊಳಿಸುತ್ತಿದ್ದೀರಿ. ಧನ್ಯವಾದಗಳು ನೀರಿನ ಮೇಲಿನ ಅಲೆಗಳಂತೆ.
ಧನ್ಯವಾದವೆಂದು ಹೇಳಿ ಒಂದು ವ್ಯವಹಾರವನ್ನು, ಒಂದು ಸಂಬಂಧವನ್ನು, ಒಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದೀರಿ. ಧನ್ಯವಾದ ಎಂದರೆ ವಿದಾಯವನ್ನು ಹೇಳಿದಂತೆಯೆ. ಎಲ್ಲಾ ವ್ಯವಹಾರಗಳನ್ನೂ ಮೇಲು ಮೇಲಿನ ಹಂತದಲ್ಲಿ ಮುಕ್ತಾಯಗೊಳಿಸಬಹುದಾದರೂ ಸಹ ಆಳದಲ್ಲಿ ಇರುವುದೆಲ್ಲ ಕೇವಲ ಒಂದು. ಧನ್ಯವಾದವು ಯಾವುದೋ ಒಂದರೊಡನೆ ಸಂಬಂಧಪಟ್ಟಿರುತ್ತದೆ. ಏನೂ ಇಲ್ಲದ್ದಕ್ಕೆ ಧನ್ಯವಾದವನ್ನು ಅರ್ಪಿಸಲಾಗುವುದಿಲ್ಲ.
ಏನೋ ಒಂದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ. ಆಳವಾಗಿ ಹೊಕ್ಕಾಗ ಧನ್ಯವಾದಗಳಿಗೆ ಅರ್ಥವೇ ಇರುವುದಿಲ್ಲ. ಒಂದು ಕೈ ಮತ್ತೊಂದು ಕೈಯಿಗೆ ಧನ್ಯವಾದಗಳನ್ನು ಅರ್ಪಿಸುವುದೆ? ಆಳವಾಗಿ ಹೊಕ್ಕುತ್ತಿದ್ದಂತೆಯೇ, ಇನ್ನೊಂದು ಎಂಬುದಿಲ್ಲ, ಬೇರೆಯದು ಎಂಬುದಿಲ್ಲ ಎಂಬ ಅರಿವಾದಾಗ, ಧನ್ಯವಾದಗಳನ್ನು ಅರ್ಪಿಸುವ ಸಂದರ್ಭವೇ ಬರುವುದಿಲ್ಲ. ನಮ್ಮ ಅಂತ್ಯಂತರಾಳವು ಎಂದಿಗೂ ಬದಲಿಸುವುದಿಲ್ಲ. ಭಾವನೆಗಳೂ ಮೇಲು ಮೇಲಿನ ಹಂತದಲ್ಲಿರುವಂತವು. ಭಾವನೆಗಳು ಆಳ ಎಂದು ಭಾವಿಸಿದರೆ, ನೀವಿನ್ನೂ ನಿಮ್ಮ ಆಳಕ್ಕೆ ಹೊಕ್ಕಿಲ್ಲವೆಂದಾಯಿತು.
ಆಲೋಚನೆಗಳಿಗಿಂತಲೂ ಭಾವನೆಗಳು ಆಳವಾದರೂ ಸಹ, ಭಾವನೆಗಳೂ ಬದಲಿಸುತ್ತವೆ. ಅತ್ಯಾಳವಾದದ್ದು ಬದಲಿಸುವುದಿಲ್ಲ. ಆದ್ದರಿಂದ, ಮೇಲು ಮೇಲಿನಿಂದ ಧನ್ಯವಾದಗಳನ್ನು ಅರ್ಪಿಸಿ, ನಿಮ್ಮ ಆಳದಿಂದಲ್ಲ. ಇಡೀ ಸೃಷ್ಟಿಯು ಒಂದೇ ಚೈತನ್ಯದಿಂದ ಮಾಡಲ್ಪಟ್ಟಿದೆ. ಎಲ್ಲವೂ ಒಂದರಿಂದಲೇ ಮಾಡಲ್ಪಟ್ಟಿವೆ. ಈ ಸೃಷ್ಟಿಯಲ್ಲಿರುವ ಎಲ್ಲವೂ ಬೇರೆ ಬೇರೆಯಾಗಿರುವಂತೆ ಕಂಡರೂ ಸಹ, ಎಲ್ಲವೂ ನಮ್ಮ ಕೈಗಳ ಬೆರಳುಗಳಂತೆ. ನಮ್ಮಿಂದ ಯಾವುದನ್ನೂ ಬೇರ್ಪಡಿಸಲು ಸಾಧ್ಯವಿಲ್ಲ. ಎಲ್ಲವೂ ನಮ್ಮ ಅವಿಭಾಜ್ಯ ಅಂಗವೇ. ಇಡೀ ಸೃಷ್ಟಿಯು ನಮ್ಮ ದೇಹದಂತೆ. ಈ ಸತ್ಯವನ್ನು ಮನಗಂಡಾಗ ನಿಮ್ಮ ಧನ್ಯವಾದಗಳು ಮೇಲು ಮೇಲಿನ ಹಂತದಲ್ಲೇ ಉಳಿಯುತ್ತದೆ ಮತ್ತು ಹೃದಯದಲ್ಲಿ ಏಕತೆಯನ್ನು ಅನುಭವಿಸುತ್ತೀರಿ. ದ್ವಿತೀಯಾತ್ ಭಯಂ ಭವತಿ. ದ್ವೈತವು, ಎರಡೆಂಬುದು ಭಯವನ್ನುಂಟು ಮಾಡುತ್ತದೆ. ಸಾಮರಸ್ಯಮಯವಾದ ಮುಗ್ಧತೆಯು ದ್ವೈತವನ್ನು ಕರಗಿಸಿಬಿಡುತ್ತದೆ.