For the best experience, open
https://m.samyuktakarnataka.in
on your mobile browser.

ಎಲ್‌ಎಸಿ ಉದ್ವಿಗ್ನತೆ ಶಮನಗೊಳಿಸೀತೆ ಮೋದಿ-ಕ್ಸಿ ಭೇಟಿ?

04:00 AM Oct 26, 2024 IST | Samyukta Karnataka
ಎಲ್‌ಎಸಿ ಉದ್ವಿಗ್ನತೆ ಶಮನಗೊಳಿಸೀತೆ ಮೋದಿ ಕ್ಸಿ ಭೇಟಿ

ಕಳೆದ ನಾಲ್ಕು ವರ್ಷಗಳ ಹಿಂದೆ, ಗಲ್ವಾನ್ ಕಣಿವೆಯಲ್ಲಿ ಯೋಧರ ನಡುವೆ ಚಕಮಕಿ ನಡೆದ ಬಳಿಕ, ಈಗ ಭಾರತ ಮತ್ತು ಚೀನಾಗಳು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್(ಎಲ್‌ಎಸಿ) ಆದ್ಯಂತ ಗಸ್ತು ನಡೆಸುವ ಕುರಿತು ಒಪ್ಪಂದಕ್ಕೆ ಬಂದಿರುವುದು ಗಣನೀಯ ಸಾಧನೆಯಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಒಪ್ಪಂದದ ಕುರಿತು ಹೇಳಿಕೆ ನೀಡಿದ ಬಳಿಕ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ, ಭಾರತ ಮತ್ತು ಚೀನಾಗಳ ಯೋಧರು ಮೇ ೨೦೨೦ರ ಚಕಮಕಿಯ ಮೊದಲಿದ್ದಂತೆ ಗಡಿ ಪ್ರದೇಶದಲ್ಲಿ ಗಸ್ತು ನಡೆಸಲಿದ್ದಾರೆ ಎಂದರು.
ನೂತನ ಒಪ್ಪಂದದ ಪ್ರಯೋಜನಗಳೇನು?
ಉಭಯ ದೇಶಗಳೂ ಗಡಿಯಲ್ಲಿ ಹತ್ತಾರು ಸಾವಿರ ಯೋಧರನ್ನು ಕಲೆಹಾಕಿದ್ದು, ಪ್ರಸ್ತುತ ಒಪ್ಪಂದ ಅವರ ಸಂಖ್ಯೆಯನ್ನು ಕಡಿಮೆಗೊಳಿಸಿ, ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯ ಹೆಜ್ಜೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಗಸ್ತು ಕಾರ್ಯವನ್ನು ಮರಳಿ ಜಾರಿಗೆ ತರುವುದರಿಂದ, ಯೋಧರ ಮುಖಾಮುಖಿ ಮತ್ತು ಕಿತ್ತಾಟಗಳ ಸಾಧ್ಯತೆಗಳು ಕಡಿಮೆಯಾಗಬಹುದು.
ಈ ಒಪ್ಪಂದ ಸೂಕ್ಷ್ಮ ಪ್ರದೇಶಗಳಾದ ದೆಮ್‌ಚೊಕ್ ಮತ್ತು ದೇಪ್ಸಂಗ್‌ಗಳಲ್ಲಿನ ಮುಖಾಮುಖಿಗಳನ್ನು ಕಡಿಮೆಗೊಳಿಸಬಲ್ಲದು. ಎಲ್‌ಎಸಿಯಲ್ಲಿ ಸೂಕ್ತ ವ್ಯವಸ್ಥೆಯಾದ ಬಳಿಕ, ಗಡಿ ವಿವಾದಗಳ ಕುರಿತ ಮಾತುಕತೆಗೆ ಪೂರಕ ವಾತಾವರಣ ನಿರ್ಮಾಣವಾಗಬಲ್ಲದು.
೨೦೨೦ರ ಮೊದಲಿನ ಪರಿಸ್ಥಿತಿ ಈಗ ನಿರ್ಮಾಣವಾಗುವುದರಿಂದ, ಉಭಯ ದೇಶಗಳಿಗೂ ಶಾಂತಿ-ಸುವ್ಯವಸ್ಥೆ ಬೇಕೆಂಬ ಮನೋಭಾವ ಇದೆ ಎನ್ನುವ ಆತ್ಮವಿಶ್ವಾಸ ಮೂಡಲಿದೆ. ಇದು ಹೆಚ್ಚಿನ ಮಾತುಕತೆಗೆ ಹಾದಿ ಮಾಡಿಕೊಡಲಿದೆ. ಈ ಒಪ್ಪಂದದ ಮೂಲಕ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ಸಾಧ್ಯವಾಗಲಿದೆ. ಆದ್ದರಿಂದ, ಭಾರತಕ್ಕೆ ಕದನದ ಭೀತಿಯಿಲ್ಲದೆ ತನ್ನ ಗಡಿಯ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯವಾಗಬಹುದು. ಚೀನಾಗೆ ಭಾರತದೊಡನೆ ಗಡಿ ಸ್ಥಿರವಾದರೆ, ತನ್ನ ಗಮನವನ್ನು ಇತರ ವಿಚಾರಗಳೆಡೆಗೆ ಹರಿಸಲು ಸಾಧ್ಯವಾದೀತು.
ಗಲ್ವಾನ್ ಕಣಿವೆಯ ಕದನದ ಹಿನ್ನೆಲೆ
೧೯೭೫ರಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ನಡೆದ ಚಕಮಕಿಯ ಬಳಿಕ, ಜೂನ್ ೧೫, ೨೦೨೦ರಂದು ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಯೋಧರು ಎಲ್‌ಎಸಿಯ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಕೈ ಕೈ ಮಿಲಾಯಿಸಿ ಹೊಡೆದಾಟಕ್ಕೆ ಇಳಿದರು. ಈ ಹೊಡೆದಾಟದಲ್ಲಿ ೨೦ ಭಾರತೀಯ ಯೋಧರು ಪ್ರಾಣ ಕಳೆದುಕೊಂಡರು. ಚೀನಾದ ಯೋಧರ ಸಾವಿನ ಸಂಖ್ಯೆಯ ಕುರಿತು ವಿಭಿನ್ನ ವರದಿಗಳಿವೆ. ಎಲ್‌ಎಸಿ ಕುರಿತ ಪ್ರತ್ಯೇಕ ಗ್ರಹಿಕೆಗಳು ಮತ್ತು ಗಡಿ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಈ ಹೊಡೆದಾಟಕ್ಕೆ ಕಾರಣವಾಗಿತ್ತು. ಈ ಚಕಮಕಿಯ ಬಳಿಕ ದ್ವಿಪಕ್ಷೀಯ ಸಂಬಂಧದಲ್ಲಿ ಉದ್ವಿಗ್ನತೆ ತಲೆದೋರಿದ್ದರೂ, ಭಾರತ ಮತ್ತು ಚೀನಾಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಮಾತುಕತೆ ಆರಂಭಿಸಿದವು.
ಹೆಚ್ಚುವರಿ ಘರ್ಷಣೆಯ ಪ್ರದೇಶಗಳು
ಗಲ್ವಾನ್ ಹೊರತುಪಡಿಸಿ, ಎಲ್‌ಎಸಿ ಆದ್ಯಂತ ಇನ್ನೂ ಕನಿಷ್ಠ ನಾಲ್ಕು ವಿವಾದಾತ್ಮಕ ಪ್ರದೇಶಗಳಿದ್ದು, ಅಲ್ಲಿ ೧೯೬೨ರ ಯುದ್ಧದಲ್ಲಿ ಭಾರತ ಮತ್ತು ಚೀನಾಗಳ ಯೋಧರು ಸೆಣಸಿದ್ದರು.
ಎಲ್‌ಎಸಿ ದೆಮ್‌ಚೊಕ್ ಅನ್ನು ವಿಭಜಿಸುತ್ತದೆ. ಇದರ ಪಶ್ಚಿಮ ಭಾಗ ಭಾರತದ ಆಡಳಿತದಲ್ಲಿದೆ. ಚೀನಾ ದೆಮ್‌ಚೊಕ್‌ನ ಪೂರ್ವ ಭಾಗದ ಮೇಲೆ ಹಿಡಿತ ಹೊಂದಿದ್ದು, ಪಶ್ಚಿಮ ಭಾಗವೂ ತನ್ನದು ಎನ್ನುತ್ತಿದೆ. ಈ ವಿವಾದಕ್ಕೆ ಚಾರ್ದಿಂಗ್ ನುಲ್ಲಾ ತೊರೆಯಾದ್ಯಂತ ಎಲ್‌ಎಸಿಯ ನಿಖರತೆ ಮತ್ತು ಐತಿಹಾಸಿಕ ಒಪ್ಪಂದಗಳು ಕಾರಣವಾಗಿವೆ.
ಪಾಂಗಾಂಗ್ ಸರೋವರದ ಬಹುಪಾಲು ಪ್ರದೇಶ, ಅಂದಾಜು ೫೦%, ಚೀನಾ ನಿಯಂತ್ರಣದಲ್ಲಿರುವ ಟಿಬೆಟ್‌ನಲ್ಲಿದೆ. ಸರೋವರದ ೪೦% ಲಡಾಖ್‌ನಲ್ಲಿದ್ದು, ಇನ್ನುಳಿದ ೧೦% ಪ್ರದೇಶ ವಿವಾದಾತ್ಮಕವಾಗಿದೆ. ಉಭಯ ದೇಶಗಳು ಎಲ್‌ಎಸಿಯನ್ನು ಪರಿಗಣಿಸುವುದರಲ್ಲಿ ಇರುವ ಭಿನ್ನಾಭಿಪ್ರಾಯಗಳು ವಿವಾದಕ್ಕೆ ಕಾರಣವಾಗಿದ್ದು, ಅದರೊಡನೆ ಗಡಿಯಲ್ಲಿ ಹೊಸದಾದ ನಿರ್ಮಾಣಗಳು ಮತ್ತು ಯೋಧರ ನಿಯೋಜನೆ ಉದ್ವಿಗ್ನತೆಯನ್ನು ಹೆಚ್ಚಿಸಿವೆ.
ಹಾಟ್ ಸ್ಪಿಂಗ್ಸ್ ಪ್ರದೇಶ ಗೋಗ್ರಾ ಪೋಸ್ಟ್ ಬಳಿಯಲ್ಲಿದೆ. ಇಲ್ಲಿಂದ ಎಲ್‌ಎಸಿ ಕಣ್ಗಾವಲು ಸುಲಭವಾಗಿರುವುದರಿಂದ, ಹಾಟ್ ಸ್ಪಿಂಗ್ಸ್ ಪ್ರದೇಶ ಭಾರತಕ್ಕೆ ಬಹಳ ಮುಖ್ಯವಾಗಿದೆ. ಈ ಪ್ರದೇಶದ ಮೇಲೆ ಭಾರತ ನಿಯಂತ್ರಣ ಹೊಂದಿರುವುದರಿಂದ, ಅಕ್ಸಾಯ್ ಚಿನ್ ಪ್ರದೇಶದಲ್ಲಿನ ಚಲನವಲನಗಳನ್ನು ಗಮನಿಸಿ, ತನ್ನ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ. ಆ ಮೂಲಕ ಗಡಿ ಭದ್ರತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ದೌಲತ್ ಬೇಗ್ ಓಲ್ಡಿ (ಡಿಬಿಓ) ಏರೋಡ್ರೋಮ್ ಮತ್ತು ದಾರ್ಬುಕ್-ಶ್ಯೋಕ್-ಡಿಬಿಓ ರಸ್ತೆಗೆ ದೇಪ್ಸಂಗ್ ಪ್ರವೇಶ ಒದಗಿಸುತ್ತದೆ. ಭಾರತಕ್ಕೆ ಮಿಲಿಟರಿ ಸಂಚಾರ ನಡೆಸಲು ಮತ್ತು ಚೀನಾದ ಆಕ್ರಮಣಗಳಿಂದ ತನ್ನ ಉತ್ತರದ ಗಡಿಯನ್ನು ರಕ್ಷಿಸಿಕೊಳ್ಳಲು ದೇಪ್ಸಂಗ್ ಬಯಲು ಬಹಳ ಮುಖ್ಯವಾಗಿದೆ.
ಭಾರತ-ಚೀನಾ ಉದ್ವಿಗ್ನತೆ ಶಮನ
ಅಕ್ಟೋಬರ್ ೨೩, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದು ೨೦೨೦ರಲ್ಲಿ ನಡೆದ ಚಕಮಕಿಯ ಬಳಿಕ ಹಾಳಾಗಿದ್ದ ಭಾರತ-ಚೀನಾ ಸಂಬಂಧವನ್ನು ಸುಧಾರಿಸಲು ಹೊಸ ಪ್ರಯತ್ನದಂತೆ ಕಂಡುಬಂದಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ತನ್ನ ಆರಂಭಿಕ ಮಾತಿನಲ್ಲಿ ಕ್ಸಿ ಜಿನ್‌ಪಿಂಗ್ ಅವರೊಡನೆ ರಚನಾತ್ಮಕ ಮಾತುಕತೆಯಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸಿದ್ದರು. ಭಾರತ ಮತ್ತು ಚೀನಾಗಳ ಮುಖ್ಯ ಉದ್ದೇಶ ಗಡಿಯಾದ್ಯಂತ ಶಾಂತಿ ಮತ್ತು ಸ್ಥಿರತೆ ಕಾಪಾಡುವುದಾಗಬೇಕು ಎಂದು ಅವರು ಹೇಳಿದ್ದರು. ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮ ಸಂವೇದನೆಗಳು ಬುನಾದಿಯಾಗಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದರು.
ಕಳೆದ ಐದು ವರ್ಷಗಳಲ್ಲಿ ಇದು ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆಯಾಗಿತ್ತು. ಕ್ಸಿ ಜಿನ್‌ಪಿಂಗ್ ಅವರು ಈ ಭೇಟಿಯತ್ತ ಅಂತಾರಾಷ್ಟ್ರೀಯ ಸಮುದಾಯ, ಎರಡೂ ದೇಶಗಳ ನಾಗರಿಕರು ಆಸಕ್ತಿಯಿಂದ ಗಮನ ಹರಿಸಿದ್ದಾರೆ ಎಂದಿದ್ದರು. ಗಡಿ ಚಕಮಕಿಗೆ ಕೆಲವು ತಿಂಗಳ ಮುನ್ನ, ಅಕ್ಟೋಬರ್ ೨೦೧೯ರಲ್ಲಿ ಮೋದಿ-ಕ್ಸಿ ಜಿನ್‌ಪಿಂಗ್ ಕೊನೆಯ ಬಾರಿ ಭಾರತದಲ್ಲಿ ಮಾತುಕತೆ ನಡೆಸಿದ್ದರು.
ಕ್ಸಿ ಜಿನ್‌ಪಿಂಗ್ ಭಾರತ ಮತ್ತು ಚೀನಾಗಳ ನಡುವಿನ ಸಾಮ್ಯತೆಗಳ ಕುರಿತು ಮಾತನಾಡುತ್ತಾ, ಎರಡೂ ದೇಶಗಳ ಪುರಾತನ ನಾಗರಿಕತೆಗಳನ್ನು ಹೊಂದಿವೆ, ಗ್ಲೋಬಲ್ ಸೌತ್‌ನ ಪ್ರಮುಖ ಸದಸ್ಯರು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ರಾಷ್ಟ್ರಗಳಾಗಿವೆ ಎಂದಿದ್ದರು. ಎರಡೂ ದೇಶಗಳು ತಮ್ಮ ಆಧುನೀಕರಣದ ಪ್ರಯತ್ನದ ಒಂದು ಪ್ರಮುಖ ಘಟ್ಟದಲ್ಲಿವೆ ಎಂದು ಕ್ಸಿ ಅಭಿಪ್ರಾಯ ಪಟ್ಟಿದ್ದಾರೆ. ಉಭಯ ರಾಷ್ಟ್ರಗಳು ತಮ್ಮ ಸಂವಹನ ಮತ್ತು ಸಹಭಾಗಿತ್ವವನ್ನು ಉತ್ತಮಪಡಿಸಿ, ಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಪರಸ್ಪರರಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಇಬ್ಬರು ನಾಯಕರು ಕೊನೆಯ ಬಾರಿಗೆ ೨೦೨೩ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ನಗರದಲ್ಲಿ ಆಯೋಜಿಸಲಾದ ಬ್ರಿಕ್ಸ್ ಶೃಂಗಸಭೆಯಲ್ಲಿ ಭೇಟಿಯಾಗಿದ್ದರು. ಇಬ್ಬರು ತಮ್ಮ ದೇಶಗಳ ಅಧಿಕಾರಿಗಳಿಗೆ ೩,೫೦೦ ಕಿಲೋಮೀಟರ್ ಉದ್ದದ ಅಂತಾರಾಷ್ಟ್ರೀಯ ಗಡಿಯಾದ ಎಲ್‌ಎಸಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.
ನವೆಂಬರ್ ೨೦೨೨ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ೨೦ ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಔಪಚಾರಿಕವಾಗಿ ಭೇಟಿಯಾಗಿದ್ದರು.
ಉದ್ವಿಗ್ನತೆ ಶಮನಕ್ಕೆ ಹಾದಿ ಮಾಡಿದ್ದೇನು?
ಭಾರತ ಅಕ್ಟೋಬರ್ ೨೧, ಸೋಮವಾರದಂದು ವಿವಾದಿತ ಗಡಿಯಲ್ಲಿ ಗಸ್ತು ಒಪ್ಪಂದದ ಕುರಿತು ಘೋಷಣೆ ಮಾಡಿತು. ಇದು ಕಜಾûನ್‌ನಲ್ಲಿ ಮೋದಿ ಮತ್ತು ಕ್ಸಿ ಮಾತುಕತೆಗೆ ವೇದಿಕೆ ಸೃಷ್ಟಿಸಿತು. ಈ ಒಪ್ಪಂದಕ್ಕೆ ಕಳೆದ ಕೆಲವು ವಾರಗಳಿಂದ ನಡೆದ ತೀವ್ರ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ಕಾರಣವಾಗಿದ್ದವು.
ಚೀನಾ ಸಹ ಮಂಗಳವಾರದಂದು ಉಭಯ ದೇಶಗಳು 'ಪ್ರಸ್ತುತ ವಿಚಾರಕ್ಕೆ' ಸಂಬಂಧಿಸಿದಂತೆ ಒಪ್ಪಂದಕ್ಕೆ ಬಂದಿವೆ ಎಂದು ತಿಳಿಸಿತ್ತಾದರೂ, ಹೆಚ್ಚಿನ ಮಾಹಿತಿ ನೀಡಿರಲಿಲ್ಲ.
ಎಸ್ ಜೈಶಂಕರ್ ಅವರು ನವದೆಹಲಿ ಹೇಳಿಕೆ ಬಿಡುಗಡೆಗೊಳಿಸಿದ ಬೆನ್ನಲ್ಲೇ, ಇದೊಂದು ಧನಾತ್ಮಕ ಬೆಳವಣಿಗೆ ಎಂದು ಬಣ್ಣಿಸಿದ್ದರು. ಚೀನಾದ ಜೊತೆಗೆ ಉದ್ವಿಗ್ನತೆ ಶಮನದ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತ ವಿಶ್ವಾಸದಿಂದ ಹೇಳಬಹುದು ಎಂದು ಜೈಶಂಕರ್ ಹೇಳಿದ್ದು, ಪರಸ್ಪರರ ಗಸ್ತು ತಿರುಗುವಿಕೆಗೆ ಅಡ್ಡಿಪಡಿಸುತ್ತಿದ್ದ ಪ್ರದೇಶಗಳಲ್ಲಿ ಇನ್ನು ಗಸ್ತು ನಡೆಸಬಹುದಾಗಿದೆ. ಗಡಿಯಾದ್ಯಂತ ಪರಿಸ್ಥಿತಿ ಉಲ್ಬಣಗೊಂಡಿದ್ದರಿಂದ, ಭಾರತ ಚೀನೀ ಹೂಡಿಕೆಗಳ ಕುರಿತು ಕಠಿಣ ನಿಲುವು ತಳೆದಿತ್ತು. ಅದರೊಡನೆ, ಕೋವಿಡ್-೧೯ ಸಾಂಕ್ರಾಮಿಕ ಪರಿಸ್ಥಿತಿಯೂ ಭಾರತ ಚೀನಾ ನಡುವೆ ನೇರ ವಿಮಾನ ಮರುಚಾಲನೆಗೆ ಅನುವು ಮಾಡಿರಲಿಲ್ಲ.
ಈ ವಾರ ಅಂತಿಮಗೊಂಡ ಒಪ್ಪಂದದ ಹೊರತಾಗಿಯೂ ನಿರ್ಬಂಧಗಳು ಮುಂದುವರಿಯಲಿವೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಖಚಿತಪಡಿಸಿದ್ದಾರೆ. ಮಂಗಳವಾರ ಸಚಿವರು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಿದೇಶೀ ನೇರ ಹೂಡಿಕೆಯ ಕುರಿತು ಮಾತನಾಡುತ್ತಿದ್ದರು. ಭಾರತ ಉದ್ಯಮ ಮತ್ತು ಹೂಡಿಕೆಗಳಲ್ಲಿ ಆಸಕ್ತವಾಗಿದ್ದರೂ, ತನ್ನ ಸೂಕ್ಷ್ಮ ಸ್ಥಾನದ ಕಾರಣದಿಂದ ಜಾಗರೂಕತೆಯ ನಿಲುವು ತಾಳಬೇಕಾಗುತ್ತದೆ ಎಂದಿದ್ದರು.
ಹಣದ ಮೂಲವನ್ನು ಪರಿಶೀಲಿಸದೆ ಭಾರತ ಎಫ್‌ಡಿಐಗೆ ಅನುಮತಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಗೋಸ್ಕರ ಇಂತಹ ನಿಬಂಧನೆಗಳನ್ನು ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆರ್ಥಿಕ ಸಂಬಂಧ ಉತ್ತಮಗೊಳ್ಳಲು ಹೆಚ್ಚುವರಿ ಮಾತುಕತೆಗಳು ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ಸ್ಥಾಪಕ, ಅಜಯ್ ಶ್ರೀವಾಸ್ತವ ಅವರು ಉಭಯ ದೇಶಗಳ ವ್ಯಾಪಾರವನ್ನು ಖಾಸಗಿ ಉದ್ಯಮಿಗಳು ನಿರ್ವಹಿಸುತ್ತಿದ್ದರಿಂದ, ರಾಜಕೀಯ ಬೆಳವಣಿಗೆಗಳು ಅದರ ಮೇಲೆ ಅಂತಹ ಪ್ರಭಾವ ಬೀರಿಲ್ಲ ಎಂದಿದ್ದಾರೆ. ಸಮತೋಲಿತ ಮತ್ತು ಬಲವಾದ ಆರ್ಥಿಕ ಸಂಬಂಧ ಸ್ಥಾಪಿಸಲು ಮತ್ತು ಚೀನೀ ಆಮದಿನ ಮೇಲಿನ ಅವಲಂಬನೆ ತಗ್ಗಿಸಲು ಸುಸ್ಥಿರ ಪ್ರಯತ್ನಗಳು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.