For the best experience, open
https://m.samyuktakarnataka.in
on your mobile browser.

ಎಲ್ಲವೂ ಮನಸ್ಸೇ; ಮನಸ್ಸಲ್ಲೇ ಎಲ್ಲವೂ

04:00 AM Aug 06, 2024 IST | Samyukta Karnataka
ಎಲ್ಲವೂ ಮನಸ್ಸೇ  ಮನಸ್ಸಲ್ಲೇ ಎಲ್ಲವೂ

`ಎಲ್ಲಾ ವಿಷಯಗಳು ಅಥವಾ ವಸ್ತುಗಳು ಅಂತಿಮವಾಗಿ ಮನಸ್ಸಿನಲ್ಲಿ ಬೆರೆತು ಪ್ರೇರಕಶಕ್ತಿಯಾಗುತ್ತದೆ ಮತ್ತು ಅವುಗಳ ಮೂಲವು ಅಂತಿಮವಾಗಿ ಮನಸ್ಸಿನಲ್ಲಿಯೇ ಕಂಡುಬರುತ್ತದೆ' ಎಂಬುದು ಪುರಾತನ ಜ್ಞಾನ ಮತ್ತು ಸಿದ್ಧಾಂತಗಳ ಪ್ರತಿಪಾದನೆ. ಈ ಪ್ರತಿಪಾದನೆಯನ್ನು ಆಧುನಿಕ ವಿಜ್ಞಾನಕ್ಕೆ ಇನ್ನೂ ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ; ಜೊತೆಗೆ ಆ ನಿಟ್ಟಿನಲ್ಲಿ ಸಾಗುತ್ತಿರುವ ಸಂಶೋಧನಾ ಪ್ರಯಾಣದ ಕೊನೆಯಲ್ಲಿ ಏನಿರಬಹುದು ಎಂಬುದರ ಬಗ್ಗೆ ಕನಸೂ ಕಾಣುತ್ತಿಲ್ಲ. ಆದರೆ ಆ ದಿಕ್ಕಿನಲ್ಲಿ ಗಮನಿಸಲಂತೂ ಪ್ರಾರಂಭಿಸಿದೆ! ಪ್ರಸ್ತುತದಲ್ಲಿ ಮನಸ್ಸಿನಲ್ಲಿ ವಸ್ತು ಅಥವಾ ವಿಷಯದ ಬೆರೆಯುವಿಕೆಯ ಪರಿಣಾಮವನ್ನು ಒಂದು ಚಾಲಕಶಕ್ತಿಯನ್ನಾಗಿ ನೋಡುತ್ತಿರುವ ವಿಜ್ಞಾನ ‘ಬ್ರಹ್ಮಾಂಡವೇ ಒಂದು ಶಕ್ತಿಯಾಗಿದೆ’ ಎಂಬುದನ್ನು ಕಂಡುಕೊಂಡಿದೆ. ಪುರಾತನ ಸಿದ್ಧಾಂತಗಳು ಮನಸ್ಸು ಕೇವಲ ದೇಹದ ಇತಿಮಿತಿಗಳಿಗೆ ಸೀಮಿತವಾಗಿಲ್ಲ; ಅದರ ಭೌತಿಕರೂಪವನ್ನು ಮೀರಿ ವ್ಯಕ್ತಿಯ ‘ಪ್ರಭಾವಳಿ’ಯಾಗಿ ವಿಸ್ತರಿಸುತ್ತದೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ‘ಆಲೋಚನೆಗಳ ವರ್ಗಾವಣೆ ಮತ್ತು ಪ್ರಸರಣ’; ‘ಟೆಲಿಪತಿ’ ಅಥವಾ ‘ದೂರಸಂವೇದನೆ’ಯಂತಹ ಸಾಧ್ಯತೆಗಳನ್ನು ವಿವರಿಸಿದ್ದವು. ದೇಹದ ನೆರಳಿಗೆ ಅಸ್ತಿತ್ವವಿರುವುದು ಸೂರ್ಯಕಿರಣಗಳು ಇರುವವರೆಗೆ ಮಾತ್ರವೇ! ಸೂರ್ಯಾಸ್ತದೊಂದಿಗೆ ಛಾಯೆಯ ಅಸ್ತಿತ್ವವೂ ಕೊನೆಗೊಳ್ಳುತ್ತದೆ. ದೇಹವಿರುವವರೆಗೆ ಮಾತ್ರವೇ ದೇಹದ ಮೇಲೆ ಮನಸ್ಸಿನ ಪ್ರಭಾವವಿರುವುದು; ದೇಹಾಂತ್ಯದೊಂದಿಗೆ ಆ ದೇಹದ ಮೇಲಿನ ಮನಸ್ಸಿನ ಪ್ರಭಾವವೂ ಕೊನೆಗೊಳ್ಳುತ್ತದೆ. ಬೀಜವೊಂದು ವೃಕ್ಷವಾಗಬೇಕಿದ್ದರೆ ಅದರ ಎಲ್ಲಾ ಸಂಬಂಧಗಳನ್ನು ಕಳಚಿಕೊಳ್ಳಬೇಕು. ತನಗೆ ಜನ್ಮನೀಡಿದ ವೃಕ್ಷದ ಛಾಯೆಯಿಂದಲೂ ಬೀಜ ದೂರವಾಗಬೇಕು.
‘ನಾನು’ ಎಂಬುದೇ ಪ್ರಜ್ಞೆ. ರೂಪ-ನಾಮರಹಿತವಾದ ಈ ಪ್ರಜ್ಞೆಯೇ ವಿಶ್ವದ ಎಲ್ಲಾ ಅರಿವಿನ ಮತ್ತು ಏಕತ್ವದ ಮೂಲ. ಇದುವೇ ನಮ್ಮ ಎಲ್ಲಾ ತಿಳಿವಿನ ಮೂಲ ಕೂಡಾ. ದೇಹ-ಮನಸ್ಸುಗಳ ಸಂಕೀರ್ಣದಿಂದ ಸ್ವತಂತ್ರವಾಗಿರುವ ಈ ಪ್ರಜ್ಞೆಯ ಮೂಲಕವೇ ನಾವು ನಮ್ಮ ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಅರಿಯುತ್ತೇವೆ. ನಿರ್ಜೀವ ವಸ್ತುಗಳಲ್ಲಿರುವುದು ಸಹ ಇದುವೇ. ಆಮೆಯು ತಾನು ಹೊರಚಾಚಿದ್ದ ತಲೆ, ಕೈಕಾಲುಗಳನ್ನು ಒಳಕ್ಕೆ ಸೆಳೆದುಕೊಂಡಾಗ ಮೂಲಸ್ವರೂಪ ತಾಳುವಂತೆ ದೃಶ್ಯಪ್ರಪಂಚವೂ ಹಿಂದು ಹಿಂದಕ್ಕೆ ಹೋಗಿ ಪ್ರಕೃತಿಯಲ್ಲಿ ಅಡಗಿಕೊಂಡರೆ ಅದರ ಮೂಲರೂಪ ವ್ಯಕ್ತವಾಗುತ್ತದೆ. ಕಣ್ಣಿಗೆ ಕಾಣದ್ದನ್ನು ಖಂಡಿಸುವುದು ಸುಲಭ; ಯುಕ್ತಿಯನ್ನೂ ತರ್ಕವನ್ನೂ ಹಿಡಿದು ವಾದವನ್ನು ರೂಪಿಸುತ್ತಾ ಹೋದರೆ ಕೊನೆಗೆ ಅದು ಹಿಡಿತಕ್ಕೆ ಸಿಗದೆ ಅನುಭವಕ್ಕೆ ಬಹುದೂರ ಹೋಗಬಹುದು. ಹಾಗಲ್ಲದೆ, ಪ್ರಪಂಚ ಹುಟ್ಟಿದಾಗ ಇದ್ದು ಅದನ್ನು ನೋಡಿದವರಾರು? ಎಲ್ಲಾ ಜ್ಞಾನ-ವಿಜ್ಞಾನಗಳೂ ಈ ವಿಚಾರದಲ್ಲಿ ಮಾಡಿರುವುದು ಊಹೆಯೇ! ಇಂದು ನಮ್ಮ ಕಣ್ಣೆದುರಿಗಿರುವುದು ಈ ಪ್ರಪಂಚ; ಅದರಲ್ಲಿ ತುಂಬ ಅನುಭವಕ್ಕೆ ಬರುವುದು ‘ತಾನು.’ ಆ ತನ್ನನ್ನು ತಾನು ಒಳಹೊಕ್ಕು ತಿಳಿದರೆ ಪ್ರಪಂಚವು ತಿಳಿದಂತಾಯಿತು ಎಂದು ಎಲ್ಲಾ ದಾರ್ಶನಿಕರೂ ಸಾಧುಸಂತರೂ ಹೇಳುತ್ತಾರೆ. ಏಕೆಂದರೆ, ಎಲ್ಲೆಡೆಯೂ ಇರುವ ಚೈತನ್ಯವೇ ತನ್ನಲ್ಲಿಯೂ ಇರುವುದು. ಅದನ್ನು ತಿಳಿಯಬೇಕಾದರೆ ಧ್ಯಾನದಿಂದ, ಯೋಗದಿಂದ ಸಾಧ್ಯ. ಮಾನವನ ಕಣ್ಣಿನಲ್ಲಿ ಒಟ್ಟು ೧೨.೭ ಕೋಟಿ ರೆಟಿನಾ ಸೆಲ್‌ಗಳಿವೆ. ಇದೇ ಕಾರಣದಿಂದ ಮನುಷ್ಯ ಸುಮಾರು ಒಂದು ಕೋಟಿಗೂ ಅಧಿಕ ವಿವಿಧ ಬಣ್ಣಗಳನ್ನು ಗುರುತಿಸಬಲ್ಲ. ಪ್ರಕಾಶ ನಮ್ಮ ದೃಷ್ಟಿಯನ್ನು ಸೀಮಿತಗೊಳಿಸುತ್ತದೆ. ಕಣ್ಣನ್ನು ಮುಚ್ಚಿಕೊಂಡಾಗ ಉಂಟಾಗುವ ಅಂಧಕಾರ ನಮಗೆ ಕಲ್ಪನೆಯ ಬಲನೀಡುತ್ತದೆ. ಯಾವಾಗ ನಮ್ಮ ಬಳಿ ಬಲ ಇರುತ್ತದೆಯೋ ಆಗ ಅವನು ಒಂಟಿಯಾಗಿರುವುದಕ್ಕೆ ಸಾಧ್ಯವಿಲ್ಲ.
ಜೀವಿಯ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದಾಗ; ಅಪಾಯಕಾರಿ ಸನ್ನಿವೇಶ ಎದುರಾದಾಗ; ಗಂಭೀರ ಅನಾರೋಗ್ಯ ಸಮಸ್ಯೆ ಕಾಡಿದಾಗ ಅಥವಾ ಇನ್ನಿತರ ಇಂಥಹುದೇ ಯಾವುದೇ ಪರಿಸ್ಥಿತಿ ತಲೆದೋರಿದಾಗ ಸುಪ್ತಮನಸ್ಸು ಸ್ವಯಂ-ರಕ್ಷಣೆಯ ನಿಯಮವನ್ನು ಅನುಸರಿಸಿ ಉಳಿವಿನ ವಿಚಾರವಾಗಿ ತನ್ನೆಲ್ಲಾ ಪ್ರಯತ್ನದಲ್ಲಿ ತೊಡಗುತ್ತದೆ. ಸ್ವಯಂ-ರಕ್ಷಣೆಯ ತತ್ವ ಜೀವಿಗಳನ್ನು ತನ್ನ ಕೈಮೀರಿದ ಪರಿಸ್ಥಿತಿಗಳಿಗೆ ಸರಿಹೊಂದಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತದೆ. ಬುಡಸಹಿತ ಕತ್ತರಿಸಲ್ಪಟ್ಟಾಗಲೂ ಕಾಂಡದಿಂದ ಮರಳಿ ಚಿಗುರುವ ಸಸಿಯು ಎಲ್ಲಾ ಅಡೆತಡೆಗಳನ್ನು ಎದುರಿಸಿಯೂ ಬೆಳಕನ್ನರಸುತ್ತಾ ಆಕಾಶದೆಡೆಗೆ ಮುಖಮಾಡಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಬಗೆ; ಬಂಡೆಯನ್ನು ವಿಭಜಿಸಲು ಸಾಧ್ಯವಾಗದಿದ್ದರೂ ಬಂಡೆಯಲ್ಲಿನ ಕಿರಿದಾದ ಸಂದುಗಳಿಂದ ಮೊಳಕೆಯೊಡೆಯುವ ಬೀಜ ಪ್ರಾಣಕ್ಕೆ ದೃಢವಾಗಿ ಅಂಟಿಕೊಳ್ಳುವ ಬಗೆ-ಇವೆಲ್ಲಾ ಪ್ರಕಟಪಡಿಸುವ ಸತ್ಯವೇನೆಂದರೆ; ‘ಯಾವುದೇ ಬೆಲೆತೆತ್ತಾದರೂ ಜೀವವನ್ನು ಉಳಿಸಿಕೊಳ್ಳಬೇಕು’ ಎಂಬುದು. ಮಾನವಶಾಸ್ತ್ರ, ನೈಸರ್ಗಿಕ ಇತಿಹಾಸ, ಸಸ್ಯಶಾಸ್ತ್ರದ ಅಧ್ಯಯನವು ‘ಸ್ವಯಂ-ರಕ್ಷಣೆ’ಗೆ ಸಂಬಂಧಿಸಿದಂತೆ ವಸತಿತತ್ವವು (ಪ್ರಿನ್ಸಿಪಲ್ ಆಫ್ ಅಕಾಮೊಡೇಷನ್) ಎಲ್ಲೆಡೆಯೂ ಇರುತ್ತದೆ ಎಂಬುದನ್ನು ಮನವರಿಕೆ ಮಾಡುತ್ತದೆ. ದೀರ್ಘಕಾಲಿಕ ಕಾಯಿಲೆಗಳ ಸಂದರ್ಭಗಳಲ್ಲಿಯೂ ಸುಪ್ತಪ್ರಜ್ಞೆ ಜೀವಿಯ ಉಳಿವಿಗಾಗಿ ಪ್ರಯತ್ನಿಸುವುದನ್ನು ಕಾಣಬಹುದು. ರೋಗಸಂದರ್ಭವು ವಾಸ್ತವದಲ್ಲಿ ಆ ಸಂದರ್ಭದ ಪರಿಸ್ಥಿತಿಗಳನ್ನು ಬದಲಾಯಿಸುವ ಅಥವಾ ಉತ್ತಮಗೊಳಿಸುವ ಪ್ರಯತ್ನವೇ ಆಗಿರುತ್ತದೆ. ಗಾಯವಾದಾಗ ತಕ್ಷಣವೇ ರಕ್ಷಣಾತ್ಮಕ ಕ್ರಮವನ್ನು ಅನುಸರಿಸುವ ದೇಹದ ಸ್ವಯಂ-ರಕ್ಷಣೆಯ ಸ್ವಭಾವ ತನ್ನಿಂತಾನೇ ಜಾಗೃತಗೊಳ್ಳುತ್ತದೆ.
ಆರೋಗ್ಯವು ಸುಪ್ತಪ್ರಜ್ಞೆಯ ಸಾಮಾನ್ಯ ಸಮತೋಲಿತ ಕಾರ್ಯನಿರ್ವಹಣೆಯ ಫಲಿತಾಂಶವಾದರೆ; ರೋಗವು ಸುಪ್ತಪ್ರಜ್ಞೆಯ ಅಸಹಜ ಕಾರ್ಯನಿರ್ವಹಣೆಯ ಫಲಿತಾಂಶ. ಬಾಹ್ಯದಲ್ಲಿ ಎಷ್ಟೇ ವಿಧವಾದ ಚಿಕಿತ್ಸಾಕ್ರಮಗಳಿದ್ದರೂ ನಿಜವಾದ ಗುಣಪಡಿಸುವ ಶಕ್ತಿಯು ಸುಪ್ತಪ್ರಜ್ಞೆಯಿಂದಲೇ ನಿರ್ದೇಶಿತವಾಗಿರಬೇಕು. ದೇಹದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಕೃತಿದತ್ತವಾದ ಬುದ್ಧಿವಂತಿಕೆ ಏನಿದೆ ಅದರ ವಿಫಲತೆಯೇ ರೋಗಗಳಿಗೆ ಮೂಲ. ಏಕಕೋಶ ಜೀವಿಯಿಂದ ಹಿಡಿದು ಮಾನವನವರೆಗೆ ‘ಮನಸ್ಸಿಲ್ಲದ ಜೀವವಿಲ್ಲ’. ಎಷ್ಟೇ ತಜ್ಞತೆಯಿದ್ದರೂ ದೇಹದ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ‘ಪ್ರಕೃತಿಗೆ ಸಹಾಯ’ ಮಾಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಿದೆ. ಏಕೆಂದರೆ ಇಡೀ ದೇಹವು ಬುದ್ಧಿವಂತ ಜೀವಕೋಶಗಳ ಘಟಕಗಳ ಒಕ್ಕೂಟದಿಂದ ಮಾಡಲ್ಪಟ್ಟಿದ್ದು ಅವುಗಳ ಮನಸ್ಸಿಗೆ ಪೂರಕವಾಗಿಯೇ ನಮ್ಮ ಪ್ರಯತ್ನವಿರಬೇಕು.
ಆಧುನಿಕ ಮನೋವಿಜ್ಞಾನದ ಅತ್ಯಂತ ಗಮನಾರ್ಹ ಸಾಧನೆಯೆಂದರೆ; ಯುಗಗಳಲ್ಲಿ ನೂರಾರು ವಿವಿಧ ಧಾರ್ಮಿಕ ಮತ್ತು ಜಾನಪದ ಆಚರಣೆ, ಸಂಸ್ಕೃತಿ, ಸಂಪ್ರದಾಯ, ಸಿದ್ಧಾಂತಗಳ ಹೆಸರಿನಲ್ಲಿ ಚದುರಿಹೋಗಿದ್ದ ನಂಬಿಕೆ ಮತ್ತು ಚಿಕಿತ್ಸಾ ವಿಧಾನಗಳನ್ನು ಒಂದು ವಿಶಾಲ ಮತ್ತು ಸಾಮಾನ್ಯ ಛತ್ರದಡಿಯಲ್ಲಿ ಒಂದುಗೂಡಿಸಿದ್ದು ಮತ್ತು ದೇಹದ ಮೇಲೆ ಮನಸ್ಸಿನ ಶಕ್ತಿಯ ಪ್ರಭಾವದ ನಿದರ್ಶನಗಳನ್ನು ಸ್ವೀಕರಿಸಿದ್ದು ಹಾಗೂ ಸಮನ್ವಯಗೊಳಿಸಿದ್ದು. ಹಲವಾರು ಜನಾಂಗಗಳ ಜಾನಪದದಲ್ಲಿ ಮತ್ತು ಅವರ ಸಾಮಾನ್ಯ ಸಂಪ್ರದಾಯಗಳಲ್ಲಿ ಮಾತ್ರವಲ್ಲದೆ ಲಿಖಿತ ಮತ್ತು ಕೆತ್ತನೆಗಳಲ್ಲಿಯೂ ನಾವು ಮಾನಸಿಕ ಚಿಕಿತ್ಸಾ ಪದ್ಧತಿಗಳ ಸಾರ್ವತ್ರಿಕತೆಯ ಕುರುಹುಗಳನ್ನು ಕಾಣುತ್ತೇವೆ. ಪ್ರಾಚೀನ ಭಾರತ, ಈಜಿಪ್ಟ್, ಗ್ರೀಸ್, ರೋಮ್, ಪರ್ಷಿಯಾ ಮತ್ತು ಚೀನಾದ ಸಾಹಿತ್ಯ ಮತ್ತು ಅವಶೇಷಗಳಲ್ಲಿ ಸಮ್ಮೋಹನ ಮತ್ತು ಅದರ ಚಿಕಿತ್ಸಕ ಮೌಲ್ಯಗಳ ವ್ಯಾಪಕ ಜ್ಞಾನವನ್ನು ಬಹಿರಂಗಪಡಿಸುತ್ತವೆ.
ಸಂತೋಷವೆಂಬುದು ತೀವ್ರತೆಯ ವಿಷಯವಲ್ಲ; ಸಮತೋಲನ ಮತ್ತು ಕ್ರಮ ಹಾಗೂ ಲಯ ಮತ್ತು ಸಾಮರಸ್ಯದ ಸಂಯೋಜನೆ. ಎಲ್ಲಾ ನಕ್ಷತ್ರಗಳಿಗೆ ಆಕಾಶದಲ್ಲಿ ಸ್ಥಳವಿರುವಂತೆ ಎಲ್ಲಾ ಬಗೆಯ ಪ್ರೀತಿಗಳಿಗೆ ಹೃದಯದಲ್ಲಿ ಸ್ಥಳವಿರಬೇಕು. ಆಗಲೇ ನೆಮ್ಮದಿಯ ಮತ್ತು ಸಮತೋಲನದ ಜೀವನ ಸಾಧ್ಯವಾಗುವುದು. ಭಗವದ್ಗೀತೆಯಲ್ಲಿ ಉದಾರವಾದ, ಸರಳವಾದ, ವಿಸ್ತಾರವಾದ ಅರ್ಥ ಹೇಳಿದೆ. ಯಜ್ಞವೆಂದರೆ ‘ದ್ರವ್ಯ’ ಯಜ್ಞವೊಂದೇ ಅಲ್ಲ; ತಪಸ್ಸು, ಯೋಗ, ಅಧ್ಯಯನ, ಜ್ಞಾನ ಇವೂ ಯಜ್ಞಗಳೇ. ದ್ರವ್ಯಮಯವಾದ ರಾಜ್ಯಕ್ಕಿಂತ ಜ್ಞಾನಯಜ್ಞ ಶ್ರೇಷ್ಠ.