ಎಲ್ಲಿದ್ದೀಯಪ್ಪಾ (೨)
ಆವಾಗ ಎಲ್ಲಿದ್ದೀಯಪ್ಪಾ ನಂಬರ್ ೧, ಈಗ ಎಲ್ಲಿದ್ದೀಯಪ್ಪಾ ನಂಬರ್ ೨. ಒಂದರಲ್ಲಿ ಹಂಗಾಯಿತು ಎರಡರಲ್ಲಿ ಹೆಂಗಾಗುತ್ತೋ ನೋಡಬೇಕು ಎಂದು ಪಂ. ಲೇವಣ್ಣ ತಲೆಗೆ ಹಚ್ಚಿಕೊಂಡಿದ್ದಾರೆ ಎಂದು ಖ್ಯಾತ ನಿರೂಪಕಿ ಕಿವುಡನುಮಿ ಒದರೊದರಿ ಹೇಳಿದಳು. ಮೊನ್ನೆಯೂ ಹಾಗೆ ಆಯಿತು… ಬಾರೋ ಅಲ್ಲಿ ಹೋಗಿ ನಿಲ್ಲಬೇಕು ಅಂದರೆ ನೋ… ನಾನೊಲ್ಲೆ… ನಾನೊಲ್ಲೆ ಅಂದು ಹೋಗತ್ಲಾಗೆ ಎಂದು ಹೋಗಿಬಿಟ್ಟಿದ್ದರು. ಎಷ್ಟು ಕರೆದರೂ ಬರಲಿಲ್ಲ. ಒಂದ್ನಿಮಿಷ ಎಂದು ಅವರಪ್ಪಾರು… ಎಲ್ಲಿದ್ದೀಯಪ್ಪಾ ಅಂದ ಕೂಡಲೇ ನಾನಿಲ್ಲಿದ್ದೀನಿ… ನಾನಿಲ್ಲಿದ್ದೀನಿ ಎಂದು ಹೆದರಿ ಓಡಿ ಬಂದಿದ್ದರಂತೆ. ಇನ್ನು ಮುಂದೆ ಅಲ್ಲಿನ ಜನರು ಕರೆದರೂ ಬಾರದೇ ಹೋದರೆ ಸಾಕು ಎಲ್ಲಿದ್ದೀಯಪ್ಪಾ ನಂಬರ್ ೨ ಅಂದ ಕೂಡಲೇ ಇದ್ದಲ್ಲಿಂದ ಹೆಗರೆಗರಿ ಓಡಿ ಬರುತ್ತಾರೆ ಅದಕ್ಕಾಗಿ ಆತನನ್ನು ಗೆಲ್ಲಿಸಿ ಹಾರ ಹಾಕಿಬಿಡಿ ಎಂದು ಅಜ್ಜಾರು ಹೇಳಿ ನಕ್ಕರಂತೆ. ಅಯ್ಯೋ ಬುಡ್ರಪ್ಪಾ ಅವತ್ತು ಎಲ್ಲಿದ್ದೀಯಪ್ಪಾ ಎಂದು ನಾನು ಕೇಳಿದರೆ ನಾನು ಎಲ್ಲಾದರೂ ಇರುತ್ತೇನೆ ಬುಡು ಎಂದು ನನಗೆ ಮಖಕ್ಕೆ ಹೊಡೆದ ಹಾಗೆ ಹೇಳಿದ. ಮನೆಮಾತಿನ ಮಾತು ಎಲ್ಲರ ಮನೆಯೂ ತೂತು ಅಂದು ನಾನೂ ಹೇಳಲಾರದೇ ಮನಸ್ಸಿನಲ್ಲಿಟ್ಟುಕೊಂಡು ಸುಮ್ಮನಿದ್ದೆ. ಈಗ ಆಗಲ್ಲವೆಂದು ನಿನಗೆ ಹೇಳುತ್ತಿದ್ದೇನೆ ಯಾರಿಗೂ ಹೇಳಬೇಡ ಎಂದು ಕರಿಭಾಗೀರತಿ ಕಿವಿಯಲ್ಲಿ ಹೇಳಿದ್ದ. ಆಕೆ ಊರಿನ ಎಲ್ಲ ಓಣಿ ಓಣಿಗಳಲ್ಲಿ ತಿರುಗಾಡಿ… ನಾನು ನಿನಗೆ ಅಂತ ಹೇಳುತ್ತಿದ್ದೇನೆ ಯಾರಿಗೂ ಹೇಳಬೇಡ ಅಂತ ಹೇಳಿದಳು. ಕೇಳಿಸಿಕೊಂಡವರೂ ಸಹ ಬೇರೆಯವರ ಕಿವಿಯಲ್ಲಿ ಯಾರ ಮುಂದೆಯೂ ಹೇಳಬೇಡ ಎಂದು ಹೇಳಿದರು. ಹೀಗೆ ಒಬ್ಬರಿಗೊಬ್ಬರು ಕಿವಿಯಲ್ಲಿ ಹೇಳಿ ಹೇಳಿ ಕೊನೆಗೆ ಊರತುಂಬ ಸುದ್ದಿ ಆಯಿತು. ಕೆಲವರು ಡೈರೆಕ್ಟಾಗಿ ಏನ್ ಸ್ವಾಮೀ ಕಂದಮ್ಮನಿಗೆ ಎಲ್ಲಿದ್ದೀಯಪ್ಪಾ(೨) ಅಂತಿದಾರೆ ಅಂದಾಗ. ಅವರಪ್ಪಾರು… ಇದೆಲ್ಲ ಮದ್ರಾಮಣ್ಣ-ಬಂಡೆಸಿವು ಕೈವಾಡ… ನನಗೆ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಅದಿರಲಿ ಬಹಿರಂಗ ಭಾಷಣಕ್ಕೆ ಬನ್ನಿ ಎಂದು ಎಲ್ಲರಿಗೂ ಆಹ್ವಾನ ನೀಡಿದರು. ಎಲ್ಲರೂ ಬಹಿರಂಗ ಸಭೆಗೆ ಹೋದರು. ಕಾರು ಪಂಚರ್ ಆಗಿದ್ದರಿಂದ ಕಂದ ಬರುವುದು ಸ್ವಲ್ಪ ಲೇಟಾಯಿತು. ಆಗ ನೆರೆದವರೆಲ್ಲ ಸೇರಿ ಒಂದೇ ಧ್ವನಿಯಲ್ಲಿ ಎಲ್ಲಿದ್ದೀಯಪ್ಪಾ(೨) ಎಲ್ಲಿದ್ದೀಯಪ್ಪಾ(೨) ಎಲ್ಲಿದ್ದೀಯಪ್ಪಾಈ೨) ಎಂದು ಕೋರ್ಟಿನಲ್ಲಿ ಕರೆಯುವಂತೆ ಕೂಗತೊಡಗಿದರು.