ಎಲ್ಲ ಪರೀಕ್ಷೆಗಳು ಒಂದೇ ದಿನ ನಡೆದರೆ…
ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳು ಸಂಧಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪಿಎಸ್ಐ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೆಪ್ಟೆಂಬರ್ 22ರಂದು ನಿಗದಿಪಡಿಸಿರುವ ಪರೀಕ್ಷೆಯ ದಿನದಂದೇ ಕೇಂದ್ರ ಲೋಕಸೇವಾ ಆಯೋಗದ (UPSC) ಮುಖ್ಯ ಪರೀಕ್ಷೆಗಳು ಹಾಗೂ ಸಿಬ್ಬಂದಿ ಆಯ್ಕೆ ಆಯೋಗದ (SSC) ಪರೀಕ್ಷೆಗಳೂ ಸಹ ನಿಗದಿಯಾಗಿರುವುದರಿಂದ ರಾಜ್ಯದ ಉದ್ಯೋಗಾಕಾಂಕ್ಷಿಗಳು ಸಂಧಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗ ಅರಸಿ ಮೂರೂ ಕಡೆಗಳಲ್ಲಿ ಅರ್ಜಿ ಸಲ್ಲಿಸಿರುವ ಯುವಕ ಯುವತಿಯರು ಈಗ ಎಲ್ಲ ಪರೀಕ್ಷೆಗಳು ಒಂದೇ ದಿನ ನಡೆದರೆ ಎರಡು ಕಡೆ ಅವಕಾಶ ಕೈತಪ್ಪುವ ಆತಂಕದಲ್ಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವರ್ಷವಿಡೀ ಕಠಿಣ ಪರಿಶ್ರಮ ಪಟ್ಟು ತಯಾರಿ ನಡೆಸುವ ಉದ್ಯೋಗಾಕಾಂಕ್ಷಿಗಳು ಒಮ್ಮೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡರೆ ವರ್ಷವಿಡೀ ಅವರು ಪಟ್ಟ ಪರಿಶ್ರಮ ವ್ಯರ್ಥವಾಗುತ್ತದೆ. ಅವರ ಭವಿಷ್ಯವೇ ಆತಂತ್ರವಾಗುತ್ತದೆ. ಉದ್ಯೋಗಾಕಾಂಕ್ಷಿಗಳ ಈ ಸಂಧಿಗ್ಧ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಪಿಎಸ್ಐ ಪರೀಕ್ಷೆಗಳನ್ನ ಕನಿಷ್ಠ ಪಕ್ಷ ಒಂದು ತಿಂಗಳು ಮುಂದೂಡಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗು ಉನ್ನತ ಶಿಕ್ಷಣ ಸಚಿವ ಡಾ, ಎಂ.ಸಿ. ಸುಧಾಕರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.