ಎಲ್ಲ ಮಾದರಿಯಲ್ಲೂ ಟೀಮ್ ಇಂಡಿಯಾ ನಂ.1
ದುಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ತವರಿನ ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ೪-೧ರ ಅಂತರದ ಗೆಲುವು ಸಾಧಿಸಿದ ಭಾರತ ತಂಡ ನೂತನ ಐಸಿಸಿ ಟೆಸ್ಟ್ ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಈ ಸಾಧನೆಯೊಂದಿಗೆ ಮೂರು ಮಾದರಿಯ (ಟೆಸ್ಟ್, ಏಕದಿನ ಹಾಗೂ ಟಿ೨೦) ಕ್ರಿಕೆಟ್‌ನಲ್ಲಿಯೂ ಭಾರತವೇ ಅಗ್ರಸ್ಥಾನ ಪಡೆದುಕೊಂಡಿದೆ.
ಈ ಹಿಂದೆ ಆಸ್ಟ್ರೇಲಿಯಾ ನಂ.೧ ಟೆಸ್ಟ್ ತಂಡವಾಗಿತ್ತು. ಇದೀಗ ದ್ವಿತೀಯ ಸ್ಥಾನಕ್ಕೆ ಜಾರಿದೆ. ಕ್ರೈಸ್ಟ್‌ಚರ್ಚನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇನ್ನೂ ಒಂದು ದಿನದ ಆಟ ಬಾಕಿ ಇದ್ದು, ಆಸಿಸ್ ಪಂದ್ಯದಲ್ಲಿ ಹಿನ್ನಡೆ ಸಾಧಿಸಿದೆ. ಈ ಪಂದ್ಯದ ಫಲಿತಾಂಶ ಏನೇ ಬಂದರೂ ಭಾರತವೇ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
WTC ರ‍್ಯಾಂಕಿMಗ್ ೨೦೨೩-೨೦೨೫: ಅಗ್ರಸ್ಥಾನದಲ್ಲಿ ಇಂಡಿಯಾ
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ತಂಡ ಅಗ್ರಸ್ಥಾನದಲ್ಲಿತ್ತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ೯ ಪಂದ್ಯಗಳಲ್ಲಿ ೬ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿದೆ.
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ೬ ಗೆಲುವು, ೨ ಸೋಲು ಮತ್ತು ೧ ಡ್ರಾ ಸಾಧಿಸಿಸುವ ಮೂಲಕ ಶೇ. ೬೮.೫೧ ಗೆಲುವಿನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ೫ ಪಂದ್ಯಗಳನ್ನಾಡಿರುವ ನ್ಯೂಜಿಲ್ಯಾಂಡ್ ೩ ಪಂದ್ಯಗಳಲ್ಲಿ ಜಯ, ೨ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಶೇ. ೬೦.೦೦ ಗೆಲುವಿನೊಂದಿಗೆ ಕಿವೀಸ್ ಪಡೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ೧೧ ಪಂದ್ಯಗಳನ್ನಾಡಿ, ೭ ಜಯ, ೩ ಸೋಲು ಹಾಗೂ ೧ ಪಂದ್ಯವನ್ನು ಡ್ರಾ ಸಾಧಿಸುವ ಮೂಲಕ ಶೇ. ೫೯.೦೯ ಗೆಲುವಿನೊಂದಿಗೆ ೩ನೇ ಸ್ಥಾನದಲ್ಲಿದೆ. ೨ ಪಂದ್ಯಗಳನ್ನಾಡಿರುವ ಬಾಂಗ್ಲಾದೇಶ ೧ ಪಂದ್ಯದಲ್ಲಿ ಗೆದ್ದರೆ, ಮತ್ತೊಂದು ಪಂದ್ಯದಲ್ಲಿ ಸೋತಿದೆ. ಈ ಮೂಲಕ ಶೇ. ೫೦.೦೦ರ ಗೆಲುವಿನೊಂದಿಗೆ ೪ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ೫ ಪಂದ್ಯಗಳನ್ನಾಡಿ, ೨ ಗೆಲುವು ದಾಖಲಿಸಿದರೆ, ೩ ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಶೇ. ೩೬.೬೬ರ ಗೆಲುವಿನೊಂದಿಗೆ ೫ನೇ ಸ್ಥಾನದಲ್ಲಿದೆ.