ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ನಿಯಮಗಳಿಗೆ ತಿದ್ದುಪಡಿ
ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ನಿಯಮಗಳನ್ನು ತಿದ್ದುಪಡಿ ಮಾಡಿ ವಿದ್ಯಾರ್ಥಿಸ್ನೇಹಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ೩ ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದ್ದು, ಮೊದಲ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದಿದ್ದ ನಿಯಮವನ್ನು ತಿದ್ದುಪಡಿ ಮಾಡಿದೆ.
ಹೊಸ ನಿಯಮದ ಪ್ರಕಾರ ಮೊದಲ ಪ್ರಯತ್ನದಲ್ಲಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಮೊದಲ ಪರೀಕ್ಷೆಗೆ ಹಾಜರಾಗದಿದ್ದರು ೨, ೩ನೇ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಆದರೆ, ಮೊದಲ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪರೀಕ್ಷಾ ಮಂಡಳಿಗೆ ದತ್ತಾಂಶ ಬೇಕೆಂಬ ಕಾರಣದಿಂದ ನಿಯಮ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಅನುತ್ತೀರ್ಣರಾಗಿರುವ ಮತ್ತು ಹಿಂದಿನ ವರ್ಷಗಳಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿರುವವರೂ ಮೊದಲ ಪರೀಕ್ಷೆಗೆ ನೋಂದಣಿ ಅಥವಾ ಹಾಜರಾಗಬೇಕೆಂಬ ನಿಯಮವಿಲ್ಲ. ೨ ಅಥವಾ ೩ನೇ ಪರೀಕ್ಷೆಗೆ ನೇರವಾಗಿ ನೋಂದಣಿ ಮಾಡಿಕೊಂಡು ಹಾಜರಾಗಬಹುದು.
ಅಂಕ ಸುಧಾರಣೆ ವ್ಯವಸ್ಥೆ
ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಅಂಕಗಳ ಸುಧಾರಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮೊದಲಿದ್ದ ನಿಯಮಗಳ ಪ್ರಕಾರ, ಅಭ್ಯರ್ಥಿಯೊಬ್ಬ ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕ ನಿರಾಕರಿಸಿ ೨ನೇ ಬಾರಿ ಪರೀಕ್ಷೆ ಬರೆದರೆ ೨ನೇ ಬಾರಿ ಬರೆದ ಪರೀಕ್ಷೆಯ ಅಂಕ ಪರಿಗಣಿಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗೆ ಅನ್ಯಾಯವಾಗುತ್ತಿತ್ತು. ಉದಾಹರಣೆಗೆ ಮೊದಲ ಪರೀಕ್ಷೆಯಲ್ಲಿ ೫೦ ಅಂಕ ಪಡೆದ ವಿದ್ಯಾರ್ಥಿಯು ೨ನೇ ಪರೀಕ್ಷೆಯಲ್ಲಿ ೨೫ ಅಂಕ ಪಡೆದು ಅನುತ್ತೀರ್ಣಾರಾದರೆ, ಅಭ್ಯರ್ಥಿಯನ್ನು ಅನುತ್ತಿರ್ಣರೆಂದು ಪರಿಗಣಿಸಲಾಗುತ್ತಿತ್ತು. ಈ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಎರಡೂ ಪರೀಕ್ಷೆಯಲ್ಲಿನ ಉತ್ತಮ ಅಂಕ ಪರಿಗಣಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಯು ೨ನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಭಯಪಡುವ ಅಗತ್ಯವಿಲ್ಲ.