ಐಕ್ಯದ ಅಭಿವ್ಯಕ್ತಿ ಹೇಗೆ?
ಪ್ರಾಣಲಿಂಗಾದಿಯೋಗೇನ ಸುಖಾತಿಶಯಮೇಯಿವಾನ್
ಶರಣಾಖ್ಯ: ಶಿವೇನೈಕ್ಕಭಾವನಾದೈಕ್ಯವಾನ್ ಭವೇತ್ |
ಇದು ಸಿದ್ಧಾಂತ ಶಿಖಾಮಣಿಯ ಉಕ್ತಿ, ಷಟ್‌ಸ್ಥಲದ ಸಾಧಕ ತನ್ನ ಸಾಧನೆಯ ಬಲದಿಂದ ವಿಭಿನ್ನ ಸ್ತರಗಳನ್ನು ಕ್ರಮಿಸಿ ಮೆಲ್ಲಮೆಲ್ಲನೆ ಭಕ್ತನಾಗಿ ಮೆಲ್ಲಮೆಲ್ಲನೆ ಮಾಹೇಶ್ವರನಾಗಿ, ಪ್ರಸಾದಿ, ಪ್ರಾಣಲಿಂಗಿ, ಶರಣನಾಗಿ ಕೊನೆಗೆ ಈ ಎಲ್ಲ ಸಾಧನೆಯ ಫಲವಾದ ನಿರತಿಶಯ ಆನಂದವನ್ನು ಹೊಂದಿ ಶಿವನೊಂದಿಗೆ ಐಕ್ಯಭಾವನೆಯನ್ನು ಆರೋಹಿಸಿಕೊಳ್ಳುತ್ತಾನೆ. ಶಿವನೊಂದಿಗೆ ಐಕ್ಯತೆಯನ್ನು ಅನುಭವಿಸುವ ಕಾರಣ ಐಕ್ಯನೆಂದು ಕರೆಯಿಸಿಕೊಳ್ಳುವ ಇವನು ಎಲ್ಲೆಡೆ ಆ ಏಕತೆಯನ್ನು ಆಸ್ವಾದಿಸುತ್ತಾನೆ. ಈ ಕಾರಣಕ್ಕಾಗಿಯೇ ಅವನಲ್ಲಿ ರಾಗದ್ವೇಷಗಳು, ಶೋಕ ಮೋಹಗಳು ಉಂಟಾಗುವುದಿಲ್ಲ. “ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ” ಎಂದು ಉಪನಿಷತ್ತು ಕೂಡಾ ಎಲ್ಲೆಡೆ ಏಕತ್ವವನ್ನು ಅನುಭವಿಸುವ ಸಾಧಕ ಶೋಕ ಮೋಹಗಳಿಂದ ನಿವೃತ್ತನಾಗುತ್ತಾನೆ ಎಂಬುದನ್ನು ಪ್ರತಿಪಾದಿಸಿದೆ. ತನಗೆ ಭಿನ್ನವಾದ ಇನ್ನೊಬ್ಬ ಇದ್ದಾಗಲೆ ರಾಗದ್ವೇಷಗಳು. ಎಲ್ಲವೂ ತಾನೇ ಎಂಬ ಅನುಭವ ಭಾವಕ್ಕೆ ವೇದ್ಯವಾದಾಗ, ಎಲ್ಲಿಯ ರಾಗ ಎಲ್ಲಿಯ ದ್ವೇಷ! ರಾಗದ್ವೇಷಗಳೆ ಇಲ್ಲವಾದಾಗ ಶೋಕ ಮೋಹಗಳೆಂತು! ಅಲ್ಲಿ ಕೇವಲ ಆನಂದ ಮಾತ್ರ. ಶಿವಯೋಗಿಯ ಈ ಆನಂದವನ್ನು ಬಣ್ಣಿಸಲು ಮಾತುಗಳು ಅಸಮರ್ಥ. ಅಂತೆಯೇ ಶರಣರೆಲ್ಲರ ಅಕ್ಕ ಮಹಾದೇವಿಯಕ್ಕ-
ಲಿಂಗವೆನ್ನೆ ಲಿಂಗೈಕ್ಯವೆನ್ನೆ ಸಂಗವೆನ್ನೆ ಸಮರಸವೆನ್ನೆ
ಆಯಿತ್ತೆನ್ನೆ ಆಗದೆನ್ನೆ ನೀನೆನ್ನೆ ನಾನೆನ್ನೆ
ಚನ್ನಮಲ್ಲಿಕಾರ್ಜುನಯ್ಯ
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ
ಎಂದು ತನ್ನ ಲಿಂಗೈಕ್ಯ ಆವಸ್ಥೆಯ ಮೌನವನ್ನೇ ಮಾತುಗಳ ಮೂಲಕ ಪ್ರಕಟಿಸಿದ್ದಾಳೆ. ಈ ಅವಸ್ಥೆ ಕೇವಲ ಅನುಭವ ವೇದ್ಯ ಮಾತ್ರ. ಅದನ್ನು ಮಾತುಗಳ ಮೂಲಕ ಅಭಿವ್ಯಕ್ತಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಹೊರಟ ಸಾಧಕ ಅವನ ಸಾಕ್ಷಾತ್ಕಾರವಾಗುತ್ತಿದ್ದಂತೆ ತನ್ನನ್ನೆ ಕಳೆದುಕೊಂಡು ಬಿಡುತ್ತಾನೆ. ಅವನ ಅಹಂ ಸೋಹಂ ಆಗಿ ಅದರಲ್ಲಿ ವಿಲೀನಗೊಂಡಾಗ ಅಲ್ಲಿ ವೇದ್ಯವಾದ ಆ ಅನುಭವವನ್ನು ಮರಳಿ ಬಂದು ಹೇಳುವವರಾರು? ಅದು ಮೂಕ ಮೆಲಿದ ಬೆಲ್ಲದ ಸವಿಯಂತೆ.
ಉಪ್ಪಿನಗೊಂಬೆಯೊಂದು ತನ್ನ ಅಪ್ಪನನ್ನು ಹುಡುಕಲು ಹೊರಟಿತು. ತನ್ನನ್ನು ನಿರ್ಮಿಸಿದ ಮಾಲಿಕನನ್ನು ಕೇಳಿತು “ನಾನು ಎಲ್ಲಿಂದ ಬಂದಿರುವೆ? ನನ್ನ ಮೂಲ ಯಾವುದು? ನನಗೆ ನನ್ನ ಅಪ್ಪನನ್ನು ಕಾಣುವ ಆಶೆ, ಅವನಿರುವ ನೆಲೆಯನ್ನು ತಿಳಿಸು” ಎಂದು ಕೇಳಿತು. ಮಾಲಿಕ ಹೇಳಿದ “ನಿನ್ನ ಮೂಲ ಸಾಗರ. ಅದು ಬಹುದೂರ” ಎಂದನು. ಆಗ ಗೊಂಬೆ “ಅದು ಎಷ್ಟೇ ದೂರವಿರಲಿ ನಾನುಹೋಗುವೆ ಆದರೆ ಅವನು ಹೇಗಿರುವನು? ಎಷ್ಟು ದೊಡ್ಡವನಿರುವನು? ನನಗೆ ಹೇಳು” ಎಂದು ಕೇಳಿತು. ಆಗ ಮಾಲಿಕ “ನಾನೂ ಅದನ್ನು ನೋಡಿಲ್ಲ ಆದರೆ ಅದು ಎಲ್ಲಿ ಇದೆ ಎನ್ನುವುದನ್ನು ಇನ್ನೊಬ್ಬರಿಂದ ಕೇಳಿ ಗೊತ್ತು” ಎಂದ. “ನನಗೆ ತೋರಿಸು ನಡಿ” ಎಂದು ಗೊಂಬೆ ಅವನನ್ನು ಜೊತೆಗೆ ಕರೆದುಕೊಂಡು ಸಮುದ್ರದ ಸಮೀಪ ಬಂತು. ತನ್ನಪ್ಪನನ್ನು ಕಣ್ಣಾರೆ ಕಂಡು ಸಂತೋಷಪಟ್ಟಿತು. ನಮ್ಮಪ್ಪ ಅದೆಷ್ಟು ವಿಶಾಲ! ಎಂದು ಅಚ್ಚರಿಪಟ್ಟಿತು. ಈ ನನ್ನ ಅಪ್ಪ ಎಷ್ಟು ಆಳವಿರಬಹುದು? ಎಂದು ಮಾಲಿಕನನ್ನು ಕೇಳಿತು. ಅವನು “ನನಗೆ ಗೊತ್ತಿಲ್ಲ' ಎಂದು ತಿಳಿಸಿದ. ತಕ್ಷಣವೆ ಆ ಗೊಂಬೆ “ಹಾಗಾದರೆ ನಾನು ಹೋಗಿ ನೋಡಿಕೊಂಡು ಬಂದು ನಿನಗೆ ನಮ್ಮ ಅಪ್ಪನ ಆಳ ತಿಳಿಸುವೆ” ಎಂದು ಹೇಳಿ ಸಾಗರದಲ್ಲಿ ಜಿಗಿಯಿತು. ಸಾಗರ ಅದೇನು ಚಿಕ್ಕದೆ! ಕೆಳಗೆ ಹೋಗುತ್ತ ಹೋಗುತ್ತ ಕ್ರಮೇಣ ಕರಗುತ್ತ ಸೊರಗುತ್ತ ತಳಕ್ಕೆ ಹೋಗಿ ಮುಟ್ಟುವುದಕ್ಕಿಂತ ಮೊದಲು ತಾನೇ ಇಲ್ಲವಾಗಿ ಹೋಯಿತು. ಸಾಗರದಲ್ಲಿ ಸಮರಸಗೊಂಡು ಒಂದಾಗಿ ಐಕ್ಯವಾಯಿತು. ಮೇಲೆ ನಿಂತ ಮಾಲಿಕ 'ನನ್ನ ಗೊಂಬೆ ಬರದ, ಸಾಗರದ ಆಳ ನನಗೆ ತಿಳಿಸದ' ಎಂದು ಗೊಂಬೆಯ ನಿರೀಕ್ಷೆಯಲ್ಲಿ ಬಹಳಷ್ಟು ಸಮಯದವರೆಗೆ ಕುಳಿತ. ಆದರೆ ಹೋದ ಗೊಂಬೆ ಮಾತ್ರ ಮರಳಲಿಲ್ಲ. ಇವನು ಮರಳಿ ಮನೆ ಸೇರಿದನಂತೆ.