ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಐವರು ಸಚಿವರು ಕರುನಾಡಿಗೆ ಐರಾವತವಾಗಲಿ

12:16 AM Jun 20, 2024 IST | Samyukta Karnataka

ಕೇಂದ್ರದ ಸಚಿವರಾಗಿ, ದೇಶದ ಸಮಗ್ರತೆ, ಸಮಾನತೆ, ನ್ಯಾಯಬದ್ಧವಾಗಿ ಕಾರ್ಯನಿರ್ವಹಿಸುತ್ತಲೇ ಈ ನೆಲದ ಹಿತಾಸಕ್ತಿ, ಋಣ ತೀರಿಸುವ ಜವಾಬ್ದಾರಿ ಮತ್ತು ಕಳಕಳಿ ನನ್ನ ಆದ್ಯತೆಯಾಗಿದೆ… ಇಪ್ಪತ್ತು ವರ್ಷಗಳ ಹಿಂದೆ ಕಾವೇರಿ ವಿವಾದ ಭುಗಿಲೆದ್ದಾಗ ಅಂದಿನ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ ಬಹಿರಂಗವಾಗಿ ಹಾಗೂ ಮುಕ್ತವಾಗಿ ಈ ಮಾತನ್ನು ಆಡಿದ್ದರು. ಅದರಂತೆ ತಮ್ಮ ಬದುಕಿನುದ್ದಕ್ಕೂ ಬದ್ಧತೆ ತೋರಿದರು.
ಮೋದಿ ಎನ್‌ಡಿಎ ೩.೦ ಸರ್ಕಾರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಐವರಿಂದ ಜನ ಇದೇ ಬದ್ಧತೆ-ಕಾಳಜಿಯನ್ನು ಅಪೇಕ್ಷಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ, ಕೇಂದ್ರದ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ, ಆಹಾರ- ನಾಗರಿಕ ಪೂರೈಕೆ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾಗಿರುವ ಪ್ರಲ್ಹಾದ ಜೋಶಿ ಇವರು ಸಂಪುಟ ದರ್ಜೆಯವರಾದರೆ, ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಹಾಗೂ ಸಣ್ಣ ಕೈಗಾರಿಕೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಸ್ತುತ ಮೋದಿ ಕ್ಯಾಬಿನೆಟ್‌ನಲ್ಲಿ ಪ್ರಬಲ ಖಾತೆಗಳನ್ನೇ ಪಡೆದವರು.
ಹಾಗೆ ನೋಡಿದರೆ ಈ ಎಲ್ಲರಿಗೂ ದೊರಕಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಬಹುದಾದ, ತಮ್ಮ ಖಾತೆಯಲ್ಲಿ ಮತ್ತು ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿಪಡಿಸಬಹುದಾದ ಇಲಾಖೆಗಳೇ. ಹಾಗೂ ಅಂತಹ ಸಾಮರ್ಥ್ಯ ಹೊಂದಿದವರೇ ಇವರೆಲ್ಲ.
ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ಹಾಗೂ ಕಳೆದ ಐದು ವರ್ಷ ಹಣಕಾಸು ಖಾತೆಯನ್ನು ನಿಭಾಯಿಸಿದವರು. ಈ ರಾಜ್ಯವನ್ನು ಪ್ರತಿನಿಧಿಸಿ ಸಾಕಷ್ಟು ವಿವಾದ, ಸಂಘರ್ಷ, ಟೀಕೆ ಟಿಪ್ಪಣಿಗಳಿಗೆ ಗುರಿಯಾದವರೂ ಇವರೇ. ಕಳೆದ ಏಳೆಂಟು ತಿಂಗಳಿಂದಂತೂ ನಿರ್ಮಲಾ ಸೀತಾರಾಮನ್ ಅವರಿಂದಲೇ, ನಮ್ಮವರಾಗಿದ್ದೂ, ನಮಗೆ ಅನ್ಯಾಯ ಎಸಗಲಾಗುತ್ತಿದೆ ಎಂಬ ಕಟು ಟೀಕೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದಿಂದ ಬಂತು, ಆರೋಪಿಸಲ್ಪಟ್ಟಿತು.
ಹಾಗಿದ್ದೂ ಇದು ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು, ಕೇರಳ, ಆಂಧ್ರ, ಪಂಜಾಬು ಇತ್ಯಾದಿ ರಾಜ್ಯಗಳೂ ಕೂಡ ಕೇಂದ್ರದ ಅನುದಾನ ತಾರತಮ್ಯ, ಬಜೆಟ್ ಘೋಷಣೆಗಳ ಅನುಷ್ಠಾನದ ನಿರಾಕರಣೆ ಎಲ್ಲ ಆರೋಪಗಳೂ ಸರ್ವೋಚ್ಚ ನ್ಯಾಯಾಲಯದವರೆಗೂ ಹೋದವು. ಇಷ್ಟಿದ್ದೂ ಸಚಿವರು ನೀಡಿದ ಸಮರ್ಥನೆಗಳು ರಾಜಕೀಯ ಪಕ್ಷಗಳು, ಪ್ರತಿಪಕ್ಷಗಳು, ಅವರದ್ದೇ ಪಕ್ಷದ ನಾಯಕರು, ಬಿಡಿ, ಜನಸಾಮಾನ್ಯ ಕೂಡ ಒಪ್ಪಿಲ್ಲ… ದೇಶದಲ್ಲಿ ಮೋದಿ ಅಲೆ ಕಳೆದ ಚುನಾವಣೆಯಲ್ಲಿ ಅಷ್ಟರಮಟ್ಟಿಗೆ ತಡೆ ಒಡ್ಡಿದ್ದು ಮತ್ತು ನಷ್ಟ ಹೊಂದಿದ್ದರಲ್ಲಿ ಹಣಕಾಸು ಖಾತೆಯ ನಿರ್ವಹಣೆ ಹೊತ್ತ ಸಚಿವರ ಕೊಡುಗೆಯೂ ಇದೆ ಎನ್ನುವುದು ಒಪ್ಪತಕ್ಕದ್ದೇ!.
ಮತ್ತೆ ಮೋದಿ ೩.೦ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿದ್ದಾರೆ. ಹಿಂದೆ ಬಂದಿರುವ ಎಲ್ಲ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸಿ ಸರಿಪಡಿಸುವುದರ ಜೊತೆಗೆ, ಕರ್ನಾಟಕದ ಋಣ ಅಲ್ಪಮಟ್ಟಿಗಾದರೂ ತೀರಿಸುವ ಕಾಳಜಿ ಹೊಂದಿಯಾರು… ಹೊಂದಲಿ… ಅಷ್ಟರಮಟ್ಟಿಗೆ ಪರಿವರ್ತನೆಯಾಗಲಿ!
ಕುಮಾರಸ್ವಾಮಿ ಬಿಜೆಪಿ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು, ಎರಡು ಸ್ಥಾನದಲ್ಲಿ ವಿಜೇತರಾಗಿ, ಮೋದಿ ಕ್ಯಾಬಿನೆಟ್‌ನಲ್ಲಿ ಕೈಗಾರಿಕೆ ಮತ್ತು ಉಕ್ಕು ಖಾತೆ ಪಡೆದಿದ್ದಾರೆ. ಎರಡು ಸಾರೆ ಮುಖ್ಯಮಂತ್ರಿಯಾಗಿ ಅನುಭವ ಇರುವ ಕುಮಾರಸ್ವಾಮಿ ಕೈಗಾರಿಕೆ ಮತ್ತು ಉಕ್ಕಿನಂತಹ ಪ್ರಬಲ ಖಾತೆಯಿಂದ ಈ ರಾಜ್ಯದ ಉದ್ಯಮ ಕ್ಷೇತ್ರ ಸಾಕಷ್ಟು ನಿರೀಕ್ಷೆಯಲ್ಲಿದೆ. ರಾಜ್ಯದ ಕೈಗಾರಿಕೋದ್ಯಮ ಬೆಳವಣಿಗೆ, ಇತರ ರಾಜ್ಯಗಳ ಚಿತ್ರಣ ನೋಡಿದರೆ ಸಾಕಷ್ಟು ಹಿಂದುಳಿದದ್ದೇ. ಹಾಗಂತ ಪ್ರಯತ್ನ ನಡೆದಿಲ್ಲ ಎನ್ನುವಂತಿಲ್ಲ.
ಕೈಗಾರಿಕಾ ಉದ್ಯಮಿಗಳ ಪ್ರಬಲ ಲಾಬಿ ಇಡೀ ದೇಶದ ರಾಜಕೀಯ ಮತ್ತು ಆರ್ಥಿಕ ವಲಯವನ್ನು ಹಿಡಿದಿಟ್ಟುಕೊಂಡಿದೆ. ಕರ್ನಾಟಕದ ಕೈಗಾರಿಕಾ ಕ್ಷೇತ್ರದ ದಿಕ್ಕು ದೆಸೆ, ಪ್ರಗತಿಗೆ ಉದ್ಯಮ ಸಚಿವರಾಗಿ ಹೊಸತನ ನೀಡುವ ಸಾಕಷ್ಟು ಅವಕಾಶ ಕುಮಾರಸ್ವಾಮಿಯವರಿಗಿದೆ. ಕರ್ನಾಟಕಕ್ಕೆ ಬರುವ ಉದ್ಯಮಗಳೆಲ್ಲ ಗುಜರಾತು, ಆಂಧ್ರ, ತಮಿಳುನಾಡಿನತ್ತ ವಲಸೆ ಹೋಗುತ್ತಿವೆ ಎಂಬ ದೂರು ದಶಕದಿಂದ ಇದೆ. ಸಮರ್ಥ ಲಾಬಿ ನಡೆಸದಿರುವುದು ಹಾಗೂ ರಾಜ್ಯ ಮತ್ತು ಕೇಂದ್ರಗಳ ನಡುವಿನ ಸಮನ್ವಯದ ಕೊರತೆಯೂ ಇದಕ್ಕೆ ಕಾರಣ.
ಇಷ್ಟಾಗಿಯೂ ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ರಾಜ್ಯದ ಮೇಲಿರುವ ಕಾಳಜಿ ಕಳಕಳಿ ಜೊತೆಗೆ, ರಾಜಕೀಯೇತರವಾಗಿ ಕಾರ್ಯನಿರ್ವಹಿಸಿದರೆ ಬಹುಶಃ ಅವರ ವ್ಯಕ್ತಿತ್ವ, ರಾಜಕೀಯ ಬೆಳವಣಿಗೆ, ಜೊತೆಗೆ ರಾಜ್ಯದ ಔದ್ಯಮಿಕ ರಂಗಕ್ಕೆ ಲಾಭವೇ ಸರಿ. ಉಕ್ಕು ಖಾತೆಯನ್ನು ಹೊಂದಿರುವ ಕುಮಾರಸ್ವಾಮಿ ಪ್ರಥಮ ದಿನವೇ ಸಂಡೂರಿನ ದೇವದಾರಿಯಲ್ಲಿ ಗಣಿಗೆ ಪರವಾನಗಿ ನೀಡಿದ್ದಾರೆ. ಅವರ ಉತ್ಸುಕತೆ ಮೆಚ್ಚತಕ್ಕದ್ದೇ. ಅದೇ ರೀತಿ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ, ಭದ್ರಾವತಿ ಎಂಪಿಎಂ, ಸಾರ್ವಜನಿಕ ಉದ್ಯಮಗಳ ಸಂರಕ್ಷಣೆ ಇವುಗಳಿಗೆಲ್ಲ ಕುಮಾರಸ್ವಾಮಿ ಅವರಿಂದ ನ್ಯಾಯ ಅಪೇಕ್ಷಣೀಯವೇ.
ಹತ್ತು ಹಲವು ಸಮಸ್ಯೆಗಳಿಂದ ಕೇಂದ್ರದತ್ತ ನೋಡುತ್ತಿರುವ ಔದ್ಯಮಿಕ ರಂಗಕ್ಕೆ ಕುಮಾರಸ್ವಾಮಿ ಅವರಿಂದ ಚಿಕಿತ್ಸೆ ಅಪೇಕ್ಷಿಸುವುದು ತಪ್ಪೇನಿಲ್ಲ. ಈಗಾಗಲೇ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕದ ಮಾತು ಸ್ವಲ್ಪ ಮುನ್ನೆಲೆಗೆ ಬಂದಿದೆ. ಕರ್ನಾಟಕದಲ್ಲಿ ಆರಂಭಿಸಬಹುದಾದ ಉದ್ಯಮವನ್ನು ಗುಜರಾತಿನತ್ತ ಅಥವಾ ಎನ್‌ಡಿಎ ಪಾಲುದಾರ ಆಗಿರುವ ಆಂಧ್ರದ ಬಾಬು'ರತ್ತ ಹೊರಳಾಡಿಸುವ ಮಾತು ಈಗಾಗಲೇ ಕೇಳಿ ಬರುತ್ತಿದೆ. ಇದೇ ವೇಳೆ ನಾನು ದೇಶಕ್ಕೆ ಉದ್ಯಮ ಸಚಿವ. ಹಾಗಾಗಿ ಎಲ್ಲ ಸಾಧ್ಯಾಸಾಧ್ಯತೆಗಳನ್ನು, ಎಲ್ಲ ರಾಜ್ಯಗಳನ್ನೂ ಸಮಗ್ರವಾಗಿ ನೋಡಬೇಕಾಗುತ್ತದೆ ಎನ್ನುವ ಕುಮಾರಸ್ವಾಮಿ ಅವರ ಇಂಗಿತ ಕೂಡ ವ್ಯಕ್ತವಾಗಿದೆ. ಹಾಗಿದ್ದೂ ಸ್ವಲ್ಪ ನೆಲದ ಕಾಳಜಿ, ಋಣ, ಪ್ರೀತಿಗೆ ಕುಮಾರಸ್ವಾಮಿ ಅವರಲ್ಲಿ ಕಡಿಮೆಯೇನಿಲ್ಲ ಎಂಬ ಅಪೇಕ್ಷೆ-ಆಶಾಭಾವನೆ ನಾಡಿನದ್ದು. ಗಣಿ ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಪ್ರಲ್ಹಾದ ಜೋಶಿ ಐದು ವರ್ಷ ಸಮರ್ಥವಾಗಿ ನಿಭಾಯಿಸಿದವರು. ಒಂದರ್ಥದಲ್ಲಿ ಕರ್ನಾಟಕವನ್ನು ದೆಹಲಿಯಲ್ಲಿ ಸಮರ್ಥವಾಗಿ ಪ್ರತಿನಿಧಿಸಿದವರು. ಕರ್ನಾಟಕದ ಸಮಸ್ಯೆಗಳಿಗೆ ದೆಹಲಿ ಪರಿಹಾರ ಹುಡುಕಲು ಅಥವಾ ನೆರವಾಗಲು ಕೊಂಡಿಯಾಗಿದ್ದವರು. ಈಗ ಆಹಾರ ಮತ್ತು ನಾಗರಿಕ ಪೂರೈಕೆ, ಜೊತೆಗೆ ಪರ್ಯಾಯ ಇಂಧನದ ಖಾತೆಗಳನ್ನು ಹೊಂದಿದವರು. ಜೋಶಿ ಪ್ರಧಾನಿ ಮೋದಿಯವರ ಕಣ್ಣಳತೆಯಲ್ಲಿ ಕೆಲಸ ಮಾಡುವ ಸಚಿವ. ಹೆಸರು ಕೆಡಿಸಿಕೊಂಡವರಲ್ಲ. ಸ್ವಲ್ಪ ಪಕ್ಷ ರಾಜಕಾರಣದಲ್ಲಿ ಹೆಚ್ಚು ತೊಡಗಿಸಿಕೊಂಡವರು. ಈ ವೇಳೆ ಜೋಶಿ ರಾಜ್ಯದ ಹಿತಾಸಕ್ತಿಗೆ ಇನ್ನಷ್ಟು ತೆರೆದ ಮನಸ್ಸಿನಿಂದ ಹಾಗೂ ರಾಜಕಾರಣ ಹೊರತಾಗಿ ಕಾರ್ಯನಿರ್ವಹಿಸುವ ಆಶಯ ಅಪೇಕ್ಷಣೀಯ. ರಾಜ್ಯ ಸಚಿವರಾದರೂ ಕೂಡ ವಿ.ಸೋಮಣ್ಣ ಅವರಿಗೆ ದೊರೆತ ಖಾತೆ ಉತ್ತಮವಾದುದೇ. ಜಲಶಕ್ತಿ ಖಾತೆಯನ್ನು ಸೋಮಣ್ಣವರಿಗೆ ನೀಡಿದಾಗ ನೆರೆಯ ತಮಿಳುನಾಡು ಅಸಮಾಧಾನ ವ್ಯಕ್ತಪಡಿಸಿತ್ತು. ಸೋಮಣ್ಣ ಅವರ ಹಿತಾಸಕ್ತಿ ಬದ್ಧತೆ, ಕಾರ್ಯವೈಖರಿಯನ್ನು ಪ್ರಶ್ನಿಸುವ ಹಾಗಿಲ್ಲ. ಕಾವೇರಿ, ಮಹದಾಯಿ, ತುಂಗಭದ್ರಾ, ಎತ್ತಿನಹೊಳೆ ಇತ್ಯಾದಿ ಜಲ ವಿವಾದ ಮತ್ತು ಸಮಸ್ಯೆಗಳಿಗೆ ಸೋಮಣ್ಣರಿಂದ ಪರಿಹಾರವನ್ನು ಜನ ಅಪೇಕ್ಷಿಸಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ರೈಲು ಯೋಜನೆಗಳ ಪ್ರಗತಿ, ಅನುಷ್ಠಾನಕ್ಕೆ ಇದೇ ಖಾತೆ ನಿರ್ವಹಿಸಿದ ಸುರೇಶ ಅಂಗಡಿ ಸೋಮಣ್ಣರಿಗೆ ಮಾದರಿಯಾಗಬೇಕು. ಸೋಮಣ್ಣ ಸಮರ್ಥವಾಗಿ ನಿಭಾಯಿಸಿಯಾರು. ಆದರೆ ಸಂಪುಟ ದರ್ಜೆ ಸಚಿವರು ನೀಡುವ ಸಹಕಾರ, ಸ್ವಾತಂತ್ರö್ಯದ ಮೇಲೆ ಇದು ಅವಲಂಬಿತವಾಗಿದೆ. ಕೇಂದ್ರದ ದೊಡ್ಡ ಸಮಸ್ಯೆ ಮತ್ತು ಆರೋಪ ಏನೆಂದರೆ ಸಂಪುಟ ದರ್ಜೆ ಸಚಿವರು, ರಾಜ್ಯ ಮತ್ತು ಸಹಾಯಕ ಸಚಿವರಿಂದ ಅಂತರದ ಜೊತೆಗೆ ತಾತ್ಸಾರದ ಮನೋಭಾವ ಹೊಂದಿದರೇ ಹೆಚ್ಚು. ಒಂದೇ ಒಂದು ಕಡತ ಅಥವಾ ಇಲಾಖೆಗೆ ಸಂಬಂಧಿಸಿದ ಸಭೆಗೂ ರಾಜ್ಯ ಸಚಿವರನ್ನು ಆಹ್ವಾನಿಸದ ಕೊಬ್ಬು ಕ್ಯಾಬಿನೆಟ್ ಸಚಿವರಲ್ಲಿ ಇರುವ ಉದಾಹರಣೆ ಸಾಕಷ್ಟಿದೆ. ಈ ಸಂಬಂಧ ಹಿಂದಿನ ಬಹುತೇಕ ಪ್ರಧಾನ ಮಂತ್ರಿಗಳಿಗೆ ದೂರಿದ್ದರೂ ನ್ಯಾಯ ಕಂಡಿಲ್ಲ. ಈ ಸ್ಥಿತಿ ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಬರಬಾರದು ಅಷ್ಟೇ. ಶೋಭಾ ಕಳೆದ ಐದು ವರ್ಷಗಳಿಂದ ರಾಜ್ಯ ಸಚಿವರಾಗಿದ್ದವರು. ಅವರ ಕಾರ್ಯನಿರ್ವಹಣೆ ಪಕ್ಷಕ್ಕೆ ಲಾಭವಾಗಿತ್ತೇನೋ. ವಿನಾ, ಅವರಿಂದ ರಾಜ್ಯಕ್ಕಾಗಲೀ, ಇಲಾಖೆಗಳಾಗಲೀ ಮಹತ್ವದ ಕಾರ್ಯ ನೋಟ ಕಂಡಿಲ್ಲ. ಈ ಸಾರೆ ಹಾಗಾಗದಿರಲಿ. ಶೋಭಾಗೆ ಭಾಷೆ, ಆಡಳಿತದ ತೊಡಕಾಗಿರಬೇಕು. ಸಂಘಟನೆ ಅವರಿಂದ ಹೆಚ್ಚು ಸಾಧ್ಯ. ಐವರು ಸಚಿವರೂ ಸಂಘಟಿತವಾಗಿ, ಸಮರ್ಥವಾಗಿ ಹೊಂದಿಕೊಂಡು ರಾಜ್ಯಕ್ಕೊಂದು ಸಮರ್ಥ ಕೇಂದ್ರದ ಪ್ರಾತಿನಿಧಿತ್ವವನ್ನು ಕೊಡುವ ಕಾರ್ಯ ಆಗಬೇಕಾಗಿದೆ. ಹಿಂದಿನ ವೈಷಮ್ಯಗಳನ್ನೂ ಮರೆಯಬೇಕು.ಪೇಶ್ವೆ-ಗೋಡ್ಸೆ ವಂಶಸ್ಥ'ರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸುವ ಹುನ್ನಾರವಿದೆ ಎಂದು ಜೋಶಿ ಬಗ್ಗೆ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದರು. ಈಗ ಕುಮಾರಸ್ವಾಮಿ ಮತ್ತು ಜೋಶಿ ಮೋದಿ ಸಂಪುಟದ ಸಚಿವರಾಗಿದ್ದಾರೆ. ಇಬ್ಬರ ನಡುವೆಯೂ ಸುಮಧುರ ಬಾಂಧವ್ಯ ಬೆಳೆಯಬೇಕಿದೆ. ಹಾಗೇ ಸೋಮಣ್ಣ, ಕುಮಾರಸ್ವಾಮಿ, ಶೋಭಾ ಇವರೆಲ್ಲ ಪರಸ್ಪರ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿ ಕಿಚಾಯಿಸಿಕೊಂಡವರೇ. ಮೊದಲು ಅವೆಲ್ಲ ಈಗ ಶಮನವಾಗಬೇಕಿದೆ.
ಈ ಎಲ್ಲ ಹಿನ್ನೆಲೆಯಲ್ಲಿಯೇ ಅನಂತಕುಮಾರ ನೆನಪಾದದ್ದು. ಅನಂತಕುಮಾರ ಯುಪಿಎ ಸರ್ಕಾರವಿರಲೀ, ಎನ್‌ಡಿಎ ಸರ್ಕಾರವಿರಲೀ ಎಲ್ಲ ವೇಳೆಯಲ್ಲೂ ಅತ್ಯಂತ ಸೌಹಾರ್ದ ಸಂಪರ್ಕ ಸೇತುವೆಯಾಗಿ ರಾಜ್ಯದ ಹಿತ ಕಾಪಾಡಿದವರು. ರಾಜಕೀಯೇತರವಾಗಿ ಮುತ್ಸದ್ದಿತನ ಮೆರೆದವರು. ಹಾಗಾಗಿಯೇ ಕೆಲ ತಿಂಗಳ ಹಿಂದೆ `ಅನಂತಕುಮಾರ ಇದ್ದಿದ್ದರೆ ಕಾವೇರಿ ವಿವಾದ, ರಾಜ್ಯದ ಹತ್ತು ಹಲವು ಯೋಜನೆಗಳು, ಅಂತಾರಾಜ್ಯ ಜಲ-ಗಡಿ ವಿವಾದ, ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಮಟ್ಟಿಗೆ ಪರಿಹಾರ ಕಾಣುತ್ತಿದ್ದವು' ಎಂದು ಹಲವು ವೇದಿಕೆಗಳಲ್ಲಿ ಮುತ್ಸದ್ದಿಗಳು ನೆನಪಿಸಿದ್ದುಂಟು.
ಅದಕ್ಕಾಗಿಯೇ ಪ್ರಸ್ತುತ ಅನಂತಕುಮಾರ ಪಾತ್ರವನ್ನು ನಿಭಾಯಿಸುವರು ರಾಜ್ಯಕ್ಕೆ ಬೇಕಾಗಿದ್ದಾರೆ. ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿಯವರ ಬಗ್ಗೆ ಜನ ಆ ದೃಷ್ಟಿಕೋನವನ್ನು ಹೊಂದಿದ್ದಾರೆ. ಆ ಮಟ್ಟಕ್ಕೆ ಇವರುಗಳ ಮನಸ್ಸು, ಹೃದಯ ವೈಶಾಲ್ಯಗಳು ಜನಕ್ಕೆ ಅಪೇಕ್ಷಣೀಯ.

Next Article