ಒಂದು ದೋಸ್ತಿಯ ಕಥೆ
ಮೇಲಿನ ವಿಷಯ ಕುರಿತು ನೂರು ಪದಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ಮತ್ತು ಇಲ್ಲಿ ಎರಡೂ ಕಡೆ ದೋಸ್ತಿಯೇ ಮುಖ್ಯವಾದ್ದರಿಂದ ದೀಡಪಂಡಿತರೊಡನೆ ಚರ್ಚಿಸಿ ನಿಮಗೆ ಈ ವಿಷಯ ಕೊಡಲಾಗಿದೆ. ಇನ್ಯಾಕೆ ತಡ ಬರೆಯಲು ಶುರುಮಾಡಿ ಎಂಬ ಪ್ರಶ್ನೆಗೆ ತಿಗಡೇಸಿ ಬರೆದ ಪ್ರಬಂಧ ಈ ಕೆಳಗಿನಂತೆ ಇದೆ…
ಪುರಾಣ ಪುಣ್ಯಕಥೆಗಳಿಂದಲೂ ದೋಸ್ತಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಪುರಾಣಗಳ ನಂತರ ದೋಸ್ತಿ ಬಿಟ್ಟು ನಮ್ಮದೇ ಶಕ್ತಿ-ನಮ್ಮದೇ ಯುಕ್ತಿ ಎಂದು ಅಂದುಕೊಂಡರು. ಸ್ವಲ್ಪ ದಿನಗಳ ಕಾಲ ದೋಸ್ತಿ ಇಲ್ಲದೇ ಕಾಲ ಕಳೆದರು. ಇತ್ತೀಚಿಗೆ ಶಕ್ತಿ ಮತ್ತು ಯುಕ್ತಿಗೆ ಹೊಡೆತ ಬಿದ್ದಾಗ… ರ್ರೋ…ರ್ರೋ… ಎಲ್ಲೆನ ಇರಲಿ ರ್ರೋ ಎಂದು ಹಾಡಿ ಮತ್ತೆ ದೋಸ್ತಿ ಮಾಡಿಕೊಂಡರು. ಎರಡೂ ಗುಂಪಿನವರು ಕುಣಿಕುಣಿದಾಡಿದರು. ಹೇ ದೋಸತಿ ಎಂದು ಹಾಡು ಹಾಡಿದರು. ದೋಸ್ತಿ ಮಾಡಿಕೊಂಡಿದ್ದಕ್ಕಾಗಿ ಒಂದು ದೋಸ್ತಿಗೆ ದೊಡ್ಡ ಕುರ್ಚಿಕೊಟ್ಟು ಕೆಂಪುಗೂಟದ ಕಾರು ಕೊಟ್ಟರು. ಹೇಗಿದ್ದರೂ ದೋಸ್ತಿ ಅಲ್ಲವೇ ಎಂದು ಕೂಡಿಕೆ ಮಾಡಿಕೊಂಡವರಿಗೆ ಏನ್ರೋ ಹೇಗಿದ್ದೀರಿ ಅನ್ನತೊಡಗಿದರು. ಏನಾದರೂ ಕೆಲಸ ಮಾಡಿಕೊಡು ಅಂದರೆ ನೋಡೋಣ… ಮಾಡೋಣ ಎಂದು ಮುನ್ನಡೆದರು. ಆಗ ಬಂತು ನಡೆದಾಟ… ಪಾದ ಊರಿ ನಡೆದಾಡೋಣ… ಯಾತ್ರೆ ಮಾಡೋಣ… ಪಾದಯಾತ್ರೆ ಮಾಡೋಣ… ಪಾದಯಾತ್ರೆಯಲ್ಲಿ ಕುಣಿದಾಡೋಣ… ನಲಿದಾಡೋಣ… ಬೈಯ್ದಾಡೋಣ… ದೋಸ್ತಿ ಮಂದಿ ಕೂಡಿ ಮಾಡೋಣ ಇದನ್ನು ಕೂಡಿ ಮಾಡೋಣ… ರ್ರಿ… ರ್ರಿ ಎಂದು ಕರೆದಾಗ.. ನೋ..ವೇ… ನಾನಾ…? ನಡೆದಾಡುವುದಾ? ಆಗ ನಿಮ್ಮ ದೋಸ್ತಿ ಗುಂಪಿನ ಆ ಬಾಲಕ ನನಗೆ ಏನೇನೋ ಅಂದ… ಅಂಥವರು ನಿಮ್ಮ ಜತೆ ನಡೆದಾಡುತ್ತಾನೆ ಅಂದರೆ ಹೇಗೆ…? ಒಲ್ಲೇ… ನಾನೊಲ್ಲೇ… ಎಂದು ಅಂದ. ಇವರ ದೋಸ್ತಿ ನಮಗೆ ಗೊತ್ತಿಲ್ಲವೇ? ದೋಸ್ತಿ ಅಂತೆ ದೋಸ್ತಿ ಎಂದು ಅನ್ನುತ್ತಿದ್ದಾರೆ. ದೋಸ್ತಿ ಅಂದರೇನೇ ಹೀಗೆ ಎಂದು ಬರೆದಿದ್ದ.