ಒಂದೂ ಸುಳ್ಳಾಗಿಲ್ಲ ಶಿಷ್ಯಾ….
ಭವಿಷ್ಯವಾಣಿಯನ್ನು ಮಾರ್ಮಿ ಕವಾಗಿ ನುಡಿಯುವ ಶ್ರೀ..ಶ್ರೀ..ಶ್ರೀ ಕರಿಲಕ್ಷಂಪತಿ ಸ್ವಾಮಿಗಳು ಮೊನ್ನೆ ಒಂದು ಭಯಂಕರ ಭವಿಷ್ಯ ನುಡಿದಿದ್ದಾರೆ. ತಾನು ಹಿಂದೆ ಹೇಳಿರುವ ಭವಿಷ್ಯ ಎಷ್ಟು ಕರೆಕ್ಟಾಗಿ ಇವೆ ಎನ್ನುವುದನ್ನು ಸಮರ್ಥಿಸಿಕೊಂಡಿದ್ದಾರೆ. ತಲೆತಿರುಕ ತಿಗಡೇಸಿಗೆ ಎಲ್ಲ ವಿಷಯ ಗೊತ್ತಿದ್ದರೂ ಸ್ವಾಮೀಜಿಗಳನ್ನು ಭೇಟಿಯಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದ. ಇದೇ ಕೇಸಿಗೆ ಸಂಬಂಧಿಸಿದಂತೆ…ಮಹಾನ್ ಸ್ವಾಮಿಗಳೇ ನೀವು ಹಿಂದೆ ಹೇಳಿದ ಭವಿಷ್ಯ ಎಷ್ಟು ಕರೆಕ್ಟಾಗಿದೆ ಎಂದು ಹೇಳಿದಿರಿ ಅದ್ಯಾವುದು ಅಂತ ಹೇಳುತ್ತೀರಾ ಅಂದಾಗ…ಅಯ್ಯೋ ತಮ್ಮಾ…ಈಗ್ಗೆ ಎರಡು ವರ್ಷಗಳ ಹಿಂದೆ ಪಾಡ್ಯದ ದಿನ ಮಟಮಟ ಮಧ್ಯಾಹ್ನ ನಾನು ಏನು ಹೇಳಿದ್ದೆನೆಂದರೆ…ಬೇಡ…ಬೇಡ…ಪುಟ್ಯಾನ ತಡವಿಕೊಂಡರೆ..ಲೊಟ್ಯಾ ಅಂದಿದ್ದೆ…ನನ್ನ ಮಾತು ಕೇಳದೇ ಆ ಉಕ್ರೇನ್ ಹುಡುಗ ತಡವಿಕೊಂಡ ಈಗೇನಾತು…? ಇನ್ನೂ ಒಂದು ನಿನಗೆ ನೆನಪಿಸುತ್ತೇನೆ. ಅವತ್ತು ಅಮೆರಿಕದ ಬುಡ್ಯಾ ಬಂದು…ಅಡ್ಡಬಿದ್ದೆ ಸ್ವಾಮೀ….ಎಂದು ಒದರಿ ಅಲ್ಲಿಂದ ಶಿ.ಸಾ. ನಮಸ್ಕಾರ ಮಾಡಿದ. ಹಂಗ್ಯಾಕೆ ಮಾಡುತ್ತಿ ಹುಚ್ಚಕೋಡಿ ನೀನು…ಇನ್ನು ಮುಂದೆ ನೀನು ಹಂಗೆ…ಸಿಕ್ಕಿದ್ದನ್ನು ಕೊಡುತ್ತೀಯ ಅಂದಿದ್ದೆ. ಈಗ ಅಲ್ಲಿ ಏನಾಗಿದೆ ಗೊತ್ತಲ್ಲ? ತನಗೆ ಸಿಕ್ಕ ಟಿಕೆಟನ್ನು ಕಮಲಮ್ಮನ ಉಡಿಯಲ್ಲಿ ಹಾಕಿ…ಹೋಗಿ ಬಾ ಅಕ್ಕಾ ಎಂದು ಕಳುಹಿಸಿದ. ಅಲ್ಲದೇ ಆ ಹುಡುಗ ಸದಾ ಕೆಮ್ಮುತ್ತಾನಲ್ಲ ಕೆಮ್ಮಿನ ಕೇಜ್ರಿವಾಲ…ಏನೋ ಹೇಳಲು ಬಂದ…ಕೆಮ್ಮಿ ಕೆಮ್ಮಿ ಹೇಳುವಷ್ಟರಲ್ಲಿ ಅದೇನು ಮರೆತನೋ ಏನೋ….ನನಗೆ ಏನು ಹೇಳಬೇಕು ಅನ್ನುವುದನ್ನು ಮರೆತು ಇನ್ನೇನನ್ನೋ ಹೇಳಿದ. ಅಲ್ಲವೋ ಕ್ರೇಜಿ…ನೀ ಒಳಗೆ ಇರುವುದು ಪಾಜಿ ಅಂದಿದ್ದೆ. ಆತ ಜೈಲಿನ ಒಳಗೆ ಇರಲಿಲ್ಲವೇ? ಅಲ್ಲಿ ಆಂಧ್ರದಲ್ಲಿ ಆ ತೆಳ್ಳನೆಯ ಹುಡುಗ ಅವತ್ತು ಬಂದಿದ್ದ. ನನ್ನ ನೋಡಿಯೂ ನೋಡದ ಹಾಗೆ ಇದ್ದ. ನಾನು ಆತನನ್ನು ಕರೆದು…ಮೂಲೆ ತೋರಿಸಿ ಅದೇನು ಅಂದಿದ್ದೆ. ಮೂಲೆ ಅಂದ. ಅಷ್ಟೇ ಸಾಕು ಈಗ ಆತನನ್ನು ಮೂಲೆಯಲ್ಲಿ ಕೂಡಿಸಿಲ್ಲವೇ? ಅದೆಲ್ಲ ಹೋಗಲಿ..ಈ ಮದ್ರಾಮಣ್ಣನಿಗೆ…ನೋಡು ಮದ್ರಾಮಣ್ಣಾ….ನೀನು ಮಾತು ಮಾತಿಗೂ ಡಾ..ಡಾ..ಅನ್ನಬೇಡ ಅಂದಿದ್ದೆ. ನನ್ನ ಮಾತು ಕೇಳದೇ ಆತ ಡಾ…ಡಾ…ಅಂದುಕೊಂಡು ಅಡ್ಡಾಡಿದ. ಈಗ ನೋಡು…ಮೂಡಾ ಆತನ ಬೆನ್ನು ಬಿಡಲಿಲ್ಲ. ಹೀಗೆ ನಾ ಹೇಳಿದ ಭವಿಷ್ಯ ಒಂದು ಸುಳ್ಳಾಗಿಲ್ಲ ಶಿಷ್ಯಾ…ಒಂದೂ ಸುಳ್ಳಾಗಿಲ್ಲ ಎಂದು ಹೇಳಿ ಆತನ ಕಡೆ ನೋಡಿದಾಗ…ತಲೆತಿರುಕ ತಿಗಡೇಸಿ ಅದಾಗಲೇ ಮೂರ್ಛೆ ಹೋಗಿ ಬಹಳ ಹೊತ್ತಾಗಿತ್ತು.