For the best experience, open
https://m.samyuktakarnataka.in
on your mobile browser.

ಒಳಮೀಸಲಾತಿ ರಾಜ್ಯದ ಹಕ್ಕು: ಸುಪ್ರೀಂ

10:48 PM Aug 01, 2024 IST | Samyukta Karnataka
ಒಳಮೀಸಲಾತಿ ರಾಜ್ಯದ ಹಕ್ಕು  ಸುಪ್ರೀಂ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಪೂರ್ಣ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಸಿಜೆ ಸೇರಿದಂತೆ ೭ ನ್ಯಾಯಮೂರ್ತಿಗಳ ವಿಶೇಷ ಪೀಠ ಈ ಕುರಿತು ತೀರ್ಪಿತ್ತಿದ್ದು, ಒಬ್ಬರು ನ್ಯಾಯಮೂರ್ತಿ ಮಾತ್ರ ಇದಕ್ಕೆ ಒಪ್ಪಿಲ್ಲ. ನ್ಯಾಯಮೂರ್ತಿ ಬಿಆರ್ ಗವಾಯ್ ಸೇರಿದಂತೆ ಕೆಲವರು `ಕೆನೆಪದರ' ತೆಗೆಯಬೇಕೆಂದು ಹೇಳಿದ್ದಾರೆ.
೨೦೦೪ರಲ್ಲಿ ಆಂಧ್ರದ ಇ.ವಿ.ಚೆನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ೫ ನ್ಯಾಯಮೂರ್ತಿಗಳ ಪೀಠ ರಚಿಸಿತ್ತು. ಆಗ ಪರಿಶಿಷ್ಟರಲ್ಲಿ ಒಳಮೀಸಲಾತಿ ಕಲ್ಪಿಸುವುದು ಸರಿಯಲ್ಲ ಎಂದು ತೀರ್ಪು ನೀಡಲಾ ಗಿತ್ತು. ಆದರೆ ಈಗಿನ ನ್ಯಾಯಪೀಠ ಅದನ್ನು ಒಪ್ಪಿಲ್ಲ. ಪರಿಶಿಷ್ಟ ಜಾತಿ ಒಂದು ಏಕರೂಪ ವರ್ಗವಲ್ಲ. ಅದರಲ್ಲಿ ಹಲವು ಒಳಜಾತಿಗಳಿವೆ. ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಪ್ರಕಟಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಅದರಲ್ಲಿ ಒಳಮೀಸಲಾತಿಯನ್ನು ಹುಡುಕುವ ಅಧಿಕಾರ ರಾಜ್ಯಗಳಿಗೆ ಇದೆ. ಆದರೆ ಯಾವ ಜಾತಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಸಾಕಷ್ಟು ಅಂಕಿ-ಅಂಶ ಮತ್ತು ದಾಖಲೆಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಬೇಕು. ರಾಜಕೀಯ ಕಾರಣಗಳಿಗಾಗಿ ಮನಬಂದಂತೆ ಒಳಮೀಸಲಾತಿ ಕಲ್ಪಿಸಲು ಬರುವುದಿಲ್ಲ. ಯಾವುದೇ ಅರ್ಹ ಜಾತಿಗೆ ಇದರಿಂದ ಅನ್ಯಾಯವಾಗಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಒಳಮೀಸಲಾತಿ ನೀಡುವಾಗ ಕೆನೆಪದರ ತೆಗೆಯ ಬೇಕು ಎಂದು ನ್ಯಾಯಮೂರ್ತಿಗಳಾದ ಗವಾಯ್, ವಿಕ್ರಂನಾಥ್, ಪಂಕಜ್ ಮಿಥಲ್, ರಮೇಶಚಂದ್ರ ಶರ್ಮ ಏಕಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬಿಸಿ ಯಲ್ಲಿ ಕೆನೆಪದರ ತೆಗೆಯಲು ಅನುಸರಿಸುವ ಮಾನ ದಂಡವನ್ನು ಇಲ್ಲಿ ಅನುಸರಿಸಲು ಬರುವುದಿಲ್ಲ. ಇದಕ್ಕೆ ಬೇರೆ ಮಾನದಂಡಗಳನ್ನು ರಚಿಸಬೇಕೆಂದು ನ್ಯಾಯಮೂರ್ತಿ ವಿಕ್ರಂನಾಥ್ ಹೇಳಿದರು. ಮೊದಲ ಪೀಳಿಗೆಗೆ ಮಾತ್ರ ಮೀಸಲಾತಿ ನೀಡಬೇಕೆಂದು ನ್ಯಾಯಮೂರ್ತಿ ಪಂಕಜ್ ಮಿಥಲ್ ಸಲಹೆ ಮಾಡಿ ದ್ದಾರೆ. ಪಂಜಾಬ್ ಮತ್ತು ತಮಿಳುನಾಡು ಸರ್ಕಾರಗಳು ತಂದಿರುವ ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ. ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮಾತ್ರ ಒಳಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕನು ಅಗರವಾಲ್ ಹಾಜರಿದ್ದರು.