ಒಳ್ಳೆಯವರಿಗೆ ಕಾಲವಿಲ್ಲ…
ಒಳ್ಳೆಯವರಿಗೆ ಕಾಲ ಇಲ್ಲ. ಇದ್ದ ಕಾಲ ಕೆಟ್ಟೋಗಿದೆ ಎಂದು ಅನೇಕ ಸಲ ಕುಂಟ್ ಸತ್ಯಪ್ಪ ಮಾರ್ಮಿಕವಾಗಿ ಹೇಳುತ್ತಲೇ ಇದ್ದ. ಅವತ್ತು ಪಂಚಾಯ್ತಿ ಮೆಂಬರ್ ಅಲೈಕನಕನ ಮುಂದೆ ಒಳ್ಳೆ ಯವರಿಗೆ ಕಾಲವಿಲ್ಲ ಅಂದ. ಒಂದೇ ಓಟಿನಿಂದ ಗೆದ್ದಿದ್ದ, ಗೆಲ್ಲುವುದಕ್ಕೆ ಮಾಡಿದ್ದ ತಂತ್ರ ಕುತಂತ್ರಗಳು ಎಲ್ಲಕಡೆ ಜಗಜ್ಜಾಹೀರವಾಗಿತ್ತು. ಇವನು ನನ್ನನ್ನು ಉದ್ದೇಶಿಸಿ ಹೇಳುತ್ತಾನೆ ಎಂದು ಅಂದುಕೊಂಡ ಕನಕ ನೀನು ಹುಷಾರಾಗಿರು ಎಂದು ಗದರಿದ ರೀತಿಯಲ್ಲಿಯೇ ಹೇಳಿದ. ಅದಕ್ಕೆ ಸತ್ಯಪ್ಪ ಯಾಕೋ ಕಾಲ ಅಂದ ಕೂಡಲೇ ಇವನ ಜತೆ ಏನು ಎಂದು ಅಲ್ಲಿಂದ ಹೋಗಿದ್ದ ಕನಕ. ಬಜಾರಿನಲ್ಲಿ ಭರ್ಜರಿ ಬಡಿದಾಡಿಕೊಂಡಿದ್ದ ತಿಗಡೇಸಿ-ತಿರುಕೇಸಿ ಇಬ್ಬರಿಗೂ ಪ್ರತ್ಯೇಕವಾಗಿ ಒಳ್ಳೆಯರಿಗೆ ಕಾಲವಿಲ್ಲ ಅಂದ. ಅವರಿಗೆ ಹಾಗೆ ಅಂದಿರಬಹುದು ಎಂದು ಅವರಿಬ್ಬರೂ ತಿಳಿದುಕೊಂಡು ಸುಮ್ಮನಾಗಿದ್ದರು. ಸತ್ಯಪ್ಪ ಹೀಗೇಕೆ ಆಡುತ್ತಿದ್ದಾನೆ ಎಂದು ಅನೇಕರು ವಿಚಾರ ಮಾಡಿ ತಲೆ ಕಡೆಸಿಕೊಂಡಿದ್ದರು. ಕರಿಭೀಮಣ್ಣನಂತೂ ಈತನನ್ನು ಒಳ್ಳೆ ಸೈಕಾಟ್ರಿಸ್ಟ್ ಹತ್ತಿರ ಕರೆದುಕೊಂಡು ಹೋಗಿ ತೋರಿಸಬೇಕು ಎಂದು ಹೇಳುತ್ತಿದ್ದ. ಈ ಮಧ್ಯೆ ಡಿಂಗರಬಿಲ್ಲಿಯು ಕುಂಟ್ನಾಗನನ್ನು ಸಂಧಿಸಿ ನಿನಗೆ ಕಾಲಿಲ್ಲ ಕಾಲಿಲ್ಲ ಅಂತಿದಾನೆ ನೋಡು ಸತ್ಯಪ್ಪನನ್ನು ವಿಚಾರಿಸಿಕೋ ಎಂದು ಚಾಡಿ ಹೇಳಿತ್ತು. ಮರುದಿನ ಬೇಕು ಅಂತಲೇ ಕುಂಟ್ನಾಗ ಸತ್ಯಪ್ಪನ ಅಂಗಡಿಯ ಹತ್ತಿರ ಹೋದಾಗ…ಎಂದಿನಂತೆ ನಾಗಣ್ಣ ಒಳ್ಳೇರಿಗೆ ಕಾಲಿಲ್ಲ ನೋಡು ಅಂದ. ನೀನು ಯಾರಿಗೆ ಈ ಮಾತನ್ನು ಹೇಳುತ್ತಿಯ ಎಂದು ಗದರಿ ಅಲ್ಲಿಂದ ಎದ್ದು ಬಂದಿದ್ದ. ಸತ್ಯಪ್ಪ ಹೀಗೆ ಎಲ್ಲರ ಮುಂದೆ ಹೇಳುತ್ತಿದ್ದಂತೆ ಈತ ನಮ್ಮನ್ನು ಉದ್ದೇಶಿಸಿಯೇ ಹೇಳುತ್ತಿದ್ದಾನೆ ಎಂದು ಎಲ್ಲರೂ ತಿಳಿದುಕೊಳ್ಳುತ್ತಿದ್ದರು. ಪತ್ತೇದಾರಿ ಕಾದಂಬರಿ ಓದಿ ಓದಿ ತನ್ನಷ್ಟಕ್ಕೆ ತಾನು ದೊಡ್ಡ ಪತ್ತೇದಾರ ಎಂದು ತಿಳಿದಿದ್ದ ಪಾಲ್ತುಪಾಂಡು ಸತ್ಯಪ್ಪನ ಈ ಮಾತಿನ ಹಿಂದಿನ ಮರ್ಮ ಅರಿತುಕೊಂಡು ಜನರಿಗೆ ತಿಳಿಸಬೇಕು ಎಂದು ಪಣತೊಟ್ಟ. ಮರುದಿನ ಸತ್ಯಪ್ಪನನ್ನು ಭೇಟಿಯಾಗಿ ಒಳ್ಳೇರಿಗೆ ಕಾಲಿಲ್ಲ ಅಂದ. ಹೌದು ಎಂದು ಸತ್ಯಪ್ಪ ಅಂದ. ಆದರೆ ಅರ್ಧತಾಸಿಗೊಮ್ಮೆ ಸತ್ಯಪ್ಪನನ್ನು ಭೇಟಿಯಾಗಿ ಇದೇ ಮಾತು ಹೇಳಿದ. ಇದು ಎರಡು ಮೂರು ದಿನ ನಡೆಯಿತು. ಕೊನೆಗೆ ತಲೆಕೆಟ್ಟ ಸತ್ಯಪ್ಪ ನೀನು ಯಾಕೆ ಹೀಗೆ ಹೇಳುತ್ತಿ ಅಂದಾಗ ನೀನು ಹೇಳುತ್ತಿಯಲ್ಲ ಎಂದು ಪಾಂಡು ಹೇಳಿದ. ಆಗ ಸತ್ಯಪ್ಪ, ನೋಡೂ ನನ್ನ ಒಂದು ಕಾಲು ಇಲ್ಲ. ನಾನು ಒಳ್ಳೆಯವನು ಅದಕ್ಕೆ ಎಲ್ಲರೆದುರು ಒಳ್ಳೆಯವರಿಗೆ ಕಾಲಿಲ್ಲ ಅಂದರೆ ಯಾರೂ ಅದು ನೀನೇ ಅಂತ ಹೇಳಿ ನಿಟ್ಟುಸಿರು ಬಿಟ್ಟ.