ಒಳ್ಳೇದು ನಂದು-ಕೆಟ್ಟದ್ದು ಅವರದು…
ಏನಾದರೂ ಒಳ್ಳೆಯದು ಆದರೆ ನಾನೇ ಮಾಡಿದ್ದು… ಕೆಟ್ಟದ್ದು ಆದರೆ ಅವರೇ ಮಾಡಿದ್ದು ಎಂದು ಹೇಳುತ್ತಿದ್ದ ತಿಗಡೇಸಿಯ ಬಗ್ಗೆ ಜನರು ಭಯಂಕರ ಆಡಿಕೊಳ್ಳುತ್ತಿದ್ದರು. ಇವೇನಿವ ಒಳ್ಳೇದು ನಂದು ಕೆಟ್ಟದ್ದು ನಿಂದು ಅಂತ ಹೇಳುತ್ತಾನೆ ಏನಾಗಿದೆ ಇವನಿಗೆ ಎಂದು ಅನ್ನುತ್ತಿದ್ದರು. ಅವತ್ತು ಮದ್ರಾಮಣ್ಣೋರು ನಮ್ಮೂರಿನ ಕೆರೆಗೆ ನೀರು ತುಂಬಿಸುತ್ತಾರಂತೆ ಎಂದು ಅದ್ಯಾರೋ ಹೇಳಿದ್ದಕ್ಕೆ ಅವರೇನು ಮಾಡ್ತಾರೆ… ನಾನು ಅರ್ಜಿ ಕೊಟ್ಟಿದ್ದೆ ಈಗ ಸಕ್ಸಸ್ ಆಗಿದೆ ಅಷ್ಟೆ ಎಂದು ಅವರನ್ನೂ ಹೀಯಾಳಿಸುತ್ತಿದ್ದ. ಕಾಂಟ್ರ್ಯಾಕ್ಟ್ ಲೈಸನ್ಸ್ ಇದ್ದುದರಿಂದ ಅದು ಇದು ಎಂದು ಕಟ್ಟಡಗಳನ್ನು ಕಟ್ಟಿಸುತ್ತಿದ್ದ. ಸರ್ಕಾರದಿಂದ ಮಂಜೂರಾದ ಸಮುದಾಯ ಭವನದ ಕಾಂಟ್ರ್ಯಾಕ್ಟ್ ತೆಗೆದುಕೊಂಡು ಅದನ್ನು ಕಟ್ಟಿದ. ಮಂತ್ರಿಗಳು ಬಂದು ಓಪನಿಂಗ್ ಮಾಡಿದರು. ಎಲ್ಲರೂ ತಿಗಡೇಸಿಯನ್ನು ಹೊಗಳಿದರು. ನಾನು ಅಂದರೆ ಹಾಗೇ ಸ್ವಾಮಿ ಎಂದು ತಿಗಡೇಸಿ ಮೀಸೆ ತಿರುವಿ ಹೇಳಿದ್ದ. ಆದರೆ ಮೊದಲ ಮಳೆಗೆ ಆ ಸಮುದಾಯ ಭವನದ ಹಿಂಭಾಗ ಕುಸಿದು ಹೋಗಿತ್ತು. ಅಯ್ಯೋ ಇದೆಲ್ಲ ಆ ಸಬ್ ಕಾಂಟ್ರಾö್ಯಕ್ಟ್ನದೇ ಕೆಲಸ. ಇತ್ತೀಚಿನ ದಿನಗಳಲ್ಲಿ ಉಸುಕು-ಸಿಮೆಂಟು ಎಲ್ಲ ಡುಪ್ಲಿಕೇಟ್ ಸ್ವಾಮೀ ಎಂದು ಅಂದಿದ್ದ. ಈತನಿಗೆ ಹೇಗಾದರೂ ಪಾಠ ಕಲಿಸಬೇಕು… ಈ ಚಾಳಿ ಬಿಡಿಸಬೇಕು ಎಂದು ಅಂದುಕೊಂಡ ಕೆಲವರು ಆ ಸಮಯಕ್ಕಾಗಿ ಕಾಯುತ್ತಿದ್ದರು. ಊರಿನಲ್ಲಿ ಬ್ಯುಟಿಕ್ವೀನ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಕಿವುಡನುಮಿಗೆ ಸಿಕ್ಕಾಪಟ್ಟೆ ಹುಡುಗರು ಛೇಡಿಸುತ್ತಿದ್ದರು. ಹಾಗೆ ಛೇಡಿಸಿದವರು ಮರುದಿನ ಅಕೆಯ ಅಣ್ಣತಮ್ಮಂದಿರಿಂದ ಕೈಕಾಲು ಮುರಿಸಿಕೊಳ್ಳುತ್ತಿದ್ದರು. ಆಕೆಯ ಬಗ್ಗೆ ತಿಗಡೇಸಿಗೆ ಒಂಥರಾ ಭಾವನೆ ಇತ್ತು ಆದರೆ ಒದ್ದುಗಿದ್ದಾರು ಎಂದು ಸುಮ್ಮನಿರುತ್ತಿದ್ದ. ಆಕೆಯ ಮಾತು ತೆಗೆದರೆ ಹುಳ್ಳ ಹುಳ್ಳಗೇ ಮಾಡುತ್ತಿದ್ದ. ಆಕೆಯ ಹೆಸರಿನಿಂದಲೇ ತಿಗಡೇಸಿಗೆ ಬಲೆ ಹಾಕಬೇಕು ಎಂದು ನಿರ್ಧರಿಸಿದ ಕೆಲವರು ಮರುದಿನ ತಿಗಡೇಸಿಯ ಮುಂದೆ ನಿಂತು… ನೋಡಿ ಕಿವುಡನುಮಿಗೆ ನಿನ್ನೆ ಯಾರೋ ಛೇಡಿಸಿದರಂತೆ ಆಕೆ ಭಯಂಕರ ಖುಷಿಯಾಗಿದ್ದಾಳೆ.. ಆಕೆ ಖುಷಿಯಾಗಿದ್ದುದನ್ನು ನೋಡಿ ಆಕೆ ಅಣ್ಣ ತಮ್ಮಂದಿರೂ ಸಂತೋಷವಾಗಿದ್ದಾರಂತೆ ಎಂದು ಹೇಳಿದರು… ತೀರ ಖುಷಿಯಾದ ತಿಗಡೇಸಿ… ಅಯ್ಯೋ ಆ ಹುಡುಗರಿಗೆ ಛೇಡಿಸು ಎಂದು ನಾನೇ ಹೇಳಿದ್ದೆ ಎಂದು ಅಂದ. ಈ ಸುದ್ದಿ ಅವರ ಅಣ್ಣ ತಮ್ಮಂದಿರಿಗೆ ಗೊತ್ತಾಯಿತು… ಮರುದಿನ ತಿಗಡೇಸಿ ಓಣಿಯ ತುಂಬ ಕುಂಟಿಕೊಂಡು ಅಡ್ಡಾಡುತ್ತಿದ್ದ.