ಓ… ಐಸೀ
ತಾಲೂಕಿನಲ್ಲಿ ಪಿಯುಸಿ ಫೇಲಾಗಿ ಊರು ಸೇರಿದ್ದ ಕನ್ನಾಳ್ಮಲ್ಲನಿಗೆ ಇಂಗ್ಲಿಷ್ ಮಾತನಾಡುವ ಹುಚ್ಚು. ಇಲ್ಲಿ ತಪ್ಪು ಮಾತನಾಡಿದರೆ ಯಾರಿಗೂ ಅರ್ಥ ಆಗುವುದಿಲ್ಲ ಎಂದು ಮೊದಲೇ ಆತನಿಗೆ ಗೊತ್ತಿದ್ದರಿಂದ ಮಾತನಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಮೇಕಪ್ ಮರೆಮ್ಮನಿಗೆ ಹೌ ಆರ್ ಯು ಎಂದು ಕೇಳಿದಾಗ… ಆಕೆ ಇಡೀ ಊರಿಗೆ ಕೇಳುವ ಹಾಗೆ ಜೋರು ಬಾಯಿ ಮಾಡಿ ಬೈಯ್ದು ಕಳಿಸಿದ್ದಳು. ಮುದಿಗೋವಿಂದಪ್ಪನ ಅಂಗಡಿಗೆ ಹೋಗಿ ಹೌ ದಿ ರೇಟ್ ಆಫ್ ಶುಗರ್ ಪರ್ ಕೇಜಿ ಅಂತ ಕೇಳಿದ್ದ ಮುದಿಗೋವಿಂದಪ್ಪ ಪಾಪ… ಪಾಪ ಇನ್ನೂ ಸಣ್ಣ ವಯಸ್ಸಲ್ರೀ ಎಂದು ರಾಗ ಎಳೆದಿದ್ದ. ಮರುದಿಂದ ಎದುರಿಗೆ ಬಂದವರೆಲ್ಲರೂ ಏನ್ ಮಲ್ಲಣ್ಣ ನಿಂಗೆ ಸುಗರ್ ಅಂತಲ್ಲ ಎಂದು ಕೇಳುತ್ತಿದ್ದರು. ನಿನಗೆ ಯಾರು ಹೇಳಿದರು ಎಂದು ಕೇಳಿದಾಗ… ಅಯ್ಯೋ ಗೋವಿಂದಪ್ಪ ಅಂಗಡಿಗೆ ಬಂದವರಿಗೆಲ್ಲ ಹೇಳುತ್ತಿದ್ದಾನೆ ಎಂದು ಹೇಳಿದರು. ಈ ಮಂದಿಗೆ ಇಂಗ್ಲಿಷೇ ಆರ್ಥ ಆಗುವುದಿಲ್ಲ. ಮುಂದೆ ಹೇಗೋ ಏನೋ ಎಂದು ಚಿಂತೆ ಮಾಡುತ್ತಿದ್ದ. ಶೇಷಮ್ಮನ ಹೋಟೆಲ್‌ಗೆ ಹೋಗಿ ಶೇಷಮ್ಮ ಗಿವ್ ಮೀ ಟೀ ಎಂದು ಹೇಳಿದ. ಅದಕ್ಕೆ ಆಕೆ ಗಿವ್ ಮಿ ಪವ್ ಮಿ ಇಲ್ಲ. ಬೇಕಾರೆ ಮಂಡಾಳೊಗ್ಗಣ್ಣಿ ಇದೆ ಕೊಡ್ಲಾ? ಎಂದು ಕೇಳಿದ್ದಳು. ಹೀಗೆ ಮಲ್ಲಣ್ಣ ತನಗೆ ಇದ್ದ ಇಂಗ್ಲಿಷ್ ಪಾಂಡಿತ್ಯವನ್ನು ಪ್ರದರ್ಶಿಸಬೇಕು ಎಂದು ಅಂದುಕೊಂಡಿದ್ದ ಆದರೆ ಅದು ಉಲ್ಟಾ ಆಗತೊಡಗಿತ್ತು. ಆದರೆ ಕ್ಷೇತ್ರದ ಶಾಸಕ ಮಾತ್ರ ಮಲ್ಲಣ್ಣನ ಇಂಗ್ಲಿಷನ್ನು ಮೆಚ್ಚಿಕೊಳ್ಳುತ್ತಿದ್ದ. ಮಲ್ಲಣ್ಣ ಏನೇ ಇಂಗ್ಲಿಷಿನಲ್ಲಿ ಮಾತನಾಡಿದರೂ ವ್ಹಾ..ವ್ಹಾ… ಓದಿಕೊಂಡಿದಾನ್ರೀ ಅವನು… ಒಳ್ಳೆ ಇಂಗ್ಲಿಷ್ ಮಾತನಾಡುತ್ತಾನೆ. ನಾನೇನಾದರೂ ಮಂತ್ರಿ ಆದರೆ ಅವನೇ ನನ್ನ ಸೆಕ್ರೆಟರಿ ಎಂದು ಹೇಳುತ್ತಿದ್ದ. ಅವತ್ತು ಬೇರೆ ಊರಿನ ವ್ಯಕ್ತಿಯೊಬ್ಬ ಗಾಳಿಪಟ ವೈರಿಗೆ ಸಿಕ್ಕಿ ಹಾಕಿಕೊಂಡಿದೆ ಎಂದು ತೆಗೆಯಲು ಹೋದ ವಿದ್ಯುತ್ ತಗುಲಿ ಸತ್ತುಹೋದ. ಮರುದಿನ ಇನ್ಸಪೆಕ್ಟರ್ ತೊಂಡೇರಾಯ ವಿಚಾರಣೆಗೆ ಆಗಮಿಸಿದ. ಅವರಿಗೆ ಮೊದಲಿಗೆ ಸಿಕ್ಕಿದ್ದೇ ಕನ್ನಾಳ್ಮಲ್ಲ. ಆತನನ್ನು ನಿಲ್ಲಿಸಿ… ನೋಡಪಾ ನಿನ್ನೆ ವೈರ್ ಹಿಡಿದು ವ್ಯಕ್ತಿಯೊಬ್ಬ ಸತ್ತುಹೋಗಿದ್ದಾನೆ. ಅದರ ಬಗ್ಗೆ ನನಗೆ ಅನುಮಾನ. ನಾವು ಸಾಕ್ಷಿ ಸಂಗ್ರಹಿಸಲು ಬಂದಿದ್ದೇವೆ ಎಂದಾಗ… ಮಲ್ಲ ತನ್ನ ಇಂಗ್ಲಿಷ್ ವರಸೆಯಲ್ಲಿ… ಓ…. ಐ…. ಸೀ ಅಂದ. ಇನ್ಸಪೆಕ್ಟರ್ ತೊಂಡೇರಾಯ ಇಂವ ಐಸೀ ಅಂತಿದಾನೆ… ಅಂದರೆ ನಾನು ನೋಡಿದ್ದೇನೆ ಎಂದು ಹೇಳುತ್ತಿದ್ದಾನೆ ಎಂದು ಜೀಪಿನಲ್ಲಿ ಎಳೆದಾಕಿಕೊಂಡು ಠಾಣೆಗೆ ಹೋದ.