ಕಂದಾಯ ಸಚಿವರ ಧಿಡೀರ್ ಭೇಟಿ: ಅಧಿಕಾರಿಗಳಿಗೆ ಶಾಕ್
ಹುಬ್ಬಳ್ಳಿ: ಮಿನಿ ವಿಧಾನ ಸೌಧದಲ್ಲಿರುವ ತಹಸೀಲ್ದಾರ್ ಕಚೇರಿಗೆ ಬುಧವಾರ ಬೆಳ್ಳಂ ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಧಿಕಾರಿಗಳ ಮೈಚಳಿ ಬಿಡಿಸಿದ್ದಾರೆ.
ಬೆಳಗಾವಿ ಪ್ರವಾಸದಲ್ಲಿದ್ದ ಕೃಷ್ಣ ಭೈರೆಗೌಡ ಇಲಾಖೆ ಕಾರ್ಯವೈಖರಿಯ ಬಗ್ಗೆ ಅರಿಯಲು ಧಿಡೀರ್ ಭೇಟಿ ನೀಡಿ, ತಹಸೀಲ್ದಾರ್ ಹಾಗೂ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಧಿಕಾರಿಗಳ ಹಾಜರಿ, ಸ್ವಚ್ಛತೆ ಹಾಗೂ ಕಡತಗಳ ವಿಲೇವಾರಿಯ ಬಗ್ಗೆ ತಹಸೀಲ್ದಾರ್ ಕಲ್ಲಗೌಡ ಪಾಟೀಲ್, ಪ್ರಕಾಶ ನಾಶಿ ಅವರಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರನ್ನು ಕರೆಯಿಸಿ, ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಮತ್ತು ಕಂದಾಯ ಇಲಾಖೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಅಲ್ಲದೆ, ಅಧಕಾರಿಗಳ ಹೆಸರು ಹೇಳಿಕೊಂಡೇ ಏಜಂಟರು ಪಾರಮ್ಯ ಮೆರೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇದನ್ನೆಲ್ಲ ನೋಡಿಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ ಎಂದರೆ ಏನರ್ಥ? ಎಂದು ಜಿಲ್ಲಾಧಿಕಾರಿಗಳ ಎದುರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಿನಿ ವಿಧಾನಸೌಧದ ಶೌಚಾಲಯಗಳನ್ನು ವೀಕ್ಷಿಸಿದ ಸಚಿವರು ಅಧಿಕಾರಿಗಳತ್ತ ಕೆಂಗಣ್ಣಿನಿಂದ ನೋಡುತ್ತ, `ನಿಮ್ಮ ಮನೆಯಲ್ಲೂ ಹೀಗೆ ಇಟ್ಟುಕೊಳ್ತೀರಾ' ಎಂದು ಗದರಿಸಿದರು. ಸಾರ್ವಜನಿಕ ಶೌಚಾಲಯದ ಬಗ್ಗೆ ಸಾರ್ವಜನಿಕರೂ ಹಲವು ಬಾರಿ ಪತ್ರ ಬರೆದಿದ್ದಾರೆ. ಸ್ವಚ್ಛತೆಗೆ ಮೊಸಲ ಆದ್ಯತೆ ನೀಡಿ ಎಂದು ಎಚ್ಚರಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.