ಕಡೆಮನಿ ಮ್ಯಾರಿ ವಿಥ್ ಹಳೆಮನಿ
ಎಸ್‌ಎಸ್‌ಎಲ್‌ಸಿ ಫೇಲಾಗಿ ಸಿಕ್ಕರೈಲು ಹತ್ತಿ ಊರುಬಿಟ್ಟು ಓಡಿಹೋಗಿದ್ದ. ಮನೆಯವರು ಹುಡುಕಿ ಹುಡುಕಿ ಬೇಸತ್ತು ಆತನ ಬಗ್ಗೆ ಚಿಂತೆ ಮಾಡುವುದನ್ನೇ ಬಿಟ್ಟಿದ್ದರು. ಕಂಟಿದುರ್ಗಮ್ಮನ ಪವಾಡವೋ ಏನೋ ತಿಗಡೇಸಿ ಅದೆಷ್ಟೋ ವರ್ಷಗಳಾದ ನಂತರ ಊರಿಗೆ ಬಂದ. ಬಸ್ ಇಳಿದು ಮೆಲ್ಲನೇ ಮನೆಯ ಕಡೆ ಹೋಗಬೇಕಾದರೆ ಮನೆದಾರಿಯ ಮನೆಯ ಅಂಗಳದಲ್ಲಿ ಕುಳಿತಿದ್ದ ಕ್ವಾಟಿಗ್ವಾಡಿ ಸುಂದ್ರವ್ವ ಕಣ್ಣು ಕಿರಿದುಮಾಡಿ ಈತನ ಕಡೆ ನೋಡಿ ಹತ್ತಿರ ಬಂದು ಹಣೆಗೆ ಅಂಗೈ ಹಿಡಿದುಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿ… ನೀನು ನಮ್ಮ ತಿಗಡೇಸಿಯಲ್ಲವೇ? ಅಂದಳು. ಹೌದು ಅಂದಾಕ್ಷಣ… ಓಡಿ ಹೋಗಿದ್ದೆಂತ ಹೌದಾ? ಎಂದು ಕೇಳಿದಳು.. ಇಲ್ಲ ರೈಲಿನಲ್ಲಿ ಹೋಗಿದ್ದೆ ಎಂದು ಹೇಳಿ ಮುಂದೆ ನಡೆದ. ಎದುರಿಗೆ ಬಂದ ಹುಜುರ್‌ಚಂದ್ರ ತಿಗಡೇಸಿಯನ್ನು ಗುರುತು ಹಿಡಿದು ಏಯ್ ತಿಗಡೇಸಿ ಎಂದು ಒದರಿ.. ಆತನ ಉತ್ತರಕ್ಕೂ ಕಾಯದೇ.. ಅವತ್ತು ಓಡಿ ಹೋದವನು ಇವತ್ತು ಬಂದ್ಯಾ ಎಂದು ಕೇಳಿದ… ನಾನು ಓಡಿ ಹೋಗಿರಲಿಲ್ಲ.. ರೈಲಿನಲ್ಲಿ ಹೋಗಿದ್ದೆ ಎಂದು ತಿಗಡೇಸಿ ಹೇಳಿದರೂ ನೀನು ಓಡಿ ಹೋಗಿದ್ದಿಯಂತೆ ಊರೆಲ್ಲ ಮಾತನಾಡಿಕೊಳ್ಳುತ್ತದೆ ಎಂದು ಅಂದ. ಇನ್ನು ಮನೆ ಮುಟ್ಟುವವರೆಗೆ ಎಷ್ಟು ಮಂದಿ ಕೇಳುತ್ತಾರೋ ಎಂದು ಭರಾ.. ಭರಾ ಎಂದು ನಡೆದುಕೊಂಡು ಮನೆಗೆ ಹೋದ. ಮನೆಯೊಳಗೆ ಹೋದ ಕೂಡಲೇ ಅವರ ಅಮ್ಮ, ನಿನಗೇನು ಕಡಿಮೆಯಾಗಿತ್ತು ಅಂತ ಓಡಿಹೋದೆ? ಓಡಿ ಹೋದರೆ ಹೋಗು ಆದರೆ ಹೇಳಿ ಹೋಗಬೇಕಿತ್ತು ನಿನ್ನ ಸಲುವಾಗಿ ನಾವು ಎಷ್ಟು ಪರಿಷಾನ್ ಆಗಿದ್ದೇವೆ ಗೊತ್ತ? ಎಂದು ಬೈಯ್ದು ಒಳಗೆ ಕರೆದು ತನ್ನ ಪತಿಯನ್ನು ಕೂಗಿ ಕರೆದಳು. ರೂಮಿನಿಂದ ಬಂದ ಅವರ ಅಪ್ಪ… ನಿನಗೇನು ಧಾಡಿ ಆಗಿತ್ತು ಓಡಿ ಹೋಗುವುದಕ್ಕೆ? ಹೋಗಲಿ ಓಡಿ ಹೋಗಿ ಏನು ಸಾಧಿಸಿದೆ? ಎಂದು ಬೈಯ್ದ. ಹೋಗಲಿ ಏನು ಮಾಡಿಕೊಂಡಿದ್ದೀಯ ಎಂದು ಕೇಳಿದ. ನಾನು ಪಿಎಚ್‌ಡಿ ಮಾಡುತ್ತಿದ್ದೇನೆ. ಮನೆ ಅಡ್ರೆಸ್‌ಗಳ ಬಗ್ಗೆ ಥೀಸಸ್ ಮಾಡಬೇಕೆಂದು ಬಂದಿರುವೆ ಎಂದು ಹೇಳಿದ. ಮರುದಿನ ಮನೆಯಿಂದ ಹೊರಗೆ ಹೋದ… ಅವರ ಹಳೆಯ ಗೆಳೆಯ ತಳವಾರ್ಕಂಟಿ ಸಿಕ್ಕ. ಅವನೂ ಸಹ ಮೂರು ಚಾನ್ಸಿಗೆ ಪಿಯುಸಿ ಮುಗಿಸಿದ್ದ. ಸ್ವಲ್ಪ ಇಂಗ್ಲೀಷ್ ಮಾತನಾಡುತ್ತಿದ್ದ. ತಿಗಡೇಸಿಯನ್ನು ನೋಡಿದ ಕೂಡಲೇ ಕಣ್ಣಲ್ಲಿ ನೀರು ತೆಗೆದು ಹೇಗಿದ್ದೀಯ ಅಂದ. ಇಬ್ಬರೂ ಬೇವಿನ ಗಿಡದ ಕೆಳಗೆ ಕುಳಿತು ಹಳೆಸುದ್ದಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ತಿಗಡೇಸಿ ನಮ್ಮ ಕ್ಲಾಸಿನಲ್ಲಿ ಅವಳಿದ್ದಳಲ್ಲ ಕಡಿಮನಿ ಕಲ್ಲವ್ವ ಆಕೆ ಎಲ್ಲಿದ್ದಾಳೆ? ಎಂದು ಕೇಳಿದ. ಅದಕ್ಕೆ ತಳವಾರ್ಕಂಟಿಯು… ಅಯ್ಯೋ ಕಡಿಮನಿ ಮ್ಯಾರಿವಿಥ್ ಹಳೆಮನಿ ಸ್ಟೇಯಿಂಗ್ ಇನ್ ಮೂಲಿಮನಿ ಅಂದ.