For the best experience, open
https://m.samyuktakarnataka.in
on your mobile browser.

ಕತ್ತಲೆಯಲ್ಲಿರುವ ನಮ್ಮೊಳಗಿನ ಪ್ರದೇಶಗಳನ್ನೂ ಕಾಣಬೇಕು

03:30 AM Oct 29, 2024 IST | Samyukta Karnataka
ಕತ್ತಲೆಯಲ್ಲಿರುವ ನಮ್ಮೊಳಗಿನ ಪ್ರದೇಶಗಳನ್ನೂ ಕಾಣಬೇಕು

ಯಾವುದೇ ಕಾಯಿಲೆಗೆ ಒಂದೇ ಕಾರಣವಿರುವುದಿಲ್ಲ. ಕೆಲವು ಸ್ವಯಂ-ನಿರೋಧಕ ಕಾಯಿಲೆಗಳಲ್ಲಿ ಜೈವಿಕ ಅನುವಂಶಿಕತೆ ಅಥವಾ ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಧೂಮಪಾನದಂತಹ ಗಮನಾರ್ಹ ಅಪಾಯಗಳನ್ನು ಗುರುತಿಸಬಹುದಾದರೂ ಈ ದುರ್ಬಲತೆಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ. ವ್ಯಕ್ತಿತ್ವವು ಸ್ವತಃ ರೋಗವನ್ನು ಉಂಟುಮಾಡುವುದಿಲ್ಲ. ಕೋಪವನ್ನು ನಿಗ್ರಹಿಸುವುದರಿಂದ ಕ್ಯಾನ್ಸರ್ ಬರುವುದಿಲ್ಲ. ಕಾಯಿಲೆಯ ರಚನೆಯಲ್ಲಿ ಅಥವಾ ಆರೋಗ್ಯದ ಸೃಷ್ಟಿಯಲ್ಲಿ ಅನೇಕ ಪ್ರಕ್ರಿಯೆಗಳು ಮತ್ತು ಅಂಶಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಸಂಶೋಧನೆಗಳು ಸಾರುತ್ತಿವೆ. ಹೀಲಿಂಗ್ ಎನ್ನುವುದು ಸಮತೋಲನ ಮತ್ತು ಸಾಮರಸ್ಯವನ್ನು ಕಂಡುಕೊಳ್ಳುವ ಒಂದು ವಿದ್ಯಮಾನವಾಗಿದೆ. 'ಹೀಲಿಂಗ್' ಎಂಬ ಪದವು ಪುರಾತನವಾಗಿದ್ದು 'ಸಂಪೂರ್ಣ' ಎಂಬ ಅರ್ಥವನ್ನು ಧ್ವನಿಸುತ್ತದೆ. ಗುಣವಾಗುವುದು ಎಂದರೆ ಸಂಪೂರ್ಣವಾಗುವುದು ಎಂದರ್ಥ. ಆದರೆ ನಾವು ಈಗಾಗಲೇ ಇರುವುದಕ್ಕಿಂತ ಇನ್ನೂ ಹೆಚ್ಚು ಸಂಪೂರ್ಣವಾಗುವುದು ಹೇಗೆ? ಅಥವಾ ನಾವು ಎಂದಾದರೂ ಸಂಪೂರ್ಣಕ್ಕಿಂತ ಕಡಿಮೆಯಿರುವುದು ಹೇಗೆ?
"ನನಗೆ ಏಕೆ ಕ್ಯಾನ್ಸರ್ ಇದೆಯೆಂದೇ ಆರ್ಥವಾಗುತ್ತಿಲ್ಲ; ನಾನು ಆರೋಗ್ಯಕರ ಜೀವನವನ್ನು ನಡೆಸಿದ್ದೇನೆ; ಸರಿಯಾದ ಆಹಾರವನ್ನೇ ಸೇವಿಸಿದ್ದೇನೆ; ನಿಯಮಿತವಾಗಿ ವ್ಯಾಯಾಮ ಮಾಡಿದ್ದೇನೆ; ನಾನು ನನ್ನನ್ನು ಚೆನ್ನಾಗಿ ಪ್ರೀತಿಸಿದ್ದೇನೆ; ಆರೋಗ್ಯಕ್ಕೆ ಮಾದರಿಯಾಗುವಂತೆ ಜೀವಿಸಿದ್ದೇನೆ…" ಎಂದು ಅಂಡಾಶಯದ ಕ್ಯಾನ್ಸರ್ ಹೊಂದಿರುವ ಕೆಲವೊಬ್ಬರು ಹೀಗೆ ಹೇಳುವುದಿದೆ. ಆದರೆ ಈ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಜಾಗೃತ ಮನಸ್ಸಿಗೆ ಬಾರದೇ ಇದ್ದುದು ಪ್ರಜ್ಞಾಪೂರ್ವಕವಾಗಿ ಅದುಮಿಟ್ಟ ಒತ್ತಡದ ವಿಚಾರ. ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಾಗದೆ ಬಲವಂತವಾಗಿ ಅದುಮಿಡುವ ಪ್ರಯತ್ನ ಅಂಡಾಶಯ ಕ್ಯಾನ್ಸರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಮುಖ ಕಾರಣವಾಗುತ್ತದೆ. ಅದಕ್ಕಾಗಿಯೇ ಸೂಕ್ತ ಜ್ಞಾನ ಮತ್ತು ಒಳನೋಟವು ಯಾವುದೇ ಗಂಭೀರ ಪರಿಸ್ಥಿತಿಯನ್ನು ರೂಪಾಂತರಗೊಳಿಸುವ ಅಥವಾ ಸಹಜ ಸ್ಥಿತಿಗೆ ತರಬಲ್ಲ ಶಕ್ತಿಯನ್ನು ಹೊಂದಿದೆ ಮತ್ತು ವೈದ್ಯರೂ ಸೇರಿದಂತೆ ಬಾಹ್ಯ ಸಲಹೆಗಳಿಗಿಂತ ಒಳನೋಟವು ಹೆಚ್ಚು ಸಹಾಯಕವಾಗಿರುತ್ತದೆ. ನಾವು ಪ್ರಾಮಾಣಿಕವಾಗಿ ಸಹಾನುಭೂತಿ ದೃಷ್ಟಿಯೊಂದಿಗೆ ನಮ್ಮನ್ನು ನೋಡುವ ಸಾಮರ್ಥ್ಯ ಪಡೆದರೆ; ನಮ್ಮನ್ನು ನಾವು ನೋಡಿಕೊಳ್ಳಬೇಕಾದ ಮಾರ್ಗಗಳನ್ನು ಗುರುತಿಸಬಹುದು. ಜೊತೆಗೆ, ಕತ್ತಲೆಯ ಹಿಂದೆ ಅಡಗಿರುವ ನಮ್ಮೊಳಗಿನ ಪ್ರದೇಶಗಳನ್ನೂ ಕಾಣಬಹುದು.
ಬಲವಂತದ ಆಶಾವಾದವು ನಮ್ಮ ಆತಂಕವನ್ನು ಎದುರಿಸುವುದನ್ನು ತಪ್ಪಿಸಲು ನಾವು ಆಯ್ದುಕೊಳ್ಳುವ ಮಾರ್ಗಗಳಲ್ಲಿ ಒಂದಾಗಿದೆ. ಧನಾತ್ಮಕ ಚಿಂತನೆಯ ಇಂತಹ ಆಶಾವಾದವು ನೊಂದ ಮಗುವನ್ನು ನಿಭಾಯಿಸುವ ಕಾರ್ಯ ವಿಧಾನವಾಗಿದೆ. ಬಾಲ್ಯಕಾಲದ ಇಂತಹ ನೊಂದ ಅನುಭವಗಳ ಪ್ರಜ್ಞಾಪೂರ್ವಕ ಅರಿವಿಲ್ಲದೆ ಬೆಳೆಯುತ್ತಾ ಬರುವ ಮಗು ವಯಸ್ಕನಾದ ನಂತರವೂ ಇದನ್ನೇ ತನ್ನ ಜೀವನತತ್ವವನ್ನಾಗಿ ಒಪ್ಪಿಕೊಳ್ಳುತ್ತದೆ. ರೋಗಲಕ್ಷಣಗಳ ಆಕ್ರಮಣದಲ್ಲಿ ಅಥವಾ ರೋಗ ನಿರ್ಣಯದಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು: ಈ ಅನಾರೋಗ್ಯವು ಹಿಂದಿನ ಮತ್ತು ವರ್ತಮಾನದ ಬಗ್ಗೆ ಏನು ಹೇಳುತ್ತದೆ? ಮತ್ತು ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಸಹಾಯಮಾಡುತ್ತದೆ? ಅನೇಕ ಗುಣಪಡಿಸುವ ವಿಧಾನಗಳು ಅನಾರೋಗ್ಯಕ್ಕೆ ಕಾರಣವಾದ ಅಂಶಗಳನ್ನು ತಿಳಿಯುವಲ್ಲಿ ಆಸಕ್ತಿವಹಿಸದೆ ಕೇವಲ ಚಿಕಿತ್ಸೆಯ ಮೇಲೆಯೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತವೆ. ಪೂರ್ಣವಾಗಿ ಗುಣವಾಗುವಿಕೆಯಲ್ಲಿ ಋಣಾತ್ಮಕ ಅಂಶಗಳ ಪಾಲುದಾರಿಕೆಯನ್ನೂ ತಿಳಿಯುವುದು ಅವಶ್ಯಕ. ಋಣಾತ್ಮಕ ಚಿಂತನೆಯು ನಿರಾಶಾವಾದಿ ದೃಷ್ಟಿಕೋನವಲ್ಲ ಏಕೆಂದರೆ; ಅದು ವಾಸ್ತವಿಕತೆಯನ್ನು ಮುಚ್ಚಿಡುವುದಿಲ್ಲ, ಬದಲಿಗೆ ನಮ್ಮ ಮುಂದೆ ಸನ್ನಿವೇಶವನ್ನು ಪೂರ್ಣ ತೆರೆದಿಡುತ್ತದೆ. ಇದು 'ಯಾವುದು ಕೆಲಸ ಮಾಡುತ್ತಿಲ್ಲ' ಎಂಬುದನ್ನು ಪರಿಗಣಿಸುವ ವಿಧಾನವಾಗಿದೆ. ಯಾವುದು ಸಮತೋಲನದಲ್ಲಿಲ್ಲ? ಏನನ್ನು ನಿರ್ಲಕ್ಷಿಸಲಾಗಿದೆ? ದೇಹವು ಏನನ್ನು ಬೇಡವೆಂದು ಹೇಳುತ್ತಿದೆ? ಈ ಪ್ರಶ್ನೆಗಳಿಲ್ಲದಿದ್ದರೆ ನಮ್ಮ ಅಸಮತೋಲನಕ್ಕೆ ಕಾರಣವಾದ ಒತ್ತಡಗಳ (ಟೆನ್ಷನ್) ಬಗೆಗಿನ ಒಳನೋಟವೇ ಮರೆಯಾಗಿಬಿಡುತ್ತದೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ; ಇಂತಹ ಪ್ರಶ್ನೆಗಳನ್ನು ಒಡ್ಡದಿರುವುದೇ ಸ್ವತಃ ಒತ್ತಡದ ಮೂಲವಾಗಿರುತ್ತದೆ!
ಮೊದಲನೆಯದಾಗಿ; 'ಸಕಾರಾತ್ಮಕ ಚಿಂತನೆ' ಎಂಬುದು ವಾಸ್ತವವನ್ನು ನಿಭಾಯಿಸುವಷ್ಟು ಬಲ ನಮ್ಮಲ್ಲಿಲ್ಲ ಎಂಬ ನಮ್ಮ ಅವ್ಯಕ್ತ ಭಯವಾಗಿದ್ದು ಇದನ್ನೇ ನಮ್ಮ ಸುಪ್ತಾವಸ್ಥೆಯು ನಂಬಿಕೆಯನ್ನಾಗಿ ಸ್ವೀಕರಿಸಿರುತ್ತದೆ. ಈ ಭಯವು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸುವಲ್ಲಿನ ನಮ್ಮ ಸಾಮರ್ಥ್ಯವನ್ನು (ಬಾಲ್ಯಕಾಲದಲ್ಲಿನ ಅನುಭವಗಳಂತೆ) ಕುಗ್ಗಿಸಿ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಮ್ಮಲ್ಲಿ ಆತಂಕವನ್ನು ಉಂಟುಮಾಡುತ್ತದೆ. ಆತಂಕವು ಜಾಗೃತವಾಗಿರಲಿ ಅಥವಾ ಇಲ್ಲದಿರಲಿ; ಇದು ಒತ್ತಡದ ಸ್ಥಿತಿಯೇ ಆಗಿದೆ. ಎರಡನೆಯದಾಗಿ; ನಮ್ಮ ಬಗ್ಗೆ ಮತ್ತು ನಾವಿರುವ ಪರಿಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿಯ ಕೊರತೆಯು ಒತ್ತಡದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಮೂರನೆಯದಾಗಿ; ನಮ್ಮ ನಿಯಂತ್ರಣ ಸಾಮರ್ಥ್ಯ ಹೆಚ್ಚಾದಂತೆ ಒತ್ತಡವು ಕಡಿಮೆಯಾಗುತ್ತದೆ.
ಸಂಬಂಧ ಅಥವಾ ಬಾಂಧವ್ಯದ ಅಗತ್ಯತೆಗಳಿಂದ; ಯಶಸ್ಸಿನ ಹಸಿವಿನಿಂದ; ಮೇಲಧಿಕಾರಿಯ ಭಯದಿಂದ; ಬೇಸರ ಅಥವಾ ನಿರಾಶೆಯ ಭಯದಿಂದ ಹೀಗೆ ಯಾವುದೇ ವಿಧದ ಅನಿವಾರ್ಯತೆಯಿಂದ ನಡೆಸಲ್ಪಡುವವರೆಗೂ ವ್ಯಕ್ತಿಯೊಬ್ಬ ಸ್ವತಂತ್ರನಾಗಿರಲು ಸಾಧ್ಯವಿಲ್ಲ. ಗಾಳಿಯಿಂದ ಬೀಸಲ್ಪಟ್ಟ ಎಲೆಯಂತೆ ಅನಿವಾರ್ಯತೆಯಿಂದ ನಿರ್ದೇಶಿಲ್ಪಟ್ಟ ವ್ಯಕ್ತಿ ತನಗಿಂತ ಹೆಚ್ಚಿನ ಶಕ್ತಿಗಳಿಂದ ನಿಯಂತ್ರಿಸಲ್ಪಡುತ್ತಾನೆ. ಒತ್ತಡದ ಬದುಕನ್ನು ತಾನೇ ಸ್ವತಃ ಆಯ್ಕೆ ಮಾಡಿಕೊಂಡಿದ್ದರೂ ಅಥವಾ ಅದನ್ನು ಆನಂದಿಸುತ್ತಿದ್ದರೂ ಆತನ ಸುಪ್ತಮನಸ್ಸಿನೊಳಗಿನ ಸ್ವಾತಂತ್ರ್ಯದ ಬಯಕೆ ಇಂಥ ಬದುಕನ್ನು ಇಚ್ಛಿಸುವುದಿಲ್ಲ. ಕೊನೆಗೊಂದು ದಿನ ಈ ಬಗ್ಗೆ ಎಚ್ಚರವಾದಾಗ "ನಾನು ಎಂಥ ಮೂರ್ಖತನದ ಕೆಲಸ ಮಾಡಿಬಿಟ್ಟೆ" ಎಂದು ಪಶ್ಚಾತ್ತಾಪಪಡುವ ಸರದಿ ಆತನದ್ದಾಗಿರುತ್ತದೆ. ವರ್ಷಗಳ ಕಾಲ ನಡೆಸಿದ ಸಂಶೋಧನೆಗಳಲ್ಲಿ ಕಂಡುಬಂದುದು: "ಸ್ತನ ಕ್ಯಾನ್ಸರ್‌ಗೆ ಒಳಗಾದವರು ಆಹ್ಲಾದಕರ ಹಗಲುಗನಸುಗಳಲ್ಲಿ ತೊಡಗಿಸಿಕೊಳ್ಳುವ ಅಂದರೆ; ವಾಸ್ತವವನ್ನು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿ ತಮ್ಮದೇ ಆದ ಯೋಚನಾಲಹರಿಗಳಿಂದ ಜೀವಿಸುವ ಪ್ರವೃತ್ತಿಯನ್ನು ಹೊಂದಿದ್ದರು."
ಮಿದುಳು ಪರಿಸರದೊಂದಿಗಿನ ವ್ಯಕ್ತಿಯ ಪರಸ್ಪರ ಕೊಡುಕೊಳ್ಳುವಿಕೆಗಳನ್ನು ಹಾಗೂ ದೇಹದ ಎಲ್ಲಾ ಅಂಗಗಳು ಮತ್ತು ವ್ಯವಸ್ಥೆಗಳ ಚಟುವಟಿಕೆಗಳನ್ನು ಸಮಾನಾಂತರವಾಗಿ ಮತ್ತು ಏಕಕಾಲದಲ್ಲಿ ನಿಯಂತ್ರಿಸುತ್ತದೆ ಮತ್ತು ಸಂಯೋಜಿಸುತ್ತದೆ. ಈ ನಿಯಂತ್ರಕ ಕಾರ್ಯವು ನಕಾರಾತ್ಮಕ ಪ್ರಭಾವಗಳು, ಅಪಾಯದ ಸಂಕೇತಗಳು ಮತ್ತು ಆಂತರಿಕ ಯಾತನೆಯ ಚಿಹ್ನೆಗಳ ಸ್ಪಷ್ಟವಾದ ಗುರುತಿಸುವಿಕೆಯನ್ನು ಅವಲಂಭಿಸಿರುತ್ತದೆ. ಪರಿಸರವನ್ನು ಮೌಲ್ಯಮಾಪನ ಮಾಡುವ ಮಿದುಳಿನ ಸಾಮರ್ಥ್ಯವು ಕ್ಷೀಣಿಸುತ್ತಾ ಬಂದಂತೆ ಋಣಾತ್ಮಕ ಯೋಚನೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶಗಳನ್ನು ಪ್ರತ್ಯೇಕಿಸುವ ಸಾಮರ್ಥ್ಯವೂ ಕುಂದುತ್ತದೆ. ಈ ರೀತಿಯಾಗಿ ಆಘಾತಗೊಂಡ ವ್ಯಕ್ತಿಗಳು ಮತ್ತಷ್ಟು ಒತ್ತಡಕ್ಕೆ ಕಾರಣವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. `ಸಕಾರಾತ್ಮಕ ಆಲೋಚನೆಗಳು' ಎಂಬ ಸೋಗಿನಲ್ಲಿ ನಿರಾಕರಣೆ ಅಥವಾ ಹಗಲುಗನಸುಗಳೊಂದಿಗೆ ತಮ್ಮ ಆತಂಕವನ್ನು ಹೊಂದಿಸಿಕೊಳ್ಳುವ ಪ್ರವೃತ್ತಿ ದೀರ್ಘಕಾಲ ಮುಂದುವರಿದಂತೆ ಅದು ಆರೋಗ್ಯಕ್ಕೆ ಹೆಚ್ಚು ಮಾರಕವಾಗಿ ಪರಿಣಮಿಸುತ್ತದೆ.