For the best experience, open
https://m.samyuktakarnataka.in
on your mobile browser.

ಕತ್ತಲೆಯಿಂದ ಬೆಳಕಿನೆಡೆಗೆ?

06:30 AM Oct 27, 2024 IST | Samyukta Karnataka
ಕತ್ತಲೆಯಿಂದ ಬೆಳಕಿನೆಡೆಗೆ

ಬೆಳಕು ಜ್ಞಾನದ ಸಂಕೇತ. ಕತ್ತಲು ಅಜ್ಞಾನದ ಸೂಚಕ. ಮನುಷ್ಯನ ಪಯಣವು ಕತ್ತಲೆಯಿಂದ ಬೆಳಕಿನೆಡೆಗೆ ಅಂದರೆ ಅಜ್ಞಾನದಿಂದ ಜ್ಞಾನದೆಡೆಗೆ ಸಾಗಬೇಕು. ಇನ್ನೇನು ಬರಲಿರುವ ಬೆಳಕಿನ ಹಬ್ಬವೇ ದೀಪಾವಳಿ. ಅದು ಪ್ರತಿಯೊಂದು ಮನೆ-ಮನಗಳನ್ನು ಬೆಳಗುವ ಪ್ರಭಾವಳಿಯೂ ಹೌದು. ಎಲ್ಲ ಬಂಧನಗಳಿಂದ ಯಾವುದು ಮನುಷ್ಯನನ್ನು ಮುಕ್ತಗೊಳಿಸುವುದೋ ಅದುವೇ ನಿಜವಾದ ವಿದ್ಯೆ. ಅಂದರೆ ಜ್ಞಾನ ಅಥವಾ ಬೆಳಕು. ಬೆಳಕು ವಿಕಾಸದ ಸಂಕೇತ, ಸೃಜನಶೀಲತೆಯ ಮೂಲ. ಅನೇಕ ಜೀವಿಗಳಲ್ಲಿ ಜೈವಿಕ ಪ್ರಕ್ರಿಯೆಗಳಿಗೆ ಮೂಲಶಕ್ತಿ, ಆಧಾರ. ಸೃಷ್ಟಿಗೂ ಲಯಕ್ಕೂ ಬೆಳಕೇ ಕಾರಣ. ಅಂತಹ ಬೆಳಕನ್ನು ತೋರಲು ಗುರು ಬೇಕು. ಸಾಧಿಸಲು ಗುರಿ ಇರಬೇಕು. ಬೆಳಕಿನ ಬಗೆಗೆ ವೇದಗಳಲ್ಲಿ ಸಾಕಷ್ಟು ಹೇಳಲಾಗಿದೆ.
ಸಾವಿರಾರು ವರುಷಗಳ ಇತಿಹಾಸವಿರುವ ಜಗತ್ತಿನ ಅತೀ ಪುರಾತನ ಸಂಸ್ಕೃತಿಗಳಲ್ಲೊಂದು ಭಾರತೀಯ ಸಂಸ್ಕೃತಿ. ಒಂದು ಕಾಲಕ್ಕೆ ಶ್ರೇಷ್ಠತೆಯ ಉತ್ತುಂಗದಲ್ಲಿದ್ದ ಭಾರತವು ೯ನೇ ಶತಮಾನದಿಂದ ಒಂದು ಸಹಸ್ರಕಾಲ ಸತತವಾಗಿ ಪರಕೀಯರ ಆಕ್ರಮಣಕ್ಕೆ ಒಳಗಾಯಿತು. ಪರಕೀಯರ ಕಪಟತನ, ದುರಾಕ್ರಮಣ, ವಂಚನೆಗೊಳಗಾಯಿತು. ಭಾರತೀಯ ಜೀವನ ಕ್ರಮ, ಧಾರ್ಮಿಕತೆ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲಾಗದ ಪರಕೀಯರು ಅವನ್ನೆಲ್ಲ ಅಪಹಾಸ್ಯ ಮಾಡಿದರು. ಕುತಂತ್ರದಿಂದ ಭಾರತೀಯರನ್ನು ಒಡೆದರು. ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟಿ, ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿದೇಶಿಯರದೇ ಶ್ರೇಷ್ಠ, ಅವರನ್ನು ಅನುಸರಿಸುವುದೇ ಆಧುನಿಕತೆಯೆಂಬ ಗುಲಾಮಗಿರಿಯ ಸೆಳೆತಕ್ಕೆ ಸಿಲುಕಿದರು. ತಮ್ಮತನವನ್ನು ಕಳೆದುಕೊಂಡು ಗಾಢವಾದ ಅಂಧಕಾರದಲ್ಲಿ ಮುಳುಗಿದರು. ಕೊನೆಗೂ ಬದಲಾವಣೆಯ ಸಂಕ್ರಾಂತಿಯೊಂದು ಬಂತು. ಭಾರತೀಯ ಜೀವನದ ಶ್ರೇಷ್ಠತೆಯನ್ನು ಸಾರಿ ಹೇಳಲು, ಅವರನ್ನು ಬಡಿದೆಬ್ಬಿಸಲು, ಅವರ ಅನನ್ಯತೆ, ತನ್ನತನವನ್ನು ತಿಳಿಸಿ ಹೇಳಲು ಸ್ವಾಮಿ ವಿವೇಕಾನಂದರು ಅಹರ್ನಿಶಿ ಪ್ರಯತ್ನಿಸಿದರು. ದಾಸ್ಯದ ಕತ್ತಲಿನಿಂದ ತನ್ನತನದ ಬೆಳಕನೆಡೆಗೆ ಭಾರತೀಯರನ್ನು ನಡೆಸಿದರು.
ವೇದಗಳ ಕಾಲದ ಸಾಮಾಜಿಕ ವ್ಯವಸ್ಥೆಯ ನಾಲ್ಕು ವರ್ಣಗಳಲ್ಲಿಯ ವರ್ಗೀಕರಣವು ಸ್ವಾರ್ಥಿಗಳ ಕೈಗೆ ಸಿಲುಕಿ ಜಾತಿ ವ್ಯವಸ್ಥೆಯಾಗಿ ಮಾರ್ಪಟ್ಟಿದ್ದು ಒಂದು ದೊಡ್ಡ ದುರಂತ. ಆಯಾ ಕಾಲದ ಅನುಕೂಲಕ್ಕೆ ತಕ್ಕಂತೆ ಬದಲಾಗಬಹುದಾದ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಕೆಲ ಪಟ್ಟಭದ್ರ ಹಿತಾಶಕ್ತಿಗಳು ಪ್ರಯತ್ನಿಸಿದರು. ಕೇವಲ ಗುಣಗ್ರಾಹಿಯಾಗಿದ್ದ ಸಮಾಜದಲ್ಲಿ ಜಾತಿ-ಮತ-ಪಂಥ, ಸ್ತ್ರೀ-ಪುರುಷ, ಬಡವ-ಬಲ್ಲಿದ, ಹಳ್ಳಿಗ-ಪಟ್ಟಣಿಗ, ಭಾಷಾ ಮತ್ತು ಪ್ರಾದೇಶಿಕ ಭೇದ, ವೇಶ ಭೂಷಣಗಳಲ್ಲಿ ಅಸಮಾನತೆಯನ್ನು ಸೃಷ್ಟಿಸಿದರು. ಈ ವಿವಿಧ ರೀತಿಯ ಅಸಮಾನತೆಯ ವಿರುದ್ಧ ಅನೇಕ ಸಂತರು, ಶರಣರು, ಸಮಾಜ ಸುಧಾರಕರು ಸಿಡಿದೆದ್ದರು. ಬಸವೇಶ್ವರ, ಕನಕದಾಸರು, ಶಿಶುನಾಳ ಶರೀಫರು, ಕಬೀರದಾಸರು, ಡಾ. ಅಂಬೇಡ್ಕರ, ಸಾವರಕರ್, ಪುಲೆ ದಂಪತಿಗಳು, ರಾಜಾರಾಂ ಮೋಹನ ರಾಯ್, ದಯಾನಂದ ಸರಸ್ವತಿ, ಗಾಂಧೀಜಿ ಮುಂತಾದವರು ಅಸಮಾನತೆಯ ಕಾರ್ಗತ್ತಲಿನಿಂದ ಭಾರತೀಯರನ್ನು ಸಮಾನತೆಯ ಬೆಳಕಿನೆಡೆಗೆ ಕರೆದೊಯ್ದರು. ಸಾಮರಸ್ಯತೆಯ ಪಾಠ ಹೇಳಿದರು.
ಪೌರಾಣಿಕ ಕಾಲದಿಂದಲೂ ಸ್ತ್ರೀಗೆ ಅತ್ಯಂತ ಗೌರವದ ಸ್ಥಾನವನ್ನು ಭಾರತೀಯ ಸಮಾಜದಲ್ಲಿ ಕೊಡಲಾಗಿತ್ತು. ಋಷಿಮುನಿಗಳಿಗೆ ಸರಿಯಾಗಿ ಋಷಿಮಾತೆಯರು, ಗುರುಗಳಿಗೆ ಸಮಾನವಾಗಿ ಗುರುಮಾತೆಯರು, ರಾಜ-ಮಹಾರಾಜರಿಗೆ ಸಮಾನರಾಗಿ ರಾಣಿ-ಮಹಾರಾಣಿಯರು, ತಂದೆಗೆ ಸಮಾನವಾಗಿ ತಾಯಿ, ಹೀಗೆ ಪುರುಷರಿಗೆ ಸಮಾನವಾಗಿ ಸ್ತ್ರೀಯರನ್ನು ಕಾಣಲಾಗುತ್ತಿತ್ತು. ಇಂತಹ ಆದರ್ಶಮಯ ವ್ಯವಸ್ಥೆಯಲ್ಲಿ ಅದ್ಹೇಗೋ ಲಿಂಗ ಅಸಮಾನತೆಯು ಪ್ರವೇಶಿಸಿ, ವಿಜೃಂಭಿಸಿತು. ಪುರುಷ ಪ್ರಧಾನ ಸಮಾಜವೆಂದು ಜರಿಯಲ್ಪಟ್ಟಿತು. ಕೆಲವು ಸ್ವಾರ್ಥಿಗಳ ಈ ಅನಪೇಕ್ಷಣೀಯ ನಡತೆಯನ್ನು ಅಕ್ಕಮಹಾದೇವಿ, ಅಹಲ್ಯಾಬಾಯಿ ಹೋಳ್ಕರ, ಝಾನ್ಸೀ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿಯ ಚೆನ್ನಮ್ಮ, ಆನಂದಿಗೋಪಾಲ, ಮುಂತಾದವರು ವಿರೋಧಿಸಿದರು. ಸ್ತ್ರೀ ಸಮಾನತೆಗಾಗಿ ಹೋರಾಡಿದರು. ಸ್ತ್ರೀ-ಪುರುಷ ಭೇದ-ಭಾವದ ಕತ್ತಲೆಯಿಂದ ಸಮಾಜವನ್ನು ಹೊರತರಲು ಇಂದಿಗೂ ಆ ಹೋರಾಟವು ಮುಂದುವರಿದಿದೆ.
ಸ್ತ್ರೀ-ಪುರುಷ ಅಸಮಾನತೆಯ ಪರಿಣಾಮವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲಾ ರಂಗಗಳಲ್ಲೂ ವ್ಯಾಪಕವಾಗಿ ಆಗಿದೆ. ಅದನ್ನು ತೊಡೆದು ಹಾಕುವ ಏಕೈಕ ಮಾರ್ಗವೆಂದರೆ ಶಿಕ್ಷಣ ಮತ್ತು ಜಾಗೃತಿ. ಒಬ್ಬ ಸ್ತ್ರೀಯು ಸುಶಿಕ್ಷಿತಳಾದಳೆಂದರೆ ಒಂದು ಇಡೀ ಕುಟುಂಬ ಸುಶಿಕ್ಷಿತವಾದಂತೆ. ಅವಳು ತನ್ನ ಜೊತೆಗೆ ತನ್ನ ಪರಿವಾರದವರನ್ನೆಲ್ಲ ತೆಗೆದುಕೊಂಡು ಹೋಗುತ್ತಾಳೆ. ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆಯು ಸುಲಭ ಸಾಧ್ಯ. ಇದನ್ನು ಮನಗಂಡು ಸಾವಿತ್ರಬಾಯಿ ಪುಲೆ ಅವರಂತಹ ಮಹಿಳೆಯರು ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದರು. ಪ್ರಥಮ ಭಾರತೀಯ ಮಹಿಳಾ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಅವರು ಸ್ತ್ರೀಯರ ಶಿಕ್ಷಣಕ್ಕಾಗಿ ಪ್ರಬಲವಾಗಿ ಪ್ರತಿಪಾದಿಸಿದರು. ಸ್ವತಃ ಶ್ರಮಿಸಿದರು ಕೂಡ. ಪರಿಣಾಮ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಅವರಿಂದ ಪ್ರೇರಣೆಗೊಂಡು ಕೆಲಸ ಮಾಡುತ್ತಿರುವ ಶಿಕ್ಷಕಿಯರ ಸಂಖ್ಯೆಯೂ ಹೆಚ್ಚಿದೆ. ಪುರುಷರಿಗಿಂತ ಸ್ತ್ರೀಯರು ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಾರೆ. ಚಂದ್ರಯಾನ, ಮಂಗಳಯಾನ, ಆದಿತ್ಯಾಯಾನದಂತಹ ವೈಜ್ಞಾನಿಕ ಕ್ಷೇತ್ರ, ಸಾಪ್ಟ್‌ವೇರ್, ತಾಂತ್ರಿಕತೆ, ಔದ್ಯೋಗಿಕ ಕ್ಷೇತ್ರ, ಸಾಮಾಜಿಕ, ಆರೋಗ್ಯ, ಕ್ರೀಡೆ, ಸಂಸ್ಕೃತಿ ಎಲ್ಲ ರಂಗಗಳಲ್ಲೂ ಮುನ್ನುಗ್ಗಿ ಸಾಧನೆಯನ್ನು ಮಾಡುತ್ತಿದ್ದಾರೆ. ಅರಿವಿನ ಬೆಳಕಿನ ಕಿರಣವೊಂದು ಸ್ತ್ರೀಯರ ಸಾಮರ್ಥ್ಯವನ್ನು ಸಾರಿ ಹೇಳುತ್ತಿದೆ.
ಬ್ರಿಟಿಷರಿಂದ ಭಾರತಕ್ಕೆ ಇನ್ನೂ ಸ್ವಾತಂತ್ರ‍್ಯ ಸಿಗುವ ಮುನ್ನವೇ ಭಾರತದ ಭವಿಷ್ಯದ ಬಗ್ಗೆ ಮೋಕ್ಷಗುಂಡಂ ವಿಶ್ವೇಶ್ವರಯ್ಯರಂತಹ ಅಭಿಯಂತರರು, ಜೇಮಶೇಟಜೀ ಟಾಟಾ ಅವರಂತಹ ಉದ್ಯೋಗಪತಿಗಳು. ಸ್ವತಂತ್ರ ಭಾರತದ ಆರ್ಥಿಕ-ಔದ್ಯೋಗಿಕ ಅಭಿವೃದ್ಧಿಯನ್ನು ನನಸನ್ನಾಗಿಸಿದರು. ಇತರರಿಗಿಂತ ಭಾರತೀಯರು ಏನೂ ಕಡಿಮೆ ಇಲ್ಲವೆಂದು ಸಾಧಿಸಿ ತೋರಿಸಿದರು. ಜೇಮಶೇಟಜೀ ಟಾಟಾ ನೂರಾರು ಉದ್ದಿಮೆಗಳನ್ನು ಸ್ಥಾಪಿಸಿ ಔದ್ಯೋಗಿಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದರು. ಇಂದಿನ ಆರ್ಥಿಕಾಭಿವೃದ್ಧಿಗೆ ಅಂದೇ ಅಡಿಪಾಯ ಹಾಕಿದರು. ಇಂದು ಪಿನ್ನಿಂದ ಫೋನ್ವರೆಗೆ, ಸಾಲ್ಟಿ÷್ನಂದ ಸ್ಪೇಸ್ವರೆಗೆ ಟಾಟಾ ಗ್ರೂಪ್ ಆಫ್ ಕಂಪನೀಜ್ ವ್ಯಾಪಿಸಿದೆ. ಸುಭದ್ರ ಆರ್ಥಿಕ ಆಧಾರವಿರದೇ ಏನನ್ನು ಸಾಧಿಸಲಾಗದು. ಬಡತನ, ನಿರುದ್ಯೋಗ, ನಾಗರಿಕ ಸೌಲಭ್ಯಗಳ ಕೊರತೆಗಳ ಇರುಳನ್ನು ನೀಗಲು ಟಾಟಾರಂತಹವರು ಔದ್ಯೋಗಿಕ ಕ್ರಾಂತಿಯ ಬೆಳಕನ್ನು ಹರಡಿದರು.
ತಮ್ಮಷ್ಟಕ್ಕೆ ತಾವು ಹೊಲಗಳಲ್ಲಿ ದುಡಿಯುತ್ತ, ಬೆಳೆದ ಬೆಳೆಗಳನ್ನು ಸರಿಯಾದ ಬೆಲೆಗೆ ಮಾರಲಾಗದೇ ತೊಳಲಾಡುತ್ತಿದ್ದವರು ಕೃಷಿಕರು. ಅದರ ಜೊತೆಗೆ ಅನಿರೀಕ್ಷಿತವಾಗಿ ನೆರೆ, ಬರ, ಬೆಳೆ ರೋಗ, ಸಾಲ ಸೋಲಗಳ ಮರ್ಮಾಘಾತ ಬೇರೆ. ಬೆಳೆದ ಬೆಳೆಗೆ ತಕ್ಕ ಬೆಂಬಲ ಬೆಲೆ, ಬೆಳೆ ವಿಮೆ, ಆರ್ಥಿಕ ಸಹಾಯಗಳನ್ನು ಪಡೆಯುವುದು ತಮ್ಮ ಹಕ್ಕು ಎಂದೂ ಅರಿಯದ ರೈತರನ್ನು ಸಂಘಟಿಸಿದವರು ವಲ್ಲಭಭಾಯಿ ಪಟೇಲ್, ರಾಜೇಂದ್ರ ಸಿಂಗ್, ಶರದ ಜೋಷಿ, ನಂಜುAಡಸ್ವಾಮಿ ಅಂತಹವರು. ರೈತರನ್ನು ಸಂಘಟಿಸಿ ಜಾಗೃತಿ ಮೂಡಿಸಿ ಅವರ ಬಾಳ ಕತ್ತಲೆಯಲ್ಲಿ ಬೆಳಕನ್ನು ತಂದರು.
ಹರಿತ್ ಕ್ರಾಂತಿಯ ಹರಿಕಾರ ಪ್ರೊ. ಸ್ವಾಮಿನಾಥನ್, ಶ್ವೇತ ಕ್ರಾಂತಿಯ ನೇತಾರ ಡಾ. ವರ್ಗೀಸ್ ಕುರಿಯನ್ ಮತ್ತು ಸಹಕಾರಿ ಚಳವಳಿಯ ಫ್ರೆಡರಿಕ್ ನಿಕೋಲ್ಸನ್ ಇವರುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಹಾಯಕರಾಗಿ ತೊಳಲಾಡುತ್ತಿದ್ದ ಅಸಂಘಟಿತರನ್ನು, ಲಕ್ಷಾಂತರ ರೈತರನ್ನು, ಆರ್ಥಿಕವಾಗಿ ಹಿಂದುಳಿದವರನ್ನು ಹುರಿದುಂಬಿಸಿ, ದುಡಿಮೆಗೆ ತೊಡಗಿಸಿ ಅವರ ಬಾಳಲ್ಲಿ ಆವರಿಸಿದ್ದ ಕತ್ತಲನ್ನು ಕಿತ್ತೆಸೆದು ಬೆಳಕು ತಂದವರು.
ಆರ್ಥಿಕವಾಗಿ ದುರ್ಬಲರಾದವರಿಗೆ ಉಳಿತಾಯದ ಮಹತ್ವ ಹೇಳಿಕೊಟ್ಟು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಯ ಕಹಳೆ ಊದಿದವರು ಟಿ. ಎ. ಪೈ, ಸಿದ್ದನಗೌಡ ಪಾಟೀಲ್ ಅವರು ಲಕ್ಷಾಂತರ ಜನರ ಬಡತನದ ಬೇಗೆ ನೀಗಿ ಉಳಿತಾಯದ ನಂದಾದೀಪವನ್ನು ಬೆಳಗಿದವರು. ಸ್ವಸಹಾಯ ಪದ್ಧತಿಯನ್ನು ಹುಟ್ಟು ಹಾಕಿ, ಸ್ತ್ರೀಯರನ್ನು ಉದ್ಯೋಗಶೀಲರನ್ನಾಗಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದವರು ಶ್ರೀ ಧರ್ಮಸ್ಥಳ ಮಂಜುನಾಥ ಟ್ರಸ್ಟ್ನವರು. ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ, ಸ್ಥಳೀಯರನ್ನೇ ಸಂಘಟಿಸಿ ಸ್ವಸಹಾಯ ಗುಂಪುಗಳನ್ನು ರಚಿಸಿ ಅವರ ಬಾಳ ಬೆಳಕನ್ನು ಅವರೇ ಕಂಡುಕೊಳ್ಳುವಂತೆ ಮಾಡುವ ಪ್ರಯತ್ನವು ನಿಜಕ್ಕೂ ಅನನ್ಯವಾದುದು.
ಉತ್ತರ ಕರ್ನಾಟಕವು ವೀರಶೈವ ಮಠಾಧೀಶರ ಪ್ರಭಾವಕ್ಕೊಳಗಾಗಿ ಅವರ ಕಾರಣದಿಂದಲೇ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವಾದ ತಾಣ. ಅಂತಹ ಮಠಗಳಲ್ಲೊಂದು ಹಾನಗಲ್ಲಿನ ಕುಮಾರಸ್ವಾಮಿಗಳ ಮಠ. ೨೦ನೇ ಶತಮಾನದ ಆದಿ ಭಾಗದಲ್ಲಿ ಉಳಿದೆಲ್ಲ ಮಠಾಧೀಶರಿಗೆ ಅವರಿಂದ ಮಾರ್ಗದರ್ಶನ ಸಿಗುತ್ತಿತ್ತು. ಬಾಗಲಕೋಟೆಯ ಸಜ್ಜನರಾದ ಶ್ರೀ ಮಲ್ಲಣ್ಣಾರ್ಯರು ಸಾಕಷ್ಟು ಧಾರ್ಮಿಕ, ಸಾಮಾಜಿಕ ಚಿಂತನೆ ಉಳ್ಳವರಾಗಿದ್ದರು. ಅವರು ಒಂದು ಸಲ ಹಾನಗಲ್ಗೆ ಕುಮಾರಸ್ವಾಮಿಗಳ ಹತ್ತಿರ ಹೋಗಿದ್ದರು. ಆಗ ಸ್ವಾಮಿಗಳು ತೂಗು ಮಂಚದಲ್ಲಿ ಹಣ್ಣುಗಳನ್ನು ಮೆಲ್ಲುತ್ತ ವಿಶ್ರಾಂತಿಯ ಮೂಡ್‌ನಲ್ಲಿದ್ದರು. ಇದನ್ನು ನೋಡಿದ ಮಲ್ಲಣ್ಣಾರ್ಯರಿಗೆ ಸಿಟ್ಟು ಬಂತು. ಉತ್ತರ ಕರ್ನಾಟಕದ ಇಡೀ ಜನಾಂಗ ಶಿಕ್ಷಣವಿಲ್ಲದೇ, ಉದ್ಯೋಗ, ಕೆಲಸಗಳಿಲ್ಲದೇ, ಯಾವುದೇ ಅಭಿವೃದ್ಧಿಯನ್ನು ಕಾಣದೇ ಒದ್ದಾಡುತ್ತಿದೆ. ಒಬ್ಬ ಮಠಾಧಿಪತಿಯಾಗಿ ಇವುಗಳ ಬಗ್ಗೆ ಚಿಂತಿಸಿ, ಪರಿಹಾರಕ್ಕಾಗಿ ಏನಾದರೂ ಉಪಾಯ ಮಾಡುವುದನ್ನು ಬಿಟ್ಟು, ಹೀಗೆ ದ್ರಾಕ್ಷಿ-ಗೋಡಂಬಿ ತಿನ್ನುತ್ತ ಆರಾಮಾಗಿರುವುದು ಸರಿಯೇ''? ಎಂದು ಸ್ವಾಮಿಗಳಿಗೆ ನೇರವಾಗಿ ಪ್ರಶ್ನಿಸುತ್ತಾರೆ.ಸಮಾಜೋದ್ಧಾರ ಸೇವೆ ಮಾಡುವುದೇ ಸ್ವಾಮೀಜಿಗಳ ಪ್ರಥಮ ಆದ್ಯತೆ ಕರ್ತವ್ಯ. ಈ ಕುರಿತು ಚಿಂತಿಸಿ, ಕಾರ್ಯ ಪ್ರವೃತ್ತರಾಗಿ'' ಎಂದು ನುಡಿಯುತ್ತಾರೆ. ಪೂಜೆ, ಪ್ರಸಾದಗಳಲ್ಲಿ ಮಾತ್ರ ತೊಡಗಿದ್ದ ಸ್ವಾಮಿಗಳಿಗೆ ಇವರ ಮಾತಿನಲ್ಲಿ ಬೆಳಕು ಕಂಡಿತು. ತಮ್ಮ ತಪ್ಪಿನ ಅರಿವಾಗಿ ಮಠ ಬಿಟ್ಟು ಹೊರಬಿದ್ದರು. ಎಲ್ಲೆಡೆ ಸಂಚರಿಸಿ ಜನರ ನೋವು, ಸಂಕಷ್ಟಗಳನ್ನು ಅರಿತರು. ಜನರು ಹಿಂದುಳಿದಿರುವ ಕಾರಣವನ್ನು ಅರಿತರು. ಪರಿಹಾರಕ್ಕಾಗಿ ಯೋಚಿಸಿದರು. ಅನೇಕ ಸಮಸ್ಯೆಗಳ ಪರಿಹಾರಕ್ಕೆ ಒಂದೇ ಉಪಾಯ ಶಿಕ್ಷಣವೆಂದು ಅರಿತರು. ಬೀಳೂರು, ಬಿಜಾಪುರ, ಗುಲಬರ್ಗ, ಬಳ್ಳಾರಿ, ಬೀದರ್ ಎಲ್ಲೆಡೆಗಳ ಸ್ವಾಮೀಜಿಗಳ ಸಭೆ ಕರೆದು ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರದಾನ, ಅನ್ನದಾಸೋಹ ನಡೆಸುವಂತೆ ಪ್ರೇರೇಪಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಿಡಿದಿದ್ದ ಗ್ರಹಣವನ್ನು ಬಿಡಿಸಿದರು. ಹೀಗೆ ಪ್ರಾರಂಭವಾದ ಅಕ್ಷರ ಕ್ರಾಂತಿ ಮತ್ತು ಜಾಗರಣೆಯಿಂದಾಗಿ ಕತ್ತಲಲ್ಲಿ ಮುಳುಗಿ ಹಿಂದುಳಿದಿದ್ದ ಉತ್ತರ ಕರ್ನಾಟಕವು ಈಗ ಮೈಕೊಡವಿ ಎದ್ದು ನಿಲ್ಲುತ್ತಿದೆ. ಹೀಗ ಅನೇಕ ಮಹನೀಯರು, ಮಹಿಳೆಯರು ಕೇವಲ ತಮ್ಮ ಏಳಿಗೆಗಾಗಿ ಚಿಂತಿಸದೇ ಸುತ್ತಲಿನ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರಿಂದಾಗಿ ಲಕ್ಷಾಂತರ ಜನ ಉದ್ಧಾರದ ಬೆಳಕನ್ನು ಕಂಡಿದ್ದಾರೆ. ಮತ್ತೊಬ್ಬರ ಬದುಕಿನಲ್ಲಿ ಬೆಳಕು ತರುವ ಬಾಳು ನಮ್ಮದಾದರೆ ನಮ್ಮ ಜೀವನಕ್ಕೂ ಒಂದು ಅರ್ಥ ಬರುತ್ತದೆ. ಬದುಕಿದ್ದೂ ಸಾರ್ಥಕವೆನಿಸುತ್ತದೆ. ಬೆಳಕಿನ ಹಬ್ಬ ದೀಪಾವಳಿಯ ದಿನ ನಾವು ಮತ್ತೊಬ್ಬರಿಗೆ ಬೆಳಕಾಗುವ ಸಂಕಲ್ಪವನ್ನು ಮಾಡಬಹುದೇ? ಯೋಚಿಸಿ.