ಕನಕ ಸಾಹಿತ್ಯದಲ್ಲಿ ಜೀವನ ಮೌಲ್ಯ
ನಂಬಿಕೆ ಎನ್ನುವುದು ಮನುಷ್ಯ ಮನುಷ್ಯರ ನಡುವೆ, ಪ್ರಕೃತಿಯಲ್ಲಿ ಜೀವಿಜೀವಿಗಳ ನಡುವೆ ಇರುವ ಮೌಲ್ಯ. ಒಂದು ಅಗೋಚರ ಶಕ್ತಿ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕಷ್ಟಗಳ ಸರಮಾಲೆ ಬಂದರೂ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕುವುದು ಈ ಅಗೋಚರ ಶಕ್ತಿಯ ನಂಬಿಕೆಯಲ್ಲಿ. ತುತ್ತು ಅನ್ನಕ್ಕೆ ತತ್ವಾರವಿದ್ದರೂ ಹುಟ್ಟಿಸಿದವನು ಹುಲ್ಲು ಮೇಯಿಸುವುದಿಲ್ಲ ಎಂಬ ನಂಬಿಕೆಯಲ್ಲಿ. ಅದಕ್ಕೆ ಕನಕದಾಸರು `ತಲ್ಲಣಿಸದಿರು ಕಂಡ್ಯ ತಾಳು ಮನವೇ' ಎಂಬ ಕೀರ್ತನೆಯಲ್ಲಿ ಪ್ರತಿಯೊಂದು ಜೀವಿಗೂ ತಾಯ್ತನದ ಸಾಂತ್ವನವನ್ನು ಹೇಳುತ್ತಾರೆ.
ಕನಕದಾಸರು ಒಬ್ಬ ಹರಿದಾಸರಷ್ಟೇ ಅಲ್ಲ. ಅವರು ತಿಮ್ಮಪ್ಪ, ತಿಮ್ಮಪ್ಪನಾಯಕ, ಕನಕಪ್ಪ, ಕನಕನಾಯಕ, ಕನಕದಾಸ, ಸಾಮಾಜಿಕ ಚಿಂತಕ, ಭಕ್ತ, ಸಂತ, ಮಹಾತ್ಮ, ವಿಶ್ವಮಾನವ, ವಿಶ್ವಬಂಧು ದಾರ್ಶನಿಕರಾಗಿ ಖ್ಯಾತಿ ಪಡೆದವರು.
ಮನುಷ್ಯ ಯಾವುದನ್ನೆಲ್ಲ ಅನುಭವಿಸಬೇಕು, ಅವನ್ನೆಲ್ಲ ಅನುಭವಿಸಿದರೆ ಮಾತ್ರ ದೈವತ್ವಕ್ಕೇರಲು ಸಾಧ್ಯ. ಇದು ಒಂದು ಅದ್ಭುತ ದರ್ಶನವೇ ಸರಿ. ಕನಕದಾಸರು ಅನುಭವಿಸಿದ ಬದುಕಿನ ಬವಣೆ ಅಲ್ಪವಾದುದಲ್ಲ. ಬದುಕಿನ ಘನಘೋರ ಸಂಗ್ರಾಮ ಸಂಘರ್ಷಗಳ ನಡುವೆ ಹೋರಾಡಿ ಎದ್ದು ಬಂದು, ಬದುಕನ್ನು ಎದುರಿಸಿದ ರೀತಿ ಅನುಭವದಿಂದ ಏರಿದ ಅನುಭಾವ ಸ್ಥಿತಿ. ಆದ್ದರಿಂದ ಅವರ ಬದುಕು ಹಾಗೂ ಅವರ ಕಾವ್ಯ ಕೀರ್ತನೆಗಳು ಜೀವನ ಮೌಲ್ಯಗಳನ್ನು ಹೇಳುವುದರೊಂದಿಗೆ ದಾರಿದೀಪದಂತೆ ಮತ್ತೆ ಮತ್ತೆ ಪ್ರಸ್ತುತವಾಗುತ್ತವೆ.ಮಣ್ಣಲಿ ಮಾಡಿಹ ಮಡಕೆ ಮಸಿಯಾಗಿ ಮಣ್ಣಿಂದಲೇ ತಿಕ್ಕೆ ಮಸಿ ಹೋಗುವುದು ಕಣ್ಣು ಕಿವಿಗಳ ನಡೆಪ ಮನ ಮಲಿನವಾಗೆ ಕಣ್ಣು ಕಿವಿಗಳಿಂದಲೇ ಮನ ತಿದ್ದಲಾಗುವುದೇ ಎಂಬ ಪ್ರಶ್ನೆಯ ಈ ಸಾಲುಗಳು ಮಣ್ಣಿಂದಲೇ ಹುಟ್ಟಿ, ಮಣ್ಣಿಂದಲೇ ಬೆಳೆದು ಮಣ್ಣಿಂದಲೇ, ಮಣ್ಣಿಗೆ ಹೋಗುವ ಜೀವ. ಈ ತತ್ವ ಜ್ಞಾನ ಬಹಳ ದೊಡ್ಡದು. ಇಹದಲ್ಲೇ ಇರುವ ಪಥಕ್ಕೆ ಒಯ್ಯುವ ಮಾತು. ಇದು ನಮ್ಮ ಮನಸ್ಸು ಒಳ್ಳೆಯದು ಕೆಟ್ಟದ್ದು ಎರಡನ್ನೂ ಹೇಳುತ್ತಾ, ಎರಡನ್ನೂ ಕೇಳದ ಸ್ಥಿತಿಗೆ ಹೋದಾಗ ಆತ್ಮದರ್ಶನವಾಗುತ್ತದೆ. 'ರಾಮಧಾನ್ಯ ಚರಿತೆ' ಸಾಮಾಜಿಕ ರಾಮಾಯಣವಾಗಿ ಎಲ್ಲ ಕಾಲಕ್ಕೂ ನಿಲ್ಲುವ ಸಾರ್ವಕಾಲಿಕ ವಿಶ್ವಾತ್ಮಕ ಮಾನವೀಯ ಮೌಲ್ಯವನ್ನು ಸಾರುತ್ತದೆ. ಐಷಾರಾಮಿ ಬದುಕಿನ ಅಹಂಕಾರದಿಂದ ಬಹಿರಾಡಂಬರದಿಂದ ಬದುಕುವವರು, ಗುಣವಂತರಾದ ಸತ್ವಯುತರಾದ ಪರೋಪಕಾರಿಗಳಾದ ಸಮಾಜಮುಖಿಗಳಾದ ದುಡಿಮೆಗಾರರ ಶ್ರಮದಿಂದ ತಾವು ಬದುಕುತ್ತಿದ್ದರೂ, ಅವರನ್ನು ಬಡವರೆಂದು ಕೀಳಾಗಿ ಕಾಣುವ ಅಕ್ಕಿಯಂತವರು ಸಮಾಜಕ್ಕೆ ನಿರುಪಯುಕ್ತರು. ದುಡಿಮೆಯೇ ಸಮಾಜದ, ಜೀವನದ ಸಾರ್ವಕಾಲಿಕ ಸತ್ಯ, ಕೇಂದ್ರ ಮೌಲ್ಯ. ಆದುದರಿಂದಲೇ ರಾಮಧಾನ್ಯ ಚರಿತೆ ಕಾಲ, ದೇಶ ಭಾಷೆ ಮೀರಿ ನಿಲ್ಲುವ ಕಾಯಕ ಕಾವ್ಯ. ಸನ್ನಿವೇಶಗಳನ್ನು ನಾಟಕದಂತೆ ಕಟ್ಟಿಕೊಡುತ್ತಾ ಚಿಂತನೆಗೆ ಹಚ್ಚುವುದಲ್ಲದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಾದ ಅಗತ್ಯವನ್ನು ಮಾನವತಾವಾದವನ್ನು ಎತ್ತಿ ಹಿಡಿಯುತ್ತದೆ. ಕುಲ ಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ಎಂಬ ಕೀರ್ತನೆಯಲ್ಲಿ
ಕೆಸರಲ್ಲಿ ಅರಳಿದ ತಾವರೆಯನ್ನು ತಂದು ಪದ್ಮನಾಭನಿಗೆ ಅರ್ಪಿಸಲಿಲ್ಲವೇ? ಹಸುವಿನ ಮಾಂಸದಲ್ಲಿ ಉತ್ಪತ್ತಿಯಾಗುವ ಹಾಲನ್ನು ಉನ್ನತ ಕುಲದವರೆನಿಸಿಕೊಂಡವರು ಕುಡಿಯಲಿಲ್ಲವೇ? ಮೃಗದ ಮೈಯಲ್ಲಿ ಹುಟ್ಟಿದ ಕಸ್ತೂರಿಯನ್ನು ಮೈಗೆ ಪೂಸಿಕೊಳ್ಳುವುದಿಲ್ಲವೇ? ನಾರಾಯಣನು ಯಾವ ಕುಲದವ? ಶಿವ ಯಾವ ಕುಲದವ? ಆತ್ಮ ಯಾವ ಕುಲ? ಜೀವ ಯಾವ ಕುಲ? ಎಂಬ ತಾತ್ವಿಕ ಪ್ರಶ್ನೆ .ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲೀರಾ... ಜಲವೇ ಸಕಲ ಕುಲಕ್ಕೂ ತಾಯಿ. ಜಲದ ಕುಲವೇನು? ಜಲದ ಬೊಬ್ಬುಳಿಯಂತೆ, ಈ ದೇಹ ಸ್ಥಿರವಲ್ಲ. ಎಲ್ಲವೂ ಹರಿಮಯ. ಅವನ ಚರಣಕಮಲ ಕೀರ್ತಿಸುವವನೇ ನಿಜವಾದ ಕುಲಜ. ಪ್ರತಿಯೊಂದು ಜೀವಿ ಹುಟ್ಟಿಬರುವುದು ಹೆಣ್ಣಿನ ಯೋನಿಯಲ್ಲಿ. ಮೆಟ್ಟುವುದು ಒಂದೇ ಭೂಮಿಯನ್ನು. ಆಹಾರ ಬೇಯಿಸುವುದು ಒಂದೇ ಅಗ್ನಿಯಲ್ಲಿ ಹೀಗೆಂದ ಮೇಲೆ ಜಾತಿಯಿಂದ ಶ್ರೇಷ್ಠ, ಕನಿಷ್ಠ ಎಂಬ ನಿರ್ಧಾರ ಅದೊಂದು ಭ್ರಮೆ. ಜಾತಿ ದೇವ ನಿರ್ಮಿತವಲ್ಲ, ಮಾನವ ನಿರ್ಮಿತ ಎಂಬ ಸಂದೇಶ ಇಲ್ಲಿದೆ.
ನಾನು ನೀನು ಎನ್ನದಿರು ಹೀನ ಮಾನವ
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ
ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೆನೆಲೊ
ಅನ್ನದಿಂದ ಬಂದ ಕಾಮ ನಿನ್ನದೆನೆಲೊ
ಕರ್ಣದಿಂದ ಬರುವ ಘೋಷ ನಿನ್ನದೆನೆಲೊ
ನಿನ್ನ ಬಿಟ್ಟು ಪೋಪ ದೇಹ ನಿನ್ನದೆನೆಲೊ….
ಜಾತಿ ಕುಲ ಗೋತ್ರಕ್ಕೆ ಅಂಟಿ ಕುಳಿತವರ ಬೇರನ್ನೇ ಅಲುಗಾಡಿಸಬಲ್ಲ, ಬಾಳಿನ ನಶ್ವರತೆಯ ಭಯ ಹುಟ್ಟಿಸಿ, ಜೀವನ ದರ್ಶನ ಮೂಡಿಸಿ ಶೂನ್ಯದೊಳಗೆ ಬಾಗಿ ನೋಡುವಂತೆ ಮಾಡಬಲ್ಲ ವಿರಕ್ತ ಕೀರ್ತನೆಯಿದು.
ಮನುಷ್ಯ ಹೆಜ್ಜೆ ಹೆಜ್ಜೆಗೂ ತಾರತಮ್ಯವನ್ನು ತಾಳುತ್ತಾನೆ. ಆ ತಾರತಮ್ಯದ ಹಿನ್ನೆಲೆಯಲ್ಲಿ ವೃತ್ತಿಯಲ್ಲಿಯೂ ತನಗೆ ಸಮಾನರಿಲ್ಲೆಂಬ ಅಹಂವಿಕೆಯಿಂದ ಇರುತ್ತಾನೆ. ಅದಕ್ಕೆ ಕನಕದಾಸರು ವೃತ್ತಿಯಲ್ಲಿನ ತಾರತಮ್ಯವನ್ನು ತೊಡೆದು ಹಾಕಿ `ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂಬ ಮೌಲ್ಯ ಸಂದೇಶವನ್ನು ಸಾರುತ್ತಾರೆ. ಕನಕದಾಸರ ಕಾವ್ಯ ಕೀರ್ತನೆಗಳು ಹೆಜ್ಜೆ ಹೆಜ್ಜೆಗೂ ಜೀವನ ಮೌಲ್ಯಗಳನ್ನು ಎತ್ತಿ ಹೇಳುತ್ತದೆ.
- ಡಾ.ಜಗನ್ನಾಥ ಆರ್ ಗೇನಣ್ಣವರ
ಸಂಶೋಧಕರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಹಾವೇರಿ ಜಿಲ್ಲೆ