ಕನ್ನಡದಲ್ಲಿ ಬರೆದು ಇಂಗ್ಲಿಷ್‌ನಲ್ಲಿಯೂ ಬರೆಯಿರಿ
ಇನ್ನು ಮುಂದೆ ಡಾಕ್ಟರುಗಳು ಕನ್ನಡದಲ್ಲಿಯೇ ಔಷಧಿ-ಗುಳಿಗೆ ಬರೆದುಕೊಡಬೇಕು ಎಂದು ಊರತುಂಬ ಸುದ್ದಿ ಹಬ್ಬಿದಕೂಡಲೇ ಆರ್.ಎಂ.ಪಿ ಡಾಕ್ಟರ್ ಡಾ. ತಿರ್ಮೂಲಿ ಭಯಂಕರ ಖುಷಿಪಟ್ಟಿದ್ದ. ನಾವು ಕನ್ನಡಿಗರು… ಕನ್ನಡದಲ್ಲಿ ಬರೆಯದಿದ್ದರೆ ಹೇಗೆ? ನನಗೆ ಈ ಹಿಂದೆಯೇ ಐಡಿಯಾ ಬಂದಿತ್ತು. ನಾನೂ ಸಹ ಕನ್ನಡದಲ್ಲಿ ಬರೆದುಕೊಟ್ಟಿದ್ದೆ. ಆ ಫಾರ್ಮಸಿ ಫಕೀರನಿಗೆ ಗೊತ್ತಾಗದೇ ವಾಪಸ್ ಕಳಿಸಿದ್ದ. ಈಗ ಕನ್ನಡದಲ್ಲಿಯೇ ಬರೆಯುತ್ತೇನೆ ಎಂದು ನಿರ್ಧರಿಸಿದ. ಮರುದಿನದಿಂದ ದವಾಖಾನೆಗೆ ಬರುವವರಿಗೆ ಕನ್ನಡದಲ್ಲಿಯೇ ಔಷಧಿ ಬರೆಯತೊಡಗಿದ. ತಳವಾರ್ಕಂಟಿಗೆ ವಾರದಿಂದ ಕೆಮ್ಮು ನೆಗಡಿ ಆಗಿತ್ತು. ದಿನಾಲೂ ಬಿಸಿನೀರಿಗೆ ಅರಿಷಿಣ ಪುಡಿ ಹಾಕಿ ಕುಡಿಯುತ್ತಿದ್ದ ಆದರೂ ಕಡಿಮೆಯಾಗಿರಲಿಲ್ಲ. ಯಾಕಿದ್ದೀತು ಎಂದು ಮರುದಿನ ಡಾ. ತಿರ್ಮೂಲಿ ದವಾಖಾನೆಗೆ ಹೋದ. ಏನಾಗಿದೆ ಎಂದು ಕೇಳಿದಾಗ ಒಂದಕ್ಕೆರಡು ಮಾಡಿ ಕೆಮ್ಮು ನೆಗಡಿಯ ಬಗ್ಗೆ ಹೇಳಿದ. ಓಹೋ ಎಂದು ವ್ಯಂಗ್ಯವಾಗಿ ನಕ್ಕ ಡಾ. ತಿರ್ಮೂಲಿ ಕೆಮ್ಮು ಶೀಘ್ರ ಕಡಿಮೆಯಾಗುವ ಗುಳಿಗೆ ಮುಂಜಾನೆ ಮತ್ತು ಸಂಜೆ ಎರಡೂ ಹೊತ್ತು ಎಂದು ಬರೆದು ಫಾರ್ಮಸಿಯಲ್ಲಿ ತೊಗೋ ಎಂದು ಬರೆದುಕೊಟ್ಟ. ಆತ ಕನ್ನಡದಲ್ಲಿಯೇ ಬರೆದಿದ್ದನಾದರೂ ಅದು ಸೊಟ್ಟ-ಪಟ್ಟಾ ಆಗಿ ಅದು ಕನ್ನಡ-ತೆಲುಗು ಮಿಶ್ರಿತವಾದಂತಿತ್ತು. ಇದನ್ನು ಎಡವಟ್ಟು ಮಾಡಿಕೊಂಡ ಫಾರ್ಮಸಿ ಫಕೀರ.. ಅದ್ಯಾವುದೋ ಮಾತ್ರೆ ಕೊಟ್ಟ. ಮಾತ್ರೆ ತೆಗೆದುಕೊಂಡ ಕಂಟಿಗೆ ಮರುದಿನದಿಂದ ಏನೇನೋ ಶುರುವಾಯಿತು. ಮತ್ತೆ ತಿರ್ಮೂಲಿ ಡಾಕ್ಟರ್ ಕಡೆ ಹೋಗಿ ಸಾಹೇಬ್ರೆ ನೋಡಿ ಹಿಂಗಿಂಗೆ ಆಗ್ತಾ ಇದೆ ಅಂದಾಗ… ನೀನು ಯಾವ ಗುಳಿಗೆ ತೆಗೆದುಕೊಂಡೆ? ಎಂದು ಕೇಳಿದಾಗ… ಫಾರ್ಮಸಿಯಲ್ಲಿ ತೆಗೆದುಕೊಂಡಿದ್ದನ್ನು ತೋರಿಸಿದ. ಅಯ್ಯೋ ಫಾರ್ಮಸಿ ಫಕೀರ ಎಡವಟ್ಟು ಮಾಡಿದಾನೆ ಎಂದು ಮತ್ತೆ ಬೇರೆ ಮಾತ್ರೆಯನ್ನು ಕನ್ನಡದಲ್ಲಿಯೇ ಬರೆದುಕೊಟ್ಟ. ಈ ಬಾರಿ ಅದು ತಮಿಳು ಅಕ್ಷರದ ಹಾಗೆ ಇತ್ತು. ಫಕೀರ ಆ ಮಾತ್ರೆ ಕೊಟ್ಟ. ಅವುಗಳನ್ನು ತೆಗೆದುಕೊಂಡ ಕಂಟಿಗೆ ಮತ್ತೆ ಬೇರೆ ಸಮಸ್ಯೆ ಶುರುವಾಯಿತು. ಈ ಬಾರಿ ತಿರ್ಮೂಲಿ ದವಾಖಾನೆಯಲ್ಲಿ ಕುಳಿತ ಕಂಟಿ… ಡಾಕ್ಟರ್ ಸಾಹೇಬ್ರೆ… ಗುಳಿಗೆ ಹೆಸರನ್ನು ಕನ್ನಡದಲ್ಲಿ ಬರೆಯಿರಿ… ಅದರ ಕೆಳಗೆ ಇಂಗ್ಲಿಷಿನಲ್ಲಿಯೂ ಬರೆಯಿರಿ ಎಂದು ಹೇಳಿದ. ತಿರ್ಮೂಲಿ ಹಾಗೆ ಮಾಡಿದ. ಫಕೀರ ಗುಳಿಗೆ ಕೊಟ್ಟ ಈ ಬಾರಿ ಕಂಟಿಗೆ ಕೆಮ್ಮು ಕಡಿಮೆ ಆಯಿತು.