For the best experience, open
https://m.samyuktakarnataka.in
on your mobile browser.

ಕನ್ನಡದ ಜಾತ್ರೆಯಲ್ಲಿ ಕಂಗೊಳಿಸಿದ ಬಸವಣ್ಣ

04:54 PM Dec 21, 2024 IST | Samyukta Karnataka
ಕನ್ನಡದ ಜಾತ್ರೆಯಲ್ಲಿ ಕಂಗೊಳಿಸಿದ ಬಸವಣ್ಣ

ಪೋಟೋ ಸೆಲ್ಪಿಗೆ ಮುಗಿಬಿದ್ದ ಜನತೆ : ಲಕ್ಷಾಂತರ ಮಂದಿಗೆ ವಿಶ್ವಗುರುವಿನ ದರ್ಶನ

ಮಂಡ್ಯ : ಐತಿಹಾಸಿಕ ಕನ್ನಡ ಹಬ್ಬ ಮಂಡ್ಯದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೇಂದ್ರ ಬಿಂದುವಾಗಿದ್ದಾರೆ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರು.

ಸಮ್ಮೇಳನದ ಬೃಹತ್ ಪ್ರವೇಶದ್ವಾರದಲ್ಲಿ ಸರ್ವರಿಗೂ ದರ್ಶನ ನೀಡುತ್ತಿರುವ ಸಮಾನತೆಯ ಹರಿಕಾರ ಬಸವಣ್ಣನವರ ಮೂರ್ತಿ ಮುಂದೆ ಲಕ್ಷಾಂತರ ಮಂದಿ ಕನ್ನಡಿಗರು ಸೆಲ್ಪಿಗೆ ಮುಗಿಬಿದ್ದಿದ್ದಾರೆ.

ಶಾಲಾಕಾಲೇಜು ವಿದ್ಯಾರ್ಥಿಗಳು, ಬಸವಭಕ್ತರು , ಸಾಹಿತಿಗಳು ವಚನದ ಮೂಲಕ ಸರ್ವರಿಗೂ ಕನ್ನಡ ಕಲಿಸಿದ ಅಣ್ಣ ಬಸವಣ್ಣನವರಿಗೆ ಪುಷ್ಪನಮನ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣ ಅವರನ್ನು ಕಡೆಗಣಿಸಲಾಗಿದೆ ಎಂಬ ಲಿಂಗಾಯಿತ ಮಹಾಸಭಾ ಹಾಗೂ ಬಸವಣ್ಣನವರ ಅನುಯಾಯಿಗಳ ಅಸಮಾಧಾನವನ್ನು ಜಿಲ್ಲಾಡಳಿತ ಹಾಗೂ ಕಸಪಾ ಕೊನೆಗೂ ಸರಿಪಡಿಸಿದೆ.

೧೨ನೇ ಅನುಭವ ಮಂಟಪದ ಮೂಲಕ ಸಮಾಜದ ಅಸಮಾನತೆಯ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ ಸಮಾನತೆಯ ಹರಿಕಾರ ಬಸವಣ್ಣ ಹಾಗೂ ರಾಷ್ಟ ಕವಿ ಕುವೆಂಪು ಅವರ
ಭಾವಚಿತ್ರವನ್ನು ಪ್ರಧಾನ ವೇದಿಕೆಯಲ್ಲಿ ಅಳವಡಿಸಿರುವುದು ಸಾಹಿತ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇಂತಹ ಮಹಾನ್ ಪುರುಷರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಮುಖ್ಯತೆ ಸಿಗಬೇಕೆಂದು ಹಲವು ಪ್ರಗತಿಪರರು ಹಾಗೂ ಲಿಂಗಾಯತ ಮಹಾಸಭಾ ಸರ್ಕಾರದ ಗಮನಸೆಳೆದಿತ್ತು.

ಸರ್ಕಾರವೇ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕೆಂಬ ಆದೇಶ ಹೊರಡಿಸಿದ್ದರೂ, ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಕಡೆಗಣಿಸಲಾಗಿತ್ತು.

ಲಿಂಗಾಯಿತ ಮಹಾಸಭಾ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ಮಾಧ್ಯಮದ ಮೂಲಕ ಸರ್ಕಾರದ ಗಮನ ಸೆಳೆದು ಪ್ರತಿಭಟನೆಯನ್ನೂ ನಡೆಸಿ, ಬಸವಣ್ಣ ಅವರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಆದ್ಯತೆ ನೀಡಬೇಕೆಂಬ ಆಗ್ರಹ ಮಾಡಿದ್ದಲ್ಲದೆ, ಸರ್ಕಾರಕ್ಕೆ ಮನವಿ ಸಲ್ಲಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಸಚಿವ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದು ಆಗಿರುವ ತಪ್ಪನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಕಸಾಪ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಕೊನೆಗೂ ಸಮ್ಮೇಳನದ ಮಹಾದ್ವಾರದಲ್ಲಿ ಬಸವಣ್ಣನವರ ಪ್ರತಿಮೆ ಅಳವಡಿಸಿ ಲೋಪ ಸರಿಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಯೋಗಶಿಕ್ಷಕ ಶಿವರುದ್ರಪ್ಪ ಸಾರಥ್ಯದಲ್ಲಿ ನೂರಾರು ಮಂದಿ ಸಾಹಿತ್ಯಾಸಕ್ತರು ಬಸವಣ್ಣನವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.

Tags :