For the best experience, open
https://m.samyuktakarnataka.in
on your mobile browser.

ಕನ್ನಡಿಗರಿಗೆ ಮೀಸಲಾತಿ ನಿರ್ಣಯ ಮಂಡನೆ

10:56 PM Feb 22, 2024 IST | Samyukta Karnataka
ಕನ್ನಡಿಗರಿಗೆ ಮೀಸಲಾತಿ ನಿರ್ಣಯ ಮಂಡನೆ

ವಿಧಾನಪರಿಷತ್: ಕರ್ನಾಟಕದಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ ಖಾಸಗಿ ನಿರ್ಣಯ ಮಂಡಿಸಿದರು.
ಮೇಲ್ಮನೆಯಲ್ಲಿ ಭೋಜನ ವಿರಾಮದ ಬಳಿಕ ನಿರ್ಣಯ ಮಂಡಿಸಿದ ಅವರು, ಹಲವಾರು ಖಾಸಗಿ ಮತ್ತು ಸರಕಾರಿ ಸಂಸ್ಥೆಗಳು ರಾಜ್ಯದಲ್ಲಿವೆ. ಆದರೆ, ಅಲ್ಲಿ ಕೆಲಸ ನಿರ್ವಹಿಸುವವರು ಬಹುತೇಕರು ಹೊರ ರಾಜ್ಯದವರೇ ಇದ್ದಾರೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಕಂಪನಿ ಅಥವಾ ಕಚೇರಿ ಪ್ರಾರಂಭಿಸುವ ಪೂರ್ವದಲ್ಲಿ ಅದಕ್ಕೆ ಕೆಲವು ಮಾನದಂಡ ಹಾಕುವ ಮೂಲಕ ಸ್ಥಾಪನೆ ಮಾಡುವಂತೆ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
೧೯೮೩ರಲ್ಲಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ಆಗ ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡುವ ಮೂಲಕ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದರು. ೧೯೮೬ರಲ್ಲಿ ಸಮಿತಿಯು ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಆದರೆ, ಸರಕಾರ ಈ ಕುರಿತು ಗಮನ ಹರಿಸಿ ವರದಿ ಅನುಷ್ಠಾನ ಮಾಡುವಲ್ಲಿ ಮಾತ್ರ ಮುಂದೆ ಬರುತ್ತಿಲ್ಲ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅದು ಇಂದಿಗೂ ಸಾಧ್ಯವಾಗುತ್ತಿಲ್ಲ. ಆಂಧ್ರಪ್ರದೇಶದಲ್ಲಿ ಶೇ. ೭೫ರಷ್ಟು, ಮಹಾರಾಷ್ಟ್ರದಲ್ಲಿ ಶೇ. ೮೦ ಹೀಗೆ ತಮಿಳನಾಡು, ಓಡಿಸ್ಸಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಿ ಮತ್ತು ಡಿ ವೃಂದದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಇಲ್ಲಿ ಮಾತ್ರ ಹೊರ ರಾಜ್ಯದಿಂದಲೇ ಜನರನ್ನು ಕರೆತಂದು ದುಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಸಿಗದೇ ಇಂದು ಸಾಕಷ್ಟು ಕನ್ನಡಿಗರು ಪರದಾಡುವ ಪರಿಸ್ಥಿತಿ ಒದಗಿ ಬಂದಿದೆ. ಆದ್ದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸದಸ್ಯ ನವೀನಕುಮಾರ ಧ್ವನಿಗೂಡಿಸಿ, ಇಂದು ಸಾಕಷ್ಟು ಕಂಪನಿ ಸೇರಿದಂತೆ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕನ್ನಡಿಗರು ಮಾತ್ರ ಕಡಿಮೆ ಆದಾಯ ಬರುವ ಓಲಾ, ಊಬರ್, ಜೊಮ್ಯಾಟೊ, ಆಟೋ ಚಾಲಕ ಹೀಗೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಹೊರ ರಾಜ್ಯದಿಂದ ಬಂದವರು ಮಾತ್ರ ಹೆಚ್ಚಿನ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ. ಇದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಸರಕಾರ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತಂದು ಕನ್ನಡಿಗರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸರಕಾರ ಈ ಕುರಿತು ಗಂಭೀರವಾಗಿದೆ. ಸಮಗ್ರ ಚರ್ಚೆಯ ಬಳಿಕ ಸರಕಾರ ಉತ್ತರ ನೀಡಲಿದೆ ಎಂದರು.