For the best experience, open
https://m.samyuktakarnataka.in
on your mobile browser.

ಕಮಲಕ್ಕನಿಗೆ ಹನುಮಂತನ ಆಶೀರ್ವಾದ ಟ್ರಂಪೇಸಿಗೆ ದುರುಗಮ್ಮನ ಬೆಂಬಲ

03:00 AM Nov 06, 2024 IST | Samyukta Karnataka
ಕಮಲಕ್ಕನಿಗೆ ಹನುಮಂತನ ಆಶೀರ್ವಾದ ಟ್ರಂಪೇಸಿಗೆ ದುರುಗಮ್ಮನ ಬೆಂಬಲ

ಅಮೆರಿಕದಲ್ಲಿ ಚುನಾವಣೆಯ ವರದಿ ಮಾಡಲು ಮುದ್ದಾಂ ಅಲ್ಲಿಗೆ ತೆರಳಿರುವ ಖ್ಯಾತ ವರದಿಗಾರ ಲಾದುಂಚಿ ರಾಜ ಅಲ್ಲಿಂದಲೇ ವರದಿ ಕಳಿಸುತ್ತಿದ್ದಾನೆ. ಚುನಾವಣೆಯಲ್ಲಿ ಗೆಲ್ಲಲು ಕಮಲಕ್ಕ-ಟ್ರಂಪೇಸಿ ಏನೇನು ಸರ್ಕಸ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಾದ್ಯಂತವಾಗಿ ಬರೆಯುತ್ತಿದ್ದಾನೆ. ಚುನಾವಣೆಯನ್ನು ಅವರು ಹೇಗೆ ಎದುರಿಸಿದರು. ಗೆಲ್ಲಲು ಏನೇನು ಮಾಡುತ್ತಿದ್ದಾರೆ. ಯಾರ ಹತ್ತಿರ ತಾಯತ ಕಟ್ಟಿಸಿಕೊಳ್ಳುತ್ತಿದ್ದಾರೆ, ಯಾವ ಗುಡಿಗೆ ಅಲೆದಾಡುತ್ತಿದ್ದಾರೆ ಎಂಬ ಸ್ಫೋಟಕ ವರದಿ ಸಿದ್ಧಪಡಿಸಿ ಬರೆದಿರುವ ವರದಿ ಇದು…..
ಇಲ್ಲಿ ಕಮಲಕ್ಕ ಟ್ರಂಪೇಸಿ ಇಬ್ಬರೂ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಕಮಲಕ್ಕನ ಹಿಂದೆ ಬೈಡನ್ ಅಲಿಯಾಸ್ ಬುಡ್ಯಾ ನಿಂತಿದ್ದರೆ ಟ್ರಂಪೇಸಿ ಬೆನ್ನ ಹಿಂದೆ ಮಿ. ಚಾಂಡಾಲನು ಗಟ್ಟಿಯಾಗಿ ನಿಂತು ಆತನನ್ನು ಗೆಲ್ಲಿಸಲು ಪಣತೊಟ್ಟಿದ್ದಾನೆ. ಅಲ್ಲದೇ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಖ್ಯಾತ ಜ್ಯೋತಿಷಿ ಕರಿಲಕ್ಷಂಪತಿಯ ಹತ್ತಿರ ಹೋಗಿ ತಾಯತ ಕಟ್ಟಿಸಿಕೊಂಡು ಬಂದಿದ್ದಾರೆ. ಅಲ್ಲದೇ ಕಮಲಕ್ಕ ಮೊದಲಿನಿಂದಲೂ ಬಯಲುನಮಪ್ಪನ ಗುಡಿಗೆ ನಡೆದುಕೊಳ್ಳುತ್ತಾಳೆ. ಹೀಗಾಗಿ ಇಷ್ಟುದಿನ ಆತ ಆಶೀರ್ವದಿಸಿದಂತೆ ಈ ಬಾರಿಯೂ ಆಶೀರ್ವಾದ ಮಾಡುತ್ತಾನೆ ಯಾವುದೇ ಕಾರಣಕ್ಕೆ ಕೈ ಬಿಡುವುದಿಲ್ಲ ಎಂದು ನಂಬಿದ್ದಾಳೆ. ಇತ್ತ ಟ್ರಂಪೇಸಿಯು ಸಜ್ಜಿಹೊಲದ ದುರ್ಗಮ್ಮನ ಪರಮಭಕ್ತ ಗೆದ್ದರೆ ಅದೆಷ್ಟೋ ಕುರಿ ಕಡಿಸುತ್ತೇನೆ ಎಂದು ಬೇಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ದುರುಗಮ್ಮ ದೇವಿ ನನಗೇ ಬೆಂಬಲಿಸುತ್ತಾಳೆ. ನಾನೇ ಗ್ಯಾರಂಟಿ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಅವತ್ತು ನನ್ನ ಕಿವಿಗೆ ಗುಂಡು ಹೊಡೆಸಿದರಲ್ಲಾ… ಅವರು ಚೆನ್ನಾಗಿ ಇರಲಿ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತ ಭಾವನಾತ್ಮಕ ಮಾತುಗಳನ್ನಾಡುತ್ತಿದ್ದಾರೆ. ಆತನಿಗೆ ಹೇಗೆ ಕಣ್ಣೀರು ಹಾಕಬೇಕು ಎನ್ನುವುದನ್ನು ಸುಮಾರಣ್ಣೋರು ವಿಡಿಯೋ ಮಾಡಿ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಕಮಲಕ್ಕನಿಗೆ.. ಸೋದಿಮಾಮಾನು ನೀನು ನಮ್ಮ ತಂಗಿ… ನಿನ್ನ ಹೆಸರಿನ ಸಿಂಬಲ್‌ನಲ್ಲೇ ಇವತ್ತು ನಾವು ಬೆಳೆದಿರುವುದು… ಬೇಡ… ಚಿಂತೆ ಬೇಡ ನಿಮ್ಮದೇ ವಿನ್ನು ಎಂದು ಮೆಸೇಜ್ ಕಳಿಸಿದ್ದಾರಂತೆ. ಮದ್ರಾಮಣ್ಣನ ಗ್ಯಾಂಗ್ ಮಾತ್ರ ಯಾರು ಗೆಲ್ಲುತ್ತಾರೋ ಅವರನ್ನು ಪ್ರಚಾರಕ್ಕೆ ಕರೆಸೋಣ ಸುಮ್ಮನಿರಿ ಎಂದು ಹೇಳಿದ್ದಾರಂತೆ.