ಕಮಲಕ್ಕ ವರ್ಸಸ್ ಟ್ರಂಪೇಸಿ
ಅಮೆರಿಕದಲ್ಲಿ ಎಲೆಕ್ಷನ್ ಪ್ರಚಾರ ಭರ್ಜರಿಯಾಗಿ ನಡೆದಿದೆ. ಬೈಡನ್ ಅಲಿಯಾಸ್ ಬುಡ್ಡೇಸಾಬನು… ನಾನೊಲ್ಲೆ ನೀನೆ ನಿಲ್ಲಕ್ಕ ಕಮಲಕ್ಕ ಎಂದು ಅವರಿಗೆ ಹೇಳಿದಾಗ ಅವರು ಒಳಗೆ ಮನಸ್ಸಿದ್ದರೂ ಮೇಲಿನ ಮಾತಿಗೆ ಯಾಕ್ ಬುಡಿ ಬುಡ್ಡಣ್ಣ..ನೀವೇ ದೊಡ್ಡೋರು, ಅನುಭವಸ್ತರು ನೀವೇ ಆಗಿ ಅಣ್ಣ ಅಂದರಂತೆ. ಅದಕ್ಕೆ ಬುಡ್ಯಾ ಕಮಲಕ್ಕೋರೆ ನೀವಾದರೇನು ನಾನಾದರೇನು… ಎಲ್ಲ ಒಂದೇ ತಾನೆ.. ಹೇಗಾದರೂ ಮಾಡಿ ಆ ಟ್ರಂಪೇಸಿಯನ್ನು ಮೂಲೆಯಲ್ಲಿ ಕೂಡಿಸುವ ಕೆಲಸ ಮಾಡೋಣ ಎಂದು ಅಂದರಂತೆ. ಇಲ್ಲಿಯಂತೆಯೂ ಅಲ್ಲೂ ಕೂಡ…ಅದ್ಯಾರೋ ಟ್ರಂಪೇಸಿಗೆ ಚಾಡಿ ಹೇಳಿದರು. ನೋಡಣ್ಣ ನಿಂಗೆ ಹಿಂಗಂದರು ಅಂದಿದಕ್ಕೆ… ಇನ್ನೂ ಕಿವಿ ನೋವಿದೆ ಕಣಣ್ಣ… ಒಳ್ಳೇ ಡಾಕ್ಟರ್ ಕಡೆ ತೋರಿಸಿಕೊಳ್ಳಬೇಕು. ಎಲೆಕ್ಷನ್ ಮುಗೀಲಿ ಅಂತ ಸುಮ್ಮನಿದ್ದೇನೆ ಎಂದು ಹೇಳಿದಾಗ, ಚಾಡಿ ಹೇಳಿದ ವ್ಯಕ್ತಿಯು… ಈತನ ಮುಂದೆ ಹೇಳಿದರೆ ಏನೂ ಉಪಯೋಗವಿಲ್ಲ. ಕಿವಿಗೆ ಗುಂಡುಬಿದ್ದು ಅರ್ಧಂಭರ್ಧ ಢಮಾರ್ ಆಗವ್ನೆ ಎಂದು ಅಂದುಕೊಂಡು ನನಗೇಕೆ ಬೇಕು ಎಂದು ಸುಮ್ಮನೇ ತನ್ನೂರ ಕಡೆ ಹೊರಟನೆಂದು ಕಿವುಡನುಮಿ ಭಾಗೀರತಿಬಾಯಿ ಮುಂದೆ ಹೇಳಿದಳಂತೆ. ಈಗಂತೂ ಅಲ್ಲಿ ಭಯಂಕರ ಪ್ರಚಾರ ನಡೆದಿದೆ ಎಂದು ಹುಜುರ್‌ಚಂದ್ರ ಥೇಟ್ ತಾನೇ ನೋಡಿಬಂದವರ ಹಾಗೆ ವರ್ಣಿಸುತ್ತಿದ್ದ. ಅಲ್ಲಿ ಕಮಲಕ್ಕನ ಗುಂಪಿನವರು ಓಣಿ ಓಣಿಗಳಲ್ಲಿ ಅಕ್ಕ ಅಕ್ಕಾ ನೀನಕ್ಕ ಅಕ್ಕ ಕಮಲಕ್ಕಾ ನೀನೆ ಪಕ್ಕಾ ಎಂದು ಕೂಗುತ್ತಿದ್ದಾರೆ. ಗುಂಪಿನ ಹಿಂದೆ ಬರುತ್ತಿರುವ ಕಮಲಕ್ಕ..ಆ ಕಡೆ ಈ ಕಡೆ ನೋಡಿ ಕೈ ಮುಗಿದು ಓಟಾಕ್ರಪ್ಪೋ…. ಓಟಾಕ್ರಮ್ಮೋ ಎಂದು ಮೈಕ್ ಹಿಡಿದುಕೊಂಡು ಜೋರಾಗಿ ಒದರುತ್ತಿದ್ದಾಳೆ. ಇನ್ನೊಂದು ಕಡೆ ಟ್ರಂಪೇಸಿ ಗ್ಯಾಂಗಿನವರಂತೂ ಗಂಟಲು ಒಣಗಿದ್ದರೂ ಸಹ… ದಬರೇಸಿ-ತಿರುಕೇಸಿ ಈ ಬಾರಿ ಟ್ರಂಪೇಸಿ ಎಂದು ಕೂಗುತ್ತಿದ್ದಾರೆ. ಎಂತಹ ಕ್ರಿಯೇಟಿವ್ ಸ್ಲೋಗನ್ ಅಲ್ಲವೇ ಎಂದು ಹುಜುರ್‌ಚಂದ್ರ ಕೇಳುತ್ತಿದ್ದಂತೆ ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋಗಿದ್ದರು.