ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಮ್ಯೂನಿಸ್ಟ್ ತತ್ವ ಬುದ್ಧದೇವ್‌ಗೆ ಕರಗತ

03:30 AM Aug 09, 2024 IST | Samyukta Karnataka

ಕರ್ಮಠ ಬ್ರಾಹ್ಮಣ್ಯ ಹಿನ್ನೆಲೆಯಲ್ಲಿ ಹುಟ್ಟಿ ಕಮ್ಯೂನಿಸ್ಟ್ ವಾದ ಒಪ್ಪಿಕೊಂಡು ಕೊನೆಗೆ ಬಂಡವಾಳಶಾಹಿಯನ್ನು ಸ್ವಾಗತಿಸಿದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಕಂಡು ಅಪವಾದ ಹೊತ್ತು ತಮ್ಮ ಪಕ್ಷದಲ್ಲೇ ತಲೆ ಎತ್ತಿದ ಭ್ರಷ್ಟಾಚಾರವನ್ನು ಕಂಡು ಬೇಸತ್ತು ಪಕ್ಷದಿಂದಲೂ ದೂರಸರಿದು ಏಕಾಂಗಿ ಜೀವನ ನಡೆಸಿ ಅಂತ್ಯ ಕಂಡವರು.
ಅವರ ಜೀವನ ಭಾರತದಲ್ಲಿ ಕಮ್ಯೂನಿಸ್ಟ್ ತತ್ವ ಒಪ್ಪಿಕೊಂಡ ರಾಜಕಾರಣಿಗಳಿಗೆ ಕೈಗನ್ನಡಿಯೂ ಹೌದು. ಬುದ್ಧದೇವ್ ಅವರ ತಾತ ಸಂಸ್ಕೃತ ವಿದ್ವಾಂಸರು. ಅಲ್ಲದೆ ಅರ್ಚಕರು. ಪೂಜೆ ಮಾಡುವ ಬಗ್ಗೆ ಕೈಪಿಡಿ ರಚಿಸಿದವರು. ಬುದ್ಧದೇವ್ ತಂದೆ ಅರ್ಚಕ ವೃತ್ತಿ ತ್ಯಜಿಸಿ ಪುಸ್ತಕ ಪ್ರಕಟಣೆಯಲ್ಲಿ ತೊಡಗಿದವರು. ತಂದೆಯ ಸೋದರ ಸಂಬಂಧಿ ಸುಕಾಂತ್ ಭಟ್ಟಾಚಾರ್ಯ ಕವಿಗಳು. ಇಂಥ ವೈದಿಕ ಪರಂಪರೆಯಲ್ಲಿ ಬೆಳೆದುಬಂದ ಬುದ್ಧದೇವ್ ಕಮ್ಯೂನಿಸ್ಟ್ ತತ್ವವನ್ನು ಕರಗತ ಮಾಡಿಕೊಂಡವರು. ಅಲ್ಲದೆ ನಾಟಕ ರಚನೆಯಲ್ಲಿ ಎತ್ತಿದ ಕೈ. ಅವರ ಬರಹಗಳು ಸಾಹಿತ್ಯ ಲೋಕದಲ್ಲಿ ಜನಮನ್ನಣೆ ಪಡೆದಿದ್ದವು. ಅವರು ವಿದ್ಯಾರ್ಥಿಯಾಗಿದ್ದಾಗಲೇ ಜನಪರ ಚಳವಳಿಯಲ್ಲಿ ತೊಡಗಿಸಿಕೊಂಡು ನಾಯಕರಾದವರು. ಸಿಪಿಐ(ಎಂ) ನಾಯಕರಾದ ಮೇಲೆ ಪಾಲಿಟ್‌ಬ್ಯೊರೋದಲ್ಲಿ ಕಾಯಂ ಸದಸ್ಯರಾಗಿದ್ದರು. ೧೯೬೬ರಲ್ಲಿ ಅವರು ಕಮ್ಯೂನಿಸ್ಟ್ ಪಕ್ಷ ಸೇರಿ ಕೊಂಡರು. ಪ್ರಮೋದ್ ದಾಸ್‌ಗುಪ್ತ ಅವರ ರಾಜಕೀಯ ಗುರು. ೧೯೭೭ರಲ್ಲಿ ಶಾಸಕರಾದರು. ಜ್ಯೋತಿ ಬಸು ಸಂಪುಟದಲ್ಲಿ ವಾರ್ತಾ ಸಚಿವರು. ೧೯೮೨ರ ಚುನಾವಣೆಯಲ್ಲಿ ಸೋಲು ಕಂಡರು. ೧೯೮೭ರಲ್ಲಿ ಮತ್ತೆ ಶಾಸಕರಾಗಿ ಸಚಿವರಾದರು. ೧೯೯೧ರಲ್ಲಿ ಜ್ಯೋತಿಬಸು ಜತೆ ವೈಚಾರಿಕ ಭಿನ್ನತೆ ಹೊಂದಿದ್ದರಿಂದ ರಾಜೀನಾಮೆ ಸಲ್ಲಿಸಿದ್ದರು. ಸಚಿವ ಸಂಪುಟದಲ್ಲಿ ಭ್ರಷ್ಟರು ಸೇರಿದ್ದಾರೆ ಎಂದು ಆರೋಪಿಸಿದ್ದರು. ೧೯೯೬ ರಲ್ಲಿ ಮತ್ತೆ ಗೃಹ ಸಚಿವರಾದರು. ನಂತರ ಡಿಸಿಎಂ ಹುದ್ದೆ ಸ್ವೀಕರಿಸಿದರು. ನವೆಂಬರ್ ೬, ೨೦೦೦ ರಂದು ಜ್ಯೋತಿ ಬಸು ಆರೋಗ್ಯ ತಪ್ಪಿದ್ದರಿಂದ ಮುಖ್ಯಮಂತ್ರಿಯಾದರು.
ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ಗಲಭೆಗಳು ನಡೆದವು. ಹಿಂಸಾಚಾರ ಹತ್ತಿಕ್ಕಲು ಪೊಲೀಸ್ ಬಲ ಬಳಸಿ ಪಕ್ಷದಲ್ಲಿ ಕೆಟ್ಟ ಹೆಸರು ತೆಗೆದುಕೊಂಡರು. ಮುಖ್ಯಮಂತ್ರಿಯಾದರೂ ಅವರು ಸಣ್ಣ ಮನೆಯಲ್ಲೇ ವಾಸವಾಗಿದ್ದರು. ಪತ್ನಿ ಮತ್ತು ಮಗಳು. ಪುಟ್ಟ ಸಂಸಾರ. ಮಗಳು ಮಗನಾಗಿ ಪರಿವರ್ತನೆಗೊಂಡರು.
ಕೆಟ್ಟದಿನ
ಬಂಗಾಲಿಯಲ್ಲಿ ದುಶ್ಸಮಯ್ (ಕೆಟ್ಟದಿನ) ಅವರು ಬರೆದ ಉತ್ತಮ ನಾಟಕ. ಅವರು ಚುನಾವಣೆ ಸೋಲು ಮತ್ತು ಪಕ್ಷದೊಳಗೆ ಕೇಳಿ ಬಂದ ಟೀಕೆಗಳಿಂದ ತುಂಬ ನೊಂದಿದ್ದರು. ಇದರಿಂದ ಅವರು ಹೆಚ್ಚು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಅಶೋಕ ಭಟ್ಟಾಚಾರ್ಯ ಸಚಿವರಾಗಿ ಅವರೊಂದಿಗೆ ನಿಕಟ ಸ್ನೇಹ ಹೊಂದಿದ್ದರು. ಅವರ ಸಹಪಾಠಿಗಳಿಗೆ ಅವರನ್ನು ನಿರಾಶೆಯ ಮಡುವಿನಿಂದ ಹೊರತರಲು ಬಹಳ ಪ್ರಯತ್ನ ಪಟ್ಟರು. ಆದರೆ ಸಾಧ್ಯವಾಗಲೇ ಇಲ್ಲ. ಅವರ ಶ್ವಾಸಕೋಶ ಮೊದಲೇ ದುರ್ಬಲಗೊಂಡಿತ್ತು. ಸಿಗರೇಟ್ ಸೇವನೆ ಅಧಿಕಗೊಂಡಿತು. ಅವರ ಸಂಗಡಿಗರು ಹೇಳಿದರೂ ಸಿಗರೇಟ್ ಕಡಿಮೆ ಮಾಡಲು ಆಗಲಿಲ್ಲ. ಅನಾರೋಗ್ಯಕ್ಕೆ ಅವರು ಬಲಿಯಾದರು. ಅವರು ನಂಬಿ ಕೆಲಸ ಮಾಡಿದ ಪಕ್ಷವೇ ಅವರನ್ನು ದೂರ ತಳ್ಳಿದ್ದು ಅವರ ಜೀವನದ ದುರಂತ ಅಧ್ಯಾಯ ಎನ್ನುವುದಂತೂ ನಿಜ.
ಪದ್ಮವಿಭೂಷಣ
೨೦೦೨ರಲ್ಲಿ ಮೋದಿ ಸರ್ಕಾರ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲು ತೀರ್ಮಾನಿಸಿತ್ತು. ಆದರೆ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರಿಗೆ ಮೊದಲೇ ಮಾಹಿತಿ ನೀಡಿರಲಿಲ್ಲ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.

ನಂದಿಗ್ರಾಮ ಹಿಂಸಾಚಾರ
ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಆರಂಭಿಸಲು ಬುದ್ಧದೇವ್ ಬಯಸಿದ್ದರು. ಟಾಟಾ ಕಂಪನಿಯ ನ್ಯಾನೋ ಕಾರು ಉತ್ಪಾದನೆ ಘಟಕ ಅಲ್ಲಿ ಬರಬೇಕಿತ್ತು.
ಗ್ರಾಮಗಳ ಪರ ಮಮತಾ ಬ್ಯಾನರ್ಜಿ ಟಿಎಂಸಿ ಮೂಲಕ ದೊಡ್ಡ ಹೋರಾಟವನ್ನೂ ನಡೆಸಿದರು. ಮುಖ್ಯಮಂತ್ರಿ ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಹೆಚ್ಚಿಸುವ ಆಸೆ ಹೊಂದಿದ್ದರು. ಬಂಡವಾಳಶಾಹಿ ಧೋರಣೆ ವಿರುದ್ಧ ಇದ್ದ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ ಬುದ್ಧದೇವ್ ಬಂಡವಾಳ ಹೂಡಿಕೆಯನ್ನು ಸ್ವಾಗತಿಸಲು ಮಾನಸಿಕವಾಗಿ ಸಿದ್ಧಗೊಂಡಿದ್ದರು. ಈ ಪರಿವರ್ತನೆಯನ್ನು ಪಕ್ಷದ ನಾಯಕರು ಒಪ್ಪಲು ಸಿದ್ಧವಿರಲಿಲ್ಲ. ಹೀಗಾಗಿ ಪಕ್ಷ ಸೋಲನ್ನು ಕಾಣಬೇಕಾಯಿತು. ೩೪ ವರ್ಷಗಳ ಕಮ್ಯೂನಿಸ್ಟ್ ಆಡಳಿತ ಇವರ ಕಾಲದಲ್ಲೇ ಅಂತ್ಯಗೊಂಡಿತು.

ಲೋಕಸಭೆಯಲ್ಲಿ ಸೋಲು
೨೦೦೯ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಹೀನಾಯ ಸೋಲು ಕಂಡಿತು. ಇದು ಅವರ ವರ್ಚಸ್ಸು ಕುಸಿಯಲು ಕಾರಣವಾಯಿತು. ಪಕ್ಷದ ಎಲ್ಲ ನಾಯಕರು ಅವರೇ ಸೋಲಿಗೆ ಕಾರಣ ಎಂದು ಬಲಿಪಶು ಮಾಡಿದರು. ಇದರ ವಿರುದ್ಧ ಪ್ರತಿಭಟಿಸಲು ಹೇಳಿದರೂ ಬುದ್ಧದೇವ್ ಮಾನಸಿಕವಾಗಿ ಸಿದ್ಧವಿರಲಿಲ್ಲ. ಹೀಗಾಗಿ ಅವರು ನಿರಾಶೆಯ ಕತ್ತಲೆ ದಿನಗಳಲ್ಲೇ ಇರಲು ಬಯಸಿದರು. ೨೦೧೧ರಲ್ಲಿ ನಡೆದ ವಿಧಾನಸಭೆ ಚುನಾವಣೆ ಕೂಡ ಸೋಲನ್ನು ತಂದಿತು. ತಮ್ಮ ಅಧಿಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಮನೀಶ್ ಗುಪ್ತ ಟಿಎಂಸಿ ಅಭ್ಯರ್ಥಿಯಾಗಿ ಇವರನ್ನು ಸೋಲಿಸಿದರು.

Next Article